ನ್ಯೂಸ್ ಕನ್ನಡ ವರದಿ: ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಬೀಳಿಸಿದ ಅನರ್ಹ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್ ಪ್ರಮುಖ ನಾಯಕರ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದರು. ಆದರೆ ಅವರು ಮಾಡಿದ ದ್ರೋಹಕ್ಕೆ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಪರೇಷನ್ ಕಮಲಕ್ಕೆ ಹಾಕಿದ್ದ ಬಂಡವಾಳವನ್ನು ವಸೂಲಿ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ. ಶಾಸಕರ ಖರೀದಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಿದೆ. ಕಪ್ಪು ಹಣ ಉಪಚುನಾವಣೆಗೆ ಉಪಯೋಗಿಸಿದ್ದಾರೆ ಎಂದು ಕಿಡಿಕಾರಿದರು. ಉಪಚುನಾವಣೆ ಹಿನ್ನೆಲೆ ಪ್ರವಾಹ ಪರಿಸ್ಥಿತಿ ಕುರಿತು ಕೇಂದ್ರ ಸ್ಪಂದಿಸಿತು.
ಚುನಾವಣೆ ಬರಲಿಲ್ಲ ಅಂದಿದ್ದರೆ ಹಣ ಬಿಡುಗಡೆ ಆಗುತ್ತಿರಲಿಲ್ಲ. ಈಗ ಒಂದೊಂದು ಕ್ಷೇತ್ರದಲ್ಲಿ ಸಚಿವರು ಠಿಕಾಣಿ ಹೂಡಿದ್ಧಾರೆ. ವೋಟು ಖರೀದಿ ಮಾಡಲು ನೋಟು ಉಪಯೋಗಿಸುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.