Friday January 29 2016

Follow on us:

Contact Us

ಉಡುಪಿ: ವರ್ತಮಾನಕ್ಕೆ ಸ್ಪಂದಿಸಿದ ಯಕ್ಷಗಾನದ ಅಭಿಮನ್ಯು

ನ್ಯೂಸ್ ಕನ್ನಡ ವರದಿ – ಉಡುಪಿ: ಬನ್ನಂಜೆ ಸಂಜೀವ ಸುವರ್ಣ ಯಕ್ಷಗಾನದಲ್ಲಿಂದು ಅದ್ವಿತೀಯ ಗುರು. ಉಡುಪಿ ಯಕ್ಷಗಾನ ಕೇಂದ್ರದ ಕ್ರಿಯಾ ವರಿಷ್ಟರು. ಇವರು ಈಚೆಗೆ ದಿಲ್ಲಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ (ರಾಷ್ಟ್ರೀಯ ನಾಟ್ಯ ವಿದ್ಯಾಲಯ ನವದೆಹಲಿ)ಇಲ್ಲಿಯ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆಂದು ಕೇಳಿದ್ದೆ. ನನಗೇನೂ ಆಶ್ಚರ್ಯವಾಗಿರಲಿಲ್ಲ. ವಾರದ ಯಾವುದೇ ದಿನ, ದಿನದ ಯಾವುದೇ ಸಮಯದಲ್ಲೂ ಯಕ್ಷಗಾನ ಬಯಸಿ ಬರುವ ಜೀವದ ‘ಕುಲ, ಶೀಲ, ವಿತ್ತ, ವಿದ್ಯಾ, ವಯೋ, ವಿಕ್ರಮಂಗಳನ್ನು ನೋಡುತ್ತಿರದೆ’ ತನಗೊಲಿದ ಯಕ್ಷ-ಚಿರ-ಕನ್ನಿಕೆಯನ್ನು ಧಾರೆಯೆರೆವ ಜೀವ ಈ ಸಂಜೀವ. ಅವರು ಮೊನ್ನೆ ಚರವಾಣಿಸಿ’ಗುರುವಾರ ಮತ್ತು ಶನಿವಾರ ಹೊಸ ನಮೂನೆಯ ‘ಅಭಿಮನ್ಯು ವಧೆ’ ಪ್ರದರ್ಶನವಿದೆ ಎಂದದ್ದೇ ನನಗೆ ಸಾಕಾಯ್ತು. ಇದಕ್ಕಾಗಿ ಸಂಜೀವರು ದಿಲ್ಲಿಗೆ ಅಸಂಖ್ಯ ಪ್ರಯಾಣ ಕೈಗೊಂಡಂತಿತ್ತು.

ಸಾಲದೆಂದು, ಕೊನೆಯ ಸ್ಪರ್ಶಕ್ಕಾಗಿ ಇಡೀ ತಂಡವನ್ನು ಉಡುಪಿಗೇ ಕರೆಸಿಕೊಂಡಿದ್ದರು. ಉಡುಪಿ ಯಕ್ಷಗಾನ ಕೇಂದ್ರ ಬರಿಯ ಯಕ್ಷಗಾನಕ್ಕಲ್ಲ, ಆಧುನಿಕ ಗುರುಕುಲವೇ ಆಗಿದೆ. ಊಟ, ವಸತಿಯೊಡನೆ ಲೋಕವಿದ್ಯೆ ಹಾಗೂ ಯಕ್ಷವಿದ್ಯೆಯನ್ನೂ ಇಲ್ಲಿ ಕೊಡಲಾಗುತ್ತಿದೆ. ಉಡುಪಿಯಲ್ಲೂ ಎನ್.ಎಸ್.ಡಿ ತಂಡವನ್ನು ಸಂಜೀವರು ದಿನದ ಹದಿಮೂರು ಗಂಟೆ ದುಡಿಸಿದರೂ ತಾವು ದಣಿಯದೇ ಪ್ರದರ್ಶನದ ಆಯೋಜನೆ ನಡೆಸಿದ್ದರು. ಅದು, ದಿನಾಂಕ 21.01.2016 ರಂದು ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ಸುಮಾರು ಎರಡೂವರೆ ಗಂಟೆಯ ಪ್ರದರ್ಶನ. ಪ್ರದರ್ಶನದ ಕೊನೆಯಲ್ಲಿ ‘ಸಾರ್ಥಕ, ಅದ್ಭುತ, ಇಂಥದ್ದು ಈವರೆಗೆ ನೋಡಿಲ್ಲ’ ಎನ್ನುವ ಅನುಭವವನ್ನು ಪ್ರೇಕ್ಷಕರಲ್ಲಿ ಮೂಡಿಸಿತು.

ಯಕ್ಷಗಾನಕ್ಕೆ ರಾತ್ರಿಯೇ ಸೂಕ್ತ. ಅದು ನೆಳಲು ಬೆಳಕುಗಳ ಆಟ ಎನ್ನುವ ಕಲ್ಪನೆಯ ಮುನ್ನೆಲೆಯಲ್ಲಿ ಮೊದಲು ನನಗೆ ಕಂಡ ಒಂದು ವೈಫಲ್ಯವನ್ನು ಹೇಳಿಬಿಡುತ್ತೇನೆ. ಈ ಪ್ರಯೋಗ ನಾಟಕ ಶಾಲೆಯ ಪರಿಣತರ ಸಂಗದ್ದೂ ಹೌದು. ಸಹಜವಾಗಿ ಅವರಿಂದ ಪ್ರದರ್ಶನಕ್ಕೆ ವಿಶಿಷ್ಟ ಬೆಳಕಿನ ಸಂಯೋಜನೆಯೂ ಆಗಿತ್ತು. ಆದರೆ ಯಕ್ಷಗಾನದ ಆಹಾರ್ಯವನ್ನು ಗಮನದಲ್ಲಿಟ್ಟುಕೊಂಡು ಕೇವಲ ನಾಟಕದ ಗ್ರಹಿಕೆಯಲ್ಲಿ ಪ್ರಯೋಗಿಸಿದ್ದು ಅಷ್ಟಾಗಿ ಸರಿ ಹೊಂದಲಿಲ್ಲ ಎಂದೇ ಅನ್ನಿಸಿತು.

yaksh2

 

ಯಕ್ಷಗಾನದ ಜನಪದ ಹಿನ್ನಲೆಯನ್ನು ಯಾರೂ ಪೂರ್ಣವಾಗಿ ಅಲ್ಲಗಳೆಯರು. ಅದು ಸಹಜವಾಗಿ ಮಂಕುದೀಪದಲ್ಲೂ (ದೀವಟಿಗೆ ಅನ್ನಿ) ಉಜ್ವಲ ರಾಗರಂಗುಗಳನ್ನು ಉದ್ದೀಪಿಸುವ ಪ್ರಕಾರ. ಅದಕ್ಕೆ ಇಲ್ಲಿ ಅಳವಡಿಸಿದ ದೀಪಗಳು ತುಸು ಅದ್ದೂರಿಯವೆನ್ನಿಸಿ ಕಣ್ಣು ಕೋರೈಸುತ್ತಿತ್ತು. ರಸ ಪ್ರಚೋದಕವಾಗಬೇಕಾದ ಬಣ್ಣಗಳು ಬೆಳ್ಕರಿಸುವುದೂ ಇತ್ತು. (ಇದನ್ನು ನಾನು ಸೆರೆಹಿಡಿದ ಕೆಲವು ಛಾಯಾ ಹಾಗೂ ಚಲಚಿತ್ರಗಳು ಹೆಚ್ಚು ಸಮರ್ಥವಾಗಿ ಉದಾಹರಿಸುತ್ತವೇನೋ)

ಕೋಡಂಗಿ, ಬಾಲಗೋಪಾಲರ ಕಲಾಪಗಳಿಗೆ ತಾಳ ಹಿಡಿದು ಯಕ್ಷ-ಗಾಯನ ನಡೆಸಿದ್ದು ಎನ್.ಎಸ್.ಡಿಯ ಓರ್ವ ವಿದ್ಯಾರ್ಥಿನಿ (ಆಕೆ ಸ್ತ್ರೀವೇಷದಲ್ಲೇ ಇದ್ದಳು). ಆ ಎರಡು ಮತ್ತು ಇಡೀ ಪ್ರಸಂಗದ ಪದ್ಯ ಹಾಗೂ ಸಭಾವಂದನವೂ ಸೇರಿದಂತೆ ಸಂಭಾಷಣೆಯ ಗದ್ಯವೆಲ್ಲ ಚೊಕ್ಕ ಹಿಂದಿಯವೇ ಆಗಿದ್ದುವು. ಅನಂತರ ಭಾಗವತಿಕೆ ನಡೆಸಿದ ವಿದ್ಯಾರ್ಥಿನಿ ಇನ್ನೊಬ್ಬಾಕೆಯೊಡನೆ ಸೇರಿದಂತೆ ಬಂದ ‘ಚಂದಭಾಮ’ ಮಾತ್ರ ಕನ್ನಡೇತರರಿಗೆ ಯಕ್ಷಗಾನದ ಮೂಲ ಭಾಷೆಯನ್ನು ನೆನಪಿಸುವ ಮಾದರಿಯಂತೆ ಕನ್ನಡದಲ್ಲೇ ಇತ್ತು. ಸಾಂಪ್ರದಾಯಿಕ ಪೂರ್ವರಂಗಗಳಲ್ಲಿ ಕಲಾವಿದರ ಅಪರಿಣತಿ ಜನಪದದ ಸೋಗಿನಲ್ಲಿ ಮುಖ ಮುಚ್ಚಿಕೊಳ್ಳುವುದಿದೆ. ಆದರೆ ಇಲ್ಲಿ ಅವುಗಳ ಮುಖಮಾರ್ಜನ ನಡೆಸಿ, ಗುರುಬಲದಲ್ಲಿ ನಿಜ ಪ್ರಸಂಗದ ನಡೆ, ನುಡಿ ಮತ್ತು ಗಾಯನದ ಮಾದರಿಯೇ ಆಗಿ ಕಂಗೊಳಿಸಿತ್ತು.

ಪ್ರಸಂಗದ ನಡೆಯಲ್ಲಿ ಗಾಯನ ಮರುಕಳಿಸುತ್ತಾ ಭಜನೆಯಾಗಲಿಲ್ಲ. ಕಥನ ಭಾಗದಲ್ಲಿ ಗಾಯನ, ಸಾಹಿತ್ಯ ಸ್ಫುಟವಾಗುವಂತೆ ಸ್ಪಷ್ಟ ಮತ್ತು ವಿರಳವಾಗಿರುತ್ತಿದ್ದುವು. (ಭಾಷೆ ಹಿಂದಿಯಾದರೂ) ಮೂಲ ಯಕ್ಷ-ಭಾವಪೋಷಕ ಮಟ್ಟುಗಳಲ್ಲೇ ವಿಳಂಬಿತ ಗತಿಯಲ್ಲಿ ವಿಸ್ತರಿಸುತ್ತಿದ್ದುದರಿಂದ ಅಭಿನಯದ ಕಲಾಕುಸುಮ ಕಮನೀಯವಾಗಿ ಅರಳುತ್ತಿತ್ತು. ಹಾಗೆ ಅಮೂರ್ತಕ್ಕೆ ಎಟುಕದ ಕಥಾ ನಿರೂಪಣೆಯ ಜವಾಬ್ದಾರಿಯನ್ನಷ್ಟೇ ಗದ್ಯ ಸಂಭಾಷಣೆಗಳು ನಿರ್ವಹಿಸುತ್ತಿದ್ದುವು. ಇಲ್ಲಿ ಮೂಲ ಬಯಲಾಟಗಳಲ್ಲಿ ‘ಆಶು ಸಾಹಿತ್ಯ’ದ ಹೆಸರಿನಲ್ಲಿ ಎಷ್ಟೋ ಬಾರಿ ವಿಜೃಂಭಿಸುವ ಅಸಂಬದ್ಧಗಳಿಗೆ ಅವಕಾಶವೇ ಇರಲಿಲ್ಲ. ಮಾತಿನ ಸಾಹಿತ್ಯ ಅನ್ಯರದ್ದಿರಬಹುದು, ಆದರೆ ನಾಟಕ ವಿದ್ಯಾರ್ಥಿಗಳೇ ಆದ್ದರಿಂದ ಆವೇಶ ಪಾತ್ರದವೇ ಆಗುವಂತೆ ಒಪ್ಪಿಸುತ್ತಿದ್ದದ್ದು ಹೃದ್ಯವೇ ಆಗುತ್ತಿತ್ತು.

ರಂಗದ ಎಡ ಪಾರ್ಶ್ವದ ನೆಲದಲ್ಲಿ ಸಾಂಪ್ರದಾಯಿಕ ಶಿಸ್ತಿನ ಹಿಮ್ಮೇಳ ಕುಳಿತಿತ್ತು. ಇವರಲ್ಲಿ ಪರಂಪರೆಯನ್ನು ಮೀರಿದ ಯಾವುದೇ ಹೆಚ್ಚಿನ ವಾದ್ಯಗಳಿರಲಿಲ್ಲ. ಭಾಗವತರು ಮಾತ್ರ ಇಬ್ಬರಿದ್ದರು. ಆದರೆ ವೃತ್ತಿಪರ ಮೇಳಗಳು ಪ್ರಸ್ತುತಪಡಿಸುವಂತೆ ಎಲ್ಲೂ ದ್ವಂದ್ವಗಳಿಲ್ಲದೆ, ರಸಪೋಷಕ ಎತ್ತುಗಡೆ, ಮುಂದುವರಿಕೆ ಮಾತ್ರ ಕಾಣುತ್ತಿತ್ತು.

ನರ್ತನ ಮತ್ತು ರಂಗಚಲನೆಯ ವೈವಿಧ್ಯಮಯ ಪ್ರದರ್ಶನಾಂಗಣದಂತೇ ಇಡಿಯ ಪ್ರದರ್ಶನ ನಡೆಯಿತು. ಪ್ರಾರ್ಥನಾಪದ್ಯ, ಚೌಕಿಪೂಜೆ, ಶಿಸ್ತುಬದ್ಧ ನಾಟಕರಂಗಗಳು ಅಳವಡಿಸಿಕೊಂಡಿರುವ ನಿಯತಾಂತರದ ಮೂರು ಗಂಟೆಗಳಂತೇ ಮೂರು ಕೇಳಿ ಬಡಿತಗಳು ನೇರ ರಂಗ ಕ್ರಿಯೆಯನ್ನು ತೋರಲಿಲ್ಲವಾದರೂ ಪ್ರೇಕ್ಷಕ ಮನೋಭೂಮಿಕೆಯನ್ನು ಯಶಸ್ವಿಯಾಗಿ ಸಜ್ಜುಗೊಳಿಸಿದ್ದುವು. ಇದರ ಮುಂದುವರಿಕೆಯಾಗಿಯೇ ವೇಷಧಾರಿಗಳ ಪ್ರವೇಶ, ಕಲಾಪ ಹಾಗೂ ನಿರ್ಗಮನಗಳು ರೂಪಿತವಾಗಿದ್ದುವು. ಕೇವಲ ತೆರೆ ಹಿಡಿಯುವವರಿಗೂ ಇಲ್ಲಿ ಸಂದರ್ಭೋಚಿತವಾಗಿ ಲಘು ನರ್ತನ, ಖಚಿತ ನಡೆಗಳು ಇದ್ದದ್ದು ಗಮನಾರ್ಹ.

ಇಷ್ಟು ವಿವರಗಳ ಚಿಂತನೆಯ ಫಲವಾಗಿಯೇ ಪ್ರತಿ ಪಾತ್ರ ಅಥವಾ ಸಮೂಹದ ರಂಗಪ್ರವೇಶ, ಅವು ಕಥಾ ನಿರೂಪಣೆಯ ಅವಿಭಾಜ್ಯ ಅಂಗವಾಗಿ ತೋರ್ಪಡಿಸಿದ ರಂಗವಿನ್ಯಾಸಗಳು ಮತ್ತು ಪೂರ್ಣ ಕಣ್ಮರೆಯಾಗುವವರೆಗೂ ನಿರ್ಗಮನ ನಡೆಗಳು ಪ್ರತಿ ಬಾರಿಯೂ ವಿಶಿಷ್ಟವಾಗಿರುತ್ತಿದ್ದುವು. ಯಕ್ಷ ಇತಿಹಾಸದ ಪುಟ ಮುಗುಚದವರು ಕ್ಷಣಿಕ ರೋಮಾಂಚನದಲ್ಲಿ ಈ ಕುರಿತು ಗುರು ಸಂಜೀವ ಸುವರ್ಣರನ್ನು ಪ್ರಶಂಸೆಯ ಕೊಳದಲ್ಲಿ ಮುಳುಗಿಸುವುದಿದೆ. ಆದರೆ ‘ಇದನ್ನು ವೃತ್ತಿ ಮೇಳದ ಕಲಾವಿದರು ನೋಡಬೇಕು ಸಾರ್. ಹಿಂದಿನವರು ರೂಢಿಸಿದ್ದ ಈ ಕಲಾರತ್ನಗಳು ಅಗ್ಗದ ಜನಪ್ರಿಯತೆಯ ಓಟದಲ್ಲಿ ಕಳೆದುಹೋಗಿದೆ. ನಾನು ಹೆಕ್ಕಿ ತಂದು ಕೊಳೆ ತೊಳೆದು ಯುಕ್ತಸ್ಥಾನಗಳಲ್ಲಿ ಅಳವಡಿಸಿದ್ದು ಮಾತ್ರ’ ಎನ್ನುತ್ತಾರೆ. ವಾಸ್ತವವಾಗಿ ಈ ಕೆಲಸಕ್ಕೆ ಸಂಜೀವರನ್ನು ಪ್ರಶಂಸಿಸಬೇಕು; ಮುಳುಗಿಸುವುದಿದ್ದರೆ ಬರಿಯ ಕೊಳ ಸಾಲದು, ಸಾಗರವೂ ಕಡಿಮೆಯೇ.

ಈ ಹಲವು ಭಾವಗಳ ಶೃಂಗಮೇಳದಲ್ಲಿ ಪ್ರತಿ ಸನ್ನಿವೇಶದ ಕೊನೆಯಲ್ಲೂ ಚದುರಿದಂತೆ ಪ್ರೇಕ್ಷಕರ ಕರತಾಡನವಿರುತ್ತದೆ. ಅದು ಪ್ರಸಂಗದ ಕೊನೆಯಲ್ಲಿ ಅಭಿಮನ್ಯುವಿನ ದಾರುಣ ವಧೆಯಾಗುವಾಗ ಉತ್ತುಂಗಕ್ಕೇರಿದ್ದು ನಿಸ್ಸಂದೇಹವಾಗಿ ಪ್ರದರ್ಶನದ ಯಶಸ್ಸಿಗೆ, ಬನ್ನಂಜೆ ಸಂಜೀವ ಸುವರ್ಣರ ಸಾಧನೆ ಅದ್ಭುತ.

– ಜಿ. ಎನ್. ಅಶೋಕ ವರ್ಧನ, ಮಂಗಳೂರು

nknpuslu

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಂಗಳೂರು: ಸೇನೆಯಲ್ಲಿ ಉದ್ಯೋಗಾವಕಾಶ; ಫೆ.17 ರಂದು ನೇಮಕಾತಿ ರ್ಯಾಲಿ

ಮುಂದಿನ ಸುದ್ದಿ »

ಉಪ್ಪಿನಂಗಡಿ: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಇಸ್ಲಾಮೀ ಆಂದೋಲನದ ವಿಜಯ ಸೂತ್ರಗಳು

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×