ನಟಿ ರಮ್ಯಾಗೆ ಪ್ರಮೋಷನ್! ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆಯಾಗಿ ಶೀಘ್ರ ನೇಮಕ?

0
1194

ನ್ಯೂಸ್ ಕನ್ನಡ ವರದಿ: ನಟಿ ಮತ್ತು ಕಾಂಗ್ರೆಸ್ ಡಿಜಿಟಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ (ದಿವ್ಯಸ್ಪಂದನ) ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 2012ರಲ್ಲಿ ರಾಜ್ಯ ಕಾಂಗ್ರೆಸ್ ಯುವ ಘಟಕಕ್ಕೆ ಸೇರಿ ಒಂದೇ ವರ್ಷದಲ್ಲಿ ಲೋಕಸಭೆ ಸದಸ್ಯೆಯಾಗಿ ಚುನಾಯಿತರಾದ ರಮ್ಯಾ ಈಗ ಪಕ್ಷದ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಮ್ಯಾ ಹೆಸರು ಮುಂಚೂಣಿಯಲ್ಲಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ರಮ್ಯಾ ಯುವ ಕಾಂಗ್ರೆಸ್ ಘಟಕದ ಮುಖ್ಯಸ್ಥೆಯಾಗಬೇಕೆಂಬ ಬಗ್ಗೆ ಬಹಿರಂಗ ಚರ್ಚೆ ನಡೆಯದೆ ಇದ್ದರೂ, ವರ್ಚಸ್ಸಿನ ನಾಯಕಿಯಾಗಿ ಹೊರಹೊಮ್ಮಿರುವ ರಮ್ಯಾ ಈ ಹುದ್ದೆಗೆ ಅಧ್ಯಕ್ಷೆ ಏಕಾಗಬಾರದು ? ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಈಗಾಗಲೇ ಕೇಳಿಬರುತ್ತಿವೆ. ಇನ್ನೊಂದು ಮೂಲಗಳ ಪ್ರಕಾರ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಈ ಬಾರಿ ಮಹಿಳೆಗೆ ಲಭಿಸಲಿದೆ. ಈ ನಿಟ್ಟಿನಲ್ಲಿ ‘ಆಕೆ’ ಆಂತರಿಕ ಮಟ್ಟದಲ್ಲಿ ಜಯ ಸಾಧಿಸಿದ್ದಾರೆ ಎನ್ನಲಾಗಿದೆ. ಆಕೆ ಯಾರೆಂಬುದು ಸ್ಪಷ್ಟವಾಗಿ ಹೇಳದಿದ್ದರೂ, ರಮ್ಯಾ ಅವರೇ ಈ ಹುದ್ದೆಯ ಸಂಭಾವ್ಯ ಆಯ್ಕೆ ಎಂದು ಮೂಲಗಖು ತಿಳಿಸಿವೆ.

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.   ರಮ್ಯಾ ಈ ಹುದ್ದೆಗೆ ನೇಮಕಗೊಂಡರೆ, ಅಂಬಿಕಾ ಸೋನಿ ನಂತರ ಈ ಪ್ರಮುಖ ಸ್ಥಾನ ಅಲಂಕರಿಸಲಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ರಮ್ಯಾ ಪಾತ್ರವಾಗಲಿದ್ದಾರೆ. ದೇಶಾದ್ಯಂತ ಸುಮಾರು 80 ಲಕ್ಷ ಯುವ ಸದಸ್ಯರನ್ನು ಹೊಂದಿರುವ ಯುವ ಘಟಕದ ನೇತೃತ್ವವನ್ನು ರಮ್ಯಾ ಅವರಿಗೆ ನೀಡಬೇಕೆಂಬುದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮನದಾಳದ ಬಯಕೆಯೂ ಆಗಿದೆ. ರಾಹುಲ್ ಅವರಿಗೆ ರಮ್ಯಾ ಅತ್ಯಂತ ಅಪ್ತರಲ್ಲಿ ಒಬ್ಬರು. ಕಾಂಗ್ರೆಸ್ ಡಿಜಿಟಲ್ ಮೀಡಿಯಾ ಮುಖ್ಯಸ್ಥೆಯನ್ನಾಗಿ ರಮ್ಯಾರನ್ನು ಕಾಂಗ್ರೆಸ್ ಅಧ್ಯಕ್ಷರು ನೇಮಕ ಮಾಡಿದ್ದರು.   ಯುವ ರಾಷ್ಟ್ರೀಯ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜ್ ಅವರಿಗೆ ಈಗಾಗಲೇ ಅನೌಪಚಾರಿಕವಾಗಿ ಬೀಳ್ಗೊಡುಗೆ ನೀಡಲಾಗಿದ್ದು, ರಮ್ಯಾ ನೇಮಕಕ್ಕೆ ಹಾದಿ ಸುಗಮವಾಗಿದೆ ಎಂದು ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here