Monday July 4 2016

Follow on us:

Contact Us

ಈದುಲ್ ಫಿತರ್ ಗೆ ಭರ್ಜರಿ ಸಿದ್ಧತೆ: ತುಂಬಿ ತುಳುಕುತ್ತಿರುವ ವ್ಯಾಪಾರ ಮಳಿಗೆಗಳು

ನ್ಯೂಸ್ ಕನ್ನಡ ವರದಿ- ಬಳ್ಳಾರಿ: ಪವಿತ್ರ ರಂಜಾನ್ ಮಾಸದ ಉಪವಾಸ ವ್ರತ ಆಚರಣೆಯ ಕೊನೆಯ ದಿನಗಳು ಸಮೀಪಿಸುತ್ತಿವೆ. ಇಂದು (ಸೋಮವಾರ) ಅಮವಾಸ್ಯೆ ಇರುವುದರಿಂದ ಮಂಗಳವಾರ ಅಥವಾ ಬುಧವಾರ ಚಂದ್ರ ಕಾಣುವ ಸಾಧ್ಯತೆ ಇದೆ ಎಂದು ಹಿರಿಯ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಒಂದು ತಿಂಗಳಿಂದ ದೇಹವನ್ನು ದಂಡಿಸಿ ಶ್ರದ್ಧಾ, ಭಕ್ತಿಯಿಂದ ಮುಸ್ಲಿಮ್ ಬಾಂಧವರು ಉಪವಾಸ ಆಚರಿಸುತ್ತಿದ್ದಾರೆ. ಎಂದಿನಂತೆ ದಿನಕ್ಕೆ ಐದು ಬಾರಿ ನಮಾಝ್ ಸಲ್ಲಿಸುವುದರ ಜೊತೆಗೆ ಪವಿತ್ರ ಧರ್ಮ ಗ್ರಂಥ ‘ಕುರಾನ್’ ಪಠಣ ಮಾಡುತ್ತಿದ್ದಾರೆ.
‘ಫಝರ್’ (ಬೆಳಗ್ಗೆ 5ಕ್ಕೆ), ‘ಝೊಹರ್’ (ಮಧ್ಯಾಹ್ನ 2), ‘ಅಸರ್’ (ಸಂಜೆ 5), ‘ಮಗ್ರೀಬ್’ (ಸಂಜೆ 7ಕ್ಕೆ) ಹಾಗೂ ‘ಇಶಾ’ (ರಾತ್ರಿ 8ಕ್ಕೆ) ಐದು ಬಾರಿ ನಮಾಝ್ (ಪ್ರಾರ್ಥನೆ) ಮಾಡುತ್ತಾರೆ. ಇದರೊಂದಿಗೆ ರಾತ್ರಿ 8ಗಂಟೆಗೆ ‘ತರಾವಿ’ (ವಿಶೇಷ ನಮಾಝ್) ಮಾಡುವುದು ವಿಶೇಷ.

ಹಬ್ಬದ ವಿಶೇಷ ಏನು?

ರಂಝಾನ್ ಹಬ್ಬದ ದಿನ ಎಲ್ಲ ಪ್ರಾರ್ಥನಾ ಮಂದಿರಗಳನ್ನು ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಅಂದು ಬೆಳಿಗ್ಗೆ ಮುಸ್ಲಿಮರು ತಮ್ಮ ತಮ್ಮ ಊರುಗಳಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದಿನ ಇಲ್ಲಿಯ  ಕೌಲಬಜಾರ್ ಬಂಡಿಹಟ್ಟಿ ಸಮೀಪದ ಈದ್ಗಾ ಮೈದಾನದಲ್ಲಿ ಮುಸ್ಲಿಮ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವರು.

ನಾಡಿನಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಪ್ರಾರ್ಥನೆ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಬಂಧು-ಬಾಂಧವರು ಪರಸ್ಪರ ಒಬ್ಬರ ಮನೆಗೊಬ್ಬರು ಭೇಟಿ ನೀಡಿ ಶುಭ ಕೋರಿ, ಸಂಭ್ರಮದಿಂದ ಕಾಲ ಕಳೆಯುತ್ತಾರೆ. ‘ಶೀರ್ ಕುರ್ಮ’ (ಶಾವಿಗೆ ಮತ್ತು ಹಾಲು ಬೆರೆಸಿ ಮಾಡಿದ ಸಿಹಿ ತಿನಿಸು) ಆ ದಿನದ ವಿಶೇಷ ಖಾದ್ಯ ಆಗಿರುತ್ತದೆ. ಅನ್ಯ ಧರ್ಮೀಯ ಗೆಳೆಯರನ್ನು ಮನೆಗೆ ಆಹ್ವಾನಿಸಿ, ಶೀರ್ ಕುರ್ಮ ಕೊಡುತ್ತಾರೆ.

ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಈಗಿನಿಂದಲೇ ಮುಸ್ಲಿಮ್ ಧರ್ಮೀಯರು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದ ಎಲ್ಲ ಸದಸ್ಯರಿಗೂ ಹೊಸ ಬಟ್ಟೆ, ಖಾದ್ಯ ತಯಾರಿಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಯೆಂಬಂತೆ ಕಳೆದ ಕೆಲವು ದಿನಗಳಿಂದ ಕೌಲಬಜಾರ್ ಹಾಗೂ ಸಣ್ಣ ಮಾರ್ಕೇಟ್ ನಲ್ಲಿ ಸಂಜೆಯಾಗುತ್ತಿದ್ದಂತೆ ಜನಜಂಗುಳಿ. ಈ ಎರಡೂ ಪ್ರದೇಶಗಳಲ್ಲಿರುವ ಮಳಿಗೆಗಳು ಜನರಿಂದ ತುಂಬಿ ತುಳುಕುತ್ತಿವೆ. ಇಡೀ ಮಾರುಕಟ್ಟೆ ಪ್ರದೇಶದಲ್ಲಿ ಕಾಲಿಡಲು ಜಾಗ ಇಲ್ಲದಂತಾಗಿದೆ.

‘ಹಬ್ಬಕ್ಕೆ ಇನ್ನೇನು ಎರಡ್ಮೂರು ದಿನಗಳೇ ಉಳಿದಿವೆ. ಈಗಿನಿಂದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.  ಕುಟುಂಬ ಸದಸ್ಯರೊಂದಿಗೆ ಖರೀದಿಗೆ ಮಾರುಕಟ್ಟೆಗೆ ಬಂದಿದ್ದೇನೆ’ ಎಂದು  ಬಜಾರ್ ನಲ್ಲಿ ಶಾಪಿಂಗ್ ಬಂದಿದ್ದ ಶಬೇರ್ ಕಾಸೀಮ್ ಅಲಿ ಅವರು ‘ನ್ಯೂಸ್ ಕನ್ನಡಕ್ಕೆ “ಗೆ ತಿಳಿಸಿದರು.

ವಿಶೇಷ ವರದಿ: ಗಣೇಶ ಇನಾಂದಾರ, ಬಳ್ಳಾರಿ

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಣ್ಣ ಚಿತೆಗೆ ಹಾರಿ ಆತ್ಮಹತ್ಯೆಗೈದ ತಂಗಿ!

ಮುಂದಿನ ಸುದ್ದಿ »

ನಾಳೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ; ಸಂಭಾವ್ಯ ಸಚಿವರ ಪಟ್ಟಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×