Thursday February 4 2016

Follow on us:

Contact Us

ಸಾವರ್ಕರ್ ಮತ್ತು ನೇತಾಜಿಯವರ ಆ ಭೇಟಿ!

nataraju-v11211-121

-ನಟರಾಜು ವಿ.

ವರ್ತಮಾನಕ್ಕೆ ಹೇಗೆ ನೂರೆಂಟು ಮುಖಗಳೋ ಅದೇ ರೀತಿ ಇತಿಹಾಸಕ್ಕೂ ನೂರೆಂಟು ಮುಖಗಳಿರುತ್ತವೆ. ವಿಪರ್ಯಾಸವೆಂದರೆ  ಇತಿಹಾಸವನ್ನು ತಮಗೆ ಬೇಕಾದಂತೆ ಕಾಲದಿಂದ ಕಾಲಕ್ಕೆ ಸರಳ ರೇಖಾತ್ಮಕವಾಗಿ ಮರುನಿರೂಪಿಸಿಕೊಳ್ಳುವ ತುರ್ತಿನಲ್ಲಿ ವಿವಿಧ ಗುಂಪು, ಪಂಥ, ಧರ್ಮ ಹಾಗೂ ರಾಜಕೀಯ ಪಕ್ಷಗಳು ಸಕ್ರಿಯವಾಗಿರುತ್ತವೆ. ಆ ಮೂಲಕ ವರ್ತಮಾನದ ಸದ್ಯದ ಅಗತ್ಯಕ್ಕೆ ತಕ್ಕಂತೆ ಇತಿಹಾಸದಲ್ಲಿ ಪಾಲನ್ನು ಕೇಳುವ ಪ್ರಯತ್ನದಲ್ಲಿರುತ್ತವೆ.

ಹೀಗೆ ಪಾಲು ಕೇಳುವಾಗ ಎಲ್ಲರೂ ತಮ್ಮನ್ನು ಕೇಂದ್ರದಲ್ಲಿಟ್ಟುಕೊಂಡೇ ದೊಡ್ಡ ಪಾಲನ್ನು ಕೇಳುತ್ತಾರೆ. ಕಾಲನ ಬಳಿ ತಮಗೆ ಕೊಡಲು ಹೆಚ್ಚಿನದೇನೂ ಇಲ್ಲ ಎಂದರೆ ಅಕ್ಕಪಕ್ಕದವರ ಇತಿಹಾಸವನ್ನು ತಮ್ಮ ಇತಿಹಾಸದ ಬಟ್ಟಲಿಗೆ ಬಗ್ಗಿಸಿಕೊಳ್ಳುವ ಚಾತುರ್ಯ ತೋರಲು ಮುಂದಾಗುತ್ತಾರೆ. ಇಂಥದ್ದೇ ಚತುರ ನಡೆಗಳನ್ನು ಪ್ರದರ್ಶಿಸುತ್ತಿರುವ ಸಂಘ ಪರಿವಾರ ಏಕಕಾಲಕ್ಕೆ ಅಕ್ಕಪಕ್ಕದವರ ಬಟ್ಟಲಿನ ಗತವನ್ನೆಲ್ಲಾ ತನ್ನ ಪಾತ್ರೆಗೆ ಬಗ್ಗಿಸಿಕೊಂಡು ರಾಡಿಮಾಡಿಕೊಳ್ಳುತ್ತಿದೆ. ಸಂಘ ಪರಿವಾರದ ಆಲೋಚನೆಗಳನ್ನೆಲ್ಲಾ ಕಾರ್ಯಗತಗೊಳಿಸಲು ಮುಂದಾಗುತ್ತಿರುವ ಬಿಜೆಪಿ ಗತದ ಕತ್ತಲಲ್ಲಿ ತನಗೆತಾನೇ ಢಿಕ್ಕಿ ಹೊಡೆದುಕೊಳ್ಳುತ್ತ, ತೊಡರಿ ಬೀಳುವ ದಿನಗಳು ಹತ್ತಿರದಲ್ಲಿಯೇ ಇವೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ರ ಹೆಗಲನ್ನೇರಿ ಇತಿಹಾಸದ ಪಠ್ಯವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚಿಕೊಳ್ಳುವ ಸಂಘ ಪರಿವಾರದ ಚಾತುರ್ಯದ ಬಗ್ಗೆ, ವರ್ತಮಾನದ ರಾಜಕಾರಣಕ್ಕೆ ಬೋಸ್ ಅವರನ್ನು ದಾಳವಾಗಿ ಬಳಸಿಕೊಂಡು ಅವರೆಡೆಗೆ ವಂಗಬಂಧುಗಳಿಗಿರುವ ಅಪರಿತ ಅಭಿಮಾನವನ್ನು ಮತಗಳಾಗಿಸಿಕೊಳ್ಳುವ ಬಿಜೆಪಿಯ ನಡೆಯ ಬಗ್ಗೆ ಈಗ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ವಿವೇಕಾನಂದ ಹಾಗೂ ಸುಭಾಷ್ ಚಂದ್ರ ಬೋಸ್ – ಈ ಇಬ್ಬರನ್ನೂ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕ್ರಮವಾಗಿ ತನ್ನ ನೆಚ್ಚಿನ ಸಾಂಸ್ಕೃತಿಕ ಹಾಗೂ ರಾಜಕಾರಣದ ಹೀರೋಗಳೆಂದು ಬಿಂಬಿಸುವ ಭರಪೂರ ಉಮೇದು ಬಿಜೆಪಿಯಲ್ಲಿ ಕಂಡುಬರುತ್ತಿದೆ. ಇದಲ್ಲದೆ ಬಂಗಾಳಕ್ಕೂ, ಹಿಂದೂ ರಾಷ್ಟ್ರವಾದಿ ಕ್ರಾಂತಿಕಾರಿಗಳಿಗೂ ಇರುವ ಅವಿನಾಭಾವ ಸಂಬಂಧವನ್ನೂ ಹಾಗೂ ಹಿಂದೂ ರಾಷ್ಟ್ರವಾದಿ ಕ್ರಾಂತಿಕಾರಿ ತತ್ವದಲ್ಲಿ ನಂಬಿಕೆ ಇಟ್ಟಿರುವ ಹಿಂದೂ ಮಹಾ ಸಭಾ, ರಾಷ್ಟ್ರೀಯ ಸ್ವಯಂ ಸೇವಾ ಸಂಘಗಳಿಗೂ ಬಂಗಾಳಕ್ಕೂ ಇರುವ ಸುದೀರ್ಘ ನಂಟನ್ನು ಜಾಗರೂಕತೆಯಿಂದ ಮುಂದೆ ಮಾಡುವ ಮೂಲಕ ಬಂಗಾಳದಲ್ಲಿ ತಾನು ಹೊಂದಿರುವ ಇತಿಹಾಸವನ್ನು ನೆನಪಿಸುವ ಉದ್ದೇಶವೂ ಇದೆ. ಬಾಂಗ್ಲಾ ದೇಶದಿಂದ ನುಸುಳುವ ಅಕ್ರಮ ವಲಸಿಗರು ದೇಶದ ಭದ್ರತೆಗೆ ತರುವ ಅಪಾಯವನ್ನೂ, ಇದನ್ನು ಎದುರಿಸಲು ಹಿಂದೂ ರಾಷ್ಟ್ರವಾದಿ ಸರ್ಕಾರವೊಂದು ಪಶ್ಚಿಮ ಬಂಗಾಳದಲ್ಲಿ ಇರಬೇಕಾದ ಜರೂರತ್ತನ್ನು ಮೊದಲಿನಿಂದಲೂ ಹಿಂದೂ ಸಂಘಟನೆಗಳು ಪ್ರತಿಪಾದಿಸುತ್ತಲೇ ಬಂದಿವೆ.

ಇನ್ನು  ನರೇಂದ್ರ ದತ್ತ (ಸ್ವಾಮಿ ವಿವೇಕಾನಂದ) ಅವರೇ ತನ್ನ ರೋಲ್ ಮಾಡೆಲ್ ಎಂದು ಸದಾಕಾಲ ಬಿಂಬಿಸಿಕೊಳ್ಳುವ ಪ್ರಧಾನಿ ‘ನರೇಂದ್ರ’ ಮೋದಿಯವರು ತಮ್ಮ ಮೇಲೆ ರಾಮಕೃಷ್ಣ ಮಠದ ಅತೀವ ಪ್ರಭಾವವಿದೆ ಎನ್ನುವುದನ್ನು ಸಂದರ್ಭ ಒದಗಿ ಬಂದಾಗಲೆಲ್ಲ ಹೇಳಿದ್ದಾರೆ. ವಿವೇಕಾನಂದರ ಹಾದಿಯಲ್ಲಿ ಸಾಗುತ್ತ ಅವರು ಕಂಡ ಉಜ್ವಲ ಭಾರತದ ಕನಸನ್ನು ತಾನು ನನಸು ಮಾಡುತ್ತಿದ್ದೇನೆ ಎನ್ನುವ ಭಾವನೆ ಪ್ರಧಾನಿಯವರಲ್ಲಿರುವಂತಿದೆ! ಪ್ರಧಾನಿಯವರನ್ನು ಹಾಗೂ ವಿವೇಕಾನಂದರನ್ನು ಸಮೀಕರಿಸುವಂಥ ಅನೇಕ ನವಿರು ಪ್ರಯತ್ನಗಳನ್ನು ಕೆಲವು ವರ್ಷಗಳಿಂದಲೂ ಮೋದಿಯವರ ಹಿಂಬಾಲಕ ಪಡೆ ಮಾಡುತ್ತಲೇ ಬಂದಿದೆ.

ಅಂದಹಾಗೆ, ಇದೆಲ್ಲವನ್ನೂ ಮೀರಿದ ಒಂದು ತಂತು ಸಂಘ ಪರಿವಾರವನ್ನೂ ಹಾಗೂ ಬಂಗಾಳವನ್ನು ಬೆಸೆಯುತ್ತದೆ. ಅದು ಸಂಘ ಪರಿವಾರದ ಹೃದಯದಲ್ಲಿ ಸದಾ ವಿರಾಜಮಾನವಾಗಿರುವ ವಿನಾಯಕ ದಾಮೋದರ ಸಾವರ್ಕರ್ ಹಾಗೂ ಬಂಗಾಳಿಗಳ ಮನದಲ್ಲಿ ನೆಲೆ ನಿಂತಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಡುವಿನ ಭೇಟಿ. ನೇತಾಜಿ ಅವರು ಜರ್ಮನಿಗೆ ಹೋಗಿ ಇಂಡಿಯನ್ ಲೀಜನ್ ಅನ್ನು ಕಟ್ಟಿದ್ದು ಹಾಗೂ ಜಪಾನ್ ತಲುಪಿ ರಾಸ್ ಬಿಹಾರಿ ಬೋಸ್ ಅವರನ್ನು ಭೇಟಿಯಾಗಿ ‘ಆಜಾದ್ ಹಿಂದ್ ಫೌಜ್’ ಹೊಣೆ  ಹೊತ್ತಿದ್ದರ ಹಿಂದೆ ಸಾವರ್ಕರ್ ಅವರ ಪ್ರೇರಣೆ, ಸಲಹೆ ಸೂಚನೆಗಳಿವೆ ಎಂದು ಇಂದಿಗೂ ಸಂಘ ಪರಿವಾರದ ಚಿಂತಕರ ಚಾವಡಿ ಬಲವಾಗಿ ಪ್ರತಿಪಾದಿಸುತ್ತಿದೆ. ಇಷ್ಟು ದಿನ ಮುಖ್ಯವಾಹಿನಿಯ ಇತಿಹಾಸದ ಪಠ್ಯದಲ್ಲಿ ಅಷ್ಟೇನೂ ಮಹತ್ವದ ಘಟನೆಯಾಗಿ ದಾಖಲಾಗದೆ ಉಳಿದ, ಬಹುತೇಕ ಆಧುನಿಕ ಇತಿಹಾಸಕಾರರಿಗೆ ಅರಿವೇ ಇಲ್ಲದ ಈ ಭೇಟಿಯನ್ನು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರ ಬಿಂದುವಿಗೆ ಎಳೆದು ತರುವ ಉದ್ದೇಶ ಸಂಘ ಪರಿವಾರದ ಚಿಂತಕರದ್ದು. ಆ ಮೂಲಕ ಭಾರತದ ಸ್ವಾತಂತ್ರ್ಯ ಕಥನದ ಇತಿಹಾಸವನ್ನು ನೇತಾಜಿ ಹಾಗೂ ಸಾವರ್ಕರ್ ಅವರನ್ನು ಮುಂಚೂಣಿಗೆ ತಂದು ಮರುನಿರೂಪಿಸುವ ಬಯಕೆ ಅವರದು. ಬಂಗಾಳದ ಚುನಾವಣೆಯ ವೇಳೆ ಈ ವಿಷಯಗಳೆಲ್ಲವೂ ಮುಂಚೂಣಿಗೆ ಬಂದರೆ ಯಾವುದೇ ಅಚ್ಚರಿ ಇಲ್ಲ.

ಬೋಸ್ ಅವರು ಕಾಂಗ್ರೆಸ್ ನೊಂದಿಗಿನ ತಮ್ಮ ನಂಟನ್ನು ಕಡಿದುಕೊಂಡು ‘ಫಾರ್ವರ್ಡ್ ಬ್ಲಾಕ್’ ಸ್ಥಾಪಿಸಿದ ಮೇಲೆ ದೇಶದೆಲ್ಲೆಡೆ ಚದುರಿದಂತೆ ಇದ್ದ, ಭಾರತದ ಸ್ವಾತಂತ್ರ್ಯದ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ಹೊಂದಿದ್ದ ಕಾಂಗ್ರೇಸೇತರ ಸಂಘಟನೆಗಳೊಂದಿಗೆ ಕೈ ಜೋಡಿಸಿ ಭಿನ್ನ ರೀತಿಯಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಮುನ್ನೆಡೆಸುವ ಆಲೋಚನೆಯಲ್ಲಿರುತ್ತಾರೆ. ಇದರ ಪ್ರಯತ್ನವಾಗಿ ಅವರು ಹಿಂದೂ ಮಹಾ ಸಭಾ ಹಾಗೂ ಮುಸ್ಲಿಂ ಲೀಗ್ ನ ನಾಯಕರಾದ ವಿನಾಯಕ ದಾಮೋದರ ಸಾವರ್ಕರ್ ಹಾಗೂ ಮಹಮದ್ ಅಲಿ ಜಿನ್ನಾ ಅವರನ್ನೂ ಭೇಟಿಯಾಗುತ್ತಾರೆ. 1940ರ ಜೂನ್ 22ರಂದು ಬೋಸ್ ಅವರು ತಮ್ಮ ಮುಂಬೈ ಭೇಟಿ ವೇಳೆ ಸಾವರ್ಕರ್ ಅವರನ್ನು ದಾದರ್ ನ ಅವರ ಗೃಹ ಸಾವರ್ಕರ್ ಸದನದಲ್ಲಿ ಭೇಟಿಯಾಗಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಭೇಟಿಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಸಣ್ಣದೊಂದು ತುಣುಕು ಸುದ್ದಿ ಹೊರತು ಪಡಿಸಿದರೆ ಹೆಚ್ಚಿನ ಮಾಹಿತಿ ಹೊರಜಗತ್ತಿಗೆ ಲಭ್ಯವಾಗುವುದಿಲ್ಲ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿ ಜೂನ್ 24ರಂದು ಪ್ರಕಟವಾಗುತ್ತದೆ. ವರದಿ ಈ ಭೇಟಿ ಫಲಪ್ರದವಾಗಿಯೇನೂ ಇರಲಿಲ್ಲ ಎಂದು ಧ್ವನಿಸುತ್ತದೆ. ಈ ಭೇಟಿ ಸಹಜವಾಗಿಯೇ ಅಂದಿನ ಬ್ರಿಟಿಷ್ ಆಡಳಿತದ ಗಮನ ಸೆಳೆಯುತ್ತದೆ, ಮತ್ತು ಈ ಕುರಿತು ಪೊಲೀಸ್ (ಗುಪ್ತಚರ) ವರದಿಯನ್ನು ಕೇಳಲಾಗುತ್ತದೆ. ಜೂನ್ 29ರಂದು ಭೇಟಿಯ ವರದಿಯನ್ನು ನೀಡುವ ಗೃಹ ಇಲಾಖೆ ‘ಸ್ವಾತಂತ್ರ್ಯ ಚಳವಳಿಯಲ್ಲಿ ಫಾವರ್ಡ್ ಬ್ಲಾಕ್ ಹಾಗೂ ಹಿಂದೂ ಮಹಾ ಸಭಾ ಪರಸ್ಪರ ಸಹಕಾರದಿಂದ ತೊಡಗಿಕೊಳ್ಳುವ ಸಾಧ್ಯತೆಗಳ ಬಗ್ಗೆ ಭೇಟಿಯಲ್ಲಿ ಚರ್ಚಿಸಲಾಗಿದೆ’, ಎಂದು ಹೇಳುತ್ತದೆ. ಇದಾರಚೆಗೆ ಫಾರ್ವರ್ಡ್ ಬ್ಲಾಕ್ ನ ದಾಖಲೆಗಳಲ್ಲಾಗಲಿ, ಹಿಂದೂ ಮಹಾ ಸಭಾದ ದಾಖಲೆಗಳಲ್ಲಾಗಲಿ ಈ ಭೇಟಿಯ ವಿಷಯ ಎಲ್ಲಿಯೂ ಪ್ರಸ್ತಾಪವಾಗುವುದಿಲ್ಲ. ಬ್ರಿಟಿಷ್ ಸರ್ಕಾರದ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಈ ಇಬ್ಬರ ಭೇಟಿಯ ಬಗ್ಗೆ ದಾಖಲೆಗಳನ್ನು ಇರಿಸುವುದು ಅನಗತ್ಯವಾಗಿ ಅನುಮಾನಗಳಿಗೆ ಎಡೆಮಾಡಬಹುದಾದ ಸಹಜ ಎಚ್ಚರಿಕೆ ಇದರ ಹಿಂದೆ ಕೆಲಸ ಮಾಡಿರಬಹುದು ಎನ್ನುವ ಅಭಿಪ್ರಾಯ ಇದೆ.

ಅದೇನೇ ಇದ್ದರೂ, ಈ ಭೇಟಿಯನ್ನು ಇಂದಿಗೂ ಸಾವರ್ಕರ್ ರ ಅನುಯಾಯಿಗಳು ಮಹತ್ವದ ಭೇಟಿ ಎಂದೇ ವ್ಯಾಖ್ಯಾನಿಸುತ್ತ, ನೇತಾಜಿಯವರ ಸಶಸ್ತ್ರ ಹೋರಾಟದಲ್ಲಿ ಸಾವರ್ಕರ್ ರ ಪಾಲು ಸಾಕಷ್ಟಿದೆ ಎನ್ನುವುದನ್ನು ನಿರೂಪಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ನೇತಾಜಿಯವರು ಮುಂದೆ 1944ರ ಜೂನ್ 25ರಂದು ಆಜಾದ್ ಹಿಂದ್ ಫೌಜ್ ರೆಡಿಯೋ ದಲ್ಲಿ ಮಾಡಿದ ಭಾಷಣದಲ್ಲಿ, ‘ ದೂರದರ್ಶಿತ್ವ ಇಲ್ಲದ ಕಾಂಗ್ರೆಸ್ ನಾಯಕರು ಭಾರತೀಯ ಸೇನೆಯ ಸೈನಿಕರನ್ನು ವಿದೇಶೀಯರ ಪರವಾಗಿ ವಿದೇಶಿ ನೆಲದಲ್ಲಿ ಹೋರಾಡುವವರೆಂದು ಜರೆಯುತ್ತಿದ್ದಾಗ ವೀರ ಸಾವರ್ಕರ್ ಮಾತ್ರ ದೂರದೃಷ್ಟಿ ಇಟ್ಟುಕೊಂಡು ಯುವಕರು ಭಾರತೀಯ ಸೇನೆಯನ್ನು ಸೇರುವಂತೆ ಪ್ರೋತ್ಸಾಹಿಸುತ್ತಿರುವ ಸಂಗತಿ ಖುಷಿ ನೀಡಿದೆ. ಹೀಗೆ ಭಾರತೀಯ ಸೇನೆ ಸೇರುವ ಯುವಕರೇ ನಮ್ಮ ಆಜಾದ್ ಹಿಂದ್ ಫೌಜ್ ಗೆ ತರಬೇತಿ ಹೊಂದಿದ ಸೈನಿಕರು ಲಭ್ಯವಾಗುವಂತಾಗಲು ಕಾರಣ” ಎಂದು ಹೇಳಿದ್ದನ್ನು ಸಂಘ ಪರಿವಾರ ಸಾವರ್ಕರ್ ಅವರ ರಣತಂತ್ರದ ಬಗ್ಗೆ ಇರುವ ದೊಡ್ಡ ಸಾಕ್ಷಿಯನ್ನಾಗಿ ಬಿಂಬಿಸುತ್ತಿದೆ. ಇದಲ್ಲದೆ 1943 ಸೆಪ್ಟೆಂಬರ್ ನಲ್ಲಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳನ್ನು ಜಪಾನ್ ವಶಪಡಿಸಿಕೊಂಡ ಸಂದರ್ಭದಲ್ಲಿ ಅಲ್ಲಿ ಪ್ರವಾಸ ಮಾಡುವ ಬೋಸ್ ಅವರು ಸಾವರ್ಕರ್ ಅವರು ಬರೆದ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ- 1857” ಕೃತಿಯ ತಮಿಳು ಅನುವಾದದ ಪ್ರತಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ಹಂಚಿಸಿದರು ಎನ್ನುವುದನ್ನು ನೆನಪಿಸುವ ಪ್ರಯತ್ನದಲ್ಲಿದೆ.

ಸಾವರ್ಕರ್ ಹಾಗೂ ಬೋಸ್ ಅವರನ್ನು ಒಟ್ಟಿಗೆ ತರುವ ಮೂಲಕ ನೆಹರೂ, ಗಾಂಧಿ ಜೋಡಿಯನ್ನು ಮುರಿದು ಸ್ವಾತಂತ್ರ್ಯ ಸಂಗ್ರಾಮದ ಚಳವಳಿಯನ್ನು ಮರುನಿರೂಪಿಸುವ ಹಟ, ಚಟಗಳೆರಡೂ ಬಿಜೆಪಿಯ ಮುಂದಿನ ದಿನಗಳ ರಾಜಕೀಯ ನಡೆಗಳಲ್ಲಿ ಪ್ರಾಶಸ್ತ್ಯ ಪಡೆಯಲಿವೆ. ಸಾವರ್ಕರ್ ಅವರನ್ನು ಬ್ರಿಟಿಷರೊಂದಿಗೆ ಕೈ ಜೋಡಿಸಿದವರು ಎನ್ನುವುದು ಕಾಂಗ್ರೆಸ್ ಪರವಾದ ಇತಿಹಾಸಕಾರರ ವಾದ. ಸತ್ಯ ಇದಕ್ಕೆ ವ್ಯತಿರಿಕ್ತವಾಗಿದೆ ಎಂದು ಬಿಂಬಿಸುವುದು ಸದ್ಯಕ್ಕೆ ಸಂಘ ಪರಿವಾರದ ಮುಂದಿರುವ ಆದ್ಯತೆಯ ವಿಷಯಗಳಲ್ಲೊಂದು. ಬೋಸ್ ಹಾಗೂ ಸಾವರ್ಕರ್ ಅವರನ್ನು ಸಂಕರಿಸುವ ಈ ಯೋಜನೆಗಳಲ್ಲಿ ಬೋಸ್ ರ ಜಾತ್ಯತೀತತೆಯೆಡೆಗಿನ ಬದ್ಧತೆಯನ್ನೂ, ಅಜಾದ್ ಹಿಂದ್ ಫೌಜ್ ಸೈನ್ಯದಲ್ಲಿದ್ದ ಸಮತಾವಾದವನ್ನೂ ಹಿಂದಕ್ಕೆ ತಳ್ಳಿ ಕೇವಲ ಬೋಸ್ ರ ರಾಷ್ಟ್ರವಾದಿ ಚಿಂತನೆಗಳನ್ನಷ್ಟೇ ಮುಖ್ಯವಾಗಿಸಿ ಸಾವರ್ಕರ್ ರ ಹಿಂದೂ ರಾಷ್ಟ್ರವಾದದೊಂದಿಗೆ ಬೆಸೆಯುವ ಘಾಟು ಜೋರಾಗಿಯೇ ಇದೆ.

ಆಜಾದ್ ಹಿಂದ್ ಫೌಜ್ ನ ಮಹತ್ವಾಕಾಂಕ್ಷಿ ಪ್ರಯತ್ನ ಭಾರತೀತಯ ಸ್ವಾತಂತ್ರ್ಯ ಇತಿಹಾಸದಲ್ಲಿ ಕೇವಲ ‘ಮಹತ್ವಾಕಾಂಕ್ಷಿ ಪ್ರಯತ್ನ’ ವಾಗಿ ಮಾತ್ರವೇ ದಾಖಲಾಗುತ್ತದೆ. ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಐ ಎನ್ ಎ ಭಾರತೀಯರಲ್ಲಿ ಒಂದು ಪ್ರೇರಣೆಯಾಗಿ ಗಮನಸೆಳೆಯುತ್ತದೆಯೇ ಹೊರತು ಅಂದಿನ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅದೊಂದು ನಿಷ್ಟಲವಾದ ಪ್ರಯತ್ನವೆಂದು ಅರಿಯಲು ಹೆಚ್ಚು ಸಮಯವೇನೂ ಹಿಡಿಯುವುದಿಲ್ಲ. ಬೋಸ್ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯವಾಗಿ ಸಕ್ರಿಯರಾಗಿರಬಹುದಾಗಿದ್ದ ಅವಕಾಶವನ್ನು ತಮ್ಮದೇ ಆದ ದೃಷ್ಟಿಕೋನಗಳ ಕಾರಣದಿಂದಾಗಿ ಇಲ್ಲವಾಗಿಸಿಕೊಳ್ಳುತ್ತಾರೆ. ಈ ಬಗ್ಗೆ ಮುಂದೆ ಯಾವಾಗಲಾದರೂ ಮತ್ತಷ್ಟು ವಿಷಯಗಳನ್ನು ಹಂಚಿಕೊಳ್ಳೋಣ. ಅದೇನೇ ಇರಲಿ,  ಸದ್ಯದ ಮಟ್ಟಿಗಂತೂ ಬೋಸ್ ಬಿಜೆಪಿಯ ‘ಬಂಧಿ’ …

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಿನ್ನೆಯ ಕನವರಿಕೆಯಲ್ಲಿ…

ಮುಂದಿನ ಸುದ್ದಿ »

ಕಗ್ಗತ್ತಲ ಮೀನು ಶಿಕಾರಿ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×