ಒಡಿಶಾಗೆ ಅಪ್ಪಳಿಸಿದ ತಿತ್ಲಿ ಚಂಡಮಾರುತ: ಮಧ್ಯರಾತ್ರಿ 3ಲಕ್ಷ ಜನರ ಸ್ಥಳಾಂತರ!

0
299

ನ್ಯೂಸ್ ಕನ್ನಡ ವರದಿ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾದ ತಿತ್ಲಿ ಚಂಡಮಾರುತ ರಭಸವಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶದತ್ತ ಮುನ್ನುಗ್ಗುತ್ತಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ನಿರ್ದೇಶಕರು ನಿನ್ನೆಯಷ್ಟೇ ಈ ಎರಡು ರಾಜ್ಯಗಳಲ್ಲಿ ರೆಡ್​ ಅಲರ್ಟ್​ ಘೋಷಣೆ ಮಾಡಿದ್ದರು. ಅಂತೆಯೇ ತಿತ್ಲಿ ಚಂಡಮಾರುತ ಗುರುವಾರ ಬೆಳಗ್ಗೆ 5.30 ಕ್ಕೆ ಒಡಿಶಾದ ಗೋಪಾಲಪುರ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ. ಈ ಚಂಡಮಾರುತದಿಂದಾಗಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಸಮುದ್ರ ತೀರದಲ್ಲಿ ಎತ್ತರದ ಅಲೆಗಳು ಏಳುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಬುಧವಾರ ಮಧ್ಯರಾತ್ರಿಯೇ 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದ್ದು, ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಕೇಂದ್ರ ವಿಪತ್ತು ನಿರ್ವಹಣಾ ತಂಡದ 1000 ಸಿಬ್ಬಂದಿ, ಒಡಿಶಾ ವಿಕೋಪ ತುರ್ತು ಕಾರ್ಯಪಡೆ, ಅಗ್ನಿಶಾಮಕ ದಳದ ಸಿಬ್ಬಂದಿ ಆಯಾ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಅಗತ್ಯ ಪ್ರಮಾಣದ ಆಹಾರ ಹಾಗೂ ಇಂಧನ, ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಬುಧವಾರವೇ ಸೂಚನೆ ನೀಡಲಾಗಿತ್ತು. ಈ ಪ್ರಬಲ ಚಂಡಮಾರುತಕ್ಕೆ ಒಂದೇ ಒಂದು ಪ್ರಾಣಹಾನಿಯಾಗದಂತೆ ಕಾರ್ಯಪ್ರವೃತ್ತರಾಗುವಂತೆ ಸರ್ಕಾರ ಸಕಲ ಕ್ರಮಗಳನ್ನು ತೆಗೆದುಕೊಂಡಿದೆ. ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಒಡಿಶಾದ ಗಜಪತಿ, ಗಂಜಾಂ, ಪುರಿ, ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಬುಧವಾರವೇ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

LEAVE A REPLY

Please enter your comment!
Please enter your name here