ಕಾಂಗ್ರೆಸ್​​​ ಸ್ಟಾರ್​​ ಪ್ರಚಾರಕ ನವಜೋತ್ ಸಿಂಗ್ ಸಿಧು ವಿರುದ್ಧ ಎಫ್​​’ಐಆರ್​​ ದಾಖಲು!

0
136

ನ್ಯೂಸ್ ಕನ್ನಡ ವರದಿ (17-4-2019) ಬಿಹಾರ್: ಕಾಂಗ್ರೆಸ್ ನಾಯಕರ ಮೇಲೆ ಟಿಕೆಟ್ ವಿಚಾರವಾಗಿ ಮುನಿಸಿಕೊಂಡು ಆ ಬಳಿಕ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸಿಧು ಅವರಿಗೆ ಸಂಕಷ್ಟ ಎದುರಾಗಿದೆ. ನವಜೋತ್ ಸಿಂಗ್ ಸಿಧು ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಅಲ್ಲದೇ ಸದ್ಯದಲ್ಲೇ ನವಜ್ಯೋತ್​​​ ಸಿಂಗ್​​ ಸಿಧು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾ ಕಚೇರಿಯ ಮೂಲಗಳು ತಿಳಿಸಿವೆ.

ನಿನ್ನೆ ಬಿಹಾರದ ಕಟಿಹಾರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತಾರಿಕ್‌ ಅನ್ವರ್‌ ಪರ ನವಜ್ಯೋತ್​​ ಸಿಂಗ್​​ ಸಿಧು ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ್ದ ಮಾಜಿ ಕ್ರಿಕೆಟಿಗ, ”ಒವೈಸಿ ತರಹದ ಮುಸ್ಲಿಂ ನಾಯಕರನ್ನು ಕರೆತರುವ ಮೂಲಕ ಮತ ವಿಭಜನೆಗೆ ಸಂಚು ರೂಪಿಸಲಾಗಿದೆ. ಇದರ ಬಗ್ಗೆ ನೀವೆಲ್ಲಾ ಎಚ್ಚರದಿಂದ ಇರಬೇಕು. ಮುಸ್ಲಿಮರೆಲ್ಲರೂ ಒಂದಾದರೆ ಮೋದಿ ಕತೆ ಮುಗಿಸಬಹುದು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬಹುದು. ಸಿಕ್ಸ್‌ ಹೊಡೆದು ಮೋದಿಯನ್ನು ಬೌಂಡರಿಯಿಂದ ಆಚೆಗಟ್ಟುವ ಕಾಲ ಬಂದಿದೆ,” ಎಂದು ಹೇಳಿದ್ದರು.

ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ಕಟಿಯಾರ್ ಜಿಲ್ಲಾಡಳಿತ ಎಫ್‌ಐಆರ್ ದಾಖಲಿಸಿದೆ.ಜಿಲ್ಲಾಧಿಕಾರಿಗಳ ನಿಷೇಧಾಜ್ಞೆ ಉಲ್ಲಂಘಿಸಿದ್ದ ಕಾರಣ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ- 1951ರ ಸೆಕ್ಷನ್ 123(3) ಮತ್ತು 125ರ ಅನ್ವಯ ದೂರು ದಾಖಲು ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತದ ಫ್ಲೈಯಿಂಗ್ ಸ್ಕ್ವಾಡ್ ಮ್ಯಾಜಿಸ್ಟ್ರೇಟ್ ರಾಜೀವ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಠಾಣಾಧಿಕಾರಿ ಚಂದ್ರಪ್ರಕಾಶ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here