ಲೋಕಸಭಾ ಚುನಾವಣೆಯ ವಿವಿಪ್ಯಾಟ್ ಮತಚೀಟಿಗಳ ನಾಶ: RTIಯಿಂದ ಬಹಿರಂಗ

0
189

ನ್ಯೂಸ್ ಕನ್ನಡ ವರದಿ: “ಚುನಾವಣೆಯಲ್ಲಿ ಬಳಕೆಯಾದ ಅಥವಾ ಮುದ್ರಿತವಾದ ವಿವಿಪ್ಯಾಟ್ ಕಾಗದದ ಸ್ಲಿಪ್ ‌ಗಳನ್ನು ಒಂದು ವರ್ಷದವರೆಗೆ ಉಳಿಸಿಕೊಳ್ಳಬೇಕು ಹಾಗೂ ಆನಂತರ ಅದನ್ನು ನಾಶಪಡಿಸಬಹುದಾಗಿದೆ” ಎಂದು 1961ರ ಚುನಾವಣಾ ನಿಯಮಾವಳಿಗಳ ತಿದ್ದುಪಡಿ ಕಾನೂನು 94 (ಬಿ) ಹೇಳುತ್ತದೆ. ಆದರೆ ಭಾರತೀಯ ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಗೆ ಬಳಸಿದ್ದ ಮುದ್ರಿತ ವಿವಿಪ್ಯಾಟ್ ಕಾಗದ ಸ್ಲಿಪ್ ‌ಗಳನ್ನು ಈಗಾಗಲೇ ನಾಶಪಡಿಸಿದೆಯೆಂದು ಸುದ್ದಿಜಾಲ ತಾಣ ದಿಕ್ವಿಂಟ್.ಕಾಂ ಪ್ರಕಟಿಸಿದ ಪೂನಂ ಅಗರ್ವಾಲ್ ಅವರ ವಿಶೇಷ ವರದಿಯು ಬಹಿರಂಗಪಡಿಸಿದೆ. 2019ರ ಮೇನಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಕೇವಲ ನಾಲ್ಕು ತಿಂಗಳೊಳಗೆ ವಿವಿ ಪ್ಯಾಟ್‌ನ ಕಾಗದಪತ್ರಗಳನ್ನು ನಾಶಪಡಿಸಲಾಯಿತೆಂದು ಅದು ಹೇಳಿದೆ.

ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ದಿಕ್ವಿಂಟ್.ಕಾಂ ಸಲ್ಲಿಸಿದ ಅರ್ಜಿಗೆ ಉತ್ತರಿಸಿದ ದಿಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ‘ ವಿವಿ ಪ್ಯಾಟ್‌ನ ಮತದೃಢೀಕರಣ ಪತ್ರಗಳನ್ನು ವಿಲೇವಾರಿ ಮಾಡಲಾಗಿದೆಯೆಂದು ತಿಳಿಸಿರುವುದಾಗಿ ಅದು ಹೇಳಿದೆ.

ವಿವಿಪ್ಯಾಟ್‌ನ ಮುದ್ರಿತ ಕಾಗದಪತ್ರಗಳನ್ನು ವಿಲೇವಾರಿ ಮಾಡಬೇಕೆಂದು ಕೇಂದ್ರೀಯ ಚುನಾವಣಾ ಆಯೋಗವು 2019ರ ಸೆಪ್ಟೆಂಬರ್ 24ರಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಿರುವ ಆದೇಶದ ಪ್ರತಿಯನ್ನು ಕೂಡಾ ದಿಲ್ಲಿ ಚುನಾವಣಾ ಆಯೋಗವು ತನ್ನ ಆರ್‌ಟಿಐ ಅರ್ಜಿಯೊಂದಿಗೆ ಲಗತ್ತಿಸಿದೆ.

ಲೋಕಸಭಾ ಚುನಾವಣೆ ನಡೆದ ಕೇವಲ ನಾಲ್ಕು ತಿಂಗಳುಗಳಲ್ಲಿ ಚುನಾವಣಾ ಆಯೋಗವು ಆತುರಾತುರಾಗಿ ಯಾಕೆ ವಿವಿಪ್ಯಾಟ್‌ನ ಮುದ್ರಿತ ಕಾಗದಚೀಟಿಗಳನ್ನು ನಾಶಪಡಿಸಿರುವ ಬಗ್ಗೆ ದಿಕ್ವಿಂಟ್.ಕಾಂ ಸಂದೇಹ ವ್ಯಕ್ತಪಡಿಸಿದೆ. ಮತದಾರರ ಮತಚಲಾವಣೆಗೆ ನಿರ್ಣಾಯಕ ಪುರಾವೆಯಾಗಿರುವ ಈ ಕಾಗದಪತ್ರಗಳನ್ನು ಒಂದು ವರ್ಷದ ಅವಧಿಗೆ ಮುನ್ನವೇ ನಾಶಪಡಿಸಿರುವುದು ಚುನಾವಣಾ ನಿರ್ವಹಣೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅದು ಹೇಳಿದೆ.

ಇಡೀ ಚುನಾವಣಾ ಪ್ರಕ್ರಿಯೆಯನ್ನು ತಿರುಚಿರುವ ಅಥವಾ ದುರ್ಬಳಕೆ ಮಾಡಿರುವ ಸಾಧ್ಯತೆಯನ್ನು ಪತ್ತೆಹಚ್ಚಲು ವಿವಿಪ್ಯಾಟ್‌ನ ಮತದೃಢೀಕರಣ ಪತ್ರಗಳು ಯಾವ ರೀತಿ ನಿರ್ಣಾಯಕ ಪುರಾವೆಗಳಾಗಬಲ್ಲವು ಎಂದು ದಿಕ್ವಿಂಟ್.ಕಾಂ ಈ ಮೊದಲು ವರದಿ ಮಾಡಿತ್ತು.

ರಾಜಸ್ಥಾನ, ಹಿಮಾಚಲಪ್ರದೇಶ, ಮಣಿಪುರ, ಮೇಘಾಲಯ, ಆಂಧ್ರಪ್ರದೇಶಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್‌ನ ಮತಏಣಿಕೆಯಲ್ಲಿ ಸಾಮ್ಯತೆಯಿಲ್ಲದಿರುವ ಕನಿಷ್ಠ ಎಂಟು ಪ್ರಕರಣಗಳನ್ನು ದಿಕ್ವಿಂಟ್.ಕಾಂ ಪತ್ತೆ ಹಚ್ಚಿತ್ತು. ಚುನಾವಣಾ ಆಯೋಗ ಕೂಡಾ ಈ ಪ್ರಕರಣಗಳ ಬಗ್ಗೆ 2019ರಲ್ಲಿ ತನಿಖೆಗೆ ಆದೇಶಿಸಿತ್ತು.

ಒಂದು ವೇಳೆ ಈ ಎಂಟು ಪ್ರಕರಣಗಳಿಗೆ ಸಂಬಂಧಿಸಿ ವಿವಿ ಪ್ಯಾಟ್ ಮತದೃಢೀಕರಣ ಚೀಟಿಗಳನ್ನು ನಾಶಪಡಿಸಿದ್ದಲ್ಲಿ, ತನಿಖೆಯನ್ನು ಹೇಗೆ ಮುಂದುವರಿಸಲು ಸಾಧ್ಯವೆಂದು ದಿಕ್ವಿಂಟ್.ಕಾಂ ವರದಿಯಲ್ಲಿ ಪ್ರಶ್ನಿಸಿದೆ.

LEAVE A REPLY

Please enter your comment!
Please enter your name here