ಸಚಿವ ಸಂಪುಟ ರಚನೆಗೆ ಅಮಿತ್ ಶಾ ಗ್ರೀನ್ ಸಿಗ್ನಲ್; ಸಂಪುಟ ರಚನೆಗೆ ಮುಹೂರ್ತ ಫಿಕ್ಸ್!

0
480

ನ್ಯೂಸ್ ಕನ್ನಡ ವರದಿ (18-8-2019): ಕರ್ನಾಟಕದಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಬಳಿಕ ಒಂದಿಲ್ಲೊಂದು ಕಾರಣದಿಂದ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆ ಮುಂದೂಡುತ್ತಾ ಬಂದಿದ್ದು, ವಿಪಕ್ಷಗಳು ‘ಏಕವ್ಯಕ್ತಿ ಪ್ರಹಸನ’ (ಒನ್ ಮ್ಯಾನ್ ಶೋ) ಎಂದು ಟೀಕಿಸಿದ್ದವು. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದು, ಮಂಗಳವಾರ ಮೊದಲ; ಹಂತದ ಸಂಪುಟ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಯ ಬಳಿಕ ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ. ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಕನಿಷ್ಟ 15 ಜನ ಶಾಸಕರು ಸಚಿವರಾಗಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ನಿನ್ನೆ ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪಕ್ಷಾಧ್ಯಕ್ಷರಿಗೆ ಯಡಿಯೂರಪ್ಪ ಸಂಭಾವ್ಯ ಸಚಿವರ ಪಟ್ಟಿಯನ್ನು ಸಲ್ಲಿಸಿದ್ದು, ಸಂಪುಟ ಸೇರುವವರು ಯಾರು ಎನ್ನುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಇದೀಗ ಸಚಿವಾಕಾಂಕ್ಷಿಗಳ ಪಟ್ಟಿಗೆ ಅನುಮೋದನೆ ದೊರೆಯುವುದು ಬಾಕಿ ಇದೆ. ಭಾನುವಾರ ಅಥವಾ ಸೋಮವಾರ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಅಮಿತ್ ಶಾ ಅವರ ಕಚೇರಿಯಿಂದ ಮುಖ್ಯಮಂತ್ರಿ ಅವರಿಗೆ ರವಾನೆ ಮಾಡಲಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಂಪುಟ ರಚನೆಗೆ ಅನುಮತಿ ದೊರೆಯುತ್ತಿದ್ದಂತೆ ಗೃಹ ಇಲಾಖೆಯ ಕಚೇರಿಯಿಂದ ನೇರವಾಗಿ ಯಡಿಯೂರಪ್ಪ ವಿಮಾನ ನಿಲ್ದಾಣದ ಕಡೆ ಪ್ರಯಾಣ ಬೆಳೆಸಿದರು.

LEAVE A REPLY

Please enter your comment!
Please enter your name here