ಮಂಗಳವಾರದಿಂದ 7 ದಿನಗಳ ಕಾಲ ಕಂಪ್ಲೀಟ್ ಬೆಂಗಳೂರು ಲಾಕ್‌ಡೌನ್

0
58

ನ್ಯೂಸ್ ಕನ್ನಡ ವರದಿ: ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಮಂಗಳವಾರದಿಂದ ಬೆಂಗಳೂರಿನಲ್ಲಿ 1 ವಾರ ಲಾಕ್ ಡೌನ್ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೌದು, ಮುಂದಿನ ಮಂಗಳವಾರದಿಂದ ಬೆಂಗಳೂರಿನಲ್ಲಿ 1 ವಾರದ ಮಟ್ಟಿಗೆ ಲಾಕ್ ಡೌನ್ ಘೋಷಿಸಿ ಸಿಎಂ ಯಡಿಯೂರಪ್ಪ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ನಡೆದ ಸಿಎಂ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತಂತೆ ತಮ್ಮ ನಿವಾಸದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿಗಳು, ಬೆಂಗಳೂರು ಕೊರೋನಾ ಸೋಂಕು ನಿಯಂತ್ರಣದ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ ಅವರು ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಒಂದು ವಾರಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಜಾರಿ ಮಾಡಲು ನಿರ್ಧರಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸಿಎಂ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ತಜ್ಞರು ನೀಡಿದ ಸಲಹೆ ಮೇರೆಗೆ ಸಿಎಂ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ.

ಇನ್ನೂ, ಕೊರೊನಾ ಸೋಂಕು ಹೆಚ್ಚಿರುವ ಮೂರು ಜಿಲ್ಲೆಗಳಲ್ಲಿ ಕೂಡ ಲಾಕ್ ಡೌನ್ ಹೇರಲು ಸೋಮವಾರ ನಿರ್ಧರಿಸಲಾಗುವುದು, ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ಸಿಎಂ ಸೋಮವಾರ ಘೋಷಣೆ ಮಾಡಲಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಡೀ ಕರುನಾಡು ತಲ್ಲಣಗೊಂಡಿದೆ. ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಹೇರುವಂತೆ ಭಾರೀ ಒತ್ತಾಯಗಳು ಕೇಳಿಬಂದಿದೆ.

ಈ ಕುರಿತು ಈಗ ಅಧಿಕೃತವಾಗಿ ಟ್ವೀಟ್ ಮಾಡಿದ ಸಿಎಂ ಯಡಿಯೂರಪ್ಪನವರು, ಇತ್ತೀಚಿಗೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಸೋಂಕು ನಿಯಂತ್ರಣದ ದೃಷ್ಟಿಯಿಂದ, ತಜ್ಞರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ಬರುವ ಮಂಗಳವಾರ, ಜುಲೈ 14ರ ರಾತ್ರಿ 8:00 ರಿಂದ 7 ದಿನಗಳ ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗುವುದು. (1/2)

ಈ ಅವಧಿಯಲ್ಲಿ ಅಗತ್ಯ ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದ್ದು, ವಿವರವಾದ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ಈಗಾಗಲೇ ನಿಗದಿಯಾಗಿರುವಂತೆ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ನಡೆಸಲಾಗುವುದು. ಲಾಕ್ ಡೌನ್ ಸಂದರ್ಭದಲ್ಲಿ ಜನರು ಯಾವುದೇ ಆತಂಕಕ್ಕೆ ಒಳಗಾಗದೇ ಸಹಕರಿಸಲು ಕೋರಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here