ಚೀನಾ-ಅಮೇರಿಕಾ ನಡುವಿನ ಆರ್ಥಿಕ ಸಮರದಲ್ಲಿ ಪೆಟ್ಟು ತಿಂದಿದ್ದು ಭಾರತ.?

0
44

ನ್ಯೂಸ್ ಕನ್ನಡ ವರದಿ: ಇವತ್ತು ಟೈಂಸ್ ನೌ ಟೆಲಿವಿಷನ್ ನಲ್ಲಿ ಇಂಗ್ಲೆಂಡ್ ಸರ್ಕಾರ ಚೀನಾದ ಹುವಾಯ್ ಸಂಸ್ಥೆಯನ್ನು ಬ್ಯಾನ್ ಮಾಡಿರುವ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.‌ ಚೀನಾದ ವಿರುದ್ಧ ಭಾರತ ಶುರು ಮಾಡಿದ ಬ್ಯಾನ್ (59 ಆಪ್ ನಿಷೇಧ) ಅನುಸರಿಸಿ ಇತರ ರಾಷ್ಟ್ರಗಳೂ ಅದೇ ಕೆಲಸ ಮಾಡುತ್ತಿವೆ. ಚೀನಾ ವಿರುದ್ಧದ ಆರ್ಥಿಕ ಸಮರವನ್ನು ಭಾರತ ಲೀಡ್ ಮಾಡುತ್ತಿದೆ ಎಂದು ಆಂಕರ್, ರಿಪೋರ್ಟರ್ ಹೆಮ್ಮೆಯಿಂದ ಅರಚುತ್ತಿದ್ದರು. ತಮಾಶೆ ಎಂದರೆ ಇಂಡಿಯಾ-ಚೀನಾ ಜಗಳ ಶುರುವಾಗುವುದಕ್ಕೆ ಬಹಳ ಮುನ್ನವೇ ಅಮೆರಿಕಾ ಹುವಾಯ್ ಸಂಸ್ಥೆಯನ್ನು ಬ್ಯಾನ್ ಮಾಡಿತ್ತು. ತಾನು ಮಾಡಿದ್ದಲ್ಲದೆ, ತನ್ನ ಮಿತ್ರ ರಾಷ್ಟ್ರಗಳಿಗೂ ಬ್ಯಾನ್ ಮಾಡುವಂತೆ ತಾಕೀತು ಮಾಡಿತ್ತು. ಕೊನೆಗೆ ಭಾರತದ ಮೇಲೂ ಅದೇ ಒತ್ತಡವನ್ನು ಹಾಕಿತ್ತು. ಇದರ ಪರಿಣಾಮವಾಗಿಯೇ ಮುಖೇಶ್ ಅಂಬಾನಿ 5G ಟ್ರಯಲ್ ನಲ್ಲಿ ಹುವಾಯ್ ಸೇರಿದಂತೆ ಯಾವುದೇ ಚೀನಾ ಕಾಂಪೋನೆಂಟ್ ಬಳಸುವುದಿಲ್ಲವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭರವಸೆ ನೀಡಿದ್ದು. ಇದೆಲ್ಲ ಆದ ಮೇಲೆ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಶುರುವಾಗಿದ್ದು, ಭಾರತ ಸರ್ಕಾರ ಚೀನಾದ 59 ಅಪ್ಲಿಕೇಷನ್ ಗಳನ್ನು ನಿಷೇಧಿಸಿದ್ದು. ಇದೆಲ್ಲ ಟೈಂಸ್ ನೌ ಥರದ ಚಾನಲ್ ನಲ್ಲಿ ಲಕ್ಷಾಂತರ ರುಪಾಯಿ ಸಂಬಳ ಪಡೆಯುವ ವರದಿಗಾರರಿಗೆ ಗೊತ್ತಿರುವುದಿಲ್ಲ ಎಂದೇನಲ್ಲ. ಆದರೆ ಅವರು ತಮ್ಮ ಬಾಸುಗಳನ್ನು ಖುಷಿಪಡಿಸಲು ಇಂಥದ್ದೆಲ್ಲ ಮಾಡುತ್ತಾರೆ.

ಇದೆಲ್ಲ ಒಂದೆಡೆ ಇರಲಿ, ನಾನು ಹೇಳಲು ಹೊರಟ ವಿಷಯ ಬೇರೆಯದು‌. ಇಡೀ ಜಗತ್ತು ಕೋವಿಡ್-19 ಸಂಘರ್ಷದಲ್ಲಿ ನಲುಗುತ್ತಿರುವಾಗ ಅಮೆರಿಕ- ಚೀನಾಗಳ ಸಂಬಂಧ ತೀರಾ ಹಳಸಿಹೋಗಿದೆ. ಎರಡೂ ದೇಶಗಳೂ ಪರಸ್ಪರ ಜಂಗೀಕುಸ್ತಿಗೆ ನಿಂತ ಹಾಗೆ ಕಾಣುತ್ತಿದೆ. ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷವೆಂದರೆ ಅದು ಕೇವಲ ಎರಡು ದೇಶಗಳ ಸಂಘರ್ಷವಾಗಿರುವುದಿಲ್ಲ.‌ ಅಮೆರಿಕ ಯಾರ ಜತೆಗಾದರೂ ಜಗಳಕ್ಕೆ ನಿಂತರೆ ತನ್ನ ಬಾಲಂಗೋಚಿಗಳನ್ನೂ ಜತೆಯಲ್ಲಿ ಇಟ್ಟುಕೊಂಡೇ ನಿಲ್ಲುತ್ತದೆ. ಅದರ ಪರಿಣಾಮವಾಗಿಯೇ ಇಂಗ್ಲೆಂಡ್ ಈಗ ಹುವಾಯ್ ಮೇಲೆ ನಿಷೇಧ ಹೇರುತ್ತಿರುವುದು‌. ಹಾಗೆ ನೋಡುವುದಾದರೆ ಭಾರತ- ಚೀನಾ ನಡುವಿನ ಸಂಘರ್ಷದಲ್ಲಿ ಅಮೆರಿಕ ಪಾಲೇ ದೊಡ್ಡದಿದೆ, ಇದನ್ನು ನಾನು ಹಿಂದೆಯೇ ಬರೆದಿದ್ದೇನೆ.‌

ಅಮೆರಿಕ- ಚೀನಾ ನಡುವಿನ ಸಂಘರ್ಷವನ್ನು ಈಗ ಎರಡನೇ ಮಹಾಯುದ್ಧದ ನಂತರ ನಡೆದ ಅಮೆರಿಕ-ಸೋವಿಯತ್ ಯೂನಿಯನ್ ನಡುವಿನ ಶೀತಲ ಸಮರಕ್ಕೆ ಹೋಲಿಸಲಾಗುತ್ತಿದೆ. ಈ ಎರಡೂ ದೇಶಗಳಿಗೂ ಹಲವಾರು ಹೋಲಿಕೆಗಳಿವೆ ಎರಡೂ ದೇಶಗಳೂ ವಿಶ್ವದ ಸೂಪರ್ ಪವರ್ ಆಗಲು ಹೊರಟಿವೆ. ಎರಡೂ ದೇಶಗಳು ಬಲಾಢ್ಯ ಆರ್ಥಿಕತೆ, ತಂತ್ರಜ್ಞಾನ ಮತ್ತು ಮಿಲಿಟರಿ ಶಕ್ತಿಗಳನ್ನು ಹೊಂದಿವೆ. ಎರಡೂ ದೇಶಗಳೂ ತಮ್ಮ ಹಿತಾಸಕ್ತಿಗಾಗಿ ದುರ್ಬಲ ದೇಶಗಳನ್ನು ಬೆದರಿಸಿ ಅಂಕೆಯಲ್ಲಿ ಇಟ್ಟುಕೊಳ್ಳುತ್ತವೆ ಅಥವಾ ದುರಾಕ್ರಮಣ ಮಾಡಿ ಹಿಡಿತ ಸಾಧಿಸುತ್ತವೆ.

ಸದ್ಯದ ಸ್ಥಿತಿಯಲ್ಲಿ ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ಹಲವು ಆಯಾಮಗಳಿವೆ. ಅದರ ಮುಖ್ಯ ಭಾಗವೇ ಟ್ರೇಡ್ ವಾರ್. ಚೀನಾ ಕಳೆದ ಹತ್ತು ವರ್ಷಗಳಲ್ಲಿ ಎಲ್ಲರ ಊಹೆಯನ್ನೂ ಮೀರಿ ಜಾಗತಿಕ ಶಕ್ತಿಯಾಗಿ ಬೆಳೆದಿದೆ. ಅವರು ಹೆಜ್ಜೆ ಇಟ್ಟ ಕಡೆಯಲ್ಲೆಲ್ಲ ಯಶಸ್ಸು ಲಭಿಸಿದೆ. ಅಮೆರಿಕದ ದೈತ್ಯ ಸಂಸ್ಥೆಗಳ ಜತೆ ಪೈಪೋಟಿ ನೀಡುವಲ್ಲಿ ಚೀನಾ ದಾಪುಗಾಲು ಹಾಕುತ್ತಲೇ ಸಾಗಿದೆ. ಚೀನಾದ ದೊಡ್ಡ ದೊಡ್ಡ ಸಂಸ್ಥೆಗಳು ಒಂದೇ ಅಲ್ಲಿನ ಸರ್ಕಾರವೇ ನಡೆಸುವಂಥವು, ಅಥವಾ ಸರ್ಕಾರದ ನಿಯಂತ್ರಣದಲ್ಲಿ ಇರುವಂಥವು. ಇದು ಅಮೆರಿಕಗೆ ಚಿಂತೆಯ ವಿಷಯವಾಗಿಹೋಗಿದೆ. ಹುವಾಯ್ ಸಂಸ್ಥೆಯ ಉದಾಹರಣೆ ತೆಗೆದುಕೊಳ್ಳಿ. ಅದು ಭಾರತ ಸೇರಿದಂತೆ ಜಗತ್ತಿನ ನಾನಾ ದೇಶಗಳ 2G, 3G ನೆಟ್ ವರ್ಕ್ ನಲ್ಲಿ ಕೆಲಸ ಮಾಡಿದೆ. ಅದು ತಾನು ಕೆಲಸ ಮಾಡುವ ದೇಶಗಳಲ್ಲಿ ಮಾಹಿತಿಗಳನ್ನು ಕದ್ದು, ಬೇಹುಗಾರಿಕೆ ಮಾಡುತ್ತಿದೆ ಎಂಬುದು ಅಮೆರಿಕದ ಆರೋಪ. ಆಫ್ರಿಕನ್ ಯೂನಿಯನ್ ಕಟ್ಟಡದ ಮಾಹಿತಿಗಳನ್ನು ಸತತ ಐದು ವರ್ಷಗಳ ಕಾಲ ಹುವಾಯ್ ಸಂಸ್ಥೆ ಕದ್ದು, ಶಾಂಘೈನ ಸರ್ವರ್ ಗೆ ತಲುಪಿಸುತ್ತಿತ್ತು ಎಂಬುದು ಒಂದು ಉದಾಹರಣೆ. ( ಈ ಬಗ್ಗೆ ಹಿಂದೆಯೇ ಬರೆದಿದ್ದೇನೆ) ಆದರೆ ಅಮೆರಿಕದ ಸಿಟ್ಟು ಕೇವಲ ಹುವಾಯ್ ಮೇಲೆ ಮಾತ್ರವಲ್ಲ, ಚೀನಾದ ಎಲ್ಲ ದೈತ್ಯ ಸಂಸ್ಥೆಗಳ ಮೇಲೂ ಇದೆ.‌ ಜಗತ್ತು 5G ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುತ್ತಿರುವ ಈ‌ ಸಂದರ್ಭದಲ್ಲಿ ಇಡೀ ಜಾಗತಿಕ ಮಾರುಕಟ್ಟೆಯನ್ನು ಆವರಿಸಿಕೊಳ್ಳಲು ಅಮೆರಿಕಗೆ ಇರುವ ಏಕೈಕ ಅಡ್ಡಿ ಚೀನಾ. ಹೀಗಾಗಿ ಚೀನಾ ವ್ಯಾವಹಾರಿಕ ಆಸಕ್ತಿಗಳಿಗೆ ತಣ್ಣೀರೆರಚಲು ಅಮೆರಿಕ ತನ್ನೆಲ್ಲ ಶ್ರಮವನ್ನು ವಿನಿಯೋಗಿಸುತ್ತಿದೆ.

ಅಮೆರಿಕ-ಚೀನಾ ನಡುವಿನ ಸಂಘರ್ಷಕ್ಕೆ ಎರಡನೇ ಕಾರಣ ಕರೋನಾ ವೈರಸ್! ಅಮೆರಿಕ ಅಧ್ಯಕ್ಷ ಟ್ರಂಪ್ ಈಗಲೂ ಕೋವಿಡ್-19 ಅನ್ನು ಚೀನಾ ವೈರಸ್ ಎಂದೇ ಕರೆಯೋದು. ಎಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷದ ಅಂತ್ಯದಲ್ಲಿ ಕೋವಿಡ್-19 ಶುರುವಾಗಿದ್ದು ಚೀನಾದ ವುಹಾನ್ ಅನಿಮಲ್ ಮಾರ್ಕೆಟ್ ನಲ್ಲಿ. ಆದರೆ ಈ ಕುರಿತು ನಾನಾ ರೀತಿಯ ಊಹಾಪೋಹಗಳು ಹರಡಿವೆ. ವೈರಸ್ ಚೀನಾದಲ್ಲೇ ಆರಂಭಗೊಂಡರೂ ಅದನ್ನು ನಿಗ್ರಹಿಸಲು ಅದು ಯಶಸ್ವಿಯಾಯಿತು. ಬೇರೆ ದೇಶಗಳ ಹಾಗೆ ಅದು ಇಡಿಇಡಿಯಾಗಿ ಲಾಕ್ ಡೌನ್ ಮಾಡಲಿಲ್ಲ, ದೇಶದ ಆರ್ಥಿಕತೆ ದಾರಿತಪ್ಪಲು ಬಿಡಲಿಲ್ಲ. ಇದೆಲ್ಲ ಹಲವು ಬಗೆಯ ಅನುಮಾನಗಳಿಗೆ ಕಾರಣವಾಯಿತು. “ಕೋವಿಡ್-19 ಚೀನಾ ಕೃತಕವಾಗಿ ಸೃಷ್ಟಿಸಿದ ವೈರಸ್. ಚೀನಾ ಈ ವೈರಸ್ ಮೂಲಕ ಜಗತ್ತಿನ ಇತರ ದೇಶಗಳ ವಿರುದ್ಧ ಜೈವಿಕ ಸಮರ ಸಾರಿದೆ. ಇಡೀ ಜಗತ್ತು ಕೋವಿಡ್ ಸಂಕಟದಲ್ಲಿ ನರಳುತ್ತಿರುವಾಗ ಚೀನಾ ಜಗತ್ತಿನ ಸೂಪರ್ ಪವರ್ ಆಗಲು ಹೊಂಚು ಹಾಕುತ್ತಿದೆ” ಎಂಬುದು ಜಗತ್ತಿನಾದ್ಯಂತ ಹರಡಲಾದ Conspiracy theory. (ಮುಂದೊಮ್ಮೆ ಈ conspiracy theory ಗಳ ಕುರಿತೇ ಬರೆಯುತ್ತೇನೆ) ಇದು ಎಷ್ಟು ನಿಜವೋ ಎಷ್ಟು ಸುಳ್ಳೋ, ಆದರೆ ಡೊನಾಲ್ಡ್ ಟ್ರಂಪ್ ಇದನ್ನು ಬಲವಾಗಿ ನಂಬಿದಂತಿದೆ. ತಮಾಶೆ ಎಂದರೆ ಕೋವಿಡ್-19 ಸಂಬಂಧಿಸಿದ ಬಿಜಿನೆಸ್ ಗಳಲ್ಲೂ ( ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಗಳಿಂದ ಹಿಡಿದು ವ್ಯಾಕ್ಸಿನ್ ವರೆಗೆ) ಚೀನಾ ಮೇಲುಗೈ ಸಾಧಿಸಿತು. ಇದೆಲ್ಲ‌ ದೊಡ್ಡಣ್ಣನ ಕಣ್ಣು ಕುಕ್ಕಿಸದೇ ಇರುತ್ತದೆಯೇ? ಕೋವಿಡ್-19 ಹಬ್ಬಿಸಿದ ಚೀನಾ ವಿರುದ್ಧ ಜಗತ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಟ್ರಂಪ್ ಗುಡುಗುತ್ತಲೇ ಬಂದ.

ಇನ್ನು ಮೂರನೆಯದಾಗಿ ಮತ್ತು ಅತಿಮುಖ್ಯವಾಗಿ ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ಚೀನಾದ ಆಧಿಪತ್ಯ ಸ್ಥಾಪನೆಯ ಯತ್ನಗಳು ಅಮೆರಿಕವನ್ನು ಕಂಗೆಡಿಸಿದೆ.‌ ದಕ್ಷಿಣ ಸಾಗರದ ವಿವಾದ ಹಳೆಯದು. ಅದು ಹಲವು ದೇಶಗಳಿಗೆ ಸಂಬಂಧಿಸಿದ ವಿವಾದ. ಚೀನಾ ( ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ, ಬ್ರುನೈ, ಥೈವಾನ್ ( ರಿಪಬ್ಲಿಕ್ ಆಪ್ ಚೈನಾ), ಇಂಡೋನೇಷ್ಯಾ, ಮಲೇಶಿಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂಗಳು ಈ ಸಂಘರ್ಷದೊಳಗೆ ಸಿಕ್ಕಿಬಿದ್ದಿವೆ. ಚೀನಾದ ಮಹತ್ತ್ವಾಕಾಂಕ್ಷೆ ಮತ್ತು ಇತರ ದೇಶಗಳನ್ನು ಬಲಪ್ರಯೋಗ ಮಾಡಿ ಹತ್ತಿಕ್ಕುವ ಅಹಂಕಾರಗಳು ಈ ಭಾಗದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಿವೆ. ಒಟ್ಟು 3.37 ಟ್ರಿಲಿಯನ್ ಡಾಲರ್ ಮೌಲ್ಯದ ಜಾಗತಿಕ ಆಮದು-ರಫ್ತು ಇದೇ ದಕ್ಷಿಣ ಚೀನಾ ಸಮುದ್ರದಿಂದಲೇ ಹಾದುಹೋಗಬೇಕು. ಸಾಗರ‌ಮಾರ್ಗದ ವ್ಯಾಪಾರದಲ್ಲಿ ಈ ಭಾಗದ ಪಾಲು ಜಗತ್ತಿನ ಒಟ್ಟು ವ್ಯವಹಾರದ ಮೂರನೇ ಒಂದು ಭಾಗ. ಚೀನಾದ ಶೇ. 40ರಷ್ಟು ಒಟ್ಟಾರೆ ವ್ಯವಹಾರಗಳು ಈ ಸಮುದ್ರದ ಮೂಲಕವೇ ನಡೆಯುತ್ತದೆ. ಹೀಗಾಗಿ ಚೀನಾ ಈ ಜಲಮಾರ್ಗವನ್ನು ಡಾಮಿನೇಟ್ ಮಾಡಲು ಪ್ರಯತ್ನಿಸುತ್ತಿದೆ. ಚೀನಾ ಈ ಭಾಗದ ಕೆಲವು ದ್ವೀಪಗಳಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿದೆ. ಚೀನಾದ ಈ ಆಕ್ರಮಣಕಾರಿ ನೀತಿಯ ವಿರುದ್ಧ ಈ ಭಾಗದ ದೇಶಗಳು ಅಮೆರಿಕದ ಮೊರೆ ಹೋದ ಪರಿಣಾಮ ಅದು ಈ ಭಾಗದಲ್ಲಿ ವಿಶೇಷ ಆಸಕ್ತಿ ವಹಿಸಿದೆ. ಫಿಲಿಪೈನ್ಸ್ ಒಂದರಲ್ಲೇ ಅಮೆರಿಕ ಐದು ಸೇನಾ ನೆಲೆಗಳನ್ನು ಹೊಂದಿದೆ. ಥೈವಾನ್ ನಲ್ಲಿ ಅಮೆರಿಕ ಬಹುದೊಡ್ಡ ವಾಯುನೆಲೆಯನ್ನು ಹೊಂದಿದ್ದು, ನಾಲ್ಕರಿಂದ ಐದು ಸಾವಿರ ವಾಯುಸೇನಾ ಸಿಬ್ಬಂದಿ ಇದ್ದಾರೆ. ಅಮೆರಿಕ-ಚೀನಾ ನಡುವೆ ಯುದ್ಧವೇನಾದರೂ ನಡೆದರೆ ದಕ್ಷಿಣ ಚೀನಾ ಸಾಗರವೇ ಕುರುಕ್ಷೇತ್ರವಾಗಿಬಿಡುತ್ತದೆ.

ಈ ಮೂರೂ ಸಮಸ್ಯೆಗಳ ನಡುವೆ ಈಗ ಹಾಂಕಾಂಗ್ ವಿವಾದ ದೊಡ್ಡದಾಗಿ ಎದ್ದು ನಿಂತಿದೆ. ಹಾಂಕಾಂಗ್ ಎಂಬುದು ಸ್ವತಂತ್ರ ದೇಶವಲ್ಲ, ಅದು ಚೀನಾದ ಒಂದು ಭಾಗ. ಆದರೆ ಅದಕ್ಕೆ ತನ್ನದೇ ಆದ ಸ್ವಾಯತ್ತತೆಯಿದೆ. ಇಂಗ್ಲೆಂಡ್ ನ ಕಾಲೋನಿಯಾಗಿದ್ದ ಹಾಂಕಾಗ್ ಅನ್ನು ಮೇನ್ ಲ್ಯಾಂಡ್ ಚೀನಾಗೆ ಒಪ್ಪಿಸುವಾಗ ಈ ಸ್ವಾಯತ್ತತೆಯ ಒಪ್ಪಂದವಾಗಿತ್ತು. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದ ಚೀನಾ ಈಗ ಹಾಂಕಾಂಗ್ ಮೇಲೆ ಪೂರ್ಣ ಹಕ್ಕು ಸಾಧಿಸುವ ಮೊದಲ ಹಂತದ ಪ್ರಯೋಗಗಳನ್ನು ಆರಂಭಿಸಿದೆ ಮತ್ತು ಇದಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯವನ್ನು, ವಿಶೇಷವಾಗಿ ಅಮೆರಿಕವನ್ನು ಎದುರು ಹಾಕಿಕೊಂಡಿದೆ. ಹಾಂಕಾಂಗ್ ಜನತೆ ಚೀನಾ‌ ವಿರುದ್ಧವೇ ನಡೆಸಿದ ಪ್ರತಿಭಟನೆಗಳು ಫಲಕಾರಿಯಾಗಿಲ್ಲ. ಇವತ್ತು ಡೊನಾಲ್ಡ್ ಟ್ರಂಪ್ ಹಾಂಕಾಂಗ್ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುವ ಕಡತಗಳಿಗೆ ಸಹಿ ಹಾಕುವುದರೊಂದಿಗೆ ಅಮೆರಿಕ-ಚೀನಾ‌ ಸಂಘರ್ಷ ಮಿತಿ ಮೀರಿ ಹೋಗಿದೆ.

ಹಾಂಕಾಂಗ್ ಹೋರಾಟದ ಕಥೆ ಅತ್ಯಂತ ಕುತೂಹಲಕಾರಿ. ಭೌಗೋಳಿಕ ವಿಸ್ತಾರದ ದೃಷ್ಟಿಯಲ್ಲಿ ನಮ್ಮ ಬೆಂಗಳೂರು ಮತ್ತು ಚೆನ್ನೈ ಎರಡೂ ನಗರ ಸೇರಿದರೆ ಹಾಂಕಾಗ್ ಆಗುತ್ತದೆ. ಜಗತ್ತಿನ ಅತಿದೊಡ್ಡ ಶ್ರೀಮಂತರುಗಳು ಇರುವ ನಗರವದು. ಮುಕ್ತ ಮಾರುಕಟ್ಟೆಗೆ ಅತಿಯಾಗಿ ತೆರೆದುಕೊಂಡ ಹಾಂಕಾಂಗ್ ಇವತ್ತು ಜಗತ್ತಿನ ಎರಡು ಶಕ್ತಿರಾಷ್ಟ್ರಗಳ ನಡುವಿನ ಸಂಘರ್ಷದ ಬಿಂದುವಾಗಿ ಕಾಣಿಸುತ್ತಿದೆ. ಈ ಕಥೆ ವಿವರವಾಗಿ ನಾಳೆ ಬರೆಯುತ್ತೇನೆ.

  • ದಿನೇಶ್ ಕುಮಾರ್ ಎಸ್.ಸಿ.

LEAVE A REPLY

Please enter your comment!
Please enter your name here