ಗಡ್ಡ ಬಿಟ್ಟವರೆಲ್ಲಾ ಉಗ್ರರಲ್ಲ, ವದಂತಿಗಳಿಗೆ ಕಿವಿಗೊಡಬೇಡಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ

0
445

ನ್ಯೂಸ್ ಕನ್ನಡ ವರದಿ(08.5.19): ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ್ದ ಉಗ್ರಗಾಮಿಗಳು ಬೆಂಗಳೂರಿನ ಮೆಟ್ರೋ ರೈಲ್ವೆ ಸ್ಟೇಷನ್ ನಲ್ಲಿ ಕಂಡು ಬಂದಿದ್ದಾರೆ ಎಂಬ ವದಂತಿಯು ರಾಜ್ಯಾದ್ಯಂತ ಆತಂಕದ ಪರಿಸ್ಥಿತಿಯನ್ನು ನಿರ್ಮಿಸಿದೆ. ಈ ಕುರಿತಾದಂತೆ ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ಶಂಕಿತ ವ್ಯಕ್ತಿ ಯಾರು ಎಂದು ನಾವು ಪತ್ತೆ ಹಚ್ಚುತ್ತೇವೆ. ಗಡ್ಡ ಬಿಟ್ಟವರೆಲ್ಲಾ ಉಗ್ರರಲ್ಲ… ಯಾರೂ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಲಹೆ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಓರ್ವ ವ್ಯಕ್ತಿ ಮೆಟ್ರೋ ಸಟೇಷನ್ ಗೆ ಬಂದಿದ್ದು ನಿಜ. ಒಳಗೆ ಬರುವಾಗ ಮೆಟಲ್​ ಡಿಟೆಕ್ಟರ್​ ನಲ್ಲಿ ಶಬ್ದ ಬಂದಿದೆ. ಈ ವೇಳೆ ಸೆಕ್ಯುರಿಟಿ ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ತನ್ನ ಬಳಿ ಬೆಲ್ಟ್​​ ಮತ್ತು ಹಣ ಇದೆ ಎಂದು ತಿಳಿಸಿದ್ದ. ಇದೇ ವೇಳೆ ಮತ್ತೊಬ್ಬರನ್ನು ತಪಾಸಣೆ ನಡೆಸುವಾಗ ಆ ವ್ಯಕ್ತಿ ಮೆಟ್ರೋ ಸ್ಟೇಷನ್​ ಹೊರಗೆ ಹೋಗಿದ್ದಾನೆ. ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಆತನ ಬಳಿ ಶಸ್ತ್ರಾಸ್ತ್ರಗಳು ಇದ್ದವು, ಆತ ಮೆಟ್ರೋ ಸ್ಟೇಷನ್​ ಸಿಬ್ಬಂದಿ ಮತ್ತು ಸೆಕ್ಯುರಿಟಿಗೆ ಹಣ ನೀಡಿದ್ದಾನೆ. ಆತನ ಬಳಿ ಬ್ಯಾಕ್​ಪ್ಯಾಕ್​ ಇತ್ತು ಎಂಬುದೆಲ್ಲಾ ಸುಳ್ಳುಗಳು. ವದಂತಿಗಳಿಗೆ ಕಿವಿಕೊಡಬೇಡಿ. ಗಡ್ಡ ಬಿಟ್ಟ ಎಲ್ಲರನ್ನೂ ಉಗ್ರ ಎನ್ನುವುದಕ್ಕೆ ಆಗುವುದಿಲ್ಲ. ಶಂಕಿತ ವ್ಯಕ್ತಿಯನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸುನಿಲ್​ ಕುಮಾರ್​ ಅವರು ತಿಳಿಸಿದರು.

LEAVE A REPLY

Please enter your comment!
Please enter your name here