Sunday March 11 2018

Follow on us:

Contact Us

ಕರ್ನಾಟಕ ಚುನಾವಣೆ: ಮುಸ್ಲಿಂ-ದಲಿತ ಅಸ್ಮಿತೆಯ ರಾಜಕಾರಣ ಮತ್ತು ಉತ್ತರ ಪ್ರದೇಶದ ಫಲಿತಾಂಶದ ಪಾಠಗಳು!

ಲೇಖನ: ದಾದಾ ಖಲಂದರ್

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಸ್ಲಿಂ ಹಾಗೂ ದಲಿತ ಅಸ್ಮಿತೆಯ ರಾಜಕಾರಣದ ಚರ್ಚೆ ಎಂದಿನಂತೆ ಮತ್ತೆ ಮುನ್ನೆಲೆಗೆ ಬಂದಿದೆ. ಇಷ್ಟು ವರ್ಷಗಳ ಕಾಲ ಮುಸ್ಲಿಂ-ದಲಿತ ಮತಗಳಿಂದ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಆಯಾ ಸಮುದಾಯಗಳ ವ್ಯಕ್ತಿಗಳಿಗೆ ಅಥವಾ ಆಯಾ ಸಮುದಾಯಗಳನ್ನು ಬಹುಮಟ್ಟಿಗೆ ಪ್ರತಿನಿಧಿಸುವ ಪಕ್ಷಗಳಿಗೆ ಬಿಟ್ಟುಕೊಟ್ಟು ಅವರನ್ನು ಗೆಲ್ಲಿಸುವ ಮೂಲಕ ಋಣ ಸಂದಾಯ ಮಾಡಲೆಂದು ಆಗ್ರಹಿಸಲಾಗುತ್ತಿದೆ. ಆದರೆ ಇದು ಕಾರ್ಯಸಾಧುವೆ? ಒಂದು ವೇಳೆ ಕಾಂಗ್ರೆಸ್ ಪಕ್ಷ ಹಾಗೆ ಮಾಡಲೊಪ್ಪದಿದ್ದರೆ ಅದರ ವಿರುದ್ಧ ತಿರುಗಿಬಿದ್ದು ಜಾತ್ಯಾತೀತ ಮತಗಳನ್ನು ಒಡೆಯುವುದು ಸರಿಯಾದ ಮಾರ್ಗವೆ? ಅದರಲ್ಲೂ ಕೇಂದ್ರ ಸರ್ಕಾರದ ಅಧಿಕಾರವನ್ನು ಕೈಯಲ್ಲಿ ಹಿಡಿದು, ಡಿಮಾನಿಟೈಜೇಷನ್ ಎಂಬ ಅಸ್ತ್ರದ ಮೂಲಕ ಎಲ್ಲಾ ಪ್ರತಿಪಕ್ಷಗಳ ಖಜಾನೆ ಖಾಲಿ ಮಾಡಿಸಿ ಕಾಳಧನದ ಉಪ್ಪರಿಗೆಯ ಮೇಲೆ ಕುಳಿತು ಚುನಾವಣೆ ಗೆಲ್ಲಲು ಕುರುಡು ಕಾಂಚಾಣವನ್ನು ಕುಣಿಸುತ್ತಾ ಮತೀಯ ದ್ವೇಷದ ನಾಲಿಗೆಯನ್ನು ಚಾಚಿಕೊಂಡು ಬಿಜೆಪಿಯೆಂಬ ಜನಾಂಗೀಯ ದ್ವೇಷ ಸಾಧಿಸುವು ಪಕ್ಷ ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ಕೇವಲ ಕಾಂಗ್ರೆಸ್ ತೋರಿಸುವ ‘ಗುಮ್ಮ’ ಎಂದುಕೊಳ್ಳುವುದು ಸರಿಯೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು 2017ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಮುಸ್ಲಿಂ-ದಲಿತ ಸಮುದಾಯಗಳ ಕುರಿತ ಈ ಮುಂದಿನ ವಿಶ್ಲೇಷಣೆಯು ಸಹಕರಿಸಬಹುದು.

ಉತ್ತರ ಪ್ರದೇಶದಲ್ಲಿ ಸುಮಾರು 4 ಕೋಟಿ ಮುಸ್ಲಿಮರಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 325 ಸ್ಥಾನ ಲಭಿಸಿದೆ. ಆದರೆ ಅದರಲ್ಲಿ ಒಬ್ಬರೂ ಮುಸ್ಲಿಂ ಶಾಸಕ ಇಲ್ಲ. 121 ಕ್ಷೇತ್ರಗಳಲ್ಲಿ ಮುಸ್ಲಿಮರು ನಿರ್ಧರಿಸಿದಂತೆ ಸೋಲು ಗೆಲುವು ನಿರ್ಣಯವಾಗುತ್ತದೆ ಎನ್ನುವುದು ಉತ್ತರ ಪ್ರದೇಶದ ರಾಜಕೀಯದ ಒಳಹೊರಗನ್ನು ಬಲ್ಲವರು ಆಡುವ ಮಾತು. ಈ ಕ್ಷೇತ್ರಗಳಲ್ಲಿ ಒಂದೋ ಬಿಎಸ್ಪಿ ಗೆಲ್ಲಬೇಕು ಇಲ್ಲವೇ ಸಮಾಜವಾದಿ ಪಕ್ಷಕ್ಕೆ ಜಯ ಸಲ್ಲಬೇಕು. ಇನ್ನೂ ಒಂದಿಷ್ಟು ಅವಕಾಶವಿದ್ದರೆ ಅದು ಕಾಂಗ್ರೆಸ್​ಗೆ. ಬಿಜೆಪಿಗೆ ಇಲ್ಲೆಲ್ಲೂ ವಿಳಾಸವೇ ಇಲ್ಲ. ಹೀಗಿದ್ದೂ ಬಿಜೆಪಿ ಗೆದ್ದಿದೆ. ಮುಝುಫರ್​ನಗರ, ದೇವಬಂದ್, ಬರೈಲಿ, ಬಿಜನೂರ್, ಮೊರಾದಾಬಾದ್, ಮೇರಠ್ ಮುಂತಾದವು ಸದಾಕಾಲ ಕೋಮು ದಳ್ಳುರಿಯಲ್ಲಿ ನಲುಗುವ ಪ್ರದೇಶಗಳು. ಕೋಮು ಗಲಭೆ ಆಯಿತೆಂದಾಕ್ಷಣ ಆರೋಪ ಮೆತ್ತಿಕೊಳ್ಳುವುದು ಬಿಜೆಪಿ ಮತ್ತಿತರ ಸಂಘ ಪರಿವಾರದ ಸಂಘಟನೆಗಳಿಗೆ. ಹಾಗೆ ನೋಡಿದರೆ ಅಲ್ಲೆಲ್ಲೂ ಬಿಜೆಪಿಗೆ ಸ್ಥಾನವಲ್ಲ, ಠೇವಣಿಯೂ ಬರಬಾರದು. ‘ಕೇಂದ್ರ ಸರ್ಕಾರದ ನೋಟು ರದ್ದತಿಯೊಂದೇ ಬಿಜೆಪಿ ಸೋಲಿಗೆ ಸಾಕು’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಷರಾ ಬರೆದಿದ್ದರು. ನೋಟು ರದ್ದತಿಯಾಗಲೀ, ಕೋಮು ಆರೋಪವಾಗಲೀ ಮುಸ್ಲಿಂ ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಮಹಿಳಾ ಮತದಾರರನ್ನು ಚಂಚಲಗೊಳಿಸಲಿಲ್ಲ.

403 ಸ್ಥಾನಗಳ ಪೈಕಿ 85 ಮೀಸಲು ಕ್ಷೇತ್ರ. ಈ ಪೈಕಿ 75 ಸ್ಥಾನದಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಗೆದ್ದಿವೆ. ಮನುವಾದಿಗಳ ವಿರುದ್ಧ ದಲಿತರನ್ನೂ ಹಿಂದುಳಿದವರನ್ನೂ ಮುಸ್ಲಿಮರನ್ನೂ ಸಂಘಟಿಸುವ ಕೆಲಸದಲ್ಲಿ ಒಂದಿಷ್ಟು ಜಯ ಕಂಡಿದ್ದ ಮಾಯಾವತಿ, ಈ 85 ಮೀಸಲು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿದ್ದು ಎರಡರಲ್ಲಿ ಮಾತ್ರ. ಆಡಳಿತ-ವಿರೋಧಿ ಮನಃಸ್ಥಿತಿ ಮತದಾರರಲ್ಲಿದ್ದರೆ ಅದು ಐದು ವರ್ಷ ಅಧಿಕಾರದಲಿದ್ದ ಸಮಾಜವಾದಿ ಪಕ್ಷದ ವಿರುದ್ಧ ಇರಬೇಕೇ ಹೊರತೂ ಬಿಎಸ್ಪಿ ವಿರುದ್ಧ ಅಲ್ಲ. ದೇಶದ ದಲಿತರ ಆಶಾಕಿರಣ ಎಂದು ಬಿಂಬಿತರಾಗಿದ್ದ ಮಾಯಾವತಿಯವರನ್ನು ರಾಜ್ಯದಲ್ಲಿ ಪ್ರತಿಶತ 21ರಷ್ಟಿರುವ ದಲಿತರೇ ತಿರಸ್ಕರಿಸಿದರೇಕೆ? ತಾವು ಓಲೈಸಿದ ಜನರ ಮನಸನ್ನೇ ಗೆಲ್ಲುವುದು ಮಾಯಾವತಿಯವರಿಗೆ ಯಾಕೆ ಸಾಧ್ಯವಾಗಲಿಲ್ಲ?

ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ರಾಜಕೀಯದಲ್ಲೇ ತೇಲಿದ ಸಮಾಜವಾದಿ ಪಕ್ಷಕ್ಕೂ, ಅದರ ಗೆಣೆಕಾರ ಕಾಂಗ್ರೆಸ್​ಗೂ, ಈ ಎರಡು ಪಕ್ಷಗಳ ವಿರುದ್ಧ ಸೆಣೆಸುತ್ತಲೇ ಕ್ರಮೇಣ ಅಂಬೇಡ್ಕರ್ ಪ್ರತಿಪಾದಿಸಿದ ರಾಜಕೀಯ ಸಿದ್ಧಾಂತವನ್ನು ನೀರಸಗೊಳಿಸುತ್ತಾ ದಲಿತ ಹಾಗೂ ಮುಸ್ಲಿಮರಿಗೆ ನಾವಲ್ಲದೆ ಬೇರೆ ಯಾರೆಂಬ ಭಾವನೆಯಲ್ಲಿ ಮೈಮರೆತ ಬಿಎಸ್​ಪಿಗೂ ಉತ್ತರ ಪ್ರದೇಶ ಚುನಾವಣೆ ಮರೆಯಲಾಗದ, ಮರೆಯಬಾರದ ಪಾಠ ಕಲಿಸಿತು.

ಆದ್ದರಿಂದ ಹಾಲಿ ಪರಿಸ್ಥಿತಿಯಲ್ಲಿ ಹೆಸರಿಗಾದರೂ ಜಾತ್ಯಾತೀತವೆನಿಸಿಕೊಂಡಿರುವ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರುವುದರ ಬದಲಿಗೆ ನಮ್ಮ ರಾಜಕೀಯ ಅಸ್ಮಿತೆಗೆ ಪರ್ಯಾಯ ದಾರಿಗಳನ್ನು ಹುಡುಕಿಕೊಳ್ಳುವತ್ತ ಗಮನ ಹರಿಸಬೇಕು. ಗಂಭೀರವಾಗಿ ಕುಳಿತು ಮೈತ್ರಿ, ಐಕ್ಯತೆ ಮತ್ತು ಪ್ರಾತಿನಿಧಿತ್ವದ ಕೂಗಿಗೆ ಪರಸ್ಪರ ಧ್ವನಿಗೂಡಿಸಿ ಬೂತ್ ಮಟ್ಟದಲ್ಲಿ ಜನರೊಂದಿಗೆ ಬೆರೆತು ಕೆಲಸ ಮಾಡಬೇಕಾದ ಕಾಲಕ್ಕೆ ಪರಸ್ಪರ ಕಾಲೆಳೆಯುತ್ತಾ, ಕಾಲೆಳೆಸಿಕೊಳ್ಳುತ್ತಾ ಕಾಲ ಕಳೆದು ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳು ಬಾಕಿಯಿರುವಾಗ ಜಾತ್ಯಾತೀತ ಮತಗಳ ಧೃವೀಕರಣಕ್ಕೆ ಪೆಟ್ಟು ಕೊಡುವಂಥ ದುಸ್ಸಾಹಸಕ್ಕಿಳಿಯಬಾರದು. ‘ಅಸ್ಮಿತೆ’ಯ ವಿಷಯದಲ್ಲಿ ಅತಿಯಾಗಿ ಭಾವೋದ್ರೇಕಗೊಳ್ಳುವ ಮುಸ್ಲಿಮರನ್ನು ತಾವು ಕಾಲು ನೆನೆಸಲೂ ಹಿಂದೆ ಮುಂದೆ ನೋಡುವ ನೀರಿನೊಳಕ್ಕೆ ಇಳಿಸಿ ಆಳ ನೋಡಲು ಅತ್ಯುತ್ಸಾಹ ತೋರುವ ಹಿತೈಷಿಗಳ ಮಾತುಗಳನ್ನು ವಿವೇಚನೆಯಿಂದ ಎದೆಗೆ ಹಾಕಿಕೊಳ್ಳಬೇಕು.

ಇದರ ಜೊತೆಗೆ ಬಹು ಮುಖ್ಯವಾಗಿ ಜನ ತಮಗಲ್ಲದೆ ಮತ್ತೆ ಯಾರಿಗೆ ಓಟು ಹಾಕುತ್ತಾರೆಂಬ ದುರಹಂಕಾರಿ ಭ್ರಮೆಯನ್ನು ಕಾಂಗ್ರೆಸ್ ಪಕ್ಷ ಕೂಡ ನಿವಾರಿಸಿಕೊಂಡು ಮುಸ್ಲಿಂ-ದಲಿತ ಅಸ್ಮಿತೆಯ ರಾಜಕಾರಣದ ಕೂಗನ್ನು ತೆರೆದ ಕಿವಿಗಳಿಂದ ಕೇಳಿಸಿಕೊಳ್ಳುವುದೇ ಅಲ್ಲದೆ ಹೃದಯಾಂತರಾಳಕ್ಕೆ ಇಳಿಸಿಕೊಂಡು ಋಣ ಸಂದಾಯಕ್ಕೆ ಮುಂದಾಗಲಿ. ಯಾವ ಕಾರಣಕ್ಕೂ ಕರ್ನಾಟಕ ಮತೀಯ ದ್ವೇಷಿಗಳ ರಾಜಕೀಯಕ್ಕೆ ಬಲಿಯಾಗದಿರಲಿ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸಿದ್ದರಾಮಯ್ಯ ಎಂಬ ರಾವಣನ ಅವತಾರ ಮೋದಿ, ಅಮಿತ್ ಷಾ ರಿಂದ ಧ್ವಂಸವಾಗಲಿದೆ!: ಪ್ರತಾಪ್ ಸಿಂಹ

ಮುಂದಿನ ಸುದ್ದಿ »

ಎಸ್‍ಡಿಪಿಐ ಸರ್ವಧರ್ಮಿಯರ ಪಕ್ಷ, ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ!: ಅಬ್ದುಲ್ ರಹ್ಮಾನ್ ಮಲ್ಪೆ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×