ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟವನು ಉಡುಪಿ ವ್ಯಕ್ತಿ!?; ಅಷ್ಟಕ್ಕೂ ಈ ವ್ಯಕ್ತಿ ಯಾರು ಗೊತ್ತೆ?

0
1640

ನ್ಯೂಸ್ ಕನ್ನಡ ವರದಿ ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ಮುಂಜಾನೆ ಬಾಂಬ್ ಇರಿಸಿದ ವ್ಯಕ್ತಿ ಉಡುಪಿ ಜಿಲ್ಲೆಯ ವ್ಯಕ್ತಿ ಎಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಮಣಿಪಾಲದ ಮಣ್ಣಪಳ್ಳದ ಬಿ.ಕೃಷ್ಣಮೂರ್ತಿ ರಾವ್ ಅವರ ಮಗ ಆದಿತ್ಯ ರಾವ್ (36) ಬಾಂಬ್ ಇದ್ದ ಬ್ಯಾಗ್ ಅನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಟ್ಟು ಪರಾರಿಯಾದತ ಎಂದು ತಿಳಿದು ಬಂದಿದೆ.

ಬಿ.ಇ. ವ್ಯಾಸಂಗ ಮಾಡಿದ ಆದಿತ್ಯ ರಾವ್ ನಿನ್ನೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿದು ಬಂದಿದೆ. ಈತ ಹಿಂದೆ ಕೂಡ ಬೆಂಗಳೂರಿನಲ್ಲಿ ಬಾಂಬ್ ಇಡಲಾಗಿದೆಂದು ಹುಸಿ ಕರೆ ಮಾಡಿ ಪೊಲೀಸ್ ಅತಿಥಿಯಾಗಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಸದ್ಯ ಆದಿತ್ಯನ ಪತ್ತೆಗಾಗಿ ಪೊಲೀಸರು 3 ತಂಡಗಳನ್ನು ರಚಿಸಿದ್ದು ಆತನ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.

ಮಣ್ಣಪಲ್ಲದ ಬಳಿ ವಾಸವಾಗಿದ್ದ ಆದಿತ್ಯನ ಕುಟುಂಬ ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಕೃತ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಆದಿತ್ಯನ ತಂದೆ ಬಿ.ಕೃಷ್ಣಮೂರ್ತಿ ರಾವ್ ಮತ್ತು ಆದಿತ್ಯನ ತಮ್ಮನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದೆ ಆಗಸ್ಟ್ 30, 2018 ರಲ್ಲಿ ಉಡುಪಿ ಮೂಲದ ಆದಿತ್ಯ ರಾವ್ ಎಂಬಾತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್‌) ಸೆಕ್ಯುರಿಟಿ ಗಾರ್ಡ್ ಕೆಲಸ ನೀಡಲು ನಿರಾಕರಿಸಿದ್ದರಿಂದ ಕೋಪಗೊಂಡು, ‘ಕೆಐಎಎಲ್‌ನಲ್ಲಿ ಬಾಂಬ್ ಇಟ್ಟಿದ್ದೇನೆ’ ಎಂದು ಪದೇ ಪದೇ ಅಧಿಕಾರಿಗಳಿಗೆ ಕರೆ ಮಾಡಿ ಆತಂಕ ಸೃಷ್ಟಿಸುತ್ತಿದ್ದ ಪೊಲೀಸರಿಗೆ ಬಂದಿತನಾಗಿದ್ದ ಎಂದು ತಿಳಿದು ಬಂದಿದೆ.

ಉಡುಪಿಯ ಆದಿತ್ಯರಾವ್ ಬಂಧಿತ ಆರೋಪಿಯಾಗಿದ್ದ. ಕೆಐಎಎಲ್‌ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡವು ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಬೈಯಪ್ಪನಹಳ್ಳಿಯಲ್ಲಿ ಆರೋಪಿಯನ್ನು ಪತ್ತೆ ಮಾಡಿ ಆಗಸ್ಟ್ 30 2018ರಂದು ಬಂಧನ ಮಾಡಿತ್ತು. ಈ ಕುರಿತು ಪ್ರಜಾವಾಣಿ ಪತ್ರಿಕೆಯು ಸಂಪೂರ್ಣವಾಗಿ ವಿವಸಿತ್ತು.

ರೈಲು ನಿಲ್ದಾಣಕ್ಕೂ ಕರೆ!

ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಲಗೇಜ್ ಕೊಠಡಿಯಲ್ಲಿ ತನ್ನ ಲಗೇಜ್‌ಗೆ ಹಣ ಕೇಳಿದರೆಂದು ಆದಿತ್ಯ ರೈಲು ನಿಲ್ದಾಣದ ಅಧಿಕಾರಿಗಳಿಗೂ ಬಾಂಬ್ ಭಯ ಹುಟ್ಟಿಸಿದ್ದ. ‘ಈಗ ನಿಲ್ದಾಣದಲ್ಲಿರುವ ರೈಲುಗಳ ಪೈಕಿ ಒಂದರಲ್ಲಿ ಬಾಂಬ್ ಇದೆ’ ಎಂದು ಕರೆ ಮಾಡಿ ಹೇಳಿದ್ದ. ನಿಲ್ದಾಣದ ಸಿಬ್ಬಂದಿ ತಕ್ಷಣ ಎಲ್ಲ ಪ್ರಯಾಣಿಕರನ್ನೂ ಹೊರಗೆ ಕಳುಹಿಸಿ ತಪಾಸಣೆ ಮಾಡಿಸಿದ್ದರು ಎಂದು 2018ರ ವರದಿಯಲ್ಲಿ ತಿಳಿದುಬಂದಿದೆ

ಇದು ಭಯೋತ್ಪಾದಕ ಕೃತ್ಯ ಎಂದು ಒಂದಷ್ಟು ಮಾಧ್ಯಮಗಳು ಬಿತ್ತರಿಸಿದರೆ ಇನ್ನೊಂದಷ್ಟು ಮಾಧ್ಯಮಗಳು ಮಂಗಳೂರು ಗೋಲಿಬಾರ್‌ನ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಸುದ್ದಿ ಬಿತ್ತರಿಸಿದ್ದರು ಆದರೆ ಈಗ ಅದರ ಅಸಲಿಯತ್ತು ಬಯಲಾಗಿದ್ದು ಸತ್ಯವು ಜನರ ಮುಂದಿದೆ.

LEAVE A REPLY

Please enter your comment!
Please enter your name here