Thursday August 13 2015

Follow on us:

Contact Us

ತುಳುನಾಡಿನ ಪಾಳೆಯಗಾರಿಕೆಯ ಪಳೆಯುಳಿಕೆ: ಉತ್ತರಕ್ರಿಯೆಯಲ್ಲಿ ಕಾಲೇ ಕೋಲ 

indira 2

ಡಾ. ಇಂದಿರಾ ಹೆಗ್ಗಡೆ

 ನಮ್ಮ ಓದುಗರಲ್ಲಿ ಕೆಲವರಾದರೂ “ರುಡಾಲಿ’ ಹಿಂದಿ ಸಿನೆಮಾ ನೋಡಿರಬಹುದು. ಆ ಸಿನಿಮಾದಲ್ಲಿ ಜಮೀನ್ದಾರ ಮನೆಯ ಯಜಮಾನ ಸತ್ತಾಗ ಮನೆಯವರು ಅಳುವುದನ್ನು ತೋರಿಸಿಲ್ಲ. ಅದೇ ಜಮೀನ್ದಾರಿ ಮನೆಯ ಸೇವಕ ವರ್ಗದ ಮಹಿಳೆಯರು ಅಳುವುದನ್ನು ತೋರಿಸಲಾಗಿದೆ. ಅಲ್ಲಿ ಒಬ್ಬಾಕೆ ಅಳುವವಳ(ರುಡಾಲಿ) ಕಥೆ ಸಿನೆಮಾ ಆಗಿದೆ. ಅಂದರೆ ಜಮೀನ್ದಾರರ ಮನೆಯಲ್ಲಿ ಯಜಮಾನ ಸತ್ತರೆ ಅಳುವವರು ಸೇವಕ ವರ್ಗ.  ತುಳುನಾಡಿನಲ್ಲಿಯೂ ಗುತ್ತು ಬೀಡುಗಳ ಗಡಿಹಿಡಿದ ಯಜಮಾನರು, ಮತ್ತು ಕೆಲವು ಜಮೀನ್ದಾರ ಮನೆಗಳ ಯಜಮಾನ/ಯಜಮಾನಿ ಸತ್ತಾಗ ಮೂಲದ ಸೇವಕ ವರ್ಗ, ತಲೆಯ ಹಿಂದೆ ಕೈ ಕಟ್ಟಿ ಅಳುವ ಪದ್ಧತಿ ರೂಢಿಯಲ್ಲಿ ಇತ್ತು. ಸತ್ತ ದಿನದಿಂದ ಆರಂಭವಾಗಿ ಉತ್ತರ ಕ್ರಿಯೆಯವರೆಗೆ ಮುಂಜಾನೆ ಮತ್ತು ಮುಸ್ಸಂಜೆ ಮೂಲದವರು ಧನಿಯ ಮನೆಗೆ ಬಂದು ಅಳುತ್ತಿದ್ದರು. ಆ ಸಂದರ್ಭದಲ್ಲಿ ಕೊರಗರು ಶೋಕ ಸೂಚಕ ‘ಧಗರೆ’ ಹಾಕುತ್ತಿದ್ದರು. ಸತ್ತ ದಿನದಿಂದ ಉತ್ತರ ಕ್ರಿಯೆಯ ದಿವಸ ದೂಪೆಗೆ ಅನ್ನ ತೆಗೆದುಕೊಂಡು ಹೋಗುವವರೆಗೂ ಮೂಲದ ಆಳುಗಳು ಅಳುವ ಪದ್ಧತಿ ರೂಢಿಯಲ್ಲಿ ಇತ್ತು.
ಕಾಲೇ ಕೋಲ : ಜಮೀನ್ದಾರರ ಮನೆಯ ಇನ್ನೊಂದು ವಿಶಿಷ್ಟ ಆಚರಣೆ ಕಾಲೇ ಕೋಲ ಅಥವಾ ಎರು ಕೋಲ, ಮತ್ತು ಕುದುರೆ ಕೋಲ. ಈ ಆಚರಣೆಯ ಕಲಾವಿದರು ನಲಿಕೆ (ನರ್ತನ) ಜನಾಂಗ. ಇವರು ಕಾಡಿನ ಮೂಲದವರು. ಹೀಗಾಗಿ ಕಾಡಿನ ಮೂಲದ ದೈವಗಳಿಗೆ ಇವರು ನರ್ತಕರು. ಕಾಲೆಕೋಲ, ಪಣವು ಬಿತ್ತುನು ಮುಂತಾದ ಆಚರಣೆಗಳಲ್ಲಿ ಇವರು ನರ್ತಕರು.
ಕುದುರೆ ಕೋಲ: ಬಿದಿರಿನ ಕುದುರೆ ರಚಿಸಿ ಅದರ ನಡುವೆ ಸಿರಿ ಒಲಿ ಕಟ್ಟಿದ ಪಾತ್ರದಾರಿ ನಿಂತು ಬಿದಿರಿನ ಕುದುರೆಯೊಂದಿಗೆ ನರ್ತಿಸುತ್ತಾನೆ. ಇದನ್ನು ಕುದುರೆ ಕೋಲ ಎನ್ನುತ್ತಾರೆ. ಕುದುರೆ ಕೋಲ ಕಂಬುಲದಲ್ಲಿಯೂ ಇದೆ.
ಎರುಕೋಲ: ಸಾವಿಗೀಡಾದ ಯಜಮಾನನ ಮಡದಿಯ ಮನೆಯವರು ‘ಪ್ರೇತ ಪಾತ್ರಧಾರಿ (ನಲ್ಕೆಯವ)’ಯನ್ನು ಕೋಣದ ಮೇಲೆ ಕೂರಿಸಿ ಮೆರವಣಿಗೆಯಲ್ಲಿ ಬರುತ್ತಾರೆ. ಇವರನ್ನು ‘ಬಂಟ ಪಾತ್ರಿ’ ಇದಿರುಗಾಣಬೇಕು. ಈತ ಕಂಬುಲದ ಬಂಟ (ನಾಗಬಿರ್ಮೆರ್)ನನ್ನು ಹೋಲುತ್ತಾನೆ. ಬಂಟ ಪಾತ್ರಿಯ ತಲೆಗೆ ‘ಅಪ್ಪರಂಬು’(ಕಂಗಿನ ಪಾಲೆಯಿಂದ ರಚಿಸಿದ ಮೂರು ಕವಲುಗಳ ಮುಡಿ/ಕಿರೀಟ)ಧರಿಸಬೇಕು. ಎರಡೂ ಕೈಗಳಿಗೆ ಪುಂಡೈ (ತೆಂಗಿನ ಎಳೆಗರಿಗಳಿಂದ ರಚಿಸಿರುವ ಕೈ ಬಳೆ) ಕಟ್ಟಬೇಕು. ಸೊಂಟದ ಕೆಳಭಾಗ ಸೀರೆ ಉಡಬೇಕು. ಉತ್ತರ ಕ್ರಿಯೆಯ ದಿನ ‘ಅರಿ ಬಿರಾವುನು’ ವರೆಗೆ ಇವರು ನಲಿಯುತ್ತಾ ಇರಬೇಕು. ಕುದುರೆ ಕೋಲ ಐದು ಜೊತೆಯೂ ಇರಬಹುದು. ಸಾವಿನ ಎರುಬಂಟನಿಗೆ ಮುಖಕ್ಕೆ ಕಪ್ಪು ಬಳಿದರೆ ಕಂಬುಲದ ಎರುಬಂಟನಿಗೆ ಮುಖಕ್ಕೆ ಅರದಳ ಹಾಕುತ್ತಾರೆ. ಸಾವಿನ ದಿನದ ಸಾಮೂಹಿಕ ಭೋಜನ ಮುಗಿಯುವವರೆಗೆ ಇವರು ವೇಷ ಬಿಚ್ಚಬಾರದು.
“ಪಣವು ಬಿತ್ತುನು”:
       ಜಮೀನ್ದಾರರು ಸತ್ತಾಗ ನಡೆಯುವ ಇನ್ನೊಂದು ವಿಶಿಷ್ಟ ಆಚರಣೆ “ಪಣವು ಬಿತ್ತುನು”. (ಹಣ ಬಿತ್ತುವುದು) ಉತ್ತರ ಕ್ರಿಯೆಯ ದಿನ ದೂಪೆಯ ಗದ್ದೆಯಲ್ಲಿ ಬೋರಿ (ಎತ್ತು) ಕರುಗಳಿಗೆ ನೊಗ ನೇಗಿಲು ಕಟ್ಟಿ ಹೊಲ ಉಳಲು ಸಿದ್ಧಗೊಳಿಸಬೇಕು. ನಲ್ಕೆಯವರು ಸೊಂಟಕ್ಕೆ ತೆಂಗಿನ ಸಿರಿ ಒಲಿ ಗರಿಗಳನ್ನು (ತಿರಿ) ಸೊಂಟಕ್ಕೆ ಸುತ್ತಿ ಕೋಲದ ದೈವ ಪಾತ್ರಿಯಂತೆ ಸಿದ್ಧನಾಗಿರುತ್ತಾನೆ. ಈತ ಸುಡಲದ ಗದ್ದೆಯನ್ನು ಮೂರು ಸುತ್ತು ಉಳುತ್ತಾನೆ. ನಲ್ಕೆಯು ಉಳುತ್ತಾ ಮುನ್ನಡೆದಂತೆ ಸತ್ತ ವ್ಯಕ್ತಿಯ ಕ್ರಿಯೆ ಹಿಡಿದ ಮಗ ಪಣವು (ಹಣ)ವನ್ನು ಗದ್ದೆಗೆ ಬಿತ್ತುತ್ತಾ ಅವರ ಹಿಂದೆ ನಡೆಯುತ್ತಾನೆ.  ಬಿತ್ತಿದ ಹಣವನ್ನು ಕ್ಷೌರಿಕ ಆರಿಸುತ್ತಾ ನಡೆಯುತ್ತಾನೆ. ಮೂರನೆಯ ಸುತ್ತಿನಲ್ಲಿ ಎತ್ತುಗಳನ್ನು ವೇಗವಾಗಿ ಓಡಿಸುತ್ತಾರೆ. ಹಾಗೆ ಓಡಿಸುವಾಗ ಎತ್ತುಗಳು ದೂಪೆಯ ಗದ್ದೆಯ ಬದು (ಪುಣಿ) ದಾಟಿದರೆ ನೊಗ ನೇಗಿಲು ಸಮೇತ ಎತ್ತುಗಳು ಮನೆಯ ಯಜಮಾನನಿಗೆ ಸೇರುತ್ತದೆ. ಒಂದು ವೇಳೆ ಭಂಡಾರಿ (ಕ್ಷೌರಿಕರ ಮೇಲ್ಪಂಗಡ)ಮತ್ತು ಮಡಿವಾಳ ಎತ್ತುಗಳನ್ನು ತಡೆದು ನಿಲ್ಲಿಸಿದರೆ ಆಗ ಎತ್ತುಗಳು ನೊಗ ನೇಗಿಲು ಸಮೇತ ನಲ್ಕೆಯವರನಿಗೆ ಸೇರುತ್ತದೆ. ಬಿತ್ತಿ ಆರಿಸಿದ ಹಣವನ್ನು ನಲ್ಕೆಯವರು, ಮಡಿವಾಳರು, ಭಂಡಾರಿ ಹಂಚಿಕೊಳ್ಳುತ್ತಾರೆ.
ನಾನು ತುಳುನಾಡಿನ ಸಾಂಸ್ಕೃತಿಕ ಅಧ್ಯಯನವನ್ನು ಕೈಗೊಂಡಿದ್ದು 1995ರಿಂದ. ಆಗಲೂ ‘ಪಣವು ಬಿತ್ತುನು’ ಆಚರಣೆ ನಡೆದುದನ್ನು ನೋಡಿದವರಿರಲಿಲ್ಲ. ಕೇಳಿದವರಿದ್ದರು. ನಲ್ಕೆಯವರು ಮಾಹಿತಿ ನೀಡಿದ್ದರು. ಆದರೆ ಕಾಲೇ ಕೋಲವನ್ನು ನಡೆಸಿದ ಕೆಲವೊಂದು ಉದಾಹರಣೆಗಳು ದೊರಕಿವೆ. ಈ ಎಲ್ಲಾ ಆಚರಣೆಗಳ ಬಗ್ಗೆ ಅರಿವು ಇರುವುದು ನಲ್ಕೆಯವರಿಗೆ ಮಾತ್ರ ಎಂದರೆ ತಪ್ಪಾಗದು. ನಲ್ಕೆಯವರು ಪರಿಣಿತರು. ಆದರೆ ನಶಿಸಿ ಹೋದ ಸಂಪ್ರದಾಯ ಮರುಜೀವಗೊಂಡಾಗ ಕೆಲವೊಂದು ವಿಷಯಗಳು ಮೂಲದಲ್ಲಿ ಇದ್ದಂತೆ ಇರುವ ಸಾಧ್ಯತೆ ಕಡಿಮೆ. (ಆಧಾರ: ಡಾ.ಇಂದಿರಾ ಹೆಗ್ಗಡೆ ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ)kola
ಸಾಂಪ್ರದಾಯಿಕ ಕಂಬುಲವು ಕೃಷಿ ಸಂಸ್ಕೃತಿಯ ಪೋಷಣೆಗಾಗಿ, ನಾಗಬಿರ್ಮೆರ್ ಉಪಾಸನಾ ಆಚರಣೆಯ ಭಾಗವಾಗಿ ನಡೆಯುತ್ತಿತ್ತು. ಸ್ವರ್ಗ ನರಕಗಳ ಕಲ್ಪನೆಗಳು ಇಲ್ಲದ ತುಳು ನೆಲಮೂಲದ ನಂಬಿಕೆಯಲ್ಲಿ ‘ಇದ್ದರೆ ಇಲ್ಲಿ ಈ ಭೂಮಿಯಲ್ಲಿ, ಸತ್ತರೆ ಅಲ್ಲಿ ನಾಗಬೆರ್ಮರ ಬಳಿ’ ಎಂಬ ಮಾತಿದೆ. ಮನುಷ್ಯ ಸತ್ತರೆ ತನ್ನ ಕುಲದ ನಾಗಬೆರ್ಮೆರ್ ಬಳಿ ಸೇರುತ್ತಾನೆ ಎನ್ನುವುದು ನಂಬಿಕೆ. ನಾಗಬಿರ್ಮೆರ್ ಇರುವುದು ಮೂಲತಾನದಲ್ಲಿ. ಮೂಲತಾನಗಳು ಕಂಬುಲ ಗದ್ದೆಗಳ ಬಳಿ ಇವೆ. ಹೀಗಾಗಿ ಸಾವಿನ ಆಚರಣೆಗಳು ಮತ್ತು ಕಂಬುಲದ ಆಚರಣೆಗಳು ಸಾಮ್ಯತೆಯನ್ನು ಹೊಂದಿವೆ.
Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

10 ನಿಮಿಷದ ಸ್ಪರ್ಧೆಗಾಗಿ ಎರಡು ವರ್ಷ ತರಬೇತಿ ನಿರತರಾಗುವವರ ಮಧ್ಯೆ..   

ಮುಂದಿನ ಸುದ್ದಿ »

ಸ್ವಾತಂತ್ರ್ಯದ ಹಕ್ಕುಗಳಿಗಾಗಿ ನಿರಂತರ ಹೋರಾಟದ ಅನಿವಾರ್ಯತೆ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×