ಗುಂಪು ಹಲ್ಲೆ: ಗೋರಕ್ಷಕರಿಂದ ಪೆಹ್ಲು ಖಾನ್ ಹತ್ಯೆ ಪ್ರಕರಣದ ಎಲ್ಲಾ 6 ಆರೋಪಿಗಳು ಖುಲಾಸೆ!

0
1251

ನ್ಯೂಸ್ ಕನ್ನಡ ವರದಿ: 2017ರಲ್ಲಿ ಗೋರಕ್ಷಕರಿಂದ ಹತ್ಯೆಯಾದ ಪೆಹ್ಲು ಖಾನ್ ಗುಂಪು ಹಲ್ಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ 6 ಮಂದಿಯನ್ನು ರಾಜಸ್ಥಾನದ ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿದೆ.

ಏಪ್ರಿಲ್ 1, 2017ರಲ್ಲಿ ಹೈನುಗಾರಿಕೆ ನಡೆಸುತ್ತಿದ್ದ ಪೆಹ್ಲು ಖಾನ್ ಅಗತ್ಯ ಪರವಾನಿಗೆ ಪಡೆದು ಗೋವುಗಳನ್ನು ಮಾರುಕಟ್ಟೆಯಿಂದ ಮನೆಗೆ ಸಾಗಿಸುತ್ತಿದ್ದ ವೇಳೆ ಅಲ್ವಾರ್‌ನಲ್ಲಿ ದಾಳಿ ನಡೆದಿತ್ತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೆಹ್ಲು ಖಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಸಾಯುವ ಮುನ್ನ ಎಲ್ಲಾ 6 ಆರೋಪಿಗಳ ಹೆಸರನ್ನೂ ಪೆಹ್ಲು ಖಾನ್ ಹೇಳಿದ್ದರು. ಈ ಗುಂಪು ಹಲ್ಲೆ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಪೆಹ್ಲು ಖಾನ್‌ ಮೇಲೆ ಹಲ್ಲೆ ನಡೆಸುವ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಈ ವೈರಲ್ ವಿಡಿಯೋವನ್ನೇ ಮುಂದಿಟ್ಟುಕೊಂಡು ಗೋರಕ್ಷಕರ ವಿರುದ್ಧ ವಾದ ಮಂಡಿಸಲಾಗಿತ್ತು. ಆದರೆ, ಸಿಡಿಯಲ್ಲಿ ಇರುವ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಅದು ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳದ ಕಾರಣ ಅದನ್ನು ಒಪ್ಪುವಂತಹ ಪುರಾವೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯದ ತೀರ್ಪನ್ನು ಅಧ್ಯಯನ ಮಾಡಿದ ಬಳಿಕ ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಯೋಗೇಂದ್ರ ಖಟಾನಾ ತಿಳಿಸಿದ್ದಾರೆ.

ಆದಾಗ್ಯೂ, ಗುಂಪು ಹಲ್ಲೆ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ ರಾಜಸ್ಥಾನ ಗೋವು ಸಂರಕ್ಷಣೆ ( ಗೋಹತ್ಯೆ ನಿಷೇಧ ಮತ್ತು ಸಾಗಣೆ ಅಥವಾ ತಾತ್ಕಾಲಿಕ ವರ್ಗಾವಣೆ) ಕಾಯ್ದೆ, 1995 ಸೆಕ್ಷನ್ 6 ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅದೇ ವೇಳೆ ಪೆಹ್ಲು ಖಾನ್ ಅವರ ಮಗ ಇರ್ಷಾದ್ (25) ಮತ್ತು ಆರಿಫ್ (22) ವಿರುದ್ಧ ಇದೇ ಕಾಯ್ದೆಯ 5,8 ಮತ್ತು 9 ಸೆಕ್ಷನ್‌ನಡಿ ಆರೋಪ ಪಟ್ಟಿ ದಾಖಲಿಸಿದೆ.

ಪೆಹ್ಲು ಖಾನ್ ಮೇಲೆ ಆರೋಪ ಹೊರಿಸಿರುವುದನ್ನು ಖಂಡಿಸಿದ ಈತನ ಕುಟುಂಬ ಗುಂಪು ಹಲ್ಲೆ ಪ್ರಕರಣದಲ್ಲಿ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದೆ.

LEAVE A REPLY

Please enter your comment!
Please enter your name here