ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು

0
57

ನ್ಯೂಸ್ ಕನ್ನಡ ವರದಿ: ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಬಂಧಿತರಾದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರಿಗೆ ಟಿಸ್ ಹಜಾರಿ ನ್ಯಾಯಾಲಯ ಜಾಮೀನು ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕಾಮಿನಿ ಲಾವು ಅವರು ಚಂದ್ರಶೇಖರ್ ಆಜಾದ್ ಅವರಿಗೆ ಷರತ್ತುಬದ್ದ ಜಾಮೀನು ನೀಡಿದ್ದಾರೆ.

ಮಂಗಳವಾರ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಅಜಾದ್‌ರವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಟಿಸ್‌ ಹಜಾರಿಯಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಡಾ.ಕಾಮಿನಿ ಲಾವು ಪಬ್ಲಿಕ್‌ ಪ್ರಾಸಿಕ್ಯೂಟರ್‌ರವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಜಾಮೀನು ಅರ್ಜಿಯನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರೋಧಿಸಿದ್ದು, ಆಜಾದ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು. ಆದರೆ ಪ್ರಾಸಿಕ್ಯೂಟರ್ ಆರಂಭದಲ್ಲಿ ಆಜಾದ್ ಅವರ ವಕೀಲರಾದ ಮಹಮೂದ್ ಪ್ರಚಾ ಅವರೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು. ಆದರೆ ಯಾವುದೇ ಆರೋಪ ಮಾಡವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳುವುದು ಅಗತ್ಯ ಎಂದು ನ್ಯಾಯಾಧೀಶರು ಕಟುವಾಗಿ ಪ್ರಾಸಿಕ್ಯೂಟರ್‌ಗೆ ಹೇಳಿದರು.

ಈ ಕುರಿತು, ಪ್ರಾಸಿಕ್ಯೂಟರ್ ಕೆಲವು ಪೋಸ್ಟ್‌ಗಳನ್ನು ಓದಿದರು. ಆಗ ಸಿಎಎ ಎನ್‌ಆರ್‌ಸಿಯನ್ನು ವಿರೋಧಿಸಲು ಜಮಾ ಮಸೀದಿ ಬಳಿ ಆಜಾದ್ ಪ್ರತಿಭಟನೆ ಮತ್ತು ಧರಣಿಗಾಗಿ ಕರೆ ನೀಡಿದ್ದನ್ನು ಉಲ್ಲೇಖಿಸಿ, ನ್ಯಾಯಾಧೀಶರು “ಧರಣೆ ಮಾಡುವುದರಲ್ಲಿ ಏನು ತಪ್ಪಾಗಿದೆ? ಪ್ರತಿಭಟಿಸುವುದರಲ್ಲಿ ಏನು ತಪ್ಪಿದೆ? ಪ್ರತಿಭಟಿಸುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು” ಎಂದು ಹೇಳಿದ್ದಾರೆ.

ಆ ಪ್ರತಿಭಟನೆಯಲ್ಲಿ ಹಿಂಸೆ ಎಲ್ಲಿದೆ? ಈ ಯಾವುದೇ ಪೋಸ್ಟ್‌ಗಳಲ್ಲಿ ಏನು ತಪ್ಪಾಗಿದೆ? ನೀವು ಪ್ರತಿಭಟಿಸಲು ಸಾಧ್ಯವಿಲ್ಲ ಎಂದು ಹೇಗೆ ಹೇಳುತ್ತೀರಿ? ನೀವು ಸಂವಿಧಾನವನ್ನು ಓದಿದ್ದೀರಾ? ಎಂದು ಪ್ರಾಸಿಕ್ಯೂಟರ್‌ಗೆ ಪ್ರಶ್ನಿಸಿದ್ದಾರೆ.

“ನೀವು ಜಮಾ ಮಸೀದಿ ಪಾಕಿಸ್ತಾನದಲ್ಲಿದೆ ಎಂಬಂತೆ ವರ್ತಿಸುತ್ತಿದ್ದೀರಿ. ಅದು ಪಾಕಿಸ್ತಾನವಾಗಿದ್ದರೂ ಸಹ ನೀವು ಅಲ್ಲಿಗೆ ಹೋಗಿ ಪ್ರತಿಭಟಿಸಬಹುದು. ಎಕೆಂದರೆ ಪಾಕಿಸ್ತಾನವು ಅವಿಭಜಿತ ಭಾರತದ ಒಂದು ಭಾಗವಾಗಿತ್ತು” ಎಂದು ನ್ಯಾಯಾಧೀಶರು ಪ್ರಾಸಿಕ್ಯೂಟರ್‌ಗೆ ತಿಳಿಸಿದರು. ಆಜಾದ್ ಅವರ ಯಾವುದೇ ಪೋಸ್ಟ್‌ಗಳು ಅಸಂವಿಧಾನಿಕವಲ್ಲ ಎಂದ ನ್ಯಾಯಾಧೀಶರು ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೆ ಇದೆ ಎಂದು ಪ್ರಾಸಿಕ್ಯೂಟರ್‌ಗೆ ನೆನಪಿಸಿದರು.

ನಂತರ ನ್ಯಾಯಾಧೀಶರು ಪ್ರಾಸಿಕ್ಯೂಟರ್ ಕೋರಿಕೆಯ ಮೇರೆಗೆ ಮಂಗಳವಾರ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2 ರವರೆಗೆ ಮುಂದೂಡಿದರು. ಇವತ್ತು ಮದ್ಯನ ತೀರ್ಪು ಹೊರಬಂದಿದ್ದು ಚಂದ್ರಶೇಖರ್ ಆಜಾದ್ ರಾವಣ್ ಅವರಿಗೆ ಜಾಮೀನು ದೊರಕಿದೆ.

LEAVE A REPLY

Please enter your comment!
Please enter your name here