ದುಆ, ಸ್ವಲಾತ್ ಮಾತ್ರ ಸಾಲದು, ಮುಂಜಾಗ್ರತಾ ಪ್ರಯತ್ನವೂ ನಡೆಯಬೇಕು

0
11

ಇಬಾದತ್ ಗಳೆಲ್ಲವೂ ಪ್ರಾರ್ಥನೆಯಾಗಿದೆ, ದುಆ ಇಬಾದತಿನ ಸತ್ವವೂ ಆಗಿದೆ ಎಂದೆಲ್ಲಾ ನಾವು ಕಲಿತಿದ್ದೇವೆ. ಎಲ್ಲಾ ಸಮಯದಲ್ಲೂ ದುಆ ಪ್ರೋತ್ಸಾಹನೀಯವೂ ಹೌದು.
ಪ್ರವಾದಿ (ಸ) ಹೇಳಿದರು
نعم سلاح المؤمن الصبر والدعاء
ಕ್ಷಮೆ ಮತ್ತು ಪ್ರಾರ್ಥನೆ ಸತ್ಯವಿಶ್ವಾಸಿಯ ಆಯುಧಗಳಲ್ಲಿ ಉತ್ತಮವಾದುದು.

ಆದರೆ ಇಂದು ಹಲವು ಆಲಸಿಗರು ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳಲು ಬಳಸುವ ಸುಲಭ ಮಾರ್ಗವಾಗಿ ಪ್ರಾರ್ಥನೆಯನ್ನು ಕಾಣುತ್ತಾರೆ.

ಕಡ್ಡಾಯವಾಗಿಯೂ ತಾನು ಮಾಡಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಜಾಗೃತಾ ಸಿದ್ಧತೆಗಳನ್ನು ನಡೆಸದೆ ಎಲ್ಲವೂ ಅಲ್ಲಾಹನ ನಿರ್ಣಯದಂತೆ ಬರುವುದೆಂದು ಭಾವಿಸಿ ಮೌಲಿದ್ ಮತ್ತು ಸ್ವಲಾತ್ ಹೇಳಿ ದುವಾ ಮಾಡಿದರೆ ತನ್ನ ಕರ್ತವ್ಯವೆಲ್ಲವೂ ಮುಗಿಯಿತೆಂದೂ ಇನ್ನೇನೂ ಮಾಡಬೇಕಾದ ಅಗತ್ಯವಿಲ್ಲವೆಂಬ ವಿಶ್ವಾಸವು ಕೆಲವರಿಗಿದೆ.

ಅಲ್ಲಾಹನು ತೀರ್ಮಾನಿಸಿದ ವರಿಗೆ ಮಾತ್ರ ಕೊರೋನ ಬಾಧಿಸುತ್ತದೆ ಎಂಬುದು ಸತ್ಯ. ಕೊರೋನ ಬರದಿರಲು ಪ್ರಾರ್ಥನೆಯ ಅಗತ್ಯವಿರುವುದೂ ನಿಜ. ಆದರೆ….. ಆ ಬಗ್ಗೆ ತಿಳುವಳಿಕೆಯುಳ್ಳ ಆರೋಗ್ಯ ಮಂತ್ರಾಲಯದ, ವೈದ್ಯರ ಮಾತನ್ನು ನಿರ್ಲಕ್ಷಿಸಿ ಊರಿಡೀ ಸುತ್ತಾಡಿ ರೋಗವನ್ನು ಹರಡುವುದು ಮಹಾ ತಪ್ಪಲ್ಲವೇ?

ಹಿಜ್’ರಾ ಹೋಗಲು ಅನುಮತಿ ಸಿಕ್ಕಿದ ಪ್ರವಾದಿ (ಸ) ರವರು ನಿಮಿಷಾರ್ಧದಲ್ಲಿ ಮದೀನ ತಲುಪಿಸಬೇಕೆಂದು ಅಲ್ಲಾಹನಲ್ಲಿ ದುಆ ಮಾಡಿ ಕೈಕಟ್ಟಿ ಕೂತದ್ದಲ್ಲ. ಬದಲಾಗಿ ಅಬೂಬಕ್ಕರ್ ( ರ ) ರವರೊಂದಿಗೆ ಮುಂದಾಲೋಚನೆ ನಡೆಸಿ ಅತೀವ ಎಚ್ಚರಿಕೆಯಿಂದ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ನಡೆಸಿದ ನಂತರ ತಂತ್ರ ಪೂರ್ವಕವಾಗಿ ಮಕ್ಕಾದಿಂದ ಹೊರಟು ಸೌರ್ ಗುಹೆಯಲ್ಲಿಆಶ್ರಯ ಪಡೆದಿದ್ದರು. ಬೆಂಬಿಡದ ಮಕ್ಕಾ ಮುಶ್ರಿಕರು ಅಲ್ಲೂ ಬಂದದ್ದನ್ನರಿತ ಅಬೂಬಕ್ಕರ್ (ರ ) ಕಳವಳ ವ್ಯಕ್ತಪಡಿಸಿದಾಗ ಪ್ರವಾದಿ (ಸ) ನೀಡಿದ ಉತ್ತರ, “ಮೂರನೆಯವನಾಗಿ ಅಲ್ಲಾಹನು ಒಟ್ಟಿಗೆ ಇರುವ ಇಬ್ಬರ ಬಗ್ಗೆ ತಾವೇಕೆ ಆತಂಕಗೊಳ್ಳುತ್ತೀರಿ” ಎಂದಾಗಿತ್ತು.

ವಿಪತ್ತು ಬಂದೆರಗಿದಾಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹಾಗೂ ಅಬೂಬಕ್ಕರ್ ಸಿದ್ದೀಕ್ ರವರು ಮಾನವನಿಗೆ ಸಾಧ್ಯವಾಗುವ ಸಕಲ ರೀತಿಯ ಜಾಗ್ರತಾ ಸಿದ್ಧತೆಗಳೊಂದಿಗೆ ಪೂರ್ಣವಾದ ಪ್ರಯತ್ನ ನಡೆಸಿದ ನಂತರ ಮಾತ್ರವಾಗಿದೆ ಅಲ್ಲಾಹನ ಸಹಾಯ ಲಭ್ಯವಾದದ್ದು. ಬದ್’ರಿನಲ್ಲೂ ಇತರ ಹಲವಾರು ಸಂದರ್ಭಗಳಲ್ಲೂ ಇದೇ ರೀತಿಯಾಗಿದೆ ಅಲ್ಲಾಹನ ಸಹಾಯ ದೊರೆತದ್ದು.

ಆದ್ದರಿಂದ ಕೊರೋನವನ್ನು ಕೊಲ್ಲಲು ನಮಗೆ ಸಾಧ್ಯವಾಗುವ ರೀತಿಯ ಸರ್ವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ಆರೋಗ್ಯ ಕೇಂದ್ರಗಳಿಂದ ನೀಡಲ್ಪಡುವ ನಿರ್ದೇಶನಗಳನ್ನು ಪೂರ್ಣವಾಗಿ ಅನುಸರಿಸುವುದು ಧರ್ಮದ ಭಾಗವೇ ಆಗಿದೆ. ಇದರೊಂದಿಗೆ ಪ್ರಾರ್ಥನೆಗಳನ್ನೂ ನಡೆಸಬೇಕಾಗಿದೆ.

LEAVE A REPLY

Please enter your comment!
Please enter your name here