ಉಯಿಘರ್ ಮುಸ್ಲಿಮರ ಮೇಲಿನ ದಾಳಿಯ ಕುರಿತು ಮೌನ ಮುರಿಯಿರಿ: ಪಾಪ್ಯುಲರ್ ಫ್ರಂಟ್

0
202

ನ್ಯೂಸ್ ಕನ್ನಡ ವರದಿ(15.5.19): ಚೀನಾದೊಳಗೆ ತುರ್ಕಿಸ್ತಾನಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಚೀನಾ ಸರಕಾರದಿಂದ ನಡೆಯುತ್ತಿರುವ ಬಹಿರಂಗ ಅನ್ಯಾಯ ಸೇರಿದಂತೆ ಮಾನವ ಹಕ್ಕು ಉಲ್ಲಂಘನೆಯ ಕುರಿತಂತೆ ತಮ್ಮ ಮೌನ ಮುರಿಯಬೇಕೆಂದು ಅಂತಾರಾಷ್ಟ್ರೀಯ ‌ನಾಯಕರು, ಮಾನವ ಹಕ್ಕು ಸಂಘಟನೆಗಳು ಮತ್ತು ‌ಜಾಗತಿಕ ಮುಸ್ಲಿಮ್ ‌ಸಮುದಾಯದೊಡನೆ ಪಾಪ್ಯುಲರ್ ಫ್ರಂಟ್ ಅಫ್ ‌ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಇ. ಅಬೂಬಕ್ಕರ್ ಮನವಿ ಮಾಡಿದ್ದಾರೆ.

ಮತೀಯ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ, ಅದರಲ್ಲೂ ಪೂರ್ವ ತುರ್ಕಿಸ್ತಾನದ ಉಯಿಘರ್ ಮುಸ್ಲಿಮರ ಜನಾಂಗೀಯ ಶುದ್ಧೀಕರಣ ನಡೆಸುವ ಪ್ರಯತ್ನವನ್ನು ಚೀನಾ ಸರಕಾರವು ವ್ಯವಸ್ಥಿತವಾಗಿ ನಡೆಸುತ್ತಿರುವ ಕುರಿತು ಚೀನಾದಿಂದ ದೊರಕುತ್ತಿರುವ ವರದಿಗಳು ಬೆಚ್ಚಿಬೀಳಿಸುವಂಥದ್ದಾಗಿದೆ. ಇಲ್ಲಿ ಜನರು ಸ್ವಾತಂತ್ರ್ಯವಿಲ್ಲದೆ, ಹಕ್ಕು ನಿರಾಕರಿಸಲ್ಪಟ್ಟು ಜೀವಿಸಲು ನಿರ್ಬಂಧಿತರಾಗಿದ್ದು, ಇಸ್ಲಾಮಿನ ಕನಿಷ್ಠ ಆಚರಣೆಗಳಾದ ಸಲಾಮ್ ಹೇಳುವುದು, ಮಾತೃ ಭಾಷೆಯಲ್ಲಿ ಮಾತನಾಡುವುದು ಮತ್ತು ಮದ್ಯ ನಿರಾಕರಿಸುವುದು ಕಂಡು ಬಂದಲ್ಲಿ ಅವರನ್ನು ಕಾರಾಗೃಹ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ.

ವರದಿಗಳ ಪ್ರಕಾರ, ಸುಮಾರು 20 ಲಕ್ಷ ಮಂದಿಯನ್ನು ಇಂತಹ ಶಿಬಿರಗಳಿಗೆ ಕಳುಹಿಸಲಾಗಿದ್ದು, ಇದು ನಾಝಿಗಳ ಜನಾಂಗೀಯ ಶುದ್ಧೀಕರಣದ ಶಿಬಿರಗಳನ್ನು ನೆನಪಿಸುವಂತಿದೆ. ವೃತ್ತಿಪರ ತರಬೇತಿ ಕೇಂದ್ರ ಎಂದು ಹೇಳಿಕೊಳ್ಳುತ್ತಿರುವ ಚೀನಾ ಸರಕಾರದ ಈ ಕೇಂದ್ರಗಳಲ್ಲಿ ಬಂಧನಕ್ಕೊಳಗಾದವರು ಅಮಾನವೀಯ ಚಿತ್ರಹಿಂಸೆಗೆ ಒಳಗಾಗುತ್ತಾರೆ ಮತ್ತು ಅವರಿಗೆ ಕ್ರೂರ ಉಪದೇಶಗಳನ್ನು ನೀಡಲಾಗುತ್ತದೆ. ಆದರೆ ಶಿಬಿರಾರ್ಥಿಗಳ ಬಗ್ಗೆ ಮಾಧ್ಯಮಗಳಿಗೆ ಅಥವಾ ಅವರ ಕುಟುಂಬಸ್ಥರಿಗೆ ಯಾವುದೇ ಮಾಹಿತಿಗಳನ್ನು ನೀಡಲಾಗುವುದಿಲ್ಲ ಮತ್ತು ಬಂಧಿತರು ಮೃತರಾದರೆ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಕೂಡ ನಿಷೇಧಿಸಲಾಗಿದೆ.

ಚೀನಾದ ಒತ್ತಡಕ್ಕೆ ಒಳಗಾಗಿರುವ ನೆರೆಯ ಮುಸ್ಲಿಂ ರಾಷ್ಟ್ರಗಳ ನಾಯಕರು ಸೇರಿದಂತೆ ವಿಶ್ವ ನಾಯಕರು ಪ್ರಸಕ್ತ ವಿಷಯದ ಬಗ್ಗೆ ಮೌನವಾಗಿದ್ದಾರೆ. ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಕ್ರೌರ್ಯ ವಿಚಾರದಲ್ಲಿ ಚೀನಾದ ವಿರುದ್ಧ ಯಾವುದೇ ನಿರ್ಬಂಧಗಳನ್ನು ವಿಧಿಸಲು ಅಮೆರಿಕ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರು ನಿರಾಸಕ್ತಿ ತೋರುತ್ತಿದ್ದಾರೆ. ಇತರ ದೇಶಗಳ ಮುಸ್ಲಿಮರ ಸೌಭಾಗ್ಯಗಳ ಕುರಿತು ಸದಾ ಮಾತನಾಡುವ ಪಾಕಿಸ್ತಾನ ಕೂಡ ಈ ವಿಚಾರದಲ್ಲಿ ಚೀನಾ ಸರಕಾರಕ್ಕೆ ಒತ್ತಡ ಹೇರದೆ ಮೌನಪರಾಧ ತಾಳಿರುವುದು ವಿಪರ್ಯಾಸವಾಗಿದೆ.

ಮಾನವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಜಗತ್ತಿನ ಪ್ರತಿಯೊಬ್ಬರೂ ಚೀನಾದ ಸರಕಾರವು ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಸುತ್ತಿರುವ ಅಮಾನವೀಯ ಕ್ರೌರ್ಯವನ್ನು ಖಂಡಿಸಬೇಕು ಮತ್ತು ಚೀನಾ ಸರಕಾರವು ದೌರ್ಜನ್ಯವನ್ನು ನಿಲ್ಲಿಸುವಂತೆ ಒತ್ತಡ ಹೇರಲು ತಮ್ಮ ತಮ್ಮ ದೇಶದ ಸರಕಾರಗಳನ್ನು ಒತ್ತಾಯಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ವಿಶ್ವದ ನಾಗರಿಕರಿಗೆ ಕರೆ ನೀಡುತ್ತದೆ. ಇದೇ ವೇಳೆ ಭಾರತದಲ್ಲಿ ರಾಜಕೀಯ ಎಡಪಕ್ಷಗಳು ಮತ್ತು ನಾಗರಿಕ ಸ್ವಾತಂತ್ರ್ಯದ ಹೋರಾಟಗಾರರು ಎಂದು ಕರೆಸಿಕೊಳ್ಳುವವರು ಚೀನಾ ಸರಕಾರದ ಕ್ರೌರ್ಯ ಬಗ್ಗೆ ತನಗಿರುವ ಮೌನವನ್ನು ಪಾಪ್ಯುಲರ್ ಫ್ರಂಟ್ ಚೆಯರ್ ಮ್ಯಾನ್ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here