Saturday May 20 2017

Follow on us:

Contact Us

ನಮ್ಮ ಪ್ರೇಮ ಧ್ಯಾನಕ್ಕೆ ಕುಳಿತಿದೆ…

ಕಣ್ಣಿಲ್ಲದ ಇಬ್ಬರು ಪ್ರೀತಿಸಕೂಡದೆಂದು,
ಒಟ್ಟಾಗಿ ಬದುಕು ಹೊಸೆಯಕೂಡದೆಂದು
ನಿಮ್ಮ ಬೆಳಕಡರಿದ ಜಗತ್ತು ಹೇಳಬಹುದು,
ಕಾವಳಕ್ಕೆ ಮಸಿಯಡರಿದ ಜಗದ ಜನರೇ,
ನಿಮಗೊಂದಿಷ್ಟು ಹೇಳಲಿಕ್ಕಿದೆ.. ಕೇಳಿ.

ಹೆಚ್ಚೇನಿಲ್ಲ.. ಚೂರು ಪಡಿಪಾಟಲಾಗಬಹುದು,
ಬೇಕನಿಸಿದ್ದು ಆಗಲೇ ಕೈಗೆಟುಕೋದಿಲ್ಲ..
ಚೂರು ಹುಡುಕಬೇಕು, ತಡಕಬೇಕು..
ಬೆದಕುವುದರಲ್ಲಿ ಸಿಗೋ ಪುಳಕವೇ ಬೇರೆ..

ಬೆಳಗೆದ್ದು ಚುಂಬಿಸಲು ಅವನ ಹಣೆ ಹುಡುಕಬೇಕು,
ಆ ತ್ರಾಸನ್ನೇ ಕೊಡದ ಹುಡುಗ ಹಣೆಯಿಂದ ನನ್ನ
ತುಟಿ ಹುಡುಕುತ್ತಾನೆ..
ಕಾದಪಾತ್ರೆಗೆ ಹಾಲಿಡುವಾಗ ಅವನು ಸಕ್ಕರೆಡಬ್ಬಿ
ಹುಡುಕುತ್ತಾನೆ,
ಚಮಚೆ ಹುಡುಕಿಕೊಟ್ಟರೆ ಇಷ್ಟೇ ನಗುತ್ತಾನೆ..
ಒಮ್ಮೊಮ್ಮೆ ಚಹಾಗ್ಲಾಸು ತುಂಬಿದ್ದು ಗೊತ್ತೇ ಆಗುವುದಿಲ್ಲ..
ಗ್ಲಾಸಿನೊಳಗೆ ತೋರುಬೆರಳಿಟ್ಟು ಇಷ್ಟು ಸಾಕೆನ್ನುತ್ತಾನೆ..
ಅವನ ಬೆರಳು ಸುಡದಂತೆ ಕಪ್ಪು ತುಂಬಿಸೋ ಸುಖ ನನಗೆ.

ಒಗ್ಗರಣೆಯ ಸಮಯ.. ಈರುಳ್ಳಿ ಹಚ್ಚಲು ಅವನಿಗೆ ಬರುವುದಿಲ್ಲ..
ಒಂದೆರಡು ಸಲ ಬೆರಳು ಕೊಯ್ದುಕೊಂಡಿದ್ದ,
ನನಗೂ ಅಷ್ಟೇನು ಅನುಭವವಿಲ್ಲ.. ಇದ್ದುದ್ದರಲ್ಲಿ
ಸೊಟ್ಟಪಟ್ಟವಾದರು ಸರಿ.. ನಾನೇ ಹಚ್ಚುತ್ತೇನೆ,
ಸಳಸಳ ಎನ್ನುವ ಎಣ್ಣೆಗೆ ಸಾಸುವೆ ಹಾಕಲು ಅವನಿಗಿಷ್ಟ..
ನಾನು ಕರಿಬೇವು ಹಾಕಿದ ಕೂಡಲೆ ಚೂರು ಹಿಂದಕ್ಕೆಳೆದುಕೊಳ್ಳುತ್ತಾನೆ..
ತುಂಬ ಸಲ ಈ ಸಮಯದಲ್ಲೇ ಒಗ್ಗರಣೆ ಸೀದಿದೆ.

ಕೆಲಸಕ್ಕೆ ಹೋದ ಹುಡುಗ ಮನೆಗೆ ಬಂದುದನ್ನ
ಅವನೇ ಹೇಳುವತನಕ ನನಗೆ ಗೊತ್ತಾಗುವುದಿಲ್ಲ..
ಅವನು ಹೇಳುವುದಿಲ್ಲ.. ಬಂದವನೇ ತಬ್ಬುತ್ತಾನೆ

ಕೊರಳಹಾಸಿಗೆ ಕಾದ ಉಸಿರಿನ ಸನ್ನೆ ಕೊಡುತ್ತಾನೆ,
ಇಬ್ಬರೂ ಸೇರಿ ಪಕ್ಕ ಕೂರಲು ಜಾಗ ತಡಕುತ್ತೇವೆ,
ಮಡಿಲೊಳಗೆ ತಲೆಯಿಟ್ಟು ಕಣ್ಮುಚ್ಚುತ್ತೇನೆ..
ಕಣ್ಣ ತಿಳಿಕತ್ತಲು ಇನ್ನಷ್ಟು ಕತ್ತಲಾಗುತ್ತದೆ..
ಆ ಕಡುಗತ್ತಲದ ಮಡಿಲಸುಖ ನಿಮಗರ್ಥವಾಗುವುದಿಲ್ಲ.

ಎಲ್ಲವೂ ಕಾಣೋ ಕಡೆ ಕುತೂಹಲ ಇರುವುದಿಲ್ಲವಂತೆ..
ಕುತೂಹಲಗಳ ಹೊರತಾಗಿ ಮತ್ತೇನೂ ಇರದ ಮನೆ ನಮ್ಮದು..
ಇಬ್ಬರನ್ನೂ ನೋಡೊ ಜನ, ಏನೇನೋ ಮಾತಾಡಿಕೊಳ್ಳುತ್ತಾರೆ..
ಚೂರು ಕಷ್ಟಪಟ್ಟಾದರೂ ಸರಿಯೆ. ನೆನಪಿಟ್ಟುಕೊಳ್ಳಿ..
ನಿಮ್ಮ ಮಾತುಗಳ ಚೂರಿ, ಗುರಿ ತಲುಪದಷ್ಟು ದೂರದಲ್ಲಿ ನಮ್ಮ ಪ್ರೇಮ.. ಧ್ಯಾನಕ್ಕೆ ಕುಳಿತಿದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪುಟ್ಟ ಹೃದಯಗಳಿಗೆ ಮಸೀದಿ ದರ್ಶನ; ಸಂಶಯದ ಹುತ್ತದಿಂದ ಭವ್ಯ ಭಾರತದತ್ತ ಹೆಜ್ಜೆ

ಮುಂದಿನ ಸುದ್ದಿ »

ಉಡುಪಿಯಲ್ಲಿ ತುರ್ತು ಪರಿಸ್ಥಿತಿಯ ಪುನರಾವರ್ತನೆ! : ಗಣೇಶ್ ನಾಯಕ್

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×