Thursday January 5 2017

Follow on us:

Contact Us
    392

ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಅಸಮಾಧಾನ: ಜ.9 ರಂದು ತಮಟೆ ಚಳುವಳಿ

ನ್ಯೂಸ್ ಕನ್ನಡ ವರದಿ (5-1-17): ಮಡಿಕೇರಿ: ನೋಟುಗಳ ಅಮಾನ್ಯೀಕರಣದ ಪರಿಣಾಮವಾಗಿ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದ್ದು, ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಜ.9 ರಂದು ಮಹಿಳಾ ಕಾಂಗ್ರೆಸ್‍ ನಿಂದ ತಮಟೆ ಚಳುವಳಿ ಹಾಗೂ ಜಿಲ್ಲಾ ಕಾಂಗ್ರೆಸ್‍ ನಿಂದ ಜ.13 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ಹೋರಾಟವನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷರಾದ ಟಿ.ಪಿ. ರಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.9 ರಂದು ಮಹಿಳಾ ಕಾಂಗ್ರೆಸ್‍ ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತರಕಾರಿ ಮಾಲೆಯನ್ನು ಧರಿಸಿ, ತಟ್ಟೆಗಳಿಗೆ ಸೌಟುಗಳಿಂದ ಬಡಿಯುವ ಮೂಲಕ ಮಾರುಕಟ್ಟೆಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದರು. ಜ.13 ರಂದು ಸುಮಾರು 2 ಸಾವಿರ ಮಂದಿ ಕಾಂಗ್ರೆಸ್ಸಿಗರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮುತ್ತಿಗೆ ಹಾಕುವುದಾಗಿ ತಿಳಿಸಿದರು.

ನೋಟು ಅಮಾನ್ಯೀಕರಣ ಗೊಳಿಸಿದ 50 ದಿನಗಳ ಕಾಲ ಜನರು ದೇಶಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಭಾವನೆಯಿಂದ ಯಾವುದೇ ಪ್ರತಿರೋಧ ಒಡ್ಡದೆ ಸುಮ್ಮನಿದ್ದೆವು. ಆದರೆ, ದಿನದಿಂದ ದಿನಕ್ಕೆ ಸಂಕಷ್ಟ ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಹೋರಾಟದ ಜಾಗೃತಿಯನ್ನು ಮೂಡಿಸಲು ಕಾಂಗ್ರೆಸ್ ಪಕ್ಷ ದೇಶವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ರಮೇಶ್ ಹೇಳಿದರು.

ಕೇಂದ್ರ ಸರ್ಕಾರಕ್ಕೆ ಈಗಾಗಲೆ ಪ್ರಶ್ನೆಗಳನ್ನು ನೀಡಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತ ಪತ್ರ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು. 2016 ನ.8 ರಿಂದ ಇಲ್ಲಿಯವರೆಗೆ ಎಷ್ಟು ಕಪ್ಪು ಹಣವನ್ನು ಪತ್ತೆ ಹಚ್ಚಲಾಗಿದೆ, ನೋಟುಗಳ ಅಮಾನ್ಯೀಕರಣದಿಂದ ಎಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಎಷ್ಟು ಉದ್ಯೋಗಗಳು ಮತ್ತು ಜೀವನಾಧಾರಗಳು ನಷ್ಟವಾಗಿವೆ. ಎಷ್ಟು ಜೀವಹಾನಿಯಾಗಿದೆ ಹಾಗೂ ಜೀವ ಕಳೆದುಕೊಂಡ ಕುಟುಂಬಗಳಿಗೆ ಇಲ್ಲಿಯವರೆಗೆ ಪರಿಹಾರವನ್ನು ಯಾಕೆ ನೀಡಿಲ್ಲ? , ನೋಟುಗಳ ಅಮಾನ್ಯೀಕರಣಗೊಳಿಸುವ ಮುನ್ನ ಯಾವ ರೀತಿಯ ಸಿದ್ಧತೆಯನ್ನು ಕೈಗೊಳ್ಳಲಾಗಿತ್ತು? , ತಜ್ಞರು, ಅರ್ಥಶಾಸ್ತ್ರಜ್ಞರು ಅಥವಾ ಆರ್‍.ಬಿಐನೊಂದಿಗೆ ಯಾಕೆ ಸಮಾಲೋಚನೆ ನಡೆಸಿಲ್ಲ? , 2016 ನ.8 ಕ್ಕಿಂತ ಹಿಂದಿನ 6 ತಿಂಗಳಿನಲ್ಲಿ 25 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟಿರುವ ಖಾತೆದಾರರ ಹೆಸರನ್ನು ಬಹಿರಂಗಗೊಳಿಸಬೇಕು ಎನ್ನುವ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕೆಂದು ಟಿ.ಪಿ. ರಮೇಶ್ ಒತ್ತಾಯಿಸಿದರು.

ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ 5 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಅವರು ಹೇಳಿದರು. ಬ್ಯಾಂಕ್‍ ನಿಂದ ಹಣವನ್ನು ಪಡೆಯಲು ವಿಧಿಸಲಾಗಿರುವ ಎಲ್ಲಾ ನಿರ್ಬಂಧಗಳನ್ನು ತಕ್ಷಣ ತೆಗೆದುಹಾಕಬೇಕು, ಠೇವಣಿ ಇಟ್ಟಿರುವ ಎಲ್ಲಾ ಠೇವಣಿದಾರರುಗಳಿಗೆ ನಿರ್ಬಂಧ ಹೇರಿದ ದಿನದಿಂದ ಶೇ.18 ರಷ್ಟು ವಿಶೇಷ ಬಡ್ಡಿಯನ್ನು ನೀಡಬೇಕು. ಡಿಜಿಟಲ್ ವ್ಯವಹಾರಗಳ ಮೇಲೆ ವಿಧಿಸಲಾಗಿರುವ ಎಲ್ಲಾ ರೀತಿಯ ಶುಲ್ಕಗಳನ್ನು ರದ್ದು ಪಡಿಸಬೇಕು. ಆಹಾರ ಭದ್ರತಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪಿಡಿಎಸ್ ವ್ಯವಸ್ಥೆಯ ಪ್ರಕಾರ ವಿತರಿಸಲಾದ ಪಡಿತರ ದರವನ್ನು ಅರ್ಧದಷ್ಟು ಕಡಿತಗೊಳಿಸಬೇಕು, ವಿಶೇಷ ಏಕ ಕಾಲಿಕ ಬೋನಸನ್ನು ಹಿಂಗಾರು ಬೆಳೆಗಳ ಮೇಲೆ ಶೇ.20 ರಷ್ಟು ಬೋನಸ್ ನೀಡಬೇಕು. ನೋಟುಗಳ ಅಮಾನ್ಯೀಕರಣದಿಂದ ಸಂಕಷ್ಟ ಎದುರಿಸಿದ ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಮಹಿಳೆಯ ಖಾತೆಗೆ ತಲಾ 20 ಸಾವಿರ ರೂ. ಪರಿಹಾರ ಠೇವಣಿ ನೀಡಬೇಕು. ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳು ಮತ್ತು ವೇತನದ ದರವನ್ನು ದುಪ್ಪಟ್ಟು ಗೊಳಿಸಬೇಕು.

ನ.8 ರಿಂದ ಯಾರೆಲ್ಲ ಕೆಲಸಗಳನ್ನು ಕಳೆದುಕೊಂಡಿದ್ದಾರೋ ಅವರನ್ನು ಗುರುತಿಸಲು ಮತ್ತು ನೋಂದಾಯಿಸಲು ಕೇಂದ್ರ ಸರ್ಕಾರ ವಿಶೇಷ ಆಂದೋಲನವನ್ನು ಆಯೋಜಿಸಬೇಕು ಮತ್ತು ಮಾ.31 ರ ವರೆಗೆ ಅನ್ವಯವಾಗುವಂತೆ ಕನಿಷ್ಠ ವೇತನ ದರದಲ್ಲಿ ಪರಿಹಾರ ನೀಡಬೇಕು. ಸಣ್ಣವ್ಯಾಪಾರಿಗಳಿಗೆ ಶೇ.50 ರಷ್ಟು ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆ ವಿನಾಯ್ತಿ ನೀಡಬೇಕು. ಈ ರೀತಿಯ ವಿನಾಯ್ತಿಯಿಂದ ರಾಜ್ಯ ಸರ್ಕಾರಗಳಿಗೆ ಉಂಟಾದ ಆದಾಯದ ನಷ್ಟವನ್ನು ಕೇಂದ್ರ ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದೆಂದು ಟಿ.ಪಿ. ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಸಂಯೋಜಕಿ ಉಷಾ ನಾಯ್ಡು, ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಹಾಗೂ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಕುಮಾರ್ ಉಪಸ್ಥಿತರಿದ್ದರು.

nkicmhap

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನೋಟು ಅಮಾನ್ಯದಿಂದ ದೇಶಕ್ಕೆ ಆರ್ಥಿಕ ಸಂಕಷ್ಟ : ಜೀವಿಜಯ

ಮುಂದಿನ ಸುದ್ದಿ »

ಊರನ್ನೇ ಬೆಚ್ಚಿಬೀಳಿಸಿದ ಎಂಡೋಪೀಡಿತ ಕುಟುಂಬದ ಆತ್ಮಹತ್ಯೆ: ಎಂಡೋಸಂತ್ರಸ್ತರ ಮನೋಸ್ಥೈರ್ಯವನ್ನು ಕುಗ್ಗಿಸಿದ ಮನಕಲಕುವ ಘಟನೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×