ಟಿಕೆಟ್ ವಂಚಿತಳಾದ ಬಗ್ಗೆ ತೇಜಸ್ವಿನಿ ಅನಂತ್’ಕುಮಾರ್ ಅವರು ನೀಡಿದ ಪ್ರತಿಕ್ರಿಯೆ ಏನು?

0
205

ನ್ಯೂಸ್ ಕನ್ನಡ ವರದಿ (16-4-2019): ಕೇಂದ್ರ ಸಚಿವ ಅನಂತ್’ಕುಮಾರ್ ಅವರ ನಿಧನದ ಬಳಿಕ ಅವರ ಪತ್ನಿ ತೇಜಸ್ವಿನಿಯವರಿಗೆ ಟಿಕೆಟ್ ಲಭಿಸುವುದು ಬಹುತೇಕ ಖಚಿತವೆಂದೇ ಹೇಳಲಾಗಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಅದನ್ನು ತೇಜಸ್ವಿ ಸೂರ್ಯ ಅವರಿಗೆ ನೀಡಲಾಯಿತು. ಬಳಿಕ ತೇಜಸ್ವಿನಿಯವರನ್ನು ಶಾಂತಗೊಳಿಸಲು ಅವರನ್ನು ರಾಜ್ಯ ಉಪಾಧ್ಯಕ್ಷೆಯಾಗಿಯೂ ನೇಮಕ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟಿಕೆಟ್ ತಮ್ಮ ಕೈತಪ್ಪಿದ್ದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ‘ಯುದ್ಧ’ದ ಸಮಯದಲ್ಲಿ ಉತ್ತರ ಕೇಳುವುದಕ್ಕಿಂತಲೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಮುಖ್ಯ. ಈ ಮೊದಲು ಒಂದಿಬ್ಬರ ಬಳಿ ಈ ಕುರಿತು ಪ್ರಶ್ನಿಸಿದ್ದು ನಿಜ. ವರಿಷ್ಠರು ಬೇರೆ ಬೇರೆ ಚಿಂತನೆ ನಡೆಸಿ, ಭವಿಷ್ಯದ ದೃಷ್ಟಿಯನ್ನೂ ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡಿರುತ್ತಾರೆ. ಚುನಾವಣೆ ನಂತರ ಅದಕ್ಕೆ ಉತ್ತರ ಸಿಕ್ಕರೂ ಸಿಗಬಹುದು ಎಂದು ಹೇಳಿದರು. ನನ್ನ ಪತಿ 6 ಬಾರಿ ಬಿಜೆಪಿ ಸಂಸದರಾಗಿ, ಕಡೆ ಉಸಿರಿರುವವರೆಗೆ ಪಕ್ಷದ ಪರ ಕೆಲಸ ಮಾಡಿದ್ದಾರೆ. ಇದೀಗ ನಾನು ರಾಜ್ಯ ಬಿಜೆಪಿ ಉಪಾಧ್ಯಕ್ಷೆ. ಯಾವುದೇ ಕಾರಣಕ್ಕೆ ನಾನು ನೋಟಾಕ್ಕೆ ಮತಹಾಕಲು ಹೇಳಲ್ಲ. ನೋಟಾಕ್ಕೆ ಬೆಂಗಳೂರು ದಕ್ಷಿಣದಲ್ಲಷ್ಟೇ ಅಲ್ಲ, ಯಾವುದೇ ಕ್ಷೇತ್ರದಲ್ಲೂ ಮತ ನೀಡಬಾರದು ಎಂದೇ ಹೇಳುತ್ತೇನೆ. ಪೊಲೀಸ್ ಮತ್ತು ಸೈಬರ್ ಠಾಣೆಗೂ ದೂರು ನೀಡಲಾಗಿದ್ದು, ನನ್ನ ಹೆಸರು ದುರುಪಯೋಗ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆಯಿದೆ ಎಂದರು.

ಈ ಹಿಂದೆ ತೇಜಸ್ವಿನಿಯವರು ನೋಟಾಕ್ಕೆ ಮತ ಚಲಾಯಿಸಿ ಎಂದು ಹೇಳಿರುವ ನಕಲಿ ಅಹವಾಲು ಸಾಮಾಜಿಕ ಜಾಲತಾಣದಾದ್ಯಂತ ಸುತ್ತುತ್ತಿತ್ತು, ತೇಜಸ್ವಿಯವರನ್ನು ಸೋಲಿಸಲು ತೇಜಸ್ವಿನಿಯವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

LEAVE A REPLY

Please enter your comment!
Please enter your name here