ಒಬ್ಬ ಡಿಕೆಶಿಯನ್ನು ಭೇಟಿಯಾಗಲು ಅತೃಪ್ತ ಶಾಸಕರೂ, ಬಿಜೆಪಿಗರೂ ಹೆದರುತ್ತಿರುವುದೇಕೆ? ಇಲ್ಲಿದೆ ಕಾರಣ!!

0
3824

ನ್ಯೂಸ್ ಕನ್ನಡ ವರದಿ: ಮಳೆ ಬಂದರೂ ಕೊಡೆ ಹಿಡಿದುಕೊಂಡೇ ಸಚಿವ ಡಿ.ಕೆ ಶಿವಕುಮಾರ್ ಅವರು ಮುಂಬೈನ ರೆನೈಸನ್ಸ್ ಹೋಟೆಲ್ ಮುಂಭಾಗ ಪಟ್ಟು ಬಿಡದೆ ಕುಳಿತಿದ್ದಾರೆ. ಅತೃಪ್ತ ಶಾಸಕರನ್ನು ಭೇಟಿಯಾಗದೇ ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯಲ್ಲ ಎಂದು ಹಠ ಹಿಡಿದಿರುವ ಡಿಕೆಶಿ, ಬೆಳಗ್ಗಿನಿಂದಲೂ ಹೋಟೆಲ್ ಮುಂಭಾಗದಿಂದ ಕದಲಿಲ್ಲ. ಹೋಟೆಲ್ ಒಳಗಡೆ ಬಿಡುವವರೆಗೂ ನಾನು ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಹೇಳಿದ್ದಾರೆ.

ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತುಕತೆ ನಡೆದಿದೆ. ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೋ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಆದರೆ ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಸುತಾರಾಂ ಒಪ್ಪಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದಾರೆ.

ಡಿಕೆಶಿ ಭೇಟಿಯಾಗಲು ಹೆದರುವುದೇಕೆ? ಬಿಜೆಪಿಗೆ ಯಾಕಿಷ್ಟು ಚಿಂತೆ?  ಯಾಕೆಂದರೆ ಡಿಕೆ ಶಿವಕುಮಾರ್ ರಾಜಕೀಯ ರಂಗದಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರು ಪಡೆದವರು. ಯಾವುದೇ ಸಮಸ್ಯೆ ಎಷ್ಟೇ ಕಷ್ಟಕರ ಸಮಸ್ಯೆ ಇದ್ದರೂ ಪರಿಹರಿಸಬಲ್ಲ, ಯಾರ ಒತ್ತಡಕ್ಕೂ ಬೆದರಿಕೆಗೂ ಜಗ್ಗದ, ಸಂಧಾನದ ಮೂಲಕ ಜಟಿಲ ಸಮಸ್ಯೆ ಪರಿಹಾರ ಮಾಡುವ ಗುಣ ಇರುವ ಎದೆಗಾರಿಕೆ ನಾಯಕ ಎಂದೇ ಹೆಸರುವಾಸಿ.

ಒಂದು ವೇಳೆ ಅವರು ಅತೃಪ್ತ ನಾಯಕರನ್ನು ಮುಖತಃ ಭೇಟಿಯಾದರೆ ಖಂಡಿತವಾಗಿಯೂ ಅವರ ಮನವೊಲಿಸಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಕರೆದುಕೊಂಡು ಹೋಗುತ್ತಾರೆ, ಬಿಜೆಪಿ ಸರಕಾರ ರಚಿಸುವ ಕನಸು ನನಸಾಗಲ್ಲ ಎಂದು ಬಲವಾಗಿ ನಂಬಿರುವ ರಾಜ್ಯ ಬಿಜೆಪಿ ನಾಯಕರು ಶತಾಯ ಗತಾಯ ಡಿಕೆಶಿ ಭೇಟಿಯಾಗಲು ಬಿಡಬಾರದು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಆದರೂ ಪಟ್ಟು ಬಿಡದ ಡಿಕೆಶಿ ಅಲ್ಲೇ ಕುರ್ಚಿಯಲ್ಲಿ ಕೂತು ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here