Tuesday January 10 2017

Follow on us:

Contact Us

ಹತ್ತಿರವಾಗುತ್ತಿರುವ ನಿತೀಶ್ ಕುಮಾರ್, ಮೋದಿ: ರಾಜಕೀಯ ಮಾಗುವಿಕೆಯೊ? ಅವಕಾಶವಾದಿತನವೊ?

 

ಕು.ಸ.ಮಧುಸೂದನ ರಂಗೇನಹಳ್ಳಿ

ಕು.ಸ.ಮಧುಸೂದನ ರಂಗೇನಹಳ್ಳಿ

ಬಹುಷ: ಶಕ್ತಿರಾಜಕಾರಣದಲ್ಲಿ ಅಧಿಕಾರದ ಕುರ್ಚಿಗೆ ಮಾತ್ರ ಅಂತಹ ಅದ್ಬುತ ಶಕ್ತಿ ಇರುವಂತೆ ಕಾಣುತ್ತದೆ. ವಿರೋಧಪಕ್ಷದಲ್ಲಿದ್ದಾಗ ಬೆಂಕಿ ಉಗುಳುತ್ತಿದ್ದ ನಾಯಕರು ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಪಡೆದ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ನಿರಂತರವಾಗಿ ಅದು ತಮ್ಮ ಕೈ ತಪ್ಪಿ ಹೋಗದಂತೆ  ನೋಡಿಕೊಳ್ಳಲು ರಾಜಕೀಯವಾಗಿ  ರಾಜಿಯಾಗುತ್ತಾ ಹೋಗುತ್ತಾರೆ. ಅದನ್ನು ರಾಜಕೀಯ ಪಂಡಿತರು ರಾಜಕಾರಣಿಯೊಬ್ಬನ ವ್ಯಕ್ತಿತ್ವದ ಮಾಗುವಿಕೆ ಎನ್ನುತ್ತಾರೆ. ಆದರೆ ಸಾಮಾನ್ಯರ ಮಟ್ಟಿಗೆ ಅದು ಅವಕಾಶವಾದಿತನ ಮಾತ್ರ. ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವೇ ಅಂತಿಮವಾದ ಗುರಿಯಾಗಿರುವುದರಿಂದ  ಇಂತಹ  ಮಾಗುವಿಕೆಗಳಿಗೆ ಅಚ್ಚರಿ ಪಡುವಂತದ್ದೇನಿಲ್ಲ. ರಾಜಕೀಯದಲ್ಲಿ ಇವತ್ತಿನ ಮಿತ್ರರುಗಳು ನಾಳಿನ ಶತ್ರುಗಳಾಗುವಂತೆ, ಇವತ್ತಿನ ಶತ್ರುಗಳೂ ನಾಳೆ ಮಿತ್ರರುಗಳಾಗಬಹುದಾದ ಸಾಧ್ಯತೆಯೂ ಇದೆ. ಭಾರತದ ರಾಜಕಾರಣದ ವೈಶಿಷ್ಟ್ಯತೆ ಇರುವುದೇ ಇಂತಹ ಅಸಾದ್ಯಗಳನ್ನು ಸಾದ್ಯವಾಗಿಸುವಲ್ಲಿ.  ಇದಕ್ಕೆ ತಾಜಾ ಉದಾಹರಣೆ ನಮ್ಮ ಪ್ರದಾನಮಂತ್ರಿಗಳಾದ ನರೇಂದ್ರ ಮೋದಿಯವರು ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು. ಕೆಲವೇ ತಿಂಗಳುಗಳ ಹಿಂದೆ ಹಾವು ಮುಂಗುಸಿಗಳಂತೆ ಇದ್ದ ಮೋದಿಯವರು ಮತ್ತು ನಿತೀಶ್ ಅವರು ಈ ಇದೀಗ ತಮ್ಮ ವೈಮನಸ್ಸುಗಳನ್ನು ಮರೆತು ಬಿಟ್ಟವರಂತೆ ಪರಸ್ಪರರನ್ನು ಹೊಗಳುತ್ತಾ  ತಮ್ಮ ರಾಜಕೀಯದ ದಾಳಗಳನ್ನು ಉರುಳಿಸುತ್ತಿದ್ದಾರೆ.

ನಿಮಗೆ ನೆನಪಿರಬಹುದು, 2010 ರ ಬಿಹಾರದ ವಿದಾನಸಭಾ ಚುನಾವಣೆಯ ವೇಳೆ ಬಾಜಪ ಮತ್ತು ಸಂಯುಕ್ತ ಜನತಾದಳಮೈತ್ರಿ ಪಕ್ಷಗಳಾಗಿದ್ದು  ಅಂದಿನ ಚುನಾವಣಾ ಪ್ರಚಾರಕ್ಕೆ ಬಾಜಪದ ನಾಯಕರಾಗಿದ್ದ ಮತ್ತು ಅಂದಿನ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಬಿಹಾರಕ್ಕೆ ಕಾಲಿಡಬಾರದೆಂಬ ಷರತ್ತನ್ನು ನಿತೀಶ್ ಬಾಜಪಕ್ಕೆ ವಿದಿಸಿದ್ದರು. ಹೀಗೆ ಷರತ್ತು ವಿಧಿಸುವಾಗ ನಿತೀಶ್ ಅವರ ಮನಸಲ್ಲಿ ಇದ್ದುದು ಗುಜರಾತಿನ ಕೋಮುಗಲಭೆಗಳು ಮತ್ತು ಅದರಿಂದ ಕಳಂಕಿತರಾಗಿದ್ದ ಮೋದಿಯವರು.  ಮೋದಿಯವರನ್ನು ವಿರೋಧಿಸುವುದರಿಂದ ಜಾತ್ಯಾತೀತ ಹಣೆಪಟ್ಟಿ ತಮಗೆ ಅಂಟಿಕೊಳ್ಳಬಹುದು ಮತ್ತು ಅದರಿಂದ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂಬ ಬಾವನೆ ಮಾತ್ರ. ಒಂದು ಹಂತದಲ್ಲಿ ಅವರ  ಆ ಆಲೋಚನೆ ಯಶಸ್ವಿಯೂ ಆಯಿತು.  ಆ ಚುನಾವಣಾ ಪ್ರಚಾರಕ್ಕೆ ಮೋದಿಯವರು ಬಿಹಾರದತ್ತ ಸುಳಿಯಲಿಲ್ಲ. ಆದರೂ ನಿತೀಶರ ಸಂಯುಕ್ತ ಜನತಾದಳ ಮತ್ತು ಬಾಜಪದ ಮೈತ್ರಿಕೂಟ ಬಹುಮತ ಪಡೆಯಲು ಯಶಸ್ವಿಯಾಯಿತು. ಅಷ್ಟಲ್ಲದೆ 2008ರ ಬಿಹಾರದ ಪ್ರವಾಹ ಪೀಡಿತರ ಪರಿಹಾರ ನಿಧಿಗೆ ಗುಜರಾತ್ ಸರಕಾರ ನೀಡಿದ್ದ ದೇಣಿಗೆಯನ್ನು ನಿತೀಶ್ ಮುಲಾಜಿಲ್ಲದೆ ಹಿಂದಿರುಗಿಸಿದ್ದರು. ನಿಚ್ಚಳ ಬಹುಮತದ ತದನಂತರವೂ ನಿತೀಶ್ ಮೋದಿಯವರನ್ನು ಸತತವಾಗಿ ಟೀಕೆಗೊಳಪಡಿಸುತ್ತಲೇ ಬಂದಿದ್ದರು.

ನಂತರ ಎನ್.ಡಿ.ಎ. ನರೇಂದ್ರಮೋದಿಯವರನ್ನು ತನ್ನ ಮುಂದಿನ ಪ್ರದಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗ, ಇದೇ ನಿತೀಶ್ ಜಾತ್ಯಾತೀತ ಶಕ್ತಿಗಳ ಮೈತ್ರಿಯ ಬಗ್ಗೆ ಮಾತಾಡುತ್ತಾ ಮೋದಿಯವರನ್ನು ವಿರೋಧಿಸಿದ್ದರು. ತದನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ  ಗೆದ್ದ ಬಾಜಪ ಮೈತ್ರಿಕೂಟ ನರೇಂದ್ರ ಮೋದಿಯವರನ್ನು ಪ್ರದಾನಿಯನ್ನಾಗಿ ಮಾಡಿತ್ತು. ಈ ವೇಳೆಗಾಗಲೇ ಬಿರುಕು ಬಿಟ್ಟ ಜನತಾದಳ ಮತ್ತು ಬಾಜಪದ ಮೈತ್ರಿಕೂಟ ಬಿಹಾರದಲ್ಲಿ ತಿಂಗಳುಗಳ ಕಾಲ ರಾಜಕೀಯ ಅನಿಶ್ಚಯತೆಯನ್ನುಂಟು ಮಾಡಿತ್ತು. ನಂತರ ನಡೆದ 2015ರ ವಿದಾನಸಭಾ ಚುನಾವಣೆಯಲ್ಲಿ  ನಿತೀಶರ ಸಂಯುಕ್ತ ಜನತಾದಳ, ಲಾಲೂಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೇಸ್ ಒಟ್ಟಾಗಿ ಸೇರಿಕೊಂಡು ಮಹಾಮಮೈತ್ರಿ ಒಂದನ್ನು ರಚಿಸಿಕೊಂಡು ಚುನಾವಣೆ ಎದುರಿಸಿದ್ದವು.  ಆಗ ಬಿಹಾರದಲ್ಲಿ ಬಾಜಪ ಹೀನಾಯವಾಗಿ ಸೋಲನ್ನಪ್ಪಿಕೊಳ್ಳಬೇಕಾಯಿತು. ಅದುವರೆಗೂ ಬಿಹಾರಕ್ಕೆ ಸೀಮಿತವಾಗಿದ್ದ ನಿತೀಶರ ಹೆಸರು ರಾಷ್ಟ್ರ ರಾಜಕಾರಣದಲ್ಲಿ  ಸದ್ದು ಮಾಡತೊಡಗಿತ್ತು. ಬಾಜಪವನ್ನು ಎದುರಿಸಲು ಕಾಂಗ್ರೇಸ್ ಸೇರಿದಂತೆ ಉಳಿದೆಲ್ಲ ವಿರೋಧಪಕ್ಷಗಳು ಮಹಾ ಮೈತ್ರಿಯೊಂದನ್ನು ಮಾಡಿಕೊಂಡು ನಿತೀಶರನ್ನು ಅದರ ನಾಯಕರನ್ನಾಗಿ ಬಿಂಬಿಸಬೇಕೆಂಬ ಕೂಗು ಎಲ್ಲಕಡೆಗಳಿಂದಲೂ ಕೇಳಿ ಬರತೊಡಗಿತ್ತು. ಇಂತಹದೊಂದು ಮೈತ್ರಿಕೂಟ ಸಾದ್ಯವಾಗುವುದೇ ಆದಲ್ಲಿ ಅದನ್ನು ಮುನ್ನಡೆಸಲು ನಿತೀಶ್ ಕುಮಾರ್ ಅವರೇ ಸರಿಯಾದ ವ್ಯಕ್ತಿ ಎಂಬುವುದಕ್ಕೆ ಪೂರಕವೆಂಬಂತೆ  ನರೇಂದ್ರ ಮೋದಿಯವರ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿ ಸುದ್ದಿಯಾಗುತ್ತಲೇ ಹೋದರು. ಕಳೆದ ಎರಡೂವರೆ ವರ್ಷಗಳಲ್ಲಿ ಸಮಯ ಸಿಕ್ಕಾಗಲೆಲ್ಲ ಮೋದಿಯವರು ನಿತೀಶ್ ಅವರನ್ನು, ನಿತೀಶ್ ಮೋದಿಯವರನ್ನು  ವಿರೋಧಿಸುವ ಯಾವ ಅವಕಾಶವನ್ನೂ ಬಿಟ್ಟುಬಿಡಲಿಲ್ಲ.

ಆದರೆ ಕಳೆದ ಎಂಟು ತಿಂಗಳಿಲ್ಲಿ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು  ಬದಲಾದಂತೆ ಕಾಣುತ್ತಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಪಾಟ್ನಾದ ಉಚ್ಚ ನ್ಯಾಯಾಲಯದ ಸಮಾರಂಭ ಒಂದಕ್ಕೆ ಬಂದಿದ್ದ ಮೋದಿಯವರು, ಸರಕಾರಿ ಶಿಷ್ಟಾಚಾರಗಳನ್ನು ಬದಿಗೆ ತಳ್ಳಿ ನಿತೀಶರಿದ್ದ ಕಡೆ ಹೋಗಿ ಅವರನ್ನು ಮಾತಾಡಿಸಿದ್ದರು. ಇದಕ್ಕೆ ಪೂರಕವಾಗಿ ನಿತೀಶ್ ಅವರು ಅದುವರೆಗೂ ಬಿಹಾರಕ್ಕೆ ಕೇಳುತ್ತಿದ್ದ ವಿಶೇಷ ಅನುದಾನದ  ಬಗ್ಗೆ ಮಾತಾಡದೆ ಮೌನವಾಗಿ ಉಳಿದಿದ್ದರು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅಲ್ಲಿಯವರೆಗೂ ಕೇಂದ್ರಸರಕಾರ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯೆಂದು ಮೋದಿಯವರನ್ನು ಟೀಕಿಸುತ್ತಿದ್ದವರು  ಆ ಸಭೆಯಲ್ಲಿ ಅದರ ಬಗ್ಗೆ ಮಾತಾಡದೆ ಮೌನವಾಗಿ ಉಳಿದಿದ್ದು ರಾಷ್ಟ್ರ ರಾಜಕೀಯದಲ್ಲಿ ಮಹತ್ತರ ಸುದ್ದಿಯಾಗಿತ್ತು. ಯಾಕೆಂದರೆ 2015ರ ಚುನಾವಣೆಯ ವೇಳೆಯಲ್ಲಿ ನಿತೀಶರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇದೇ ಇದೇ ವಿಶೇಷ ಪ್ಯಾಕೇಜನ್ನು ಪ್ರಮುಖ ವಿಷಯವನ್ನಾಗಿ ಪ್ರಸ್ತಾಪಿಸಿದ್ದರು. ಮೋದಿ ಮತ್ತು ನಿತೀಶರ ನಡುವಿನ ಜಟಾಪಟಿಯ ವೇಗ ಕಡಿಮೆಯಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಇಷ್ಟಲ್ಲದೆ ಮೋದಿಯವರ ಆಡಳಿತವನ್ನು ನಿತೀಶ್ ಸೂಕ್ಷ್ಮವಾಗಿ ಹೊಗಳಿದ್ದರು.

ಈ ನಡುವೆ ನವೆಂಬರ್ ಎಂಟರಂದು ಪ್ರದಾನಿಯವರು ನೋಟ್ ಬ್ಯಾನ್ ಘೋಷಿಸಿದ ಕೂಡಲೇ ಅದನ್ನು ವಿರೋಧಿಸಿದ ವಿರೋಧ ಪಕ್ಷಗಳಿಗೆ ಅಚ್ಚರಿಯಾಗುವಂತೆ ನಿತೀಶ್ ಕುಮಾರ್ ಸದರಿ ನಿರ್ದಾರವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಅಷ್ಟಲ್ಲದೆ ನಂತರ ದೆಹಲಿಯ ಸಂಸತ್ತಿನ ಒಳಗೆ ಮತ್ತು ಹೊರಗೆ ನೋಟು ಬ್ಯಾನ್ ವಿರೋಧಿಸಿ ವಿರೋಧ ಪಕ್ಷಗಳು ನಡೆಸಿದ ಯಾವ ಪ್ರತಿಭಟನೆಯಲ್ಲೂ ಸಂಯುಕ್ತ ಜನತಾದಳ ಬಾಗವಹಿಸದೆ ದೂರ ಉಳಿದು ವಿರೋಧ ಪಕ್ಷಗಳ ಒಳಗಿನ ತಳಮಳಕ್ಕೆ ಕಾರಣರಾದರು. ಕಳೆದ ವಾರವಷ್ಟೆ ಪಟ್ನಾದಲ್ಲಿ ನಡೆದ ಗುರುಗೋವಿಂದ್ ಸಿಂಗ್ ಅವರ 350ನೆ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಬಾಗವಹಿಸಿದ ಮೋದಿ ಮತ್ತು ನಿತೀಶ್,  ಆತ್ಮೀಯ ಸ್ನೇಹಿತರಂತೆ ಪಿಸುಗುಟ್ಟುತ್ತ ಮಾತನಾಡುತ್ತಿದ್ದುದು ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿಯೂ ಸಂಚಲನ ಉಂಟು ಮಾಡಿತ್ತು. ಈ ಸಮಯದಲ್ಲಿ ಮಾತಾಡಿದ ನಿತೀಶ್, ಮೋದಿಯವರು  ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದ ಪಾನ ನಿಷೇಧವನ್ನು ಮನಸಾರೆ ಹೊಗಳಿ, ತಾವು ಬಿಹಾರದಲ್ಲಿ ಪಾನ ನಿಷೇಧವನ್ನು ಜಾರಿಗೆ ತರುವಲ್ಲಿ ಮೋದಿಯವರೆ ಸ್ಪೂರ್ತಿ ಎನ್ನುವಂತಹ ಮಾತನ್ನಾಡಿದ್ದರು. ಮೋದಿಯವರ ಈ ನಡೆ ಇಡಿ ರಾಷ್ಟ್ರಕ್ಕೆ ಮಾದರಿಯಾಗಬೇಕೆಂದು ಸಹ ಕರೆಕೊಟ್ಟರು. ನಂತರ ಮಾತನಾಡಿದ ಮೋದಿಯವರು ಸಹ ನಿತೀಶ್ ಅವರ ಕಾರ್ಯಕ್ರಮಗಳನ್ನು ಮೆಚ್ಚುತ್ತಾ,  ಹಿಂದುಳಿದ ವರ್ಗಗಳ ಅವರ ಕಾಳಜಿಯನ್ನು ಕೊಂಡಾಡಿ. ಈ ವಿಚಾರದಲ್ಲಿ ಬಿಹಾರದ  ಜನತೆ ನಿತೀಶರನ್ನು ಬೆಂಬಲಿಸಬೇಕೆಂದು ಹೇಳಿದ್ದರು. ಈ ಬೆಳವಣಿಗೆಗಳಿಂದ ವಿರೋಧ ಪಕ್ಷಗಳು ಸಹಜವಾಗಿಯೇ  ಗೊಂದಲಕ್ಕೆ ಈಡಾಗಿದ್ದಾರೆ.

ನಿತೀಶರ ಈ ಬದಲಾವಣೆಗೆ ಮೂಲಕಾರಣ ಮೈತ್ರಿಕೂಟದ ಅವರ ಸರಕಾರದ ಪಾಲುದಾರ ಪಕ್ಷಗಳು. ನಿತೀಶರ ಸರಕಾರದಲ್ಲಿ ಮಂತ್ರಿಗಳಾಗಿರುವ ಲಾಲೂ ಪ್ರಸಾದ್ ಅವರ ಪುತ್ರರುಗಳು ಸರಕಾರದ ಪ್ರತಿವಿಚಾರದಲ್ಲಿಯು ಮೂಗು ತೋರಿಸುತ್ತ ನಿತೀಶರ ಆತಂಕಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಲಾಲೂ ಪ್ರಸಾದ್ ಯಾದವರನ್ನು ಸಮಾದಾನ ಪಡಿಸಲು ನಿತೀಶರು ಕೆಲವು ಅಪ್ರಿಯ ನಿರ್ಣಯಗಳನ್ನೂ ತೆಗೆದುಕೊಳ್ಳುವ ಅನಿವಾರ್ಯತೆಯು ಬಂದಿದೆ.ರಾಷ್ಟ್ರೀಯ ಜನತಾದಳದ ನಾಯಕರು ಮತ್ತು ಕಾರ್ಯಕರ್ತರುಗಳ ಅಕ್ರಮ ಚಟುವಟಿಕೆಗಳು ಮತ್ತು ಅವರ ವಿರುದ್ದ ಆಪಾದನೆಗಳಿಗೆ ನಿತೀಶರೇ ಉತ್ತರ ಕೊಡಬೇಕಾಗಿದ್ದು, ಕ್ರಮೇಣ ಇದು ಬಿಹಾರದ ಜನತೆಯಲ್ಲಿ ನಿತೀಶರ ಮೇಲಿರಬಹುದಾದ ವಿಶ್ವಾಸವನ್ನು ಕಡಿಮೆಗೊಳಿಸಬಹುದೆಂಬ ಭಯ  ನಿತೀಶರಿಗಿದೆ. ಅದೂ ಅಲ್ಲದೆ ಮುಂದಿನ ಚುನಾವಣೆಯ ಹೊತ್ತಿಗೆ ಇದೇ ಮೈತ್ರಿಕೂಟವನ್ನು  ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವುದು ಕಷ್ಟವೆಂಬುದು ನಿತೀಶರಿಗೆ ಅರ್ಥವಾಗಿದೆ. ಹೀಗಾಗಿ ಅವರು ತಮ್ಮದೇ ಆದ ಹೊಸದೊಂದು ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ.  ಹೀಗಾಗಿಯೇ ಅವರು ಈ ವರ್ಷ ನಡೆಯಲಿರುವ ಪಂಚ ರಾಜ್ಯ ಚುನಾವಣೆಗಳ ಬಗ್ಗೆ ವಿರೋಧಪಕ್ಷಗಳ ಜೊತೆ ಯಾವುದೆ ಗಂಭೀರ ಮಾತುಕತೆ ನಡೆಸುತ್ತಿಲ್ಲ. ಬಿಹಾರಿ ವಲಸಿಗರು ಹೆಚ್ಚಿರುವ ಪಂಜಾಬಿನ ಕಡೆಗೂ ಅವರು ಗಮನ ಹರಿಸುತ್ತಿಲ್ಲ. ಮುಂದಿನ ಚುನಾವಣೆ ವೇಳೆಗೆ ತಮಗೆ ಈಗಿರುವ ಮತಬ್ಯಾಂಕಿನ ಜೊತೆಗೆ ಹೊಸದೊಂದು ನವ ಸಾಕ್ಷರಸ್ಥರ ಮತಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುವ ದಿಕ್ಕಿನಲ್ಲಿ ನಿತೀಶ್ ಯೋಚಿಸುತ್ತಿದ್ದಾರೆ. ಹೀಗಾಗಿಯೇ ಪಕ್ಕದ ಉತ್ತರಪ್ರದೇಶದ ಚುನಾವಣೆಗಳ ಕುರಿತಂತೆಯೂ ಅವರು ತೀರಾ ಆಸಕ್ತಿಯನ್ನೇನೂ ತೋರಿಸುತ್ತಿಲ್ಲ. ಅದೇ ರೀತಿ ಮೋದಿಯವರಿಗೂ 2019ರ ವೇಳೆಗೆ ತಮಗಿರುವ ಬೆಂಬಲವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಇಚ್ಚೆಯಿದ್ದಂತೆ ನಿತೀಶರಂತಹ ಜನಪರವಾದ, ಜನಪ್ರಿಯ ಮುಖ್ಯಮಂತ್ರಿಯ ಬೆಂಬಲವನ್ನು ಗಳಿಸಿಕೊಂಡಲ್ಲಿ ಬಿಹಾರವನ್ನು ಗೆಲ್ಲುವುದರ ಜೊತೆಗೆ ಇತರೇ ಸಣ್ಣಪುಟ್ಟ ರಾಜ್ಯಗಳನ್ನೂ ವಶಪಡಿಸಿಕೊಂಡು ಕಾಂಗ್ರೆಸ್ಸಿನ ಪುನಶ್ಚೇತನದ ಆಸೆಗೆ ತಣ್ಣೀರೆರಚಲು  ಮೋದಿಯವರು ಬಯಸುತ್ತಿದ್ದಾರೆ. ಹೀಗಾಗಿಯೇ ಅವರು ದೇಶದ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳನ್ನು ಓಲೈಸುವತ್ತ  ಹೆಜ್ಜೆ ಇಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮಿಳುನಾಡು, ಒರಿಸ್ಸಾ,  ಮತ್ತು ಈಶಾನ್ಯ ಭಾಗದ ಪುಟ್ಟ ರಾಜ್ಯಗಳಲ್ಲಿ ಹೆಚ್ಚಿನ ಬೆಂಬಲ ಗಳಿಸಲು ಪ್ರಯತ್ನ ನಡೆಸಿದ್ದಾರೆ. ಈಗ ಕೋಮುವಾದದ ವಿರೋಧಿ ನೀತಿಯೊಂದನ್ನೇ ಇಟ್ಟುಕೊಂಡು ಮುಂದಿನ ಚುನಾವಣೆಗಳನ್ನು ಎದುರಿಸಿ ಗೆಲ್ಲುವುದು ಕಷ್ಟವೆಂಬುದು ನಿತೀಶರಿಗೆ ಮನವರಿಕೆಯಾಗಿರುವಂತೆ, ತಮ್ಮ ಮತಾಂಧ ಮತ್ತು ಅಭಿವೃದ್ದಿಯ ಹಳೆಯ ಘೋಷಣೆಗಳನ್ನು ಹೊತ್ತು 2019ಕ್ಕೆ ಮತ್ತೆ ಅಧಿಕಾರ ಹಿಡಿಯುವುದು ಕಷ್ಟ ಸಾದ್ಯವೆಂದು ಮೋದಿಯವರಿಗು ಅನಿಸಿದಂತಿದೆ. ಬಾಜಪದ ಸಾಂಪ್ರದಾಯಿಕ ಮತಬ್ಯಾಂಕಿನ ಬಲ ಒಂದರಿಂದಲೇ  ಗೆಲುವು ಅಸಾಧ್ಯವೆಂಬುವುದೂ ಅವರಿಗೆ ಅರಿವಾದಂತಿದೆ.

ಭವಿಷ್ಯದ ರಾಜಕೀಯ ಚದುರಂಗದಾಟದ ನಡೆಗಳನ್ನು ಮೊದಲಿಗೇ ಊಹಿಸಿ, ಇಬ್ಬರೂ ನಾಯಕರುಗಳು ತಮ್ಮ  ಕಾಯಿಗಳನ್ನು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಪರಸ್ಪರ ಪೂರಕವಾಗಿ ಕೆಲಸ ಮಾಡಲು ಇಬ್ಬರೂ ನಾಯಕರುಗಳು ನಿರ್ಧರಿಸಿದಂತಿದೆ. ಹೀಗಾಗಿ ಸದ್ಯಕ್ಕೆ ಬಾಜಪೇತರ ವಿರೋಧ ಪಕ್ಷಗಳ ಮೈತ್ರಿಕೂಟದ ರಚನೆ ಎನ್ನುವುಸು ದೂರದ ಮಾತಾಗುವಂತೆ ಕಾಣುತ್ತಿದೆ.

nkhap

 

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಹಿಳಾ ಕಾಂಗ್ರೆಸ್‍ ನಿಂದ ತಮಟೆ ಪ್ರತಿಭಟನೆ: ಕೇಂದ್ರ ಸರಕಾರದ ವಿರುದ್ಧ ಬೀದಿಗಳಿದ ಮಹಿಳಾ ಬಣ

ಮುಂದಿನ ಸುದ್ದಿ »

ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದಿಂದ “ಯುವ ಜಾಗೃತಿ-ದೇಶ ಸಮೃದ್ಧಿ” ರಾಜ್ಯವ್ಯಾಪಿ ಅಭಿಯಾನ

ಸಿನೆಮಾ

  • ಮದುವೆಯಾಗಲಿದ್ದಾರೆ ಲೂಸ್ ಮಾದ ಯೋಗೀಶ್

    May 23, 2017

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ. ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ...

    Read More
  • ಮಕ್ಕಳಿಗಾಗಿ ಮತ್ತೆ ಒಂದಾದ ಹೃತಿಕ್ ರೋಶನ್-ಸೂಸೇನ್

    May 23, 2017

    ನ್ಯೂಸ್ ಕನ್ನಡ-(23.5.17):ಬಾಲಿವುಡ್‌ನ ಸ್ನೇಹಪರ ದಂಪತಿ ಎಂದೇ ಗುರುತಿಸಿಕೊಂಡಿದ್ದ ಹೃತಿಕ್‌ ರೋಷನ್ ಮತ್ತು ಸೂಸೇನ್ ಖಾನ್ ಅವರು ವೈವಾಹಿಕ ವಿಚ್ಛೇದನ ಪಡೆದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಸೂಸೇನ್ ಅಂತೂ ಪತಿಯ ಬಗ್ಗೆ ಖಾರವಾಗಿ ಮಾತನಾಡಿದ್ದರು. ಆದರೆ ವಿಚ್ಛೇದನ ಪಡೆದ ಮೇಲೂ ...

    Read More
  • ಸೀರಿಯಲ್ ಗಳಲ್ಲಿ ಅವಕಾಶ ಸಿಗದೇ ಪೈಂಟರ್ ಆದ ಖ್ಯಾತ ನಟ!

    May 22, 2017

    ನ್ಯೂಸ್ ಕನ್ನಡ ವರದಿ-(22.5.17)ಇಸ್ಲಾಮಾಬಾದ್: ಪಾಕ್ ನಟ ಶಾಹಿದ್ ನಸೀಬ್  ಕೆಲಸವಿಲ್ಲದೆ ಗೋಡೆಗೆ ಬಣ್ಣಬಳಿಯುವ ಕೆಲಸ ಮಾಡುತ್ತಿದ್ದಾರೆ. ಹಲವಾರು ಟಿವಿ ಸೀರಿಯಲ್‍ಗಳಲ್ಲಿ ನಟಿಸಿರುವ ಪ್ರತಿಭಾಂತ ನಟ ಈತ. ಈಗ ಒಂದು ಹೊತ್ತಿನ ಕೂಲಿಗಾಗಿ ಗೋಡೆಗೆ ಪೈಂಟ್ ಬಳಿಯುತ್ತಿದ್ದಾರೆ. ದುಲ್ಲಾರಿ, ...

    Read More
  • 80ರ ಹರೆಯದ ವೃದ್ಧೆಯ ಪಾತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್!

    May 20, 2017

    ನ್ಯೂಸ್ ಕನ್ನಡ ವರದಿ-(20.5.17): ನಟಿ ಕಂಗನಾ ಅವರು ತಮ್ಮ ಸ್ವಂತ ನಿರ್ದೇಶನದ “ತೇಜು” ಸಿನೆಮಾದಲ್ಲಿ ವೃದ್ಧೆ ಮಹಿಳೆಯ ಪಾತ್ರ ನಿರ್ವಹಿಸುವುದಾಗಿ ಘೋಷಿಸಿದ್ದಾರೆ. “ನನ್ನ ಮೊದಲ ನಿರ್ದೇಶನದ ‘ತೆಜು’ ಚಿತ್ರದಲ್ಲಿ ನಾನು 80 ವರ್ಷ ವಯಸ್ಸಿನ ಮಹಿಳೆ ಪಾತ್ರವಹಿಸುತ್ತೇನೆ. ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×