Thursday March 10 2016

Follow on us:

Contact Us

ಪರಾಂಜಪೆ ಮತ್ತು ಮಧ್ಯಮ ಮಾರ್ಗ

nataraju-v11211-121111

ನಟರಾಜು ವಿ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಬಂಧನದ ಪ್ರಕರಣದ ನಂತರ ‘ರಾಷ್ಟ್ರೀಯವಾದ’ದ ಕುರಿತಾದ ಚರ್ಚೆ ಮುನ್ನೆಲೆಗೆ ಬಂದು ಇದಾಗಲೇ ಸಾಕಷ್ಟು ವಿಚಾರಗಳು, ಅಭಿಪ್ರಾಯಗಳು ದೇಶಾದ್ಯಂತ ಮಂಡನೆಯಾಗಿವೆ. ಇದೇ ಹಿನ್ನೆಲೆಯಲ್ಲಿ ಜೆಎನ್ ಯ ನಲ್ಲಿಯೂ ಸಹ ಕಳೆದ ಕೆಲವು ದಿನಗಳಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯವಾದದ ಕುರಿತಾದ ಉಪನ್ಯಾಸ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಪ್ರಮುಖ ದನಿಗಳು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದರ ಭಾಗವಾಗಿಯೇ ಇತ್ತೀಚೆಗೆ ಜೆಎನ್ ಯು ವೇದಿಕೆಯಲ್ಲಿ ಚಿಂತಕ ಹಾಗೂ ಅದೇ ವಿವಿಯ ಇಂಗ್ಲಿಷ್ ಅಧ್ಯಯನ ಕೇಂದ್ರದ ಪ್ರಾಚಾರ್ಯ ಮಕರಂದ ಪರಾಂಜಪೆ ಸಹ ಮಾತನಾಡಿದ್ದಾರೆ. ಭಾರತೀಯ ಎಡ ಚಿಂತನೆಗಳು ರೂಪುಗೊಂಡಿರುವ ನೆಲೆಯಲ್ಲಿ ಕಂಡುಬರುವ ವಿರೋಧಾಭಾಸಗಳ ಬಗ್ಗೆ  ಕಾಲಾನುಕಾಲದಿಂದ ಎತ್ತಲಾಗಿರುವ ಪ್ರಶ್ನೆಗಳನ್ನು ಅವರು ತಮ್ಮ ಉಪನ್ಯಾಸದ ಸಂದರ್ಭದಲ್ಲಿ ಎತ್ತಿದ್ದಾರೆ.

ಪರಾಂಜಪೆಯವರು ನಿರ್ವಸಾಹತೀಕರಣದ ಚಿಂತನೆಗಳ ಬಗ್ಗೆ ಮಹತ್ವದ್ದೆನಿಸುವ ಒಳನೋಟಗಳನ್ನು ನೀಡಿರುವಂಥವರು. ಅದೇ ವೇಳೆ, ಇನ್ಫೋಸಿಸ್ ಸ್ಥಾಪಿಸಿರುವ ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’ ಟ್ರಸ್ಟ್ ನ ಪ್ರಕಟಣಾ ವಿಭಾಗದ ಪ್ರಧಾನ ಸಂಪಾದಕರಾದ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಶೆಲ್ಡನ್ ಪೊಲಾಕ್ ರನ್ನು ಆ ಹುದ್ದೆಯಿಂದ ತೆರವುಗೊಳಿಸಬೇಕು ಎಂದು ಇತ್ತೀಚೆಗೆ ‘ರಾಷ್ಟ್ರೀಯವಾದಿ’ ವಿದ್ವಾಂಸರುಗಳು ಮಾಡಿದ ಸಹಿ ಚಳವಳಿಯಲ್ಲಿ ಮುನ್ನೆಲೆಯಲ್ಲಿ ಗುರುತಿಸಿಕೊಂಡಿದ್ದವರು ಕೂಡ. ಭಾರತದ ಇತಿಹಾಸವನ್ನು ಎಲ್ಲ ಪೂರ್ವಗ್ರಹಿಕೆಗಳಿಂದ ಮುಕ್ತವಾಗಿ ರಚಿಸಬೇಕು ಎನ್ನುವ ವಾದವನ್ನು ಮುಂದಿಟ್ಟು ಕೆಲ ದಿನದ ಕೆಳಗೆ ನಡೆದ ಸಹಿ ಚಳವಳಿಯಲ್ಲೂ ಅವರು ಪಾಲ್ಗೊಂಡಿದ್ದರು. ಅವರು ತಮ್ಮ ಚಿಂತನೆಗಳಿಗೆ ಬಲಪಂಥೀಯ ಗ್ರಹಿಕೆಗಳ ನೆರವು ಪಡೆಯುತ್ತಾರೋ ಇಲ್ಲವೋ ಅದು ಈ ಅಂಕಣದ ಲೇಖಕನಿಗೆ ಮುಖ್ಯವಲ್ಲ, ಆದರೆ ಅವರ ಚಿಂತನೆಗಳನ್ನು ಬಲಪಂಥೀಯರು ಮಾತ್ರ ಸಾಕಷ್ಟು ಬಳಸಿಕೊಂಡಿದ್ದಾರೆ ಹಾಗೆಯೇ ಅವರು ಸಾರ್ವಜನಿಕವಾಗಿ ವ್ಯಕ್ತಪಡಿಸಿರುವ ಕೆಲವೊಂದು ನಿಲುವುಗಳು ಬಲಪಂಥೀಯ ವಿಚಾರಧಾರೆಗೆ ಪುಷ್ಟಿ ತುಂಬುವಂಥವು ಎನ್ನುವುದನ್ನು ಅಲ್ಲಗಳೆಯಲಾಗದು.

ವೈಯಕ್ತಿಕವಾಗಿ ನನಗೆ ಪರಾಂಜಪೆಯವರು ಯಾವ ಕಾರಣಗಳನ್ನು ಮುಂದಿಟ್ಟುಕೊಂಡು ಪೊಲಾಕ್ ರನ್ನು ಆ ಹುದ್ದೆಯಿಂದ ತೆರವುಗೊಳಿಸಬೇಕು ಎಂದು ಹೇಳಿದ್ದರು ಎನ್ನುವ ಬಗ್ಗೆ ತಿಳಿಯುವ ಕುತೂಹಲವಿದೆ. ಸಾಂಸ್ಕೃತಿಕ ಕಾರಣಗಳು ಹಾಗೂ ನಿರ್ವಸಾಹತೀಕರಣದ ಕೆಲವೊಂದು ಪರಿಕಲ್ಪನೆಗಳೇನಾದರೂ ಅವರು ಸಹಿ ಹಾಕುವುದರ ಹಿಂದೆ ಪ್ರೇರಣೆಯಾಗಿ ಕೆಲಸ ಮಾಡಿರಬಹುದೇ ಎನ್ನುವ ಬಗ್ಗೆ ತಿಳಿಯುವ ಆಸಕ್ತಿಯಿದೆ. ಸದ್ಯಕ್ಕೆ ಈ ಬಗ್ಗೆ ನನಗೆ ಮಾಹಿತಿಯಿಲ್ಲ. ಪರಾಂಜಪೆಯವರು ತಮ್ಮ ಜೆಎನ್ ಯು ಉಪನ್ಯಾಸದಲ್ಲಿ ಎಡ ಅಥವಾ ಬಲದ ಹಂಗಿಲ್ಲದೆ ಬೌದ್ಧ ದರ್ಶನದಲ್ಲಿ ಪ್ರಧಾನವಾಗಿ ಕಂಡು ಬರುವ ‘ಮಧ್ಯಮ ಮಾರ್ಗ’ (ಮೂಲ ಮಾಧ್ಯಮಕಾರಿಕಾ) ದಂಥ ಕೇಂದ್ರ ಬಿಂದುವಿನಲ್ಲಿ ನಿಂತು ಸುತ್ತಲಿನ ವಿದ್ಯಮಾನಗಳನ್ನು ಅವಲೋಕಿಸಬೇಕಾದ ಬಗ್ಗೆ, ವಿಶ್ಲೇಷಣಾತ್ಮಕವಾಗಿ ಚರ್ಚಿಸಬೇಕಾದ ಬಗ್ಗೆ ಅಂಥ ವೇದಿಕೆಗಳನ್ನು ರೂಪಿಸುವ ಬಗ್ಗೆ ಒತ್ತು ನೀಡಿ ಮಾತನಾಡಿದ್ದಾರೆ.

ಇದು ನಿಜಕ್ಕೂ ಸ್ವಾಗತಾರ್ಹವೇ.  ಸಂಯಮವನ್ನು ಕಳೆದುಕೊಳ್ಳದ, ಹರಿತ ವಿಶ್ಲೇಷಣೆಗಳ ಮೂಲಕ ವೈಚಾರಿಕ ಪ್ರಖರತೆಯೊಂದಿಗೆ ಹಾಯ್ದು ಬರುವ ಜ್ಞಾನ ಎಲ್ಲ ಕಾಲದ ತುರ್ತು. ಮಧ್ಯಮ ಮಾರ್ಗದಲ್ಲಿ ನಿಂತು ಚಿಂತಿಸುವುದಿದೆಯಲ್ಲ ಅದು ಎಲ್ಲ ಚಿಂತನೆಗಳನ್ನು ಸಹನಶೀಲರಾಗಿ ಆಲಿಸುವುದನ್ನು, ಅವುಗಳನ್ನು ನಿಷ್ಪಕ್ಷಪಾತವಾಗಿ ಚರ್ಚಿಸಿ ಒಪ್ಪುವ, ತಿರಸ್ಕರಿಸುವ ವಿಫುಲ ಅವಕಾಶಗಳನ್ನು ನೀಡುತ್ತದೆ. ಆದರೆ, ಈ ಮಾರ್ಗ ನಿಜಕ್ಕೂ ಗಟ್ಟಿಯಾಗಿ ರೂಪುಗೊಳ್ಳುವುದು ಯಾವುದೇ ಸಮಸ್ಯೆಗಳ ಮೂಲಬೇರು ಎಲ್ಲಿದೆ ಎನ್ನುವುದನ್ನು ಅರಿಯುವ ಗಹನ ಪ್ರಯತ್ನಗಳನ್ನು ಮಾಡುವುದರಿಂದ ಹಾಗೂ ಇಂಥ ವಿಷಯಾಧಾರಿತ ಚಿಂತನೆಗಳು ಒಟ್ಟಂದದಲ್ಲಿ ನಮ್ಮನ್ನು ಯಾವ ದಿಕ್ಕಿನತ್ತ ಒಯ್ಯುತ್ತಿವೆ ಎನ್ನುವ ಸ್ಥೂಲ ಗ್ರಹಿಕೆಗಳನ್ನು ಇಟ್ಟುಕೊಳ್ಳುವುದರಿಂದ. ಇಂದು ಮಧ್ಯಮ ಮಾರ್ಗವನ್ನು ಪ್ರತಿಪಾದಿಸುವ ಅನೇಕ ಉದಾರವಾದಿ ಚಿಂತಕರು ತಾವು ನಡೆಸುವ ವಿಷಯಾಧಾರಿತ ಚಿಂತನೆಗಳಲ್ಲಿ ಎಲ್ಲ ದನಿಗಳನ್ನೂ ಒಳಗೊಳ್ಳಬೇಕು ಎನ್ನುವ ಭರದಲ್ಲಿ ಗಂಭೀರ ವಿಶ್ಲೇಷಣೆಗಳಿಂದ, ಸಮಗ್ರ ನೋಟದಿಂದ ವಿಮುಖರಾಗುತ್ತಿದ್ದಾರೆ. ಹಾಗಾಗಿಯೇ, ಭಾರತದಲ್ಲಿ ಮೂಲಭೂತವಾದಿ ಚಿಂತನೆಗಳು ಬಲಗೊಳ್ಳಲು, ಬಲಪಂಥೀಯರು ಮಾತ್ರವೇ ಕಾರಣವಲ್ಲ, ಬದಲಿಗೆ ಮಧ್ಯಮ ಮಾರ್ಗದ ಸೋಗಿನಲ್ಲಿ ವಿಸ್ತೃತವಾದ ಚಿಂತನೆ, ಅಧ್ಯಯನ, ವಾಸ್ತವ ಗ್ರಹಿಕೆಗಳಿಂದ ದೂರಾಗಿ ಕೇವಲ ಭೀಷಣ ಅಕೆಡೆಮಿಕ್ ಪದಪುಂಜಗಳಲ್ಲಿಯೇ ವ್ಯಸ್ತರಾಗಿರುವ ಉದಾರವಾದಿ ಚಿಂತಕರ ಪಾಲೂ ಇದೆ ಎನ್ನುವ ಆರೋಪ ಸತ್ಯದೂರವಾದುದೇನೂ ಅಲ್ಲ.

ಮಧ್ಯಮ ಮಾರ್ಗ ಬೇಡುವ ಅಧ್ಯಯನ ಶಿಸ್ತು ಗಹನವಾದದ್ದು, ಅದರ ಗ್ರಹಿಕೆಯ ವಿನ್ಯಾಸಗಳು ವಿಸ್ತಾರವಾದಂಥವು. ಪರೀಕ್ಷಕವೂ, ಚಿಕಿತ್ಸಕವೂ ಆದ ಈ ಮಾರ್ಗದಲ್ಲಿ ವೈಚಾರಿಕ ಎಚ್ಚರವೇ ದೀವಟಿಗೆ. ವಿಷಯಾಧಾರಿತವಾಗಿ ತಮ್ಮ ಸಹಮತವನ್ನು ನೀಡುವ ಎಲ್ಲರೂ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಗಳು ಕೆಲವಿರುತ್ತವೆ. ಇವೇನೂ ವಿಶೇಷ ಬೌದ್ಧಿಕ ಶ್ರಮ ಬೇಡುವಂಥವಲ್ಲ ಬದಲಿಗೆ ಸಾಮಾಜಿಕ ಸ್ವಾಸ್ಥ್ಯದ ಸಾಮಾನ್ಯ ಜ್ಞಾನದಲ್ಲಿ ರೂಪುತಳೆಯುವ ಎಚ್ಚರಗಳು. ಉದಾರವಾದಿ ಚಿಂತಕರು ತಮ್ಮ ಮುಂದೆ ಪದೇಪದೇ ಸಹಮತವನ್ನು ಕೋರಲು ಪ್ರತ್ಯಕ್ಷರಾಗುವ ಸಮೂಹ ಅಥವಾ ವ್ಯಕ್ತಿಗಳು ಮೂಲದಲ್ಲಿ ಯಾವ ಚಿಂತನೆಗಳನ್ನು ಹೊಂದಿದ್ದಾರೆ, ಅವರು ಯಾವುದಾದರೂ ಗುಪ್ತ ಕಾರ್ಯಸೂಚಿಗಳನ್ನು ಹೊಂದಿದ್ದಾರೆಯೇ ಎನ್ನುವುದನ್ನು ಅರಿತು ಮುಂದುವರೆಯುವುದು ಉತ್ತಮ. ವಿಷಯಾಧಾರಿತವಾಗಿ ಚರ್ಚಿಸುವವನ ಕಣ್ನೋಟದಿಂದ ವಿಷಯವನ್ನು ಮಂಡಿಸಲು ನಿಂತಿರುವ ವ್ಯಕ್ತಿಯ ನೆಲೆಗಟ್ಟು, ಅದರ ಹಿಂದಿನ ಉದ್ದೇಶಗಳು ಸಂಪೂರ್ಣ ಮರೆತು ಹೋಗಬಾರದು. ಹಾಗಾಗಿಯೇ ಅವನು ವಿಷಯಾಧಾರಿತವಾಗಿ ತನ್ನ ಬೆಂಬಲ ನೀಡುವಾಗಲೂ ಅಂಥ ಬೆಂಬಲವನ್ನು ನಿರೀಕ್ಷಿಸುತ್ತಿರುವವರ ಬಗೆಗೆ ತನಗಿರುವ ಅನುಮಾನಗಳನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸುವುದು ಹೆಚ್ಚು ಸೂಕ್ತ.

ಭಾರತದ ಉದಾರವಾದಿ ಚಿಂತಕ ವಲಯ ಇಂಥ ಎಚ್ಚರಗಳನ್ನು ಸಾಕಷ್ಟು ಸಂದರ್ಭದಲ್ಲಿ ಅನುಸರಿಸಿಲ್ಲ. ಕೆಲವೊಮ್ಮೆ ಅದು ಎಡಪಂಥೀಯ ಚಿಂತಕರು ಪ್ರಬಲರಾಗುವುದನ್ನು ತಡೆಗಟ್ಟಲು ಬಲಪಂಥೀಯ ಚಿಂತಕರನ್ನೂ, ಬಲಪಂಥೀಯ ಚಿಂತಕರನ್ನು ಬಗ್ಗುಬಡಿಯಲು ಎಡಪಂಥೀಯ ಚಿಂತಕರನ್ನೂ ಸುಲಭಕ್ಕೆ ಎತ್ತಿಕಟ್ಟಿದೆ. ಅಲ್ಲದೆ ಉದಾರವಾದಿ ಚಿಂತಕರಲ್ಲಿ ಅನೇಕರು ತಮ್ಮ ರಾಜಕೀಯ, ಸಾಮಾಜಿಕ ನಿಲುವುಗಳಲ್ಲಿ ಯಾವುದೇ ಸ್ಪಷ್ಟತೆಗಳನ್ನು ಹೊಂದಿರದೆ ಅಧಿಕಾರ ಕೇಂದ್ರಗಳನ್ನು ಓಲೈಸುವವರೂ, ಅವಕಾಶವಾದಿಗಳು ಆಗಿರುತ್ತಾರೆ. ಎಡಪಂಥೀಯ ಚಿಂತಕರು, ಬಲಪಂಥೀಯ ಚಿಂತಕರು ಅಥವಾ ಹಾಗೆಂದು ಯಾವುದಾದರೂ ಒಂದು ಬಣದಿಂದ ಗುರುತಿಸಲ್ಪಡುವ ಉತ್ತಮ ಚಿಂತಕರು ಕನಿಷ್ಠ ಪಕ್ಷ ತಾವು ಪ್ರತಿನಿಧಿಸುವ ಆಶಯಗಳು, ಕಾಳಜಿಗಳಿಗೆ ಬದ್ಧರಾಗಿರುತ್ತಾರೆ. ಆದರೆ ಉದಾರವಾದಿ ಚಿಂತನೆಯ ಸೋಗಿನಡಿ ಅನೇಕ ಮಂದಿ ಕೇವಲ ‘ಲಾಭ’ಗಳ ನಿರೀಕ್ಷೆಯಲ್ಲಿಯೇ ಇರುತ್ತಾರೆ, ಇಲ್ಲವೇ ಯಾವುದಾದರೂ ಗುಪ್ತ ಕಾರ್ಯಸೂಚಿಗಳನ್ನು ಜಾರಿಗೆ ತರುವ ಪ್ರಯತ್ನದಲ್ಲಿರುತ್ತಾರೆ. ಜೀವಪರವಲ್ಲದ್ದನ್ನು ‘ಮಧ್ಯಮಮಾರ್ಗ’ ಒಳಗೊಳ್ಳದು ಎನ್ನುವ ಅರಿವನ್ನೇ ಕಳೆದುಕೊಂಡ ಇಂಥ ಲಾಭಕೋರ ಚಿಂತಕರು ಅಂತಿಮವಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಒತ್ತೆ ಇರಿಸಿಕೊಂಡು ಶಬ್ಧ ಭಂಡಾರವನ್ನು ವಿದ್ವತ್ತಿನ ಮಾರುಕಟ್ಟೆಯಲ್ಲಿ ಬಿಕರಿಗಿಡುತ್ತಾರೆ.

ಪರಾಂಜಪೆಯವರ ಬಗ್ಗೆ, ಅವರು ಕಾಲದಿಂದ ಕಾಲಕ್ಕೆ ಎತ್ತಿರುವ ಅನೇಕ ವಿಷಯಗಳ ಬಗ್ಗೆ ವೈಯಕ್ತಿಕವಾಗಿ ನನ್ನಂಥ ಅನೇಕರಿಗೆ ಸಹಮತವಿರಬಹುದು. ಆದರೆ, ಅವರು ತಮ್ಮ ವಿಚಾರಗಳನ್ನು ಮಂಡಿಸಲು ಆಯ್ದುಕೊಳ್ಳುವ ಸಂದರ್ಭ, ಸನ್ನಿವೇಶಗಳು ಮತ್ತು ಅವರು ವಿಷಯಾಧಾರಿತ ಚರ್ಚೆಯಡಿ ಪದೇಪದೇ ನಿಲ್ಲುತ್ತಿರುವ ಗುಂಪುಗಳು ಏನನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕಾಗುತ್ತದೆ. ಸಂಸ್ಕೃತಿ ಚಿಂತನೆಯ ಸಂದರ್ಭದಲ್ಲಿ ಅರ್ಹವೆನಿಸುವ ಅವರ ಹಲವಾರು ಒಳನೋಟಗಳು, ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳ ಪರಿಧಿಗೆ ಹೊರಳಿದಾಗ ಪಡೆಯುವ ವ್ಯಾಖ್ಯೆ ಬೇರೆಯದನ್ನೇ ದನಿಸುತ್ತಿರುತ್ತದೆ. ನಮ್ಮ ಬಹುತೇಕ ಉದಾರವಾದಿ ಚಿಂತಕರು, ಸಂಶೋಧಕರು ಕಾಲಾನುಕಾಲದಲ್ಲಿ ಮಂಕಾಗಿ ಹೋದಂತೆ ಕಾಣಿಸತೊಡಗಿದ್ದರ ಹಿಂದೆ ಸಾಮಾಜಿಕ ಹಾಗೂ ರಾಜಕೀಯ ಸ್ವಾಸ್ಥ್ಯದ ವಿಚಾರಗಳಲ್ಲಿ ಅವರು ರಾಜಿಯಾಗಿದ್ದು ಕಂಡುಬರುತ್ತದೆ.

ಪರಾಂಜಪೆಯವರು ಎತ್ತಿರುವ ಪ್ರಶ್ನೆಗಳನ್ನು ಎಡಪಂಥೀಯ ಚಿಂತಕರು, ಜೆಎನ್ ಯುನಲ್ಲಿ ಕಲಿಯುತ್ತಿರುವವರು ವಿಮರ್ಶಾತ್ಮಕವಾಗಿ ಎದುರುಗೊಳ್ಳಲಿ; ಅದೇ ವೇಳೆ ಪರಾಂಜಪೆ ಕೂಡ ತಾವು ಇತ್ತೀಚೆಗೆ ಸಾರ್ವಜನಿಕವಾಗಿ ಎತ್ತುತ್ತಿರುವ ವಿಷಯಗಳ ಬಗ್ಗೆ ಹೆಚ್ಚು ವಿಸ್ತಾರವಾಗಿ, ಸಮಗ್ರವಾಗಿ ಮಾತನಾಡಲಿ. ಆಗಷ್ಟೇ ಅವರ ಚಿಂತನೆಗಳನ್ನು ರೂಪಿಸುತ್ತಿರುವ ಗ್ರಹಿಕೆಗಳು, ನೆಲೆಗಟ್ಟುಗಳ ಬಗ್ಗೆ ಸ್ಪಷ್ಟತೆ ಮೂಡಲು ಹಾಗೂ ಸಾಮಾಜಿಕವಾಗಿ, ರಾಜಕೀಯವಾಗಿ ಈ ಚಿಂತನೆಗಳು ಪಡೆಯಬಹುದಾದ ವಿನ್ಯಾಸಗಳನ್ನು ಗ್ರಹಿಸಲು ಸಾಧ್ಯ. ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿಯ ಚಿಂತನೆ, ಆಶಯಗಳೆಂತೋ ಅದೇ ರೀತಿ ಆ ವ್ಯಕ್ತಿಯನ್ನು ರೂಪಿಸಿರುವ, ರೂಪಿಸುತ್ತಿರುವ ನೆಲೆಗಟ್ಟೂ ಸಹ ಎಂಥದ್ದು ಎನ್ನುವುದು ಬಹುತೇಕ ಓದುಗರಿಗೆ, ಕೇಳುಗರಿಗೆ ಮುಖ್ಯವಾಗುತ್ತದೆ. ಅದೇಕೆ ಮುಖ್ಯವಾಗಬೇಕು ಎನ್ನುವವರು ಅಂಧಾನುಯಾಯಿಗಳು ಮಾತ್ರವೇ ಆಗಲು ಸಾಧ್ಯ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆ ಒಂದು ಭಾಷಣ ಕನ್ಹಯ್ಯನನ್ನು ಹೀರೋ ಆಗಿಸಿದ್ದು ಹೇಗೆ?

ಮುಂದಿನ ಸುದ್ದಿ »

ಶ್ರೀ ಶ್ರೀ ಶ್ರೀ ಸ್ಥಾನದಲ್ಲಿ ಓರ್ವ ಮೌಲಾನ ಇರುತ್ತಿದ್ದರೆ?

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×