ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತೂರು ಕೋರ್ಟ್​ನಲ್ಲಿ ಚಾರ್ಜ್​ಶೀಟ್ ! ಕಾರಣವೇನು? ಮುಂದೆ ಓದಿ..

0
925

ನ್ಯೂಸ್ ಕನ್ನಡ ವರದಿ : ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಮೂವರ ವಿರುದ್ಧ ಚಾರ್ಜ್ ಶೀಟ್ ಹಾಕಿರುವ ಬೆಳವಣಿಗೆಯು ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ದಿವಾಕರ್ ಶಾಸ್ತ್ರಿ ದಂಪತಿ ನಡೆಸುತ್ತಿರುವ ಹೋರಾಟಕ್ಕೆ ಹೊಸ ಜೀವ ಬಂದಿದೆ. ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ ಸಂಬಂಧ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಮೂವರ ಮೇಲೆ ಪುತ್ತೂರು ಕೋರ್ಟ್​ನಲ್ಲಿ ಚಾರ್ಜ್ ಶೀಟ್ ಹಾಕಲಾಗಿದೆ. ಪ್ರೇಮಲತಾ ದಿವಾಕರ್ ಅತ್ಯಾಚಾರ ಪ್ರಕರಣಕ್ಕೆ ತಳುಕುಹಾಕಿಕೊಂಡಿರುವ ಕಾರಣಕ್ಕೆ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ ಗಂಭೀರವಾಗಿದೆ. ಪ್ರೇಮಲತಾ ಪ್ರಕರಣದಲ್ಲಿ ಪ್ರಮುಖ ಸಾಕ್ಷೀಧಾರರಾಗಿದ್ದ ಶ್ಯಾಮಪ್ರಸಾದ್ ಶಾಸ್ತ್ರಿಗಳು 2014 ರಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದರು. ಆದರೆ, ಶಾಸ್ತ್ರಿಗಳ ಜೀವಕ್ಕೆ ಬೆದರಿಕೆ ಇತ್ತು. ಇವರ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಅವರ ಪತ್ನಿ ಸಂಧ್ಯಾ ಲಕ್ಷ್ಮೀ ಅವರು ದೂರು ಕೊಟ್ಟಿದ್ದರು. ಅದೇ ಪ್ರಕರಣದಲ್ಲಿ ಇದೀಗ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಬೋಳಂತಾಯ ಶಿವಶಂಕರ ಭಟ್, ರಾಘವೇಶ್ವರ ಭಾರತಿ ಶ್ರೀ ಮೇಲೆ ಪುತ್ತೂರಿನ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಾಗಿದೆ.

ಈ ಪ್ರಕರಣದ ವಿವರವೆಂದರೆ, ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿರುವ ಪ್ರೇಮಲತಾ ದಿವಾಕರ್ ಅವರ ಮೈದುನ ಈ ಶ್ಯಾಮ್​ಪ್ರಸಾದ್ ಶಾಸ್ತ್ರಿ. ಈ ಅತ್ಯಾಚಾರ ಪ್ರಕರಣದಲ್ಲಿ ಇವರು ಪ್ರಮುಖ ಸಾಕ್ಷಿಯಾಗಿದ್ದವರು. ಆದರೆ, 2014, ಆಗಸ್ಟ್ 31 ರಂದು ಇವರು ತಮ್ಮ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರೆನ್ನಲಾಗಿದೆ. ಅದಾದ ನಂತರ ಪತ್ನಿ ಸಂಧ್ಯಾಲಕ್ಷ್ಮೀ ಅವರು ಮೂವರ ವಿರುದ್ಧ ದೂರು ದಾಖಲಿಸುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನದಂದು ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಬೋಳಂತಾಯ ಶಿವಶಂಕರ್ ಭಟ್ ಅವರು ತಮ್ಮ ಪತಿಗೆ ಕರೆ ಮಾಡಿದ್ದರು ಎಂದು ಶ್ಯಾಮಪ್ರಸಾದ್ ಶಾಸ್ತ್ರಿಗಳ ಪತ್ನಿ ಸಂಧ್ಯಾಲಕ್ಷ್ಮೀ ಆರೋಪಿಸಿದ್ದರು. ರಾಘವೇಶ್ವರ ಶ್ರೀಗಳ ಪರವಾಗಿ ಸಾಕ್ಷಿ ಹೇಳಬೇಕು. ರಾಮಚಂದ್ರಾಪುರ ಮಠಕ್ಕೆ ಹೋಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅಣ್ಣ-ಅತ್ತಿಗೆ ಮಾಡಿದ್ದು ತಪ್ಪು ಎಂದು ಒಪ್ಪಿ ಲಿಖಿತವಾಗಿ ಬರೆದುಕೊಡಬೇಕು ಎಂದು ತಮ್ಮ ಪತಿಗೆ ಬೆದರಿಕೆ ಹಾಕಿದರು ಎಂದು ಸಂಧ್ಯಾಲಕ್ಷ್ಮೀ ತಮ್ಮ ದೂರಿನಲ್ಲಿ ತಿಳಿಸಿದ್ದರು.

LEAVE A REPLY

Please enter your comment!
Please enter your name here