ಇವತ್ತು ಒಂದೇ ದಿನ ರಾಜ್ಯದಲ್ಲಿ 116 ಕೊರೊನಾ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆ

0
68

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಕೊರೊನಾ ಮತ್ತೆ ಅಬ್ಬರಿಸಿದ್ದು, ಇಂದು ಒಂದೇ ದಿನ 116 ಸೋಂಕು ಪ್ರಕರಣಗಳು ಕಂಡು ಬಂದಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1578 ಕ್ಕೆ ಏರಿಕೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 6 ಪ್ರಕರಣಗಳು ಪತ್ತೆಯಾಗಿದ್ದು, ಇನ್ನುಳಿದಂತೆ ಶಿವಮೊಗ್ಗ 6, ವಿಜಯಪುರ 1, ಹಾಸನ 13, ದಕ್ಷಿಣ ಕನ್ನಡ 6, ಉಡುಪಿ 25, ಮೈಸೂರು 1, ಬಳ್ಳಾರಿ 11, ಗದಗ 2, ಉತ್ತರ ಕನ್ನಡ 9, ಬೆಳಗಾವಿ 5, ಧಾರವಾಡ 5, ತುಮಕೂರು 1, ದಾವಣಗೆರೆ 3, ಚಿಕ್ಕಬಳ್ಳಾಪುರ 2, ಮಂಡ್ಯದಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದು, ಗಮನಾರ್ಹ ಸಂಗತಿಯೆಂದರೆ ಮುಂಬೈನಿಂದ ಮಂಡ್ಯಕ್ಕೆ ಆಗಮಿಸಿದವರೇ ಸೋಂಕು ಪೀಡಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಲಾಕ್‌ ಡೌನ್‌ ಸಡಿಲಿಕೆ ಬಳಿಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂಬ ಕಳವಳಕ್ಕೆ ಕಾರಣವಾಗಿದೆ.

ಈಗಾಗಲೇ ಬಿಎಂಟಿಸಿ, ಕೆ.ಎಸ್.‌ಆರ್.‌ಟಿ.ಸಿ. ಹಾಗೂ ಖಾಸಗಿ ಬಸ್‌ ಸಂಚಾರದ ಜೊತೆಗೆ ಟ್ಯಾಕ್ಸಿ-ಆಟೋ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಸೇರಿದಂತೆ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಕೆಲವರು ಸರಿಯಾಗಿ ಪಾಲಿಸುತ್ತಿಲ್ಲವೆಂಬ ಸಂಗತಿ ಬಹಿರಂಗವಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

ಮೇ 25 ರಿಂದ ದೇಶಿಯ ವಿಮಾನ ಸಂಚಾರ ಆರಂಭವಾಗಲಿದ್ದು, ಜೂನ್‌ 1 ರಿಂದ 200 ರೈಲುಗಳ ಓಡಾಟಕ್ಕೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಕೊರೊನಾ ಮತ್ತಷ್ಟು ವ್ಯಾಪಿಸಲಿದೆ ಎನ್ನಲಾಗುತ್ತಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಬೇಕಾಗಿರುವುದು ಅನಿವಾರ್ಯವಾಗಿದೆ. ಒಂದೊಮ್ಮೆ ನಿರ್ಲಕ್ಷ್ಯ ವಹಿಸಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ.

LEAVE A REPLY

Please enter your comment!
Please enter your name here