Friday September 11 2015

Follow on us:

Contact Us

ಧರ್ಮ ರಕ್ಷಕರ ಪೊಳ್ಳು ನೈತಿಕತೆಯೂ ಆ ಯುವತಿಯೊಬ್ಬಳ ತೀಕ್ಷ್ಣ ಪ್ರಶ್ನೆಯೂ…

-ರುಕಿಯ್ಯಾ ಎ ರಝಾಕ್

ವರ್ಷಗಳ ಹಿಂದಿನ ಘಟನೆ : ಆ ತಂದೆಗೆ ಮೂರು ಮಕ್ಕಳು. ಮಧ್ಯಮ ವರ್ಗದ ಸಂಸಾರ ಅದು, ಪದವಿ ಓದಿದ ತುಸು ಕಪ್ಪು ಬಣ್ಣದ 25 ದಾಟಿದ ಹಿರಿ ಮಗಳಿಗೆ ಬಹಳವೆ ಕಷ್ಟ ಪಟ್ಟು ಮದುವೆ ಮಾಡಿ ಕೊಟ್ಟಿದ್ದರು ತಂದೆ. ಅದಾಗಿ ಹೆಗಲ ಭಾರ ಇಳಿಯಿತೆನ್ನುವಾಗ ಕಿರಿಯ ಪುತ್ರಿಯೂ ಮದುವೆ ವಯಸ್ಸಿಗೆ ತಲುಪಿಯಾಗಿತ್ತು, ಸರಿ ಇನ್ನು ಇವಳ ಸರದಿ, ಬಂದವರಿಗೆ ಹೆಣ್ಣಿನ ತಾರಸಿ ಇಲ್ಲದ ಹೆಂಚಿನ ಮನೆ, ಅಥವಾ ಕೊಂಚ ದಪ್ಪಗಾಗಿ ಇದ್ದಾಳೆ, ಸ್ವಲ್ಪ ಬಣ್ಣ ಗಾಢ ಆಯಿತು ಇಲ್ಲಾಂದ್ರೆ ಪರವಾಗಿರಲಿಲ್ಲ ಹೀಗೆ… ವಿವಾಹ ನಿರಾಕರಿಸುವ ಸಬೂಬು ಹೇಳಿ ಸಾಕಾದರೆ, ಹುಡುಗಿಗೋ ಬಂದವರ ಮುಂದೆ ಸಿಂಗರಿಸಿ ಕುಳಿತೂ ಕುಳಿತು ಸುಸ್ತಾದಾಗ ಇನ್ನು ಯಾವ ಗಂಡೂ ಮನೆಗೆ ಬರುವುದೇ ಬೇಡ ಎಂಬ ನಿರ್ಧಾರಕ್ಕೆ ಬರುವಷ್ಟು ವಿವಾಹವೆಂಬ ಶಬ್ಧವೇ ಆಕೆಯಲ್ಲಿ ಜಿಗುಪ್ಸೆ ಹುಟ್ಟಿಸಿತ್ತು, ಹೀಗೆ ವಿವಾಹದ ಜಂಜಡಗಳಿಂದ ಬಿಡಿಸಿಕೊಂಡವಳು ನೌಕರಿಗೆ ಸೇರಿ ತಂದೆಯ ಭಾರವನ್ನೊಂದಿಷ್ಟು ಹಗುರಾಗಿಸುವ ಯತ್ನ ಮಾಡಿದಾಗ, ಮನಸಿಗೂ ನೆಮ್ಮದಿ ಸಿಕ್ಕಿತ್ತು ಅವಳಿಗೆ. ಅದೊಂದು ದಿನ ಹೋಟೆಲೊಂದರಲ್ಲಿ ಸಹೋದ್ಯೋಗಿಯೊಂದಿಗೆ ಅವಳನ್ನು ಕಂಡ ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕರು ಅವಳಿಗೂ, ಅವಳೊಂದಿಗಿದ್ದ ಅವನಿಗೂ ಎರಡೇಟು ಬಿಗಿದು, ನಿನ್ನಪ್ಪನ ಮರ್ಯಾದೆ ತೆಗೆಯುತ್ತೀಯ ಎಂದು ಅವಾಚ್ಯವಾಗಿ ನಿಂದಿಸತೊಡಗಿದಾಗ, ಆ ಹೆಣ್ಣು ಕೇಳಿದ ಒಂದು ಪ್ರಶ್ನೆ ಈಗಲೂ ನನ್ನ ಕಿವಿಯೊಳಗೆ ಪ್ರತಿಧ್ವನಿಸಿದಂತೆ ಭಾಸವಾಗುತ್ತದೆ, “… ನನ್ನಪ್ಪನ ಮರ್ಯಾದೆ ಬಗ್ಗೆ ಕಾಳಜಿ ಇರುವ ನಿಮ್ಮಲ್ಲೇ ಯಾರಾದರೂ ಒಬ್ಬ ವರದಕ್ಷಿಣೆ ರಹಿತವಾಗಿ ನನ್ನನ್ನು ವರಿಸುವಷ್ಟು ಧೈರ್ಯ ತೋರಬಲ್ಲಿರಾ?” ಎಂಬ ಅವಳ ಈ ಪ್ರಶ್ನೆ ಧರ್ಮದ ಸುಳ್ಳು ಮುಸುಕನ್ನು ಹೊದ್ದುಕೊಂಡವನ ಕಿವಿ ತಲುಪುವುದು ಖಂಡಿತವಾಗಿಯೂ ಅಸಾಧ್ಯ, ವಧು ಬೇಟೆಗೆ ಬಂದವರ ಮುಂದೆ ನಡೆದು ತೋರಿಸಿ, ಬೆಳ್ಳಗಿನ ಬಣ್ಣವಿಲ್ಲದ್ದಕ್ಕಾಗಿ ನಿರಾಕರಿಸಲ್ಪಟ್ಟ, ವಿವಾಹ ಪ್ರಾಯ ದಾಟಿಯೂ ಅವಿವಾಹಿತಳಾಗುಳಿದ ಹೆಣ್ಣೊಬ್ಬಳು, ನೆರೆದ ಅಷ್ಟೂ ಯುವಕರ ಎದೆಗೆ ತಿವಿಯುವಂತೆ ಇಷ್ಟು ಧೈರ್ಯವಾಗಿ ಸಂಸ್ಕೃತಿ ರಕ್ಷಕರಿಗೆ ಸವಾಲು ಹಾಕಿದಾಗ “ಹೂಂ.. ನಾನು ನಿನಗೆ ರಕ್ಷಣೆ ನೀಡಬಲ್ಲೆ..” ಎಂದು ಧೈರ್ಯದಿಂದ ಎದೆ ತಟ್ಟಿ ಹೇಳಬಲ್ಲ ಒಬ್ಬನೇ ಒಬ್ಬ ಪುರುಷ ಅಲ್ಲಿ ಇರಲಿಲ್ಲ, ಯಾರ ಬಾಯಿಯಿಂದಲೂ ಒಂದೇ ಒಂದು ಶಬ್ದ ಹೊರಡಲಿಲ್ಲ, ಆಕೆಯ ಈ ಸವಾಲು ಅವರ ಆತ್ಮವನ್ನೊಮ್ಮೆ ಜಾಗೃತ ಗೊಳಿಸಬೇಕಿತ್ತು, ಅಂತರಾತ್ಮವನ್ನು ಕೆಣಕ ಬೇಕಿತ್ತು. ಅವರು ನಿಜವಾದ ರಕ್ಷಕರಾಗಿದ್ದರೆ… ಅದು ಅವರ ಆತ್ಮವನ್ನು ತಟ್ಟಬೇಕಿತ್ತು.ಆ ಹೆಣ್ಣುಮಗಳ ಪ್ರಶ್ನೆ ಅವರಿಗೆ ಕೇವಲ ಪೊಗರಿನ ಮಾತಾಗಿ ಕಂಡಿತೇ ವಿನಃ, ಅವಳ ಧ್ವನಿಯಲ್ಲಡಗಿದ ಹತಾಶೆ, ನೋವು,ನಕಲಿ ಧರ್ಮ ರಕ್ಷಣೆ ಮಾತ್ರ ಮಾಡುವ,ಆದರೆ, ವಾಸ್ತವ ಸಮಸ್ಯೆಗಳಿಗೆ ಉತ್ತರವಾಗದ ಯುವಕರ ಪೊಳ್ಳು ಪೌರುಷಗಳ ಬಗೆಗೆ ಅವಳಿಗಿದ್ದ ಅಸಹ್ಯ ಯಾರಿಗೂ ಅರ್ಥವಾಗಲೇ ಇಲ್ಲ! ವರದಕ್ಷಿಣೆಯ ಅನಿಷ್ಠದಿಂದ ಅವಿವಾಹಿತಳಾಗಿ ಉಳಿದು ಹೋದ ಹೆಣ್ಣಿನ ದುಃಖವನ್ನೇ ಅರ್ಥೈಸಲಾಗದವರಿಂದ ಇನ್ನೆಂತಹಾ ಸಂಸ್ಕೃತಿ ರಕ್ಷಣೆಯಾದೀತು?

ಈ ವಿಷಯ ಯಾಕಾಗಿ ಬಂತು ಎಂದರೆ, ಇತ್ತೀಚೆಗಿನ ಎರಡು ಘಟನೆಗಳು ನನ್ನನ್ನು ಮತ್ತೆ ಈ ಹಳೆಯ ಘಟನೆಯನ್ನು ನೆನಪಿಸುವಂತೆ ಮಾಡಿತು. ಒಂದು ಅತ್ತಾವರದ ಬೆತ್ತಲೆ ಪ್ರಕರಣ, ಮತ್ತುಂದು ಮೊನ್ನೆಯ ಸಿಟಿ ಸೆಂಟರ್ ಪ್ರಕರಣ, ವಾರ್ತಾ ಮಾಧ್ಯಮಗಳು ಅದನ್ನು ನೈತಿಕ ಪೋಲಿಸ್ ಗಿರಿ ಎಂದು ವರದಿ ಮಾಡಿದ್ದವು, ಇಲ್ಲಿ ಪ್ರಥಮ ಪ್ರಶ್ನೆ ಎಂದರೆ, ಮತ್ತೊಂದು ಮನೆಯ ಹೆಣ್ಣುಮಗಳ ಚಲನವಲನದ ಮೇಲೆ ಕಣ್ಣಿಟ್ಟು, ಆಕೆಯ ತಪ್ಪಿಗಾಗಿಯೇ ಹುಡುಕಾಡುವ ಮನಸ್ಥಿತಿಯ ನೈತಿಕತೆಯೇ ಪ್ರಶ್ನಾರ್ಹ ಅಲ್ಲವೆ? ಮತ್ತೊಂದು, ಇಂತಹಾ ಪ್ರಕರಣಗಳಲ್ಲಿ ನಡೆಸಲಾಗುವ “ಪೋಲೀಸ್ ಗಿರಿ…”.  ಪ್ರಜೆಗಳನ್ನು ಸಮಾಜದಲ್ಲಿ ನಿರ್ಭೀತಿಯಿಂದ ಬದುಕಲು ಕಲ್ಪಿಸುವವರನ್ನು ಆರಕ್ಷಕರು ಅಥವಾ ಪೋಲೀಸರು ಎನ್ನಬಹುದು, ಸಮಾಜವನ್ನು ಭೀತಿಮುಕ್ತ, ಅಪರಾಧಮುಕ್ತವಾಗಿ ಸಮಾಜದ ಸುಭಿಕ್ಷೆಯನ್ನು ಕಾಪಾಡುವ ಅವರ ಜವಾಬ್ದಾರಿ ಗುರುತರವಾದದ್ದು, ಘನತೆಯುಳ್ಳದ್ದು, ಅದು ನಿಜವಾದ ಪೋಲಿಸ್ ಗಿರಿ. ಅದಲ್ಲದೇ ಕ್ಷುಲ್ಲಕ ಕಾರಣ ನೀಡಿ ಜನರನ್ನು ಸಾರ್ವಜನಿಕವಾಗಿ ಥಳಿಸುವುದು, ನಗ್ನಗೊಳಿಸುವುದು, ಸಮಾಜದಲ್ಲಿ ಭೀತಿ ಹರಡುವುದು, ಎಲ್ಲಿಯ ಪೋಲಿಸ್ ಗಿರಿ? ಇನ್ನು ಮೇಲೆ ಉದ್ಧರಿಸಿದ ಎರಡೂ ಘಟನೆಗಳಲ್ಲಿ ಹಿಂಸೆಯನ್ನು ಅನುಸರಿಸುವ ಯಾವ “ಬಣ್ಣ” ದ ಸಂಘಟನೆಯಾದರೂ ಅದು ಖಂಡನಾರ್ಹವೆ, ಎಷ್ಟು ಕಠೋರವಾಗಿ ನಾವು ದೂರದಲ್ಲೆಲ್ಲೋ ನಡೆಯುವ ತಾಲಿಬಾನೀಕರಣ ವನ್ನು ವಿರೋಧಿಸುತ್ತೇವೆಯೋ, ಅಷ್ಟೇ ಕಠೋರವಾಗಿ ನಮ್ಮ ಕರಾವಳಿಯಲ್ಲಿ ನಡೆಯುವ ಅನೈತಿಕ ಪೋಲಿಸ್ ಗಿರಿಯನ್ನು  ವಿರೋಧಿಸಬೇಕು. ಅಷ್ಟು ಸಾಮಾಜಿಕ ಕಳಕಳಿಯಾದರೂ ನಮ್ಮಲ್ಲಿ ಇರಬೇಕು.

ಧರ್ಮದ ನೈಜ ತಿಳುವಳಿಕೆ ಮಾನವನನ್ನು ಸರಿದಾರಿಗೆ ತಂದರೆ, ಅರೆಜ್ಞಾನ ಅಥವಾ ಧರ್ಮದ ಅಲ್ಪಜ್ಞಾನ ಮಾನವನನ್ನು ಸಮೂಹ ಸನ್ನಿಗೊಳಗಾಗಿಸುತ್ತದೆ. ನಮ್ಮ ಸಮಾಜದ ಸ್ವಾಸ್ಥ್ಯವನ್ನು ಉತ್ತಮ ರೀತಿಯಿಂದ ಕಾಪಾಡುವ ಹೊಣೆ ಸಮಾಜದ ಪ್ರತಿಯೊಂದು ಸ್ತರದ ಪ್ರತಿಯೊಂದು ಧರ್ಮ, ಮತ್ತು ಪ್ರತಿಯೊಂದು ಪಂಗಡದ ಪ್ರತಿ ಸದಸ್ಯನ ಹೆಗಲ ಮೇಲೇ ಇದೆ, ಹಾಗಿರುವಾಗ, ಗರ್ಭ ಸೇರಿದ ಬಳಿಕ ಮನೆಯ ಹೆಣ್ಣು ಮಗು ಪ್ರಬುದ್ಧೆಯಾಗುವ ತನಕ ಆಕೆಯನ್ನು ಕಾಪಾಡುವ ಕುಟುಂಬದ ಸದಸ್ಯರಿಗೆ ಅವಳ ಯೌವ್ವನದ ಸಮಯದಲ್ಲಿ ಆಕೆಯನ್ನು ಕಾಪಾಡಲು ಅಸಾಧ್ಯವೇನಲ್ಲ. ಅದಕ್ಕಾಗಿ ಯಾವುದೋ ಸಂಘಟನೆಗಳ ಅಗತ್ಯವಿಲ್ಲ, ಹಿಂದೆ ಯುವ ಸಮುದಾಯದಲ್ಲಿ ಪ್ರೀತಿ, ಪ್ರೇಮ ಇತ್ಯಾದಿ ಪ್ರಕರಣ ನಡೆದರೆ, ಕುಟುಂಬಿಕರ ನಡುವೆ ಚರ್ಚೆ ತೀರ್ಮಾನಗಳಾಗಿ ಅಲ್ಲಿಗೇ ಮುಚ್ಚಲ್ಪಡುತ್ತಿತ್ತು, ಆದರೀಗ? ರಕ್ಷಣೆಯ ನೆಪದಲ್ಲಿ ಹೆಣ್ಣನ್ನು ಥಳಿಸುವ, ನಿಂದಿಸುವ, ಅವಳ ಮತ್ತು ಅವಳ ಮನೆಯವರ ಮಾನವನ್ನು ಬೀದಿಯಲ್ಲೇ ಹರಾಜಿಗಿಡುವ ಮನಸ್ಥಿತಿಗೆ ಏನೆನ್ನೋಣ? ಯಾವ ಪುರುಷಾರ್ಥಕ್ಕಾಗಿ ಅದನ್ನು ಸಂಸ್ಕೃತಿ ರಕ್ಷಣೆ ಎಂದು ಕರೆಯೋಣ? ಯಾರೋ ಎಲ್ಲಿಯೋ ಯಾರೊಂದಿಗೋ ಮಾತನಾಡಿದರೆ ಅದನ್ನು ಚಿತ್ರೀಕರಿಸಿ, “ಈಕೆಯ ಮನೆಯವರಲ್ಲಿ ತಿಳಿಹೇಳಿ ಇವಳನ್ನು ರಕ್ಷಿಸಿ” ಎಂಬ ತಲೆಬರಹ ನೀಡಿ ಅಂತರ್ಜಾಲದಲ್ಲಿ ಹರಿಬಿಟ್ಟು,  ತಾವೇ ಅವಳ ಮರ್ಯಾದೆಯನ್ನು ಮೂರಾಬಟ್ಟೆಯಾಗಿಸುವ ಕೆಟ್ಟಚಾಳಿಗೆ ಏನೆನ್ನೋಣ? ಹೆಣ್ಣು ಮಗುವಿನ ಮೊದಲ ಆಟಿಕೆ, ಮೊದಲ ಬಳೆಯಿಂದ ತೊಡಗಿ, ಅವಳ ವರದಕ್ಷಿಣೆಯ ಪ್ರತಿಯೊಂದು ಪೈಸೆಯನ್ನು ಜಮಾಯಿಸಿ, ಹೈರಾಣಾಗುವವರೆಗಿನ ಎಲ್ಲವೂ ಕುಟುಂಬಿಕರ ಹೊಣೆಯಾಗಿರುವಾಗ, ಒಂದು ದಿನದ ಮಟ್ಟಿಗೆ ಅವಳ ರಕ್ಷಣೆ ಮಾಡಲಿಕ್ಕಾಗಿ ಸಂಘಟನೆಗಳ ಕದ ತಟ್ಟುವ ಅವಶ್ಯಕತೆ ಯಾರಿಗೂ ಬಂದಿಲ್ಲ, ಅಂತಿರುವಾಗ, ಸಂಘಟನೆಗಳು ಯಾರದೋ ಮನೆಯಮಕ್ಕಳ “ತಪ್ಪು” ಹುಡುಕುವ ಹೀನ ಮನಸ್ಥಿತಿಯಿಂದ ಮಾಡಲಾಗುವ ಇಂತಹಾ ಅಪಕೃತ್ಯಗಳು ಸಮಾಜರಕ್ಷಣೆಯ ಬದಲಾಗಿ ಸಮಾಜಕಂಟಕವಾಗಿಯೇ ಪರಿಣಮಿಸಿದೆ, ಸಮಾಜ ಒಡೆಯುವ ಇಂತಹ ಕೃತ್ಯವನ್ನು ಯಾವ ಧರ್ಮದ ಅನುಯಾಯಿ ಎಸಗಿದರೂ ಅದು 100% ತಪ್ಪೇ. ಯಾವ ಧರ್ಮವೂ ಇದನ್ನು ಅನುಮೋದಿಸದು. ಸಮಾಜ ಕಟ್ಟಬೇಕಾದ ಯುವ ಜನತೆಯ ಮೆದುಳನ್ನೇ ನಿಯಂತ್ರಿಸಿ, ಸಮಾಜ ಕಂಟಕರಾಗಿ ಮಾರ್ಪಡಿಸುವುದು ಬಹಳವೆ ಸುಲಭದ ಕಾರ್ಯ, ಒಂದು ನಾಲ್ಕು ದ್ವೇಷಭಾಷಣಗಳು, ನೆರೆಯವನ ಧರ್ಮದ ಲೋಪದೋಷಗಳು, ಒಂದು ನಿಶ್ಕಲ್ಮಷ ಮನಸ್ಸನ್ನು ಕೆಡಿಸಲು ಇಷ್ಟು ಧಾರಾಳ ಸಾಕು. ಆದರೆ ಅದರಿಂದಾಗುವ ಪ್ರಯೋಜನವಾದರೂ ಏನು? ಅದೇ ಮೆದುಳಿಗೆ ಮನುಜ ಹೃದಯವನ್ನು ಜೋಡಿಸುವ ಕಲೆಯ ತರಬೇತಿ ನೀಡಿದರೆ, ಮುಂದೆ ಸಮಾಜ, ಸಾಮರಸ್ಯ, ಸಹಬಾಳ್ವೆಯೊಂದಿಗೆ ಬೆಳಗುವುದನ್ನು ತಡೆಯಲು ಯಾರಿಂದಲಾದರೂ ಸಾಧ್ಯವೆ? ಯುವ ಶಕ್ತಿ, ಸಂಕುಚಿತ ಜಾತಿ ಧರ್ಮಗಳ ಬಂಧನದಿಂದ ಹೊರ ಬರಲಿ, ಸಂಘಟನೆಗಳು ಪ್ರಾಮಾಣಿಕವಾದ ಪ್ರಯತ್ನದಿಂದ ಯುವ ಶಕ್ತಿಯನ್ನು ಇಂತಹಾ ಮನಸ್ಥಿತಿಯಿಂದ ಹೊರತರಲಿ.  ಅತಿ ಕ್ಷುಲ್ಲಕ, ಕುಂಟು ನೆಪವೊಡ್ಡಿ ಸಹೋದರಧರ್ಮದ ವಿರುದ್ಧ ಕತ್ತಿಮಸೆಯುವುದು, ಸದಾ ಯುದ್ಧ ಸನ್ನದ್ಧರಾದಂತೆ, ಒಂದು ದಾಳಿಯ ಬಳಿಕ ಪ್ರತಿದಾಳಿ ನಡೆಸುವ ದ್ವೇಷದ ಮನಸ್ಥಿತಿಯಲ್ಲಿ ಬದುಕುವುದು ನಮ್ಮ ನೆಲದಲ್ಲಿ ನಡೆಯದಿರಲಿ.

ಬಣ್ಣಗಳು, ಟೋಪಿಗಳು, ಗಡ್ಡ, ನಾಮ, ಲುಂಗಿಯ ಆಧಾರದಲ್ಲಿ ಮಾನವನನ್ನು ಅಳೆಯುವ ಬುದ್ದಿಯ ಮಟ್ಟದಿಂದ ನಾವು ಮೇಲೇರಬೇಕು. ಸರ್ವಧರ್ಮೀಯರ ಭಾವೈಕ್ಯತೆಯ ನಾಡು ಭಾರತ ಎಂಬುವುದು ಪುಸ್ತಕದ ಸಾಲುಗಳಲ್ಲೇ ಅಚ್ಚಾಗಿ ಅಳಿದು ಹೋಗದಿರಲಿ, ಶಾಂತಿ, ನೆಮ್ಮದಿ, ಹೊಸ ಕನಸು ತುಂಬಿದ ಭಾರತವನ್ನು, ಜಾತಿ ಧರ್ಮಗಳ ಬೇಧವಿಲ್ಲದೇ ಪ್ರತಿಯೊಬ್ಬ ಭಾರತೀಯನೂ ನಿರೀಕ್ಷಿಸುತ್ತಿದ್ದಾನೆ. ಪ್ರತಿಯೊಬ್ಬ ಭಾರತೀಯನೂ ಅರಿತೋ ಅರಿಯದೆಯೋ, ತನ್ನ ಸಹೋದರ ಧರ್ಮೀಯನಿಗೆ ಅವಲಂಬಿತನಾಗಿದ್ದಾನೆ. ಕ್ರೌರ್ಯವನ್ನು ಯಾವೊಬ್ಬ ಭಾರತೀಯನೂ ಬೆಂಬಲಿಸುವುದಿಲ್ಲ ಎನ್ನುವ ಅಚಲ ವಿಶ್ವಾಸ ನನ್ನದು, ನಾವು ಭಾರತೀಯರು, ಶಾಂತಿ ಪ್ರಿಯರು, ಶಾಂತಿಯ ಫಲಕದಡಿಯಲ್ಲಿ ನಡೆಯುವ ಕ್ರೌರ್ಯವನ್ನು ಕಂಡಾಗಲೆಲ್ಲಾ ನಮ್ಮೆಲ್ಲರ ಆತ್ಮದೊಳಗೊಂದು ಅಸಹನೀಯ ನೋವು ಎದ್ದೇಳುತ್ತದೆ, ಆ ಸಹನೀಯ ನೋವೇ ನಮ್ಮೊಳಗಿನ ದೇಶಭಕ್ತಿಯ ಸಬೂತು, ಆ ನೋವಿಗೆ ಕಿವಿಯಾಗುವ, ಇದನ್ನು ಒಪ್ಪಿಕೊಳ್ಳುವ ನೈತಿಕ ಸ್ಥೈರ್ಯ ನಮಗಿರಬೇಕು ಅಷ್ಟೇ.. ಸಮಾಜ ತನ್ನಷ್ಟಕ್ಕೇ ಸುಧಾರಣೆ ಕಾಣುತ್ತದೆ ಯಾವುದೇ ಗುಂಪಿನ ಮೇಲೂ ಅವಲಂಬಿಸದೇ….

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವೇದಪಾಠ ಶಿಕ್ಷಕನಿಂದ ವಿದ್ಯಾರ್ಥಿಗೆ ಹಲ್ಲೆ; ದಲಿತ್ ಸೇವಾ ಸಮಿತಿ, ಸಿಐಟಿಯು, ಎಸ್‍ಎಫ್‍ಐ ಖಂಡನೆ

ಮುಂದಿನ ಸುದ್ದಿ »

ಮುಂಬೈ ಟ್ರೈನ್ ಸರಣಿ ಸ್ಫೋಟ ತೀರ್ಪು ಪ್ರಕಟ ; ಹನ್ನೆರಡು ಮಂದಿ ತಪ್ಪಿತಸ್ಥರು; ಓರ್ವ ಖುಲಾಸೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×