ಗಡಿಯಿಂದ ಚೀನಾ ಹಿಂದಕ್ಕೆ ಸರಿದಿದೆ ಅನ್ನುತ್ತಿದ್ದೆ ಬಿಜೆಪಿ, ಆದರೆ ಒಂದಿಂಚೂ ಸರಿದಿಲ್ಲ ಎನ್ನುತ್ತದೆ ಈ ವರದಿ; ಸುದ್ದಿ ಓದಿ

0
51

ನ್ಯೂಸ್ ಕನ್ನಡ ವರದಿ: ಗಾಲ್ವಾನ್ ಕಣಿವೆಯ ಬಳಿ ಹಾಗೂ ಪ್ಯಾಂಗಾಂಗ್ ಸರೋವರದ ಸುತ್ತ ಜಮಾಯಿಸಿದ ಚೀನೀ ಸೇನೆ ವಾಪಾಸ್ ತಮ್ಮ ಪ್ರದೇಶಕ್ಕೆ ಹೋಗುತ್ತಿದೆ ಎಂದು ಮೊನ್ನೆಯಿಂದ ಸುದ್ದಿಗಳು ಬರುತ್ತಲೇ ಇವೆ. ಅದರೆ ನಾನು ಮೊನ್ನೆಯಿಂದ ಈ ಹೊತ್ತಿನವರೆಗೂ ಟ್ರ್ಯಾಕ್ ಮಾಡಿರುವ ಸುದ್ದಿಗಳ ಪ್ರಕಾರ ಪ್ಯಾಂಗಾಂಗ್ ಸರೋವರದ ಬಳಿ ಚೀನಿ ಸೇನೆ ಒಂದಿಂಚೂ ಹಿಂದಕ್ಕೆ ಸರಿದಿಲ್ಲ. ಇದೇ ಎಪ್ರಿಲ್ ಮೊದಲ ವಾರದ ತನಕ ಪ್ಯಾಂಗಾಂಗ್ ಸರೋವರದ Finger-8 ರ ತನಕ ಭಾರತದ ಸೇನೆ ಗಸ್ತು ತಿರುಗುತ್ತಿತ್ತು. ಆದರೆ ಚೀನೀ ಅತಿಕ್ರಮಣದ ಬಳಿಕ, ಇವತ್ತಿನವರೆಗೆ ಭಾರತೀಯ ಸೇನೆಗೆ Finger 4 ನ್ನು ದಾಟಿ ಮುಂದಕ್ಕೆ ಗಸ್ತು ತಿರುಗಲು ಸಾದ್ಯವಾಗುತ್ತಿಲ್ಲ. ಚೀನೀ ಸೇನೆ ಭಾರತೀಯ ಗಸ್ತನ್ನು Finger-3 ಹಾಗೂ Finger-4 ರ ಮಧ್ಯೆ ನಿಯಂತ್ರಿಸಿದೆ. ಹಾಗಾಗಿ ಚೀನೀ ಸೈನ್ಯದ ಕೈಯಲ್ಲಿರುವುದು Finger-8 ರಿಂದ Finger-4 ರ ತನಕದ ಎಂಟು ಕಿಲೋಮೀಟರ್ ಪ್ರದೇಶ. ಇದು ಐತಿಹಾಸವಾಗಿ ಭಾರತದ ಭೂಪ್ರದೇಶ ಹಾಗೂ ಭಾರತದ ಸೇನೆ ಇಲ್ಲಿ ಸದಾಕಾಲ ಗಸ್ತು ತಿರುಗಿದೆ. ಆದರೆ ಇವಾಗ ಇದು ಸಾಧ್ಯವಾಗುತ್ತಿಲ್ಲ. ಅಂದರೆ ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಚೀನೀ ಸೇನೆ ಒಂದಿಂಚೂ ಹಿಂದಕ್ಕ ಹೋಗಿಲ್ಲ. ಅಲ್ಲಿಂದ ಚೀನೀ ಸೈನ್ಯ ನಿಜವಾಗಿಯೂ ಭಾರತದ ಗಡಿಯೊಳಗಿಲ್ಲ ಎಂದು ಹೇಳಬೇಕಾದರೆ ಚೀನೀ ಸೈನ್ಯ ಎಂಟು ಕಿಲೋಮೀಟರ್ ಹಿಂದಕ್ಕೆ ಹೋಗಿ Finger-8 ನ್ನು ದಾಟಿ ಮುಂದಕ್ಕೆ ಬರಬಾರದು.

ಪೂರ್ವ ಲಡಾಖಿನ ತಾಂಗ್ಸೇ ವಲಯದ ಬಿಜೆಪಿ ಕಾರ್ಪರೇಟರ್ ತಾಶಿ ನಂಗ್ಯಾಲ್ ಪ್ರಕಾರ ಪ್ಯಾಂಗಾಂಗ್ ಸರೋವರದ ಆಸುಪಾಸಿನ ಗ್ರಾಮಗಳಾದ ಖಲ್ತಾತ್, ಮಾನ್ ಹಾಗೂ ಮೇರಕ್‍ನ ನಿವಾಸಿಗಳು ಚೀನೀ ಸೈನಿಕರು Finger-4 ತನಕ ಬೋಟಿನಲ್ಲಿ ಬರುವುದನ್ನು ನೋಡಿದ್ದಾರೆ. ಈ ನಿವಾಸಿಗಳ ಪ್ರಕಾರ ಚೀನಾ Finger-4 ತನಕ ರಸ್ತೆಯನ್ನೂ ನಿರ್ಮಿಸಿದೆ. ಒಂದು ತಿಂಗಳ ಹಿಂದೆಯವರೆಗೆ ಈ ಪ್ರದೇಶದಲ್ಲಿ ಕೇವಲ ರಾತ್ರಿಯಲ್ಲಿ ಚೀನೀ ಕ್ಯಾಂಪ್ ನ ದೀಪಗಳು ಉರಿಯುವುದು ಮಾತ್ರ ಕಾಣುತ್ತಿದ್ದವು. ಆದರೆ ಇದೀಗ ದಿನಬೆಳಕಿನಲ್ಲಿಯೂ Finger-4 ತನಕ ಚೀನೀ ಸೈನಿಕರು ಬರುತ್ತಿದ್ದಾರೆ ಹಾಗೂ ಆ ಪ್ರದೇಶದಲ್ಲಿ ತಾನು ಸ್ವತ: ಚೀನಾದ ಧ್ವಜವನ್ನು ನೋಡಿದ್ದಾಗಿಯೂ ಇದೇ ಕಾರ್ಪರೇಟರ್ ಹೇಳುತ್ತಾರೆ

ಇನ್ನು ಗಾಲ್ವಾನ್ ಕಣಿವೆಯ ಬಳಿ ಚೀನೀ ಸೈನ್ಯ ಒಂದೆರಡು ಕಿಲೋಮೀಟರ್ ಹಿಂದಕ್ಕೆ ಹೋಗಿದೆ. ಆದರೆ ರಕ್ಷಣಾ ಮೂಲಗಳನ್ನು, ಸೇನಾಧಿಕಾರಿಗಳನ್ನು ಉಲ್ಲೇಖಿಸಿ ಬರುತ್ತಿರುವ ಎಲ್ಲಾ ವರದಿಗಳ ಪ್ರಕಾರ ಎಪ್ರಿಲ್ ತಿಂಗಳವರೆಗೆ ಭಾರತ-ಚೀನಾದ ಮಧ್ಯೆ ಇದ್ದ ಗಡಿ LAC. ಆದರೆ ಇದೀಗ ಈ ಗಡಿ ಗಾಲ್ವಾನ್ ಹಾಗೂ ಶ್ಯೋಕ್ ನದಿಯ ಸಂಗಮದ ತುಸು ಹಿಂದಿರುವ Y-Junction ಗೆ ಬಂದು ನಿಂತಿದೆ. Y-Junction ನಿಂದ LAC ಗೆ ಸುಮಾರು ಒಂದು ಕಿಲೋಮೀಟರ್ ದೂರ. ಭಾರತದ ಲೇಹ್ ಸೈನ್ಯದಳದ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಹಾಗೂ ಚೀನಾದ ದಕ್ಷಿಣ ಕ್ಸಿನ್‍ಜಿಯಾಂಗ್ ಪ್ರಾಂತ್ಯದ ಕಮಾಂಡರ್ ಮೇಜರ್ ಜನರಲ್ ಲೀಯು ಲಿನ್ ಒಟ್ಟಾಗಿ ರಚಿಸಿರುವ disengagement plan ಪ್ರಕಾರ LAC ಯ ಇಕ್ಕೆಲಗಳಲ್ಲಿ ಮೂರು ಕಿಲೋಮೀಟರಿನಷ್ಟು ಪ್ರದೇಶ ಬಫರ್ ಝೋನ್. ಇದರ ಪ್ರಕಾರ ಭಾರತ ಹಾಗೂ ಚೀನಾ ಬಫರ್ ಝೋನಿನಲ್ಲಿ ಕೇವಲ ಎರಡು ‘ಟೆಂಟ್ ಪೋಸ್ಟ್’ ಮಾತ್ರ ನಿರ್ಮಿಸಬಹುದು. ಮೊದಲನೆಯ ಟೆಂಟ್ ಪೋಸ್ಟ್ Y-Junction ನಿಂದ 1.4 ಕಿಲೋಮೀಟರ್ ದೂರದಲ್ಲಿದ್ದರೆ, ಎರಡನೆಯ ಟೆಂಟ್ ಪೋಸ್ಟ್ ಮೊದಲನೆಯ ಟೆಂಟ್ ಪೋಸ್ಟ್ ನಿಂದ 1.6 ಕಿಲೋಮೀಟರ್ ದೂರದಲ್ಲಿರಬೇಕು. ಮೊದಲ ಟೆಂಟ್ ಪೋಸ್ಟ್ ನಲ್ಲಿ 30 ಕ್ಕಿಂತ ಹೆಚ್ಚಿನ ಸೈನಿಕರು ಇರುವಂತಿಲ್ಲ. ಹಾಗೆಯೇ ಎರಡನೆಯ ಟೆಂಟ್ ಪೋಸ್ಟಿನಲ್ಲಿ ಸೈನಿಕರ ಸಂಖ್ಯೆ 50 ನ್ನು ದಾಟುವಂತಿಲ್ಲ. ಇದು ಎರಡೂ ದೇಶಕ್ಕೂ ಅನ್ವಯ. ಅಂದರೆ ಬಫರ್ ಝೋನ್ ಪ್ರದೇಶದಲ್ಲಿ ಒಟ್ಟು ಎಂಬತ್ತು ಸೈನಿಕರು ಮಾತ್ರ ಇರಬಹುದು.

ರಕ್ಷಣಾ ಮೂಲಗಳ ಈ ಬಫರ್ ಝೋನ್ LAC ಯಿಂದ ಆಗಬೇಕಿತ್ತೇ ಹೊರತು LAC ಯಿಂದ ಭಾರತದ ಭೂಪ್ರದೇಶದ ಸುಮಾರು ಒಂದು ಕಿಲೋಮೀಟರ್ ಒಳಗಿರುವ Y-Junction ನಿಂದಲ್ಲ. ಈವಾಗ Y-Junction ನಿಂದ ಬಫರ್ ಝೋನ್ ಮಾಡಿರುವುದರಿಂದ ಗಾಲ್ವಾನ್ ಕಣಿವೆಯಲ್ಲಿ ಕಳೆದ ತಿಂಗಳು ನಡೆದ ಕಾಳಗದ ಮುಖ್ಯ ಬಿಂದುವಾದ, LAC ಬಳಿಯಿರುವ Patrolling Point-14 ಅಥವಾ PP-14 ಇದೀಗ ಬಫರ್ ಝೋನಿನಲ್ಲಿ ಸೇರಿದೆ. ಹೀಗೆ ಮಾಡಿರುವುದರಿಂದ ಭಾರತದ ಸೇನೆ ಇದೀಗ LAC ಯಿಂದ 2.4 ಕಿಲೋಮೀಟರ್ ದೂರದಲ್ಲಿದ್ದರೆ, ಚೀನೀ ಸೇನೆ LAC ಯಿಂದ ಕೇವಲ 400 ಮೀಟರ್ ದೂರದಲ್ಲಿದೆ. ಎರಡೂ ದೇಶಗಳು ಬಫರ್ ಝೋನಿನಲ್ಲಿರುವ ತಮ್ಮ ಮೊದಲ ಟೆಂಟ್ ಪೋಸ್ಟ್ ಗಿಂತ ಮುಂದೆ ತಮ್ಮ ಸೈನಿಕರನ್ನು ಗಸ್ತು ತಿರುಗಲು ಕಳುಹಿಸುವಂತಿಲ್ಲ. ಹಾಗಾಗಿ ಕಳೆದ ತಿಂಗಳವರೆಗೆ ಭಾರತ ಸೈನಿಕರು ಗಸ್ತು ತಿರುಗುತ್ತಿದ್ದ PP-14 ನಿಂದ ಇದೀಗ ನಮ್ಮ ಸೈನಿಕರು ಎರಡು ಕಿಲೋಮೀಟರ್ ಗಿಂತಲೂ ಹೆಚ್ಚಿನ ದೂರದಲ್ಲಿದ್ದರೆ ಚೀನೀ ಸೈನಿಕರಿಗೆ PP-14 ಕೇವಲ ಐನೂರು ಮೀಟರ್ ದೂರದಲ್ಲಿದೆ. ಗಡಿಯಲ್ಲಿ ಕಾಳಗ ಮಾಡಿದ ಎರಡೂ ಸೇನೆಗಳು ತಮ್ಮ-ತಮ್ಮ ಸ್ವಸ್ಥಾನಗಳಿಗೆ ಹೋಗುತ್ತಿರುವುದು ನಿಜ. ಆದರೆ ಈ Disengagement plan ನಿಂದ ಭಾರತ ತನ್ನದೇ ಗಡಿಯೊಳಗೆ ಎರಡೂವರೆ ಕಿಲೋಮೀಟರ್ ನಷ್ಟು ಹಿಂದಕ್ಕೆ ಸರಿಯಬೇಕಾಗಿ ಬಂದಿದೆಯಾದರೆ ಚೀನಾ ಭಾರತದ ಗಡಿಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಸೇನಾಧಿಕಾರಿಗಳ ಪ್ರಕಾರ ಇದೊಂದು ತಾತ್ಲಾಲಿಕ ವ್ಯವಸ್ಥೆ, ಮತ್ತೊಮ್ಮೆ ಎರಡೂ ದೇಶಗಳ ಸೈನಿಕರು ನೇರ ಸಂಘರ್ಷದಲ್ಲಿ ತೊಡಗದಂತೆ. ಆದರೆ ಈ ತಾತ್ಲಾಲಿಕ ವ್ಯವಸ್ಥೆಯಲ್ಲಿ ನಮ್ಮ ಗಡಿಗಳೇ ಬದಲಾಗಿ ನಮ್ಮ ಭೂಪ್ರದೇಶದಲ್ಲೂ ನಾವು ಗಸ್ತು ತಿರುಗಲಾಗದಿರುವುದು ವಿಪರ್ಯಾಸ.

~ ಅಲ್ಮೇಡ ಗ್ಲ್ಯಾಡ್ಸನ್.

LEAVE A REPLY

Please enter your comment!
Please enter your name here