ಕೆಂಪುಕೋಟೆ ಭಾಷಣದಲ್ಲೂ 370ನೇ ವಿಧಿ ರದ್ದತಿ ಉಲ್ಲೇಖ ಮಾಡಿದ ಪ್ರಧಾನಿ ಮೋದಿ

0
66

ನ್ಯೂಸ್ ಕನ್ನಡ ವರದಿ (15-8-2019): ಇಂದು ಸ್ವಾತಂತ್ರ ದಿನಾಚರಣೆಯಾಗಿದ್ದು, ದೇಶದ ಪ್ರಧಾನಿ ಕೆಂಪುಕೋಟೆಯಲ್ಲಿ ಭಾರತದ ಧ್ವಜಹಾರಿಸಿ ಹಿಂದಿಯಲ್ಲಿ ಭಾಷಣ ಮಾಡುವುದು ವಾಡಿಕೆ. ಈ ಬಾರಿ ಪ್ರಧಾನಿ ಮೋದಿ ಭಾಷಣ ಮಾಡಿ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಸ್ವಾತಂತ್ರ್ಯ ಭಾರತದ ಮೊದಲ ಗೃಹ ಮಂತ್ರಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಕನಸನ್ನು ನನಸು ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಮ್ಮ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ 10 ವಾರಗಳು ಪೂರ್ಣಗೊಂಡಿಲ್ಲ. ಆದರೆ, ಈ ಕಿರು ಅವಧಿಯಲ್ಲಿಯೇ ಅನೇಕ ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಂವಿಧಾನದ 370 ನೇ ವಿಧಿ, ತ್ರಿವಳಿ ತಲಾಖ್ ಪದ್ದತಿಗೆ ಅಂತ್ಯ ಹಾಡಲಾಗಿದೆ ಎಂದು ತಿಳಿಸಿದರು. 370ನೇ ವಿಧಿಯಿಂದಾಗಿ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ನಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಹೆಚ್ಚಾಗಿತ್ತು. ಮಹಿಳೆಯರು, ಮಕ್ಕಳು, ದೀನ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ನೈರ್ಮಲ್ಯೀಕರಣ ವ್ಯವಸ್ಥೆ ಎಂಬುದೇ ಇರಲಿಲ್ಲ ಇದನ್ನು ಹೇಗೆ ಒಪ್ಪಿಕೊಳ್ಳಲಿ ಎಂದು ಪ್ರಶ್ನಿಸಿದ ಮೋದಿ, 370ನೇ ವಿಧಿಯನ್ನು ಸಮರ್ಥಿಸಿಕೊಳ್ಳುವವರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಅಂತಿಮವಾಗಿ ಬಹುಮತದೊಂದಿಗೆ ಈ ವಿಧಿಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು. 370ನೇ ವಿಧಿ ನಿಜವಾಗಿಯೂ ಮುಖ್ಯವಾಗಿರುತ್ತಿದ್ದರೆ ಅದನ್ನು ಏಕೆ ತಾತ್ಕಾಲಿಕ ವಿಧಿಯಾಗಿ ಉಳಿಸಲಾಗಿತ್ತು ಎಂದು ಪ್ರಶ್ನಿಸಿದರು.

ದೇಶದಲ್ಲಿನ ವಿವಿಧ ಭಾಗಗಳಲ್ಲಿ ಸಂಭವಿಸಿರುವ ಪ್ರವಾಹ ಕುರಿತು ಕಳವಳ ವ್ಯಕ್ತಪಡಿಸಿ, ರಕ್ಷಾ ಬಂಧನ್ ಹಬ್ಬದ ಶುಭಾಶಯ ಕೋರುತ್ತಾ ಭಾಷಣ ಆರಂಭಿಸಿದ ಮೋದಿ, ಪ್ರವಾಹ ಪೀಡಿತ ಜನರ ಸಂಕಷ್ಟದಲ್ಲಿ ಎಲ್ಲರೂ ಒಗ್ಗೂಡಬೇಕಾಗಿದೆ ಎಂದರು. ಜನಸಂಖ್ಯಾ ಹೆಚ್ಚಳದಿಂದ ಮುಂದಿನ ಪೀಳಿಗೆಗೆ ತೊಂದರೆಯಾಗಲಿದೆ. ಸಣ್ಣ ಕುಟುಂಬದ ನೀತಿ ಅನುಕರಣೆಯಿಂದ ದೇಶದ ಅಭಿವೃದ್ಧಿ ಹಾಗೂ ದೇಶಭಕ್ತಿ ಹೆಚ್ಚಾಗಲಿದೆ. ಭ್ರಷ್ಟಾಚಾರ, ಕಪ್ಪು ಹಣ ತೊಡೆದುಹಾಕುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದು ಮೋದಿ ಕರೆ ನೀಡಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು. ಭಾಷಣದ ಮೊದಲು ರಾಜಘಾಟ್ ಗೆ ತೆರಳಿ ಗಾಂಧೀಜಿಗೆ ನಮನ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here