Thursday February 18 2016

Follow on us:

Contact Us

ದೇಶಭಕ್ತಿಯ ಹೆಸರಿನಲ್ಲಿ ದಮನಕಾರಿ ಪ್ರವೃತ್ತಿ!

nataraju-v11211-1211

  ನಟರಾಜು ವಿ

‘ಭಾರತವನ್ನು ಹಾಳುಗೆಡವುತ್ತೇವೆ’, ‘ಭಾರತವನ್ನು ಛಿದ್ರಮಾಡುತ್ತೇವೆ’, ‘ಅಫ್ಜಲ್ ನಿನ್ನ ಸಾವಿಗೆ ಕಾರಣರಾದವರು ಇನ್ನೂ ಬದುಕಿರುವುದಕ್ಕೆ ನಮಗೆ ನಾಚಿಕೆಯಿದೆ’ ಎಂದೆಲ್ಲ ಘೋಷಣೆ ಕೂಗಿದವರನ್ನು, ಇಂಥ ಘೋಷಣೆಗಳನ್ನು ಕೂಗಲು ಅನುವು ಮಾಡಿಕೊಟ್ಟವರನ್ನು ರಾಷ್ಟ್ರದ್ರೋಹದಡಿ ಬಂಧಿಸಿ ಕಠಿಣವಾಗಿ ಶಿಕ್ಷಿಸಬೇಕು, ಸಾಧ್ಯವಾದರೆ ಸಾರ್ವಜನಿಕವಾಗಿ ಇವರನ್ನೆಲ್ಲ ಥಳಿಸಿ ಅವಮಾನಿಸಬೇಕು – ಇದು ಈ ದೇಶದ ರಕ್ಷಣೆಯ ಹೊಣೆಯನ್ನು ತಾವೇ ಹೊತ್ತಿದ್ದೇವೆ ಎಂದು ಭಾವಿಸುತ್ತಿರುವ ತಾವು ಮಾತ್ರವೇ ‘ರಾಷ್ಟ್ರಭಕ್ತರು’ ಎಂದು ಬೀಗುವ ಒಂದು ವರ್ಗದ ಸದ್ಯದ ಮನಸ್ಥಿತಿ.

ಒಕ್ಕೂಟ ವ್ಯವಸ್ಥೆಯ ವಿರುದ್ಧ ಘೋಷಣೆ ಕೂಗುವುದು, ಕಹಿಯೆನಿಸುವ, ಅಸಮಾಧಾನಕ್ಕೆ ಕಾರಣವಾಗುವ ಅಭಿಪ್ರಾಯಗಳನ್ನು ಹೇಳುವುದು – ಇವಿಷ್ಟನ್ನು ಮಾಡಿದಾಕ್ಷಣಕ್ಕೆ ಅದು ರಾಷ್ಟ್ರವಿರೋಧಿ ಚಟುವಟಿಕೆಯಾಗುವುದಿಲ್ಲ. ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವಂಥ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗದೆ ಕೇವಲ ತಮ್ಮ ಅಸಮಾಧಾನ, ಅಭಿಪ್ರಾಯವನ್ನೂ ಹೊರಹಾಕಿದವರನ್ನು ದೇಶದ್ರೋಹಿಗಳು ಎಂದು ಕರೆಯಲಾಗದು. ಇದು ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಆಶಯಗಳಲ್ಲಿ ನಂಬಿಕೆ ಇಟ್ಟಿರುವ ಮತ್ತೊಂದು ವರ್ಗದ ಮಾತುಗಳು.

‘ರಾಷ್ಟ್ರ ವಿರೋಧಿ’ ಆಗಿರುವುದು ಭಾರತದ ಕಾನೂನಿನ ಪ್ರಕಾರ ‘ಅಸಾಂವಿಧಾನಿಕ’ವಾದುದೇನೂ ಅಲ್ಲ. ಒಂದು ವೇಳೆ ಅಂಥ ‘ದೇಶವಿರೋಧಿ’ ಮಾತುಗಳು, ಅಭಿಪ್ರಾಯಗಳೊಟ್ಟಿಗೆ ಹಿಂಸೆ ಹಾಗೂ ಕಾನೂನು ಭಂಗವನ್ನೂ ಮಾಡಿದರೆ, ಅಥವಾ ಹಿಂಸೆ ಅಥವಾ ಕಾನೂನುಭಂಗಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡಿದರೆ ಆಗಲೂ ಅದು ಅಪರಾಧವಾಗುತ್ತದೆಯೇ ಹೊರತು ದೇಶದ್ರೋಹಿ ಚಟುವಟಿಕೆ ಎಂದು ಪರಿಗಣಿಸಲ್ಪಡುವುದಿಲ್ಲ. ಇದು ದೇಶ ಕಂಡಿರುವ ಶ್ರೇಷ್ಠ ಕಾನೂನು ತಜ್ಞ ಫಾಲಿ ಎಸ್. ನಾರಿಮನ್ ಅವರ ಅಭಿಪ್ರಾಯ, ಅವರ ಈ ಅಭಿಪ್ರಾಯವನ್ನು ಬಹುತೇಕ ಎಲ್ಲ ಶ್ರೇಷ್ಠ ಕಾನೂನು ತಜ್ಞರು ಅನುಮೋದಿಸಿದ್ದಾರೆ.

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಪಟಿಯಾಲಾ ಕೋರ್ಟ್ ಆವರಣದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಘಟನಾವಳಿಗಳು, ಅವು ಪಡೆದುಕೊಳ್ಳುತ್ತಿರುವ ಸ್ವರೂಪ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಚಹರೆಯೊಳಗೆ ಮೂಡುವಂಥದ್ದು ಅಲ್ಲವೇ ಅಲ್ಲ. ಮೊದಲಿಗೆ ಒಂದು ಮಾತು, ಭಾರತದ ನೆಲದಲ್ಲಿ ನಿಂತು ಭಾರತಕ್ಕೆ ಧಿಕ್ಕಾರ ಕೂಗುವ, ನೆರೆಯ ದೇಶಗಳಿಗೆ ಜೈಕಾರ ಹಾಕುವಂಥ ಚಟುವಟಿಕೆಗಳಿಗೆ ಕಾನೂನು ರೀತ್ಯಾ ಏನು ಕ್ರಮ ಕೈಗೊಳ್ಳಬೇಕು ಎನ್ನುವುದು ಕಾನೂನು ಪರಿಪಾಲನೆಯ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಚಾರ. ಅದೇ ರೀತಿ ತನ್ನ ಮುಂದೆ ಬಂದ ಅಂತಹ ಪ್ರಕರಣಗಳನ್ನು ಹೇಗೆ ಗ್ರಹಿಸಬೇಕು, ಈ ನೆಲದ ಕಾನೂನುಗಳನ್ನು ಹೇಗೆ ಎತ್ತಿ ಹಿಡಿಯಬೇಕು, ವಿವರಿಸಬೇಕು, ಅಪರಾಧಿಗಳನ್ನು ಶಿಕ್ಷಿಸಬೇಕು ಎನ್ನುವುದು ನ್ಯಾಯಾಂಗಕ್ಕೆ ಸಂಬಂಧಪಟ್ಟ ವಿಷಯ. ನಮ್ಮ ನ್ಯಾಯಾಲಯಗಳು, ನ್ಯಾಯಮೂರ್ತಿಗಳು, ಕಾನೂನು ತಜ್ಞರು ಈ ವಿಚಾರದಲ್ಲಿ ಸಮರ್ಥರಾಗಿದ್ದಾರೆ. ಹಾಗಾಗಿ ನ್ಯಾಯಾಲಯಕ್ಕೆ ಬುದ್ಧಿ ಹೇಳುವ, ರಾಷ್ಟ್ರಭಕ್ತಿಯನ್ನು ಬೋಧಿಸುವ ಕೆಲಸಗಳಿಗೆ ಕೈ ಹಾಕುವ ಕೆಲಸವನ್ನು ಯಾವುದೇ ಗುಂಪುಗಳು ಮಾಡುವ ಅಗತ್ಯವಿಲ್ಲ.

ಒಂದು ವೇಳೆ ಯಾವುದಾದರೂ ನ್ಯಾಯಿಕ ವಿಷಯದ ಬಗ್ಗೆ ಗೊಂದಲವಿದ್ದರೆ, ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳು, ನಿರ್ಣಯಗಳನ್ನು ಪರಿಶೀಲಿಸಬೇಕು ಎನ್ನುವ ಅಗತ್ಯವಿದ್ದರೆ ಅದಕ್ಕೆ ನ್ಯಾಯಾಂಗದಲ್ಲಿ ಸೂಕ್ತ ಅವಕಾಶಗಳಿವೆ. ಕಾನೂನುಗಳನ್ನು ಪುನರ್ ಪರಿಶೀಲಿಸಬೇಕಾದ ವಿಚಾರಗಳಿದ್ದರೆ ಆ ಕುರಿತು ಶಾಸಕಾಂಗದ ಜವಾಬ್ದಾರಿಗಳಿವೆ. ಇದೆಲ್ಲಕ್ಕೆ ಬೆನ್ನಲುಬಾಗಿ ನಿಲ್ಲುವ, ಕಾನೂನು ತಜ್ಞರ, ಬುದ್ಧಿಜೀವಿಗಳ, ಪ್ರಜ್ಞಾವಂತರ ದೊಡ್ಡ ಪಡೆಯೇ ಇದೆ. ಹಾಗಾಗಿ ತಮಗೆ ಕಹಿಯೆನಿಸುವ, ಅಪ್ರಿಯವೆನಿಸುವ ವಿಚಾರಗಳನ್ನು ಯಾರಾದರೂ ಆಡುತ್ತಿದ್ದಾರೆ ಎನ್ನುವ ಭಾವನೆ ಯಾರಲ್ಲಾದರೂ ಇದ್ದರೆ ಈ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಅವರು ಸ್ವತಂತ್ರರೇ ಹೊರತು ಹಿಂಸೆಯಿಂದ ಹತ್ತಿಕ್ಕಲು ಅಲ್ಲ.

ಈಗ ಬಹುಮುಖ್ಯ ವಿಚಾರಕ್ಕೆ ಬರೋಣ. ಜೆ ಎನ್ ಯು ನಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಚಿಂತನಗಳಿಗೆ ಬೆಂಬಲವಿದೆ. ಕಾಶ್ಮೀರ  ಭಾರತದ ಭಾಗವಲ್ಲ, ಅದು ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ವಾದಿಸುವವರಿಗೆ ಅಲ್ಲಿನ ಪ್ರಗತಿಪರ ಗುಂಪಿನ ಅನುಕಂಪವಿದೆ ಎನ್ನುವುದು ವಿಶ್ವವಿದ್ಯಾಲಯದ ಆವರಣವನ್ನು ರಣಾಂಗಣ ಮಾಡಲು ಹೊರಟಿರುವ ಸಂಘಟನೆಗಳು, ವ್ಯಕ್ತಿಗಳ ಆಪಾದನೆಗಳು. ಅರೆ, ವಿಶ್ವವಿದ್ಯಾಲಯಗಳು ಇರುವುದೇ ಮಕ್ತವಾಗಿ, ನಿರ್ಭೀತವಾಗಿ ಚಿಂತಿಸುವುದನ್ನು ಕಲಿಸುವುದಕ್ಕೆ. ವಿವಿಧ ವಿಷಯಗಳನ್ನು ಹಲವು ಆಯಾಮಾಗಳಿಂದ ನೋಡಿ ಅರ್ಥೈಸಿಕೊಳ್ಳುವುದಕ್ಕೆ. ವಿಶ್ವವಿದ್ಯಾಲಯ ಎನ್ನುವುದು ಪ್ರಜ್ಞೆಯ, ಜ್ಞಾನದ ವಿಸ್ತರಣೆಗೆ ಇರುವ ಜಾಗ. ಜಗತ್ತಿನ ಯಾವುದೇ ಉನ್ನತ ವಿಶ್ವವಿದ್ಯಾಲಯಗಳಲ್ಲಿ ದೇಶ, ಭಾಷೆ, ಜನಾಂಗಗಳ ಗಡಿ ಇಲ್ಲದೆ ನಿರಂತರವಾಗಿ ಜ್ಞಾನ ಪ್ರವಹಿಸಲು ಅವಕಾಶವಿರುತ್ತದೆ. ಎಲ್ಲ ವಾದಗಳನ್ನೂ ಸಹನೆಯಿಂದ ಕೇಳಿಸಿಕೊಳ್ಳುವ, ಮುಕ್ತವಾಗಿ ಚರ್ಚಿಸುವ ಮನೋಭಾವವಿರುತ್ತದೆ. ಅದೇ ಗುಣವನ್ನು ಜೆ ಎನ್ ಯು ಸಹ ಹೊಂದಿದೆ. ಅಲ್ಲಿನ ವಿದ್ಯಾರ್ಥಿಗಳು ಕೇವಲ ಭಾರತ ಮಾತ್ರವೇ ಅಲ್ಲ, ಜಗತ್ತಿನ ಎಲ್ಲ ಆಗುಹೋಗುಗಳ ಬಗ್ಗೆ ಚರ್ಚಿಸುವ ಸ್ವಸ್ಥ ಮನಸ್ಸನ್ನು ಇರಿಸಿಕೊಂಡಿದ್ದಾರೆ, ಅಧ್ಯಯನಶೀಲತೆ ಹೊಂದಿದ್ದಾರೆ. ಯಾವುದೇ ವಿಷಯವನ್ನು ಚರ್ಚಿಸುವಾಗ ಆ ಬಗ್ಗೆ ಬಲಪಂಥೀಯ, ಎಡಪಂಥೀಯ, ಮಧ್ಯಮಮಾರ್ಗ ಚಿಂತನೆಗಳು ಯಾವ ಧೋರಣೆ ಹೊಂದಿವೆ, ವಸ್ತುಸ್ಥಿತಿ ಏನಿದೆ ಎಂದು ಎಲ್ಲ ಆಯಾಮಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತ ಪಕ್ವವಾಗುತ್ತ ಹೋಗುವ ವಾತಾವರಣವನ್ನು ನಿರ್ಮಿಸಿಕೊಂಡಿದ್ದಾರೆ. ಒಂದು ಸತ್ಯ ಗಮನಿಸಬೇಕು, ಸಂವೇದನಾಶೀಲ ಮನಸ್ಸುಗಳು ಯಾವಾಗಲೂ ನ್ಯಾಯಪಕ್ಷಪಾತಿಗಳಾಗಿರುತ್ತವೆ.

ದಮನಿತರ ಬಗ್ಗೆ ಅನುಕಂಪವನ್ನೂ, ಪ್ರಭುತ್ವಗಳ ಬಗ್ಗೆ ಅನುಮಾನಗಳನ್ನು ಹೊಂದಿರುತ್ತವೆ. ಇದು ಅಭಿನಂದಿಸಬೇಕಾದ ವಿಷಯ. ವಿಪರ್ಯಾಸವೆಂದರೆ ಜೆ ಎನ್ ಯು, ಹೈದರಾಬಾದ್ ನ ಕೇಂದ್ರೀಯ ವಿದ್ಯಾಲಯದಂಥ ಜ್ಞಾನಕ್ಷೇಂದ್ರಗಳಲ್ಲಿನ ಮುಕ್ತವೂ, ನಿರ್ಭಿತವೂ ಆದ ಸ್ವತಂತ್ರ ಚಿಂತನಾ ಕ್ರಮವನ್ನು ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿಯೂ ಹಬ್ಬಿಸಬೇಕಾದ, ಆ ಮೂಲಕ ದೇಶದ ಮುಖ್ಯವಾಹಿನಿಯ ಚರ್ಚೆಗಳು ಹೆಚ್ಚು ಮೌಲಿಕವಾಗಿ, ಜೀವಪರವಾಗಿ ಇರುವಂತೆ ನೋಡಿಕೊಳ್ಳಬೇಕಾದ್ದು ಪ್ರಜಾಪ್ರಭುತ್ವದಲ್ಲಿನ ಸರ್ಕಾರಗಳ ಕೆಲಸ. ಆ ಕೆಲಸವನ್ನು ಮಾಡದೆ ವಿಶ್ವವಿದ್ಯಾಲಯಗಳ ಮೆದುಳಿಗೆ ಪಾರ್ಶ್ವವಾಯು ಬಡಿಯುವಂತೆ ವರ್ತಿಸುತ್ತಿರುವ ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ಬಗ್ಗೆ ಏನು ಹೇಳುವುದು?

ಕಾಶ್ಮೀರದ ವಿಷಯಕ್ಕೆ ಮರಳುವುದಾದರೆ, ಅಲ್ಲಿಯೂ ಚುನಾಯಿತ ಸರ್ಕಾರಗಳೇ ಆಡಳಿತ ನಡೆಸಿರುವುದು. ಅದರಲ್ಲಿಯೂ ಎರಡು ವಿಭಿನ್ನವೂ, ವಿರುದ್ಧವೂ ಆದ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟ ಬಿಜೆಪಿ ಹಾಗೂ ಪಿಡಿಪಿಗಳೇ ಅಲ್ಲಿ ಒಂದೂವರೆ ತಿಂಗಳ ಹಿಂದಿನವರೆಗೂ ಅಧಿಕಾರದಲ್ಲಿದ್ದದ್ದು. ಯಾವ ಪಿಡಿಪಿ ಪಕ್ಷ ಅಫ್ಜಲ್ ಗುರುವನ್ನು ಗಲ್ಲಿಗೇರಿಸಬಾರದು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿತ್ತೊ ಅದೇ ಪಕ್ಷದೊಡನೆ ಬಿಜೆಪಿ ಅಧಿಕಾರ ಹಂಚಿಕೊಂಡಿದೆ, ಈಗಲೂ ಹಂಚಿಕೊಳ್ಳಲು ಉತ್ಸುಕವಾಗಿದೆ. ಬಲಪಂಥೀಯರಿಗೆ ಅಷ್ಟೇನೂ ಪ್ರಿಯವಲ್ಲದ ‘ಸ್ವಯಂ ಆಡಳಿತ’ ವ್ಯವಸ್ಥೆಯನ್ನು ತನ್ನ ಸಿದ್ಧಾಂತವಾಗಿ ಹೊಂದಿರುವ ಪಕ್ಷ ಪಿಡಿಪಿ. ಇದರೊಟ್ಟಿಗೆ ಕೈ ಜೋಡಿಸಿ ಕಾಶ್ಮೀರದಿಂದ ಕಾಂಗ್ರೆಸ್ ಅನ್ನು ನಿರ್ನಾಮ ಮಾಡುತ್ತೇನೆ ಎಂದು ಹೊರಟದ್ದು ಬಿಜೆಪಿ. ಆದರ ರಾಜಕಾರಣದ ಈ ವರಸೆಗಳ ಬಗ್ಗೆ ಬಲಪಂಥೀಯ ಸಂಘಟನೆಗಳು ಚಕಾರವೆತ್ತುವುದಿಲ್ಲ. ಆದರೆ ಜೆ ಎನ್ ಯು ವಿದ್ಯಾರ್ಥಿಗಳ ಬಗ್ಗೆ ಮಾತ್ರ ಕೆಂಡದ ಮಳೆಗರೆಯುತ್ತಿವೆ.

ಕಾಶ್ಮೀರದ ಜನತೆಗೆ ಭಾರತದ ಬೇರಾವುದೇ ಭಾಗದ ಜನತೆಗಿರುವಂತೆ ರಾಜಕೀಯ ಪ್ರಜ್ಞೆ ಇದೆ, ಒಲವು-ನಿಲುವುಗಳಿವೆ. ಅದನ್ನು ಅವರು ಚುನಾವಣೆಯಿಂದ ಚುನಾವಣೆಗೆ ತೋರಿಸುತ್ತಲೇ ಬಂದಿದ್ದಾರೆ. ಪ್ರತ್ಯೇಕತಾವಾದಿ ಚಿಂತನೆಗಳನ್ನು ಹೇಗೆ ಗ್ರಹಿಸಬೇಕು, ಎಷ್ಟು ಪುರಸ್ಕರಿಸಬೇಕು, ತಿರಸ್ಕರಿಸಬೇಕು ಎಂದು ಅವರು ಬಲ್ಲರು. ಅಲ್ಲಿನ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯನ್ನು ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತದೆ; ಉಳಿದಂತೆ ಗಡಿ ರಕ್ಷಣೆಯನ್ನು, ಉಗ್ರವಾದಿ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆಯನ್ನು ಸೇನೆ ನೋಡಿಕೊಳ್ಳುತ್ತದೆ. ಭಾರತದೊಂದಿಗಿನ ತಮ್ಮ ಸಂಬಂಧ ಹೇಗಿರಬೇಕು ಎಂದು ಅಲ್ಲಿನ ಜನತೆ ತಮ್ಮ ರಾಜಕೀಯ ನಿರ್ಧಾರಗಳ ಮೂಲಕ ತಿಳಿಸುತ್ತಾರೆ. ಅಲ್ಲಿನ ಕೆಲ ರಾಜಕೀಯ ಗುಂಪುಗಳಿಗೆ ಕಾಶ್ಮೀರ ಭಾರತದ ಭಾಗವಾಗಿರುವ ಬಗ್ಗೆ ಅಸಮಾಧಾನವಿರುವುದು ನಿಜ.  ಆ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ, ಕೇಂದ್ರ ಸರ್ಕಾರವೂ ಕಾಲದಿಂದ ಕಾಲಕ್ಕೆ ತನ್ನ ನಿಲುವುನ್ನು ಪುನರುಚ್ಚರಿಸುತ್ತಲೇ ಬಂದಿದೆ. ಇದೆಲ್ಲ ಪ್ರಜಾಪ್ರಭುತ್ವದಡಿ ನಡೆಯುವ ಪ್ರಕ್ರಿಯೆಗಳೇ… ಇದೆಲ್ಲವನ್ನೂ ಅಧ್ಯಯನದ ವಿಷಯವಾಗಿ ನೋಡುವ, ಚರ್ಚಿಸುವ, ಈ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ದಾಖಲಿಸುವ ಹಕ್ಕು ಎಲ್ಲರಿಗೂ ಇದೆ. ಒಂದು ಸ್ವಸ್ಥ ರಾಜಕೀಯಪ್ರಜ್ಞೆಯನ್ನು ರೂಪಿಸಲು ಇದು ಅತ್ಯವಶ್ಯಕ.

ದೇಶಭಕ್ತಿಯ ಹೆಸರಿನಲ್ಲಿ ದಮನಕಾರಿ ಪ್ರವೃತ್ತಿಯಲ್ಲಿ ತೊಡಗಿರುವ ಸಂಘಟನೆಗಳು ಒಂದು ವಿಷಯ ನೆನಪಿರಿಸಿಕೊಳ್ಳಬೇಕು, ಯಾವುದು ಜನರ ನಿಲುವಾಗಿರುತ್ತದೋ ಅದು ಅಂತಿಮವಾಗಿ ಉಳಿಯುತ್ತದೆ. ಪ್ರಭುತ್ವ ಹಾಗೂ ಜನರ ನಿಲುವು ಒಂದೇ ಆಗಿದ್ದಾಗ ಸಂಘರ್ಷಗಳು ಇರುವುದಿಲ್ಲ. ಪ್ರಭುತ್ವದ ನಿಲುವುಗಳಿಗೂ ಜನತೆಯ ನಿಲುವುಗಳಿಗೂ ಮಧ್ಯೆ ಕಂದರಗಳು ಹೆಚ್ಚಿದಂತೆ ಸಂಘರ್ಷವೂ ಹೆಚ್ಚುತ್ತದೆ. ಈ ಮಾತು ಪ್ರತ್ಯೇಕತಾವಾದಿಗಳಿಗೆ ಮೊದಲು ಅನ್ವಯಯವಾಗುತ್ತದೆ. ಪ್ರತ್ಯೇಕತಾವಾದಿಗಳೇ ಆದರೂ ಮೊದಲು ಗೆಲ್ಲಬೇಕಿರುವುದು ತಮ್ಮ ಸುತ್ತಲಿನ ಜನತೆಯ ಹೃದಯವನ್ನು, ನಂಬಿಕೆಯನ್ನು, ವಿಶ್ವಾಸವನ್ನು. ಅದೇ ಸಾಧ್ಯವಿಲ್ಲವಾದರೆ ಅವರು ನಿಲುವುಗಳೇ ಪ್ರಶ್ನಾರ್ಹವಾಗುತ್ತವೆ. ಅದೇ ರೀತಿ ಯಾವುದೇ ಪ್ರಭುತ್ವವಾದರೂ ಬಂದೂಕಿನ ಮೊನೆಯಿಂದ ಜನರ ಕ್ರಿಯೆಗಳನ್ನು ಹತ್ತಿಕ್ಕಬಹುದೇ ಹೊರತು, ಅವರ ಆಲೋಚನೆಗಳನ್ನಲ್ಲ.

ತಾನು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವ ಯಾವುದೇ ದೇಶವಾದರೂ ಮೊದಲು ತನ್ನ ಪ್ರಜೆಗಳನ್ನು ಪ್ರೀತಿಸುವುದನ್ನು, ಆಲಿಸುವುದನ್ನು ಕಲಿಯಬೇಕು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಅದರ ಆಶಯಗಳಿಗೆ ವಿರುದ್ಧವಾದ ಕೆಲಸಕ್ಕೆ ಕೈ ಹಾಕಬಾರದು. ಪ್ರಜಾಪ್ರಭುತ್ವದ ವೇಷ ತೊಟ್ಟು ನಿರಂಕುಶವಾದಿ ಚಿಂತನೆಗಳನ್ನು ಬಲಪಡಿಸುವಲ್ಲಿ ವ್ಯಸ್ತವಾಗಬಾರದು. ದೆಹಲಿಯ ಜೆ ಎನ್ ಯು ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಘಟನಾವಳಿಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವ ಹಾದಿಯಲ್ಲಿ ಸಾಗಿಬಿಡಬಹುದು ಎಂದು ಅನುಮಾನಿಸಲಾಗಿತ್ತೋ ಅದೇ ಹಾದಿಯಲ್ಲಿ ಧಾವಂತದಲ್ಲಿ ಓಡುತ್ತಿರುವುದನ್ನು ನಿರೂಪಿಸಿದೆ. ತುರ್ತುಪರಿಸ್ಥಿತಿಯನ್ನು ಹೇರದೆಯೂ ತುರ್ತುಪರಿಸ್ಥಿತಿಯ ಭಯವನ್ನು ಪ್ರಭುತ್ವವೊಂದು ಹೇಗೆ ಹುಟ್ಟುಹಾಕಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ದೇಶದ ರಾಜಧಾನಿಯಲ್ಲಿ, ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿರುವ ಘಟನೆಗಳು ಹೇಳುತ್ತಿವೆ. ಇದೆಲ್ಲ ಅತಿಗೆ ಹೋಗುವುದಕ್ಕೂ ಮುನ್ನ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಒಳಿತು. ಜಾಗತಿಕವಾಗಿ ನಮ್ಮ ಪ್ರಜಾಪ್ರಭುತ್ವ ಅಣಕದ ವಸ್ತುವಾಗಬಾರದು ಎನ್ನುವುದಾದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತನ್ನ ಹೆಸರನ್ನು ಹೇಳಿಕೊಂಡು ‘ದಮನಕಾರಿ’ ಪ್ರವೃತ್ತಿಯಲ್ಲಿ ತೊಡಗುತ್ತಿರುವ ವ್ಯಕ್ತಿಗಳು, ಸಂಘಟನೆಗಳ ವಿರುದ್ಧ ದಿಟ್ಟ ಕಾನೂನು ಕ್ರಮ ಕೈಗೊಳ್ಳಬೇಕು. ದೇಶಭಕ್ತಿಯ ಹೆಸರಿನಲ್ಲಿ ನಡೆಯುವ ದಮನಕಾರಿ ಚಟುವಟಿಕೆಗಳು ಸಂವಿಧಾನವಿರೋಧಿ ಎನ್ನುವುದನ್ನು ಅರಿತು ಹತ್ತಿಕ್ಕಬೇಕು. ಆದರೆ ಅಂಥ ನೈತಿಕ ಸ್ಥೈರ್ಯವಾಗಲಿ, ಆಲೋಚನಾ ಸ್ಪಷ್ಟತೆಯಾಗಲಿ ಈ ಸರ್ಕಾರಕ್ಕೆ ಇರುವಂತೆ ಕಾಣುತ್ತಿಲ್ಲ

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕತ್ತಲು ಬೆಳಕುಗಳ ಅಸ್ಪಷ್ಟ ನೆರಳಿನಲ್ಲೇ ಬದುಕು ಕಳೆಕಟ್ಟುವುದೇನೋ?

ಮುಂದಿನ ಸುದ್ದಿ »

ಚುನಾವಣಾ ಕರ್ತವ್ಯದ ಮಜಲುಗಳು …

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×