ಅಶಾಂತಿ ಬೆಂಕಿ ನಂದಿಸಿ; ನಿರ್ಭೀತ ಭಾರತ ನಿರ್ಮಾಣವಾಗಲೀ

0
162

ನ್ಯೂಸ್ ಕನ್ನಡ: ಭವ್ಯ ಭಾರತ ಸ್ವತಂತ್ರವಾಗಿ ಅದೆಷ್ಟೋ ವರುಷ ಕಳೆದರೂ ದೇಶ ಇನ್ನೂ ಪರಸ್ಪರ ದ್ವೇಷದಿಂದ ಕಾಣುತ್ತಿರುವುದು ಖೇದಕರನಿಸುತ್ತದೆ. ಮನುಷ್ಯ ಜೀವಿಗಿಂತ ತಾನು ಸಾಕಿದ ಪ್ರಾಣಿಗೆ ಬೆಲೆ ಕೊಟ್ಟು ಮಾನವ ಜೀವವನ್ನು ಬಲಿಪಡಿಸುವ ದೇಶದಲ್ಲಿ ನಾವು ಇಂದು ಇದ್ದೇವೆ ಎಂದು ಯೋಚಿಸುವಾಗ ಒಂದು ಕ್ಷಣ ನಾಚಿಕೆಯಾಗ್ಬಿಡುತ್ತದೆ. ಹತ್ತೊಂಬತ್ತನೇ ಶತಮಾನದಲ್ಲಿ ನಮ್ಮ ದೇಶಕ್ಕಾಗಿ ಹೋರಾಡಿದ ದೇಶಪ್ರೇಮಿಗಳಲ್ಲಿ ಯಾರಲ್ಲಿಯೂ ನಾವು ಎಂದಿಗೂ ಕಂಡಿರದ ಕೋಮುವಾದ ಮನಸ್ಥಿತಿ ಇಂದು ಅಚಲವಾಗಿ ಚಲಿಸುತ್ತಿದೆ. ‘ಕಣ್ಣಿದ್ದು ಕುರುಡನಂತೆ ನಟಿಸಿದರು’ ಎಂಬಂತೆ ಇಲ್ಲಿನ ಪ್ರಸ್ತುತ ರಾಜಕಾರಣಿಗಳನ್ನು ನೋಡುತ್ತಿದ್ದಂತೆಯೇ ಆ ಮಾತು ನೆನಪಿಗೆ ಬರುತ್ತಿದೆ. ತಮ್ಮ ಲಾಭಕ್ಕಾಗಿ ಮುಗ್ಧ ಜನತೆಯನ್ನು ಹಸ್ತದಲ್ಲಿರಿಸಲು ಪ್ರಯತ್ನಪಡುವ ಹರಸಾಹಸ ಗಮನಿಸುವಾಗ ಏನೋ ಸಾಧಿಸಲು ಹೊರಟಂತ್ತಿದೆ.

ಅಂದು ಪರಕೀಯರನ್ನು ದೇಶದಿಂದ ಓಡಿಸಲು ಹರಸಾಹಸಪಟ್ಟು, ಯುದ್ಧಗಳ ಮೇಲೆ ಯುದ್ಧ ಮಾಡಿ ಯಾವುದೂ ಸಫಲಗೊಳ್ಳದಿದ್ದಾಗ ಅವರ ಶಿಕ್ಷೆಗೂ ಒಳಪಟ್ಟು ದೇಶಕ್ಕಾಗಿ ರಕ್ತಪಣತೊಟ್ಟ ದೇಶಪ್ರೇಮಿಗಳ ಮುಂದೆ ‘ನಾವು ದೇಶಾಭಿಮಾನಿಗಳು’ಎಂದು ಊರಿಡೀ ಹೇಳುತ್ತಾ, ಇತ್ತೀಚೆಗೆ ತನ್ನದೇ ನಾಡಿನ ವ್ಯಕ್ತಿಯ ರಕ್ತ ಚೆಲ್ಲಾಟಕ್ಕೆ ಕಾರಣವಾಗುತ್ತಿರುವ ಪ್ರತಿಯೊಬ್ಬ ವ್ಯಕ್ತಿಗಳೂ ಯೋಚಿಸಬೇಕಿದೆ. ನಾಳೆ ನಮಗೂ ಇಂತಹ ಸಂದರ್ಭ ಒದಗಿದಾಗ ಯಾವನೇ ಒಬ್ಬ ನಮ್ಮ ಬಳಿ ಸನಿಹುವುದಿಲ್ಲ ಎಂಬ ವಾಸ್ತವ.

ಜಾತಿ-ಭೇದ ಮಾಡಿ, ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ಬೀದಿ-ಬೀದಿಯಲ್ಲಿ ಹೆಣಗಳ ಸಾಲು ಬೀಳಿಸುತ್ತಿರುವುದಾದರೂ ಇದಕ್ಕೆ ಕಾವಲುಗಾರರಾಗಿ ಯಾರೂ ಇಲ್ಲದಾಗಿದೆ. ಇಂದಿನ ಜನ ಹಣ’ಕ್ಕಾಗಿ ಹೆಣ ಬೀಳಿಸಲು ಸಿದ್ಧರಾಗುವ ಪ್ರತಿಯೊಬ್ಬ ವ್ಯಕ್ತಿಯೂ; ಅಂದು ನಮ್ಮ ದೇಶಕ್ಕಾಗಿಯೇ ಬ್ರಿಟಿಷರ ರಕ್ತ ಚೆಲ್ಲಿಸಲು ಸಿದ್ಧರಾಗಿದ್ದ ದೇಶ ಪ್ರೇಮಿಗಳು. ಅವರು ಕೂಡ ಒಂದುವೇಳೆ ಇದೇ ಕೆಲಸ ಆ ದಿನ ಮಾಡುತ್ತಿದ್ದರೆ ಇಂದಿಗೂ ನಾವು ಪರಕೀಯರ ಗುಲಾಮರಾಗಿ ಗುರಿಯಾಗುತ್ತಿದ್ದೆವು, ಎಂಬುವುದು ನೆನಪಿಡಬೇಕಾಗಿದೆ.

ಆದರೆ ಪ್ರಸ್ತುತ ದಿನಗಳಲ್ಲಿ “ದೇಶಪ್ರೇಮ’ ದ ಹೆಸರಿನಲ್ಲಿ ‘ದೇಶದ್ರೋಹಿ’ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಜನರು ಪರಸ್ಪರ ಭಯದಿಂದ ಹೆಜ್ಜೆ ಇಡುವ ಪರಿಸ್ಥಿತಿ ನಮ್ಮ ದೇಶದಲ್ಲಿ ಉಂಟಾಗಿದೆ ಎಂದರೆ ಯಾವ ಮಟ್ಟಕ್ಕೆ ನಾವು ಮುಟ್ಟಿದ್ದೇವೆ ಸ್ವತಃ ನಾವಾಗಿಯೇ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ.
ಕೋಮುವಾದಿ ಬೀಜ ಬಿತ್ತುವುದರೊಂದಿಗೆ ನಾಡಿಗೆ ಮಾರಕವಾಗುವ ರೀತಿ ವರ್ತಿಸುತ್ತಿರುವ ವ್ಯಕ್ತಿಗಳು ಯಾತಕ್ಕಾಗಿ ತಾವು ಈ ನೆಲದಲ್ಲಿ ಉಸಿರಾಡುತ್ತಿದ್ದೇವೆ ಎಂದು ಯೋಚಿಸಲಿ.

ಒಂಬತ್ತು ತಿಂಗಳ ಮಗು ಅತ್ಯಾಚಾರವಾಗುತ್ತಿದೆ, ಶಾಲೆಗೆ ಹೋದ ಪುಟ್ಟ ಕಂದಮ್ಮಗಳು ಮನೆಗೆ ಹಿಂತಿರುಗುವಾಗ ಹೆಣವಾಗಿ ಬರುವುದು ಕಾಣುತ್ತಿದೆ. ಪವಿತ್ರವಾದ ದೇವಲಯದ ಒಳಗಡೆಯೇ ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ, ಜಾತಿ-ಧರ್ಮ ವಿಷಯಾಧಾರದಲ್ಲಿ ಅಮಾಯಕ ವ್ಯಕ್ತಿಗಳನ್ನು ರಸ್ತೆಯಲ್ಲಿಯೇ ಹೋಗುವುತ್ತಿದ್ದಂತೆಯೇ ವಿನಾಕಾರಣ ಅವರ ಮೇಲೆ ಹಲ್ಲೆ ನಡೆಸಿ ವಿಕೃತವಾದ ಅನಂದ ಪಡೆಯುತ್ತಿದ್ದಾರೆ. ಇದರ ಕಾಣದ ಕೈ ಹಣ’ವಾಗಿದೆ. ರಾಜಕೀಯ ಕುತಂತ್ರಕ್ಕೆ ಆಧುನಿಕ ಯುವ ಸಮೂಹವನ್ನು ಬಳಸಿ ಅವರ ಭವಿಷ್ಯವನ್ನೇ ಕೆಟ್ಟ ದಾರಿ ಕಡೆ ತಿರುಗಿಸುತ್ತಿದೆ. ಯಾವ ನಿಮಿಷಗಳ ಸುಖಃಕ್ಕಾಗಿ ಇಂತಹ ಕೃತ್ಯಗಳನ್ನು ಮಾಡುತ್ತಾ ನಾಡಿಗೆ ಕೆಟ್ಟ ಕೆಸರನ್ನು ಚೆಲ್ಲುತ್ತಿದ್ದಾರೆ. ಒಂದು ಹೊತ್ತು ಅವಲೋಕಿಸಬೇಕಿದೆ.

ಆ ಕಾಲದಲ್ಲಿ ನಮ್ಮ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಯವರು ಒಂದು ಮಾತನ್ನು ಹೇಳಿದ್ದರು – ‘ಮಧ್ಯರಾತ್ರಿಯಲ್ಲಿ ಹೆಣ್ಣೊಬ್ಬಳು ಒಂಟಿಯಾಗಿ ಮನೆಯಿಂದ ಹೊರಗೆ ಬಂದರೆ ನಮ್ಮ ದೇಶ ಸ್ವಾತಂತ್ರ್ಯಗೊಂಡಂತೆ’ ಎಂದು ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣು ಬಿಟ್ಟು ಗಂಡುವಿಗೆ ಏಕಾಂಗಿಯಾಗಿ ಹಗಲಿ ಹೊತ್ತಿನಲ್ಲಿಯೇ ಹೊರಹೋಗಲು ಭಯಪಡುವಂತಾಗಿದೆ.

ವಿವಿಧೆತೆಯಲ್ಲಿ ಏಕತೆಯಿಂದ ಕೂಡಿದ ಈ ಭಾರತ ನೆಲೆಯಲ್ಲಿ ಇಂದು ಧರ್ಮಗಳ ಆಧಾರದಲ್ಲಿ ನೆತ್ತರು ಚೆಲ್ಲುತ್ತಿದೆ. ಶತಮಾನಗಳ ಹಿಂದೆ ಪರಕೀಯರ ನ್ನು ಭಯಪಡುತ್ತಾ ಉಸಿರಾಡುತ್ತಿದ್ದ ಜನತೆಗೆ ಧೃತಿಗೆಡೆದೆ ಬ್ರಿಟಿಷರನ್ನು ಓಡಿಸಿ ಇಂದು ನಮಗೆ ಸ್ವಾತಂತ್ರ್ಯವನ್ನು ನೀಡಿದರೂ, ಪ್ರಸ್ತುತ ದಿನಗಳಲ್ಲಿ ನಮ್ಮದೇ ನಾಡಿನ ವ್ಯಕ್ತಿಗಳಿಗೆ ಭಯಭೀತರಾಗಿ ನಾವು ಜೀವಿಸುವಂತಾಗಿದೆ. ಯಾವುದೋ ಸ್ವಾರ್ಥ, ಸುಖಃಕ್ಕಾಗಿ ಮಾಡುವ ದುರ್ಘಟನೆಗಳಿಗೆ ನಾಳಿನ ದಿನ ಉತ್ತರವಿಲ್ಲದೆ ನಮ್ಮ ಮನಸ್ಸಿಗೆ ನಾವೇ ಮೌನವಾಗಿ ನಿಲ್ಲಬೇಕಾಗುತ್ತದೆ.

‘ನಾವೆಲ್ಲರೂ ಒಂದು’ ‘ನಾವೇ ದೇಶದ ಬಿಂದು’ ಎಂಬ ಮನೋಭಾವದಿಂದ ವೀರ ನಾಯಕರು ತಮ್ಮವರೆಲ್ಲರನ್ನೂ ಬದಿಗಿಟ್ಟು ದೇಶಕ್ಕಾಗಿ ಹೋರಾಡಿ ದೇಶದ ಘನತೆ ಕಾಪಾಡಿ ಪರಕೀಯರಿಂದ ಸ್ವಾತಂತ್ರ್ಯಗೊಳಿಸಿಕೊಟ್ಟಿದ್ದಾರೆ.

1947 ರಿಂದ ವರ್ಷಂಪ್ರತೀ ಆಗಸ್ಟ್ 15 ರಂದು ‘ಸ್ವಾತಂತ್ರ್ಯ ದಿನಾಚರಣೆ’ ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ ಹೆಸರಿಗಷ್ಟೇ ಆಚರಿಸುವಂತಾಗಿದೆ.

ಈಗಿನ ಕಾಲಾವಸ್ಥೆ ಗಮನಿಸಿದರೆ ನಮ್ಮ ದೇಶ ಅಂದು ಕೇವಲ ಪರಕೀಯರಿಂದ ಮಾತ್ರ ಸ್ವಾತಂತ್ರ್ಯವಾಗಿದೆ. ಆದರೆ ಕೋಮುಭಾವನೆಯುಳ್ಳ ವ್ಯಕ್ತಿಗಳಿಂದ ಇಂದಿಗೂ ಜನರು ಭಯಭೀತರಾಗಿ ಚಲಿಸುವಂತಾಗಿದೆ.

ಪರಸ್ಪರ ಹೀಗೆ ಕಚ್ಚಾಡುತ್ತಿದ್ದರೆ ನಾಳೆ ನೆರೆಯ ರಾಷ್ಟ್ರಗಳು ನಮ್ಮ ಸಂಪತ್ತು ಲೂಟಿ ಮಾಡಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಗಡಿಯಲ್ಲಿ ನಮಗಾಗಿ ಯೋಧರು ನಿದ್ದೆ ಬಿಟ್ಟು ದೇಶಕ್ಕಾಗಿ ಹೋರಾಡುತ್ತಿದ್ದಾರೆ. ನಮಗೆ ಅಷ್ಟೂ ಮಾಡಕ್ಕೆ ಅಸಾಧ್ಯವೆಂದಾದರೆ, ಶಾಂತಿಯುತವಾದ ದೇಶ ನಿರ್ಮಿಸುವಲ್ಲಿಯಾದರೂ ಯಶಸ್ವಿಯಾಗೋಣ.

ನಾವು ಇಂದು ಉಸಿರಾಡುತ್ತಿರುವುದು ವೈವಿಧ್ಯತ್ಯೆಯಿಂದ ಕೂಡಿದ ಭಾರತದ ನೆಲೆಯಲ್ಲಿ, ನಾವು ನಿಂತ ಮಣ್ಣು ಭಾರತೀಯ ಮಣ್ಣು. ವೀರ ಹೋರಾಟಗಾರರ ಪರಿಶ್ರಮದಿಂದ ಸಿಕ್ಕಿದ ಮಣ್ಣು ಎಂಬುವುದು ಮರೆಯಬಾರದು.
‘ಒಗ್ಗಟ್ಟಾಗೋಣ, ನಿರ್ಭೀತರಾಗಿ ಬಾಳೋಣ, ಮಾದರಿ ದೇಶ ನಿರ್ಮಿಸೋಣ’. ಕೋಮುವಾದಿಗಳ ವಿರುದ್ಧ ಧ್ವನಿಗೂಡಿಸೋಣ. ಶಾಂತಿ ಕದಡಿಸಲು ಪ್ರಯತ್ನಿಸುವ ಗುಂಪುಗಳನ್ನು ಕಾನೂನಾತ್ಮಕವಾಗಿ ಇಲ್ಲವಾಗಿಸೋಣ.ಪರಸ್ಪರ ಕಚ್ಚಾಟದೊಂದಿಗೆ ದೇಶಕ್ಕೆ ಕೆಟ್ಟ ಹೆಸರು ತರಲು ಮುಂದೆ ಹೆಜ್ಜೆ ಇಡುವುದಕ್ಕಿಂತ, ಎಲ್ಲಾರೂ ದೇಶದ ಹಿತಕ್ಕಾಗಿ ನಿರ್ಭೀತರಾಗಿ ಬಾಳೋಣ. ‘ನಿರ್ಭಿತ ರಾಜ್ಯ ನಿರ್ಮಿಸಿ ಇಡೀ ವಿಶ್ವಕ್ಕೆ ಉತ್ತಮ ಹೆಸರು ಕೊಡುವಲ್ಲಿ ಯಶಸ್ವಿಯಾಗೋಣ’.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭಗಳಲ್ಲಿ ಹಲವು ಸಂಘ ಸಂಸ್ಥೆಗಳ ಪರವಾಗಿ ಶಾಂತಿಯುತವಾದ ರ಼್ಯಾಲಿ, ಘೋಷವಾಕ್ಯಗಳೊಂದಿಗೆ ಜಾಥ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದೆ. ಇನ್ನೂ ನಡೆಯಬೇಕು. ಜಾತಿ-ಧರ್ಮ ಎಂದು ಕಿತ್ತಾಡದೆ ದೇಶದ ಹಿತಕ್ಕಾಗಿ ಬಾಳುತ್ತಾ, ಒಟ್ಟಾಗಿ ಶಾಂತಿಯುತವಾದ ನಾಡನ್ನು ಕಟ್ಟೋಣ. ಶಾಂತಿ ಪ್ರತೀಕವಾದ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸೋಣ. ಅಶಾಂತಿ ಬೆಂಕಿ ನಂದಿಸಿ;ನಿರ್ಭೀತರಾಗಿ ಜೀವಿಸಿ, ಹೊಸ ಕ್ರಾಂತಿಯನ್ನು ಸೃಷ್ಟಿಸೋಣ‌. ದೇಶಕ್ಕೆ ಉತ್ತಮವಾದ ಹೆಸರುಕೊಡುವಲ್ಲಿ ಪಾತ್ರರಾಗೋಣ.

~ ನಿಝಾಂ ಮಂಚಿ

LEAVE A REPLY

Please enter your comment!
Please enter your name here