ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ: ಸರ್ವಪಕ್ಷಗಳ ಸಭೆ ಕರೆದ ರಾಜ್ಯಪಾಲ!

0
721

ನ್ಯೂಸ್ ಕನ್ನಡ ವರದಿ : ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಹಾಗೂ ಬಿಜೆಪಿ ಕಾರ್ಯಕರ್ತರ ಕೊಲೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಬಿಪಿನ್​​ ಬಿಹಾರಿ ಗಂಗೂಲಿ ರಸ್ತೆಯಲ್ಲಿ ಬೃಹತ್​ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದರು. ಲಾಠಿಗೂ ಬಗ್ಗದಿದ್ದಾಗ ಭಾರಿ ಸಂಖ್ಯೆಯಲ್ಲಿ ಸೇರಿದ ಜನರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಈ ಬೆನ್ನಲ್ಲೇ ಇಂದು ರಾಜ್ಯಪಾಲ ಕೆ.ಎನ್.ತ್ರಿಪಾಠಿ ಅವರು ಸಂಜೆ 4 ಗಂಟೆಗೆ ರಾಜಭವನದಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದು, ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು, ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿರುವ ಎಲ್ಲಾ ಪ್ರಮುಖ ಪಕ್ಷಗಳಾದ ಸಿಪಿಐ(ಎಂ), ಕಾಂಗ್ರೆಸ್, ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ.

ಮೂಲಗಳ ಪ್ರಕಾರ ತೃಣಮೂಲ ಕಾಂಗ್ರೆಸ್ ಪಕ್ಷವು ಸಭೆಗೆ ಸಮ್ಮತಿ ಸೂಚಿಸಿದ್ದು, ತಮ್ಮ ಪಕ್ಷದಿಂದ ಪ್ರತಿನಿಧಿಯನ್ನು ಕಳುಹಿಸುವುದಾಗಿ ತಿಳಿಸಿದೆ. ಟಿಎಂಸಿ ಪಕ್ಷದಿಂದ ಪಾರ್ಥೋ ಚಟರ್ಜಿ, ಬಿಜೆಪಿಯಿಂದ ದಿಲೀಪ್ ಘೋಷ್, ಸಿಪಿಐ(ಎಂ) ಪಕ್ಷದಿಂದ ಎಸ್.ಕೆ.ಮಿಶ್ರಾ ಹಾಗೂ ಕಾಂಗ್ರೆಸ್ ಪಕ್ಷದಿಂದ ಎಸ್.ಎನ್.ಮಿತ್ರಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ನಿರ್ಧಾರವನ್ನು ಸ್ವಾಗತಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, ಈ ಕೆಲಸವನ್ನು ರಾಜ್ಯ ಸರ್ಕಾರ ಮೊದಲೇ ಮಾಡಬೇಕಿತ್ತು. ಈ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿಭಾಯಿಸಬೇಕಿತ್ತು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here