ಮಹಾರಾಷ್ಟ್ರ ಸಿಎಂ ಮತ್ತು ಡಿಸಿಎಂಗೆ ಸುಪ್ರೀಂಕೋರ್ಟ್ ನೋಟೀಸ್! ನಾಳೆ ಬೆಳಿಗ್ಗೆ ಆದೇಶ

0
467

ನ್ಯೂಸ್ ಕನ್ನಡ ವರದಿ: ಮಹಾರಾಷ್ಟ್ರದಲ್ಲಿ ಶನಿವಾರ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನೆ- ಎನ್ ಸಿಪಿ – ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ವಿಚಾರಣೆ ಪೂರ್ಣಗೊಂಡಿದೆ.

ನ್ಯಾ. ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮೂರು ಪಕ್ಷಗಳು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಯುತ್ತಿದೆ.

ಮೊದಲಿಗೆ ಶಿವಸೇನೆ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಮುಂಭಾಗ ಕಪಿಲ್​​ ಸಿಬಲ್​​ ಮಹಾರಾಷ್ಟ್ರದ ಸಂಖ್ಯಾಬಲ ವಿವರಿಸಿದರು. ರಾಜ್ಯಪಾಲರು ಬಿಜೆಪಿಗೆ 48 ದಿನ ಅವಕಾಶ ನೀಡಿದ್ದರು. ಎನ್​​​ಸಿಪಿ ಮತ್ತು ಶಿವಸೇನೆಗೆ ಸಮಯಾವಕಾಶ ನೀಡಲಿಲ್ಲ. ಮಹಾರಾಷ್ಟ್ರದಲ್ಲಿ ಚುನಾವಣಾಪೂರ್ವ ಮೈತ್ರಿ ಇದ್ದದೇ ಬೇರೆ. ಈಗ ಪರಿಸ್ಥಿತಿ ಬದಲಾಗಿದೆ. ಚುನಾವಣೋತ್ತರ ಮೈತ್ರಿಯಾಗಿದೆ. ಶಿವಸೇನೆ-ಕಾಂಗ್ರೆಸ್​​ ಮತ್ತು ಎನ್​​ಸಿಪಿ ಮೈತ್ರಿ ಮಾಡಿಕೊಂಡಿವೆ ಎಂದರು.

ನಿನ್ನೆ ಬೆಳಗ್ಗೆ 5.47ಕ್ಕೆ ದಿಢೀರನೇ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ಸೇರದೆ ಹಿಂಪಡೆಯಲಾಗಿದೆ. ಅಂಥ ರಾಷ್ಟ್ರೀಯ ತುರ್ತು ಏನಿತ್ತು? ಬಳಿಕ ತರಾತುರಿಯಲ್ಲಿ ಸಿಎಂ, ಡಿಸಿಎಂ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರು ದುರುದ್ದೇಶಪೂರಿತವಾಗಿ ನಡೆದುಕೊಂಡಿದ್ದಾರೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಂದೇ ವಿಶ್ವಾಸಮತ ಯಾಚನೆ ಮಾಡುವಂತೆ ಹೇಳಿ. ಅವರ ಬಳಿ ಶಾಸಕರ ಬಲ ಇದ್ದರೆ ಸಾಬೀತು ಪಡಿಸಲಿ. ರಾಜ್ಯಪಾಲರ ಆಹ್ವಾನವೂ ಅಧಿಕೃತವಾಗಿ ಇಲ್ಲ. ಸಿಎಂ-ಡಿಸಿಎಂ ಪ್ರಮಾಣ ವಚನಕ್ಕೆ ಅವೆಲ್ಲಾ ಪ್ರಕ್ರಿಯೆಗಳು ಹೇಗೆ ನಡೆಯಿತೆಂಬುದೇ ಗೊತ್ತಿಲ್ಲ. ಯಾವೂದಕ್ಕೂ ಅಧಿಕೃತವಾದ ದಾಖಲೆಗಳಿಲ್ಲ ಎಂದು ಕಪಿಲ್​​ ಸಿಬಲ್​​ ವಾದ ಮಂಡಿಸಿದರು.

ಅಜಿತ್ ಪವಾರ್ ಅವರು ಶಾಸಕಾಂಗ ಪಕ್ಷದ ನಾಯಕತ್ವದಿಂದ ತೆಗೆದಿದ್ದೇವೆ. ಶಾಸಕಾಂಗ ಪಕ್ಷದ ನಾಯಕಾಗದೇ ಡಿಸಿಎಂ ಆಗಲೂ ಸಾಧ್ಯವಿಲ್ಲವೆಂದು ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.

ರಾಜ್ಯಪಾಲರು ತಮಗೆ ನೀಡಿದ ಶಾಸಕರ ಸಹಿಯುಳ್ಳ ಪತ್ರವನ್ನು ಪರಿಶೀಲನೆ ನಡೆಸಬೇಕಿತ್ತು. ಬಹುಮತ ಹೊಂದಿರುವ ಕುರಿತು ಮಾಹಿತಿ ಪಡೆಯಬೇಕು. ಆದರೆ ರಾಜ್ಯಪಾಲರು ಇದನ್ನು ಪಾಲಿಸಿಲ್ಲ. ಹಾಗಾಗಿ ಆದಷ್ಟು ಬೇಗ ವಿಶ್ವಾಸ ಮತಯಾಚನೆಗೆ ನಿರ್ದೇಶಿಸಿ ಎಂದು ಸಿಂಘ್ವಿ ವಾದಿಸಿದರು.

ಕರ್ನಾಟಕದ ಸ್ಪೀಕರ್, ಉತ್ತರಾಖಂಡ್ ಪ್ರಕರಣಗಳನ್ನು ಉಲ್ಲೇಖಿಸಿದ ಸಿಂಘ್ವಿ ಇವತ್ತೇ ವಿಶ್ವಾಸಮತ ಅವಕಾಶಕ್ಕೆ ಕೋರಿದರು.

ಇಂದಿನ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ರಾಜ್ಯಪಾಲರಿಗೆ ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಸಂಬಂಧಿಸಿದ ದಾಖಲೆಗಳು ಮತ್ತು ಅವುಗಳಿಗೆ ಪೂರಕವಾದ ಪತ್ರಗಳನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಸರ್ಕಾರ ರಚನೆ ಹಕ್ಕು ಮಂಡನೆ ವೇಳೆಯಲ್ಲಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯಪಾಲರಿಗೆ ಸಲ್ಲಿಸಿದ ಪತ್ರವನ್ನು ಕೂಡ ನಾಳೆ ಬೆಳಗ್ಗೆ 10.30ರ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ದಾಖಲೆ, ಪತ್ರಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here