ಕರೋನಾ‌ ವಿರುದ್ಧ ಒಂದಾಗಿ ಹೋರಾಡೋಣ, 21 ದಿನಗಳು ಮನೆಯಲ್ಲೇ ಇರಿ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕರೆ

0
45

ನ್ಯೂಸ್ ಕನ್ನಡ ವರದಿ: ಆತ್ಮೀಯ ನಾಡಬಂಧುಗಳೇ, ನಮ್ಮ ಜೀವಮಾನ ಕಾಲದಲ್ಲಿ ಎಂದೂ ಕಾಣದ ದೊಡ್ಡ ಬಿಕ್ಕಟ್ಟನ್ನು ನಾವು ಎದುರಿಸುತ್ತಿದ್ದೇವೆ. ಕರೋನಾ ವೈರಸ್ ಎದುರಿಸುವ ಈ ಸವಾಲನ್ನು ನಾವು ಒಂದು ದೇಶವಾಗಿ ಎದುರಿಸಬೇಕಿದೆ. ಸರ್ಕಾರ ಮತ್ತು ವೈದ್ಯಕೀಯ ಸಮುದಾಯದ ಎಲ್ಲ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸಬೇಕಿದೆ.

ಸರ್ಕಾರ ವಿಧಿಸಿರುವ 21 ದಿನಗಳ ದಿಗ್ಬಂಧನದ ಸಂದರ್ಭದಲ್ಲಿ ನಾವು ಮನೆಗಳಲ್ಲೇ ಉಳಿಯಬೇಕು. ಕರೋನಾ ಭೀಕರ ಸ್ವರೂಪದಲ್ಲಿ ಹರಡುವುದನ್ನು ತಡೆಯಲು ನಮ್ಮ ಬಳಿ ಇನ್ಯಾವ ದಾರಿಯೂ ಇಲ್ಲ. ಹೀಗಾಗಿ ಎಲ್ಲರೂ ದಯವಿಟ್ಟು ಮನೆಯಲ್ಲಿಯೇ ಇರಿ, ಹೊರಗೆ ಬರಬೇಡಿ.

ಮುಂದಿನ 21 ದಿನಗಳು ನಮ್ಮ ಪಾಲಿಗೆ ಅತ್ಯಂತ ಮುಖ್ಯ. ಇಟಲಿ, ಸ್ಪೇನ್, ಅಮೆರಿಕದಂಥ ದೇಶಗಳು ಮಾಡಿದ ತಪ್ಪುಗಳನ್ನು ನಾವು ಮಾಡುವುದು ಬೇಡ. ಕರೋನಾ ಸರಪಳಿಯನ್ನು ನಾವು ಈಗಲೇ ತುಂಡರಿಸಬೇಕು. ಇಲ್ಲವಾದಲ್ಲಿ ದೊಡ್ಡ ಪ್ರಮಾಣದ ಸಾವುನೋವುಗಳನ್ನು ನೋಡಬೇಕಾದೀತು.

ಕರೋನಾ ವೈರಸ್ ಗೆ ಬಲಿಯಾದವರಲ್ಲಿ ಬಹುತೇಕರು 60 ವರ್ಷ ದಾಟಿದ ಹಿರಿಯರು. ನಮ್ಮ ಹಿರಿಯರನ್ನು ನಾವು ಉಳಿಸಿಕೊಳ್ಳಬೇಕಿದೆ. ಯಾವ ಕಾರಣಕ್ಕೂ ನಮ್ಮ ಹಿರಿಯರಿಗೆ ಕರೋನಾ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಹಿರಿಯರನ್ನು ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮದು.

ಸಾಧ್ಯವಾದಷ್ಟು ನಿಮ್ಮ ಮನೆಗಳಲ್ಲಿ ಹಿರಿಯರಿಗೆ ಪ್ರತ್ಯೇಕ ಕೊಠಡಿಗಳನ್ನು ನೀಡಿ. ಅವರನ್ನು ಚೆನ್ನಾಗಿ ಉಪಚರಿಸಿ. ಹೊರಗಿನಿಂದ ಮನೆಗೆ ಬರುವವರು ಎಷ್ಟೇ ಆತ್ಮೀಯರಾಗಿದ್ದರೂ ಅವರನ್ನು ಈ ಕೆಟ್ಟಕಾಲದಲ್ಲಿ ತಮ್ಮ ಮನೆಗಳಲ್ಲೇ ಇರಲು ಹೇಳಿ.

ಈ ಇಪ್ಪತ್ತೊಂದು ದಿನಗಳು ನಮಗೆ ಅಗ್ನಿಪರೀಕ್ಷೆ ಇದ್ದಂತೆ. ಬೇರೆ ರೀತಿಯ ಆರೋಗ್ಯದ ಸಮಸ್ಯೆಗಳು ಇರುವವರು ಮನೆಯಲ್ಲಿ ಇದ್ದರೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಔಷಧೋಪಚಾರದಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಿ. ವೈದ್ಯರ ಮಾರ್ಗದರ್ಶನ ಪಡೆದು ಮನೆಯಲ್ಲೇ ಆರೈಕೆ ಮಾಡಿ.

ನಿಮ್ಮ ಮನೆಗಳಲ್ಲಿ ಮದ್ಯವ್ಯಸನಿಗಳಿದ್ದರೆ ಅವರಿಗೆ ಹೆಚ್ಚು ಗಮನ ನೀಡಿ.‌ ಅವರ ಗಮನವನ್ನು ಬೇರೆಡೆ ಸೆಳೆಯುವ ಕಾರ್ಯ ಮಾಡಿ. ಹೆಚ್ಚುಹೆಚ್ಚು ಸಮಯ ಅವರೊಂದಿಗೆ ಪ್ರೀತಿಯಿಂದ ಮಾತನಾಡಿ. ಈ ಅವಧಿಯಲ್ಲಿ ಅವರು ಮದ್ಯವ್ಯಸನವನ್ನು ಬಿಡುವಂತೆ ಮಾಡಿದರೆ ಅದು ಅವರಿಗೆ ಒಳ್ಳೆಯದೇ ಆಗುತ್ತದೆ.

ಮನೆಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಗದಂತೆ ನೋಡಿಕೊಳ್ಳಿ. ಭಿನ್ನಾಭಿಪ್ರಾಯಗಳು ಸಹಜ. ಆದರೆ ನಾವು ಎದುರಿಸುತ್ತಿರುವುದು ಮನುಕುಲವನ್ನು ನಾಶಪಡಿಸಲು ಬಂದಿರುವ ಮಹಾಮಾರಿಯನ್ನು ಎಂಬುದು ನೆನಪಿನಲ್ಲಿರಲಿ. ಪ್ರೀತಿ, ವಿಶ್ವಾಸ, ಸಹಬಾಳ್ವೆಯೇ ನಮ್ಮ ಮೂಲಮಂತ್ರವಾಗಿರಲಿ.

ಪ್ರತಿದಿನ ಹೊರಗೆ ಕೆಲಸ ಮಾಡುವವರಿಗೆ ಮನೆಯಲ್ಲೇ ಇರುವುದು ಯಾತನಾದಾಯಕವಾಗಬಹುದು. ಇದು ಮಾನಸಿಕ ಕಿರಿಕಿರಿಗೂ ಕಾರಣವಾಗಬಹುದು.‌ ಮನೆಯಲ್ಲೇ ಸಣ್ಣಪುಟ್ಟ ಆಟಗಳನ್ನು ಆಡಿ,‌ ಹರಟೆ ಹೊಡೆಯಿರಿ. ಲವಲವಿಕೆಯಿಂದ ಇರಿ. ಮಾನಸಿಕ ಖಿನ್ನತೆಗೆ ಒಳಗಾಗದಿರಿ.

ದಿನನಿತ್ಯದ ಬಳಕೆಯ ವಸ್ತುಗಳ ಪೂರೈಕೆಯನ್ನು ಸರ್ಕಾರ ನಿಲ್ಲಿಸಿಲ್ಲ.‌ ಹೀಗಾಗಿ ಗಾಬರಿಪಡುವುದು‌ ಬೇಡ. ಎರಡು ಮೂರು ದಿನಗಳಿಗೆ ಬೇಕಾಗುವಷ್ಟು ಸಾಮಾಗ್ರಿಗಳನ್ನು ತಂದಿಟ್ಟುಕೊಳ್ಳಿ. ಹೆಚ್ಚು ಜನಜಂಗುಳಿಯಿರುವ ಮಾಲ್, ಅಂಗಡಿಗಳಿಗೆ ಹೋಗಬೇಡಿ. ಹೊರಗೆ ಹೋದಾಗೆಲ್ಲ ಮಾಸ್ಕ್, ಸ್ಯಾನಿಟೈಜರ್ ಬಳಸಿ.

ಕರೋನಾ ರೋಗದ ಲಕ್ಷಣಗಳು ನಿಮ್ಮ ಮನೆಯಲ್ಲಿ ಯಾರಿಗಾದರೂ ಕಂಡರೆ ತಕ್ಷಣ 104ಕ್ಕೆ ಕರೆ ಮಾಡಿ ಅಥವಾ ಆಸ್ಪತ್ರೆಗೆ ಕರೆದೊಯ್ಯಿರಿ. ಈ ಸಂದರ್ಭದಲ್ಲಿ ನಿಮ್ಮ ಇಡೀ ಕುಟುಂಬ ಯಾರ ಜತೆಯೂ ಸಂಪರ್ಕ ಮಾಡದಂತೆ ನೋಡಿಕೊಳ್ಳಿ.‌ ವೈದ್ಯರ ಸೂಚನೆಗಳನ್ನು ಇಡೀ ಕುಟುಂಬ ಪಾಲಿಸಬೇಕು.

ನಿಮ್ಮ ಮನೆಗಳ ಸುತ್ತಮುತ್ತ ಬಡವರು, ನಿರ್ಗತಿಕರು ಬದುಕುತ್ತಿದ್ದರೆ ನಿಮ್ಮ ಕೈಲಾದ ಕನಿಷ್ಠ ಸಹಾಯವನ್ನು ಮಾಡಿ. ಈ ಇಪ್ಪತ್ತೊಂದು ದಿನಗಳ ಕಾಲ ಬಡವರು ಹಸಿದುಕೊಂಡು ಇರಬಾರದು. ಈ‌ ದುರಿತ‌ ಕಾಲದಲ್ಲಿ ನಾವು ಒಂದು ಸಮಾಜವಾಗಿ ಪರಸ್ಪರರ ನೆರವಿಗೆ ನಿಲ್ಲಬೇಕು.

ಕಾರಣವಿಲ್ಲದೆ ರಸ್ತೆಗಳಲ್ಲಿ ಶೋಕಿಗಾಗಿ ಓಡಾಡುವವರು, ಬೈಕುಗಳಲ್ಲಿ ವೀಲಿಂಗ್ ಮಾಡುವವರು ನಿಮ್ಮ ಕಣ್ಣಿಗೆ ಕಂಡರೆ ತಕ್ಷಣ ಪೊಲೀಸರಿಗೆ ಕರೆ ಮಾಡಿ ತಿಳಿಸಿ. ಒಬ್ಬ ವ್ಯಕ್ತಿಯ ಕುಚೇಷ್ಟೆಗಳಿಗೆ ಇಡೀ ಸಮಾಜ ನರಳುವುದನ್ನು ತಪ್ಪಿಸಿ. ಇಂಥವರು ಎಲ್ಲ ಕಡೆಗಳಲ್ಲೂ ಇರುತ್ತಾರೆ, ಅವರ ಮೇಲೆ ಒಂದು ಕಣ್ಣಿಡಿ.

ಸರ್ಕಾರ, ವೈದ್ಯಕೀಯ ಸಮುದಾಯ, ಪೊಲೀಸರು, ಪೌರಕಾರ್ಮಿಕರು ಮತ್ತು ಅಗತ್ಯ ವಸ್ತು ಪೂರೈಕೆದಾರರು ನಮಗಾಗಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.‌ ಅವರನ್ನು ಗೌರವಿಸೋಣ‌ ಮತ್ತು ಅವರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸೋಣ. ಇದು ನಮ್ಮ ಕರ್ತವ್ಯ.

ಕರೋನಾ ಕುರಿತ ಸುಳ್ಳುಸುಳ್ಳು ಮಾಹಿತಿಗಳನ್ನು ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಈಗಾಗಲೇ ಭಯಭೀತರಾಗಿರುವ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಬೇಡಿ. ಇದು ಸಾಮಾಜಿಕ ಮತ್ತು ನೈತಿಕ ಅಪರಾಧ. ಹೀಗಾಗಿ ಕಂಡಿದ್ದೆಲ್ಲವನ್ನು ಫಾರ್ವರ್ಡ್ ಮಾಡಬೇಡಿ.

ಕರೋನಾ ವೈರಸ್ ಗೆ ಇದುವರೆಗೆ ಯಾವುದೇ ಲಸಿಕೆ ಕಂಡುಹಿಡಿಯಲಾಗಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕರೋನಾ ವಿರುದ್ಧ ಹೋರಾಡಲು ನಮಗಿರುವ ಏಕೈಕ ಮಾರ್ಗ. ಹೀಗಾಗಿ ಪದೇಪದೆ ಮನವಿ ಮಾಡುತ್ತೇನೆ, ದಯವಿಟ್ಟು ಮನೆಯಲ್ಲೇ ಇರಿ.

ನನ್ನೆಲ್ಲ ಪ್ರೀತಿಯ ನಾಡಬಂಧುಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ಆರಂಭದಲ್ಲೇ ನಮಗೆಲ್ಲ ಬೇವನ್ನೇ ಉಣಿಸುತ್ತಿದೆ. ಆದರೆ ನಾವು ಒಂದಾಗಿ ಹೋರಾಡಿದರೆ ಆಶಾವಾದದ ಬೆಳ್ಳಿ ಗೆರೆಗಳು ಮೂಡಬಹುದು. ಆಶಾವಾದಿಗಳಾಗಿರೋಣ. ಧೈರ್ಯ ಮತ್ತು ಲವಲವಿಕೆಯಿಂದ ಇರೋಣ.

  • ಟಿ.ಎ.ನಾರಾಯಣಗೌಡ
    ರಾಜ್ಯಾಧ್ಯಕ್ಷರು
    ಕರ್ನಾಟಕ ರಕ್ಷಣಾ ವೇದಿಕೆ

LEAVE A REPLY

Please enter your comment!
Please enter your name here