ನನಗ್ಯಾಕೆ ಭಯ? ದೇವೇಗೌಡರ ವಿರುದ್ಧ ಧೈರ್ಯದಿಂದ ಸ್ಪರ್ಧಿಸಿ ಗೆಲ್ಲುವೆ: ಸದಾನಂದ ಗೌಡ

0
427

ನ್ಯೂಸ್ ಕನ್ನಡ ವರದಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೂ ಯಾವುದೇ ರೀತಿಯ ಭಯಪಡದೆ ದೊಡ್ಡವರ ಜತೆ ಸ್ಪರ್ಧೆ ಮಾಡಲು ನಾನು ಸಿದ್ಧನಾಗಿದ್ದೇನೆ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು. ಇದುವರೆಗೂ ನನಗಿಂತ ಚಿಕ್ಕವರ ಜತೆ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ಒಂದು ವೇಳೆ ದೇವೇಗೌಡರು ಸ್ಪರ್ಧಿಸಿದರೂ ನನಗೆನೂ ಭಯವಿಲ್ಲ. ಅದನ್ನು ಗೌರವಯುತವಾಗಿ ಸ್ವೀಕರಿಸಿ ಗೆಲ್ಲುವ ವಿಶ್ವಾಸ ನನಗಿದೆ ಎಂದರು.

ತಮ್ಮ ಐದು ವರ್ಷಗಳ ಮೌಲ್ಯಮಾಪನ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬೇರೊಂದು ಕಡೆ ವಲಸೆ ಹೋಗುತ್ತೇನೆ ಎಂದು ಸುದ್ದಿ ಹಬ್ಬಿಸುತ್ತಿರುವವರು ದೇಶ ದ್ರೋಹಿಗಳು. ಪಕ್ಷ ಟಿಕೆಟ್ ನೀಡಿದರೆ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ನನಗೆ ಮುಖ್ಯ ಹೊರತು. ನನ್ನ ಹಿತಾಸಕ್ತಿ ಮುಖ್ಯವಲ್ಲ ಎಂದು ಪುನರುಚ್ಛರಿಸಿದರು. ಕಳೆದ ಫೆ.3ರಿಂದಲೇ ಚುನಾವಣಾ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಕ್ಷೇತ್ರದ ಪ್ರಮುಖರು, ಪ್ರಭಾವಿಗಳು, ಮುಖಂಡರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಈಗಾಗಲೇ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಬೇರೆ ಪಕ್ಷಗಳಿಗಿಂತ ಬಿಜೆಪಿ ಯಾವಾಗಲೂ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುತ್ತದೆ. ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಮಾಡಿರುವ ಕೆಲಸಗಳೇ ನಮಗೆ ಶ್ರೀರಕ್ಷೆಯಾಗುತ್ತದೆ. ಬೆಂಗಳೂರು ಉತ್ತರ ವಿಭಾಗದ ಜನತೆ ನನ್ನನ್ನು ಮತ್ತೊಮ್ಮೆ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here