Thursday April 7 2016

Follow on us:

Contact Us

ನಿಮ್ಮ ಅಂತಸ್ತಿಗೆ ತಕ್ಕಂತೆ ಸುದ್ದಿ ಕೊಡುತ್ತೇವೆ!

ನಟರಾಜು ವಿ.

ನಟರಾಜು ವಿ.

 ಒಮ್ಮೆ ಚಳವಳಿ, ಹೋರಾಟವೊಂದು ಮುಖಪುಟದಿಂದ ಒಳಪುಟಗಳತ್ತ ಸರಿಯಿತು ಎಂದರೆ ಅಲ್ಲಿಗೆ ಆಳುವ ಸರ್ಕಾರ ನಿರಾಳವಾಯಿತು ಎಂದೇ ಅರ್ಥ. ಹಿಂದೆಲ್ಲ ಹೋರಾಟ, ಪ್ರತಿಭಟನೆಗಳು ರಾಜಧಾನಿಯನ್ನು ಬಿಟ್ಟು ಜಿಲ್ಲಾ ಕೇಂದ್ರಗಳಿಗೆ ಹಬ್ಬಿದವು ಎಂದರೆ ಸರ್ಕಾರಗಳು ಬೆಚ್ಚುತ್ತಿದ್ದವು, ರಾಜ್ಯದ ತುಂಬೆಲ್ಲ ಹೋರಾಟದ ಕಿಚ್ಚು ಹಬ್ಬುತ್ತಿದೆ ಎಂದು ತಳಮಳಗೊಳ್ಳುತ್ತಿದ್ದವು. ಆದರೆ, ಈಗ ಸರ್ಕಾರಗಳು ಸಾಧ್ಯವಾದಷ್ಟೂ ಹೋರಾಟಗಳು ರಾಜಧಾನಿಯನ್ನು ಬಿಟ್ಟು ಜಿಲ್ಲಾ ಕೇಂದ್ರಗಳಿಗೆ ವಲಸೆ ಹೋಗಲಿ ಎಂದು ಬಯಸುತ್ತವೆ. ಒಮ್ಮೆ ಹೋರಾಟ, ಪ್ರತಿಭಟನೆಗಳು ಹೀಗೆ ರಾಜಧಾನಿಯನ್ನು ಬಿಟ್ಟು ವಲಸೆ ಹೋದವು ಎಂದರೆ ಮತ್ತೆ ಅವು ರಾಜಧಾನಿಗೆ ಮರಳಲು ಬೇಕಾದ ಕಸುವು ಪಡೆದುಕೊಳ್ಳುವುದು ಕಷ್ಟಸಾಧ್ಯ ಎನ್ನುವುದು ಆಳುವ ಸರ್ಕಾರಗಳ ಅಭಿಮತ.

ಇಂದು ಜಿಲ್ಲಾ ಕೇಂದ್ರಗಳೆನ್ನುವುದು ಆಂತರಿಕ ಪ್ರತಿಧ್ವನಿ, ಪ್ರತಿಫಲನಗಳ ಕೋಟೆಯಂತಾಗಿದೆ. ಅಲ್ಲಿ ಕೂಗುವುದು, ಚೀರುವುದು ಏನೇ ಮಾಡಿದರೂ ಅದು ಅಲ್ಲಿಗೆ ಸೀಮಿತವಾಗಿ ಮಾತ್ರವೇ ಪ್ರತಿಧ್ವನಿಸಿ, ಪ್ರತಿಫಲಿತವಾಗುತ್ತಿರುತ್ತದೆಯೇ ಹೊರತು ಹೊರಜಗತ್ತಿಗೆ ತಲುಪುವುದೇ ಕಡಿಮೆ! ಆದರೆ, ಒಳಗಿರುವವರಿಗೆ ಮಾತ್ರ ಇದು ಥೇಟ್ ಹೇರ್ ಸಲೂನ್ ಒಂದರಲ್ಲಿ ಎದಿರುಬದಿರಾಗಿ ಇರಿಸಲಾದ ಕನ್ನಡಿಯಂತಹ ಅನುಭವ ನೀಡುತ್ತದೆ. ಸುದ್ದಿ ಎಷ್ಟೋ ದೂರಕ್ಕೆ, ಜಗತ್ತಿನ ವಿವಿಧ ಭಾಗಗಳಿಗೆ ತಲುಪಿದೆಯೇನೋ ಎನ್ನುವ  ಭಾವನೆ ಮೂಡಿಸುತ್ತದೆ. ವಿಪರ್ಯಾಸವೆಂದರೆ ಆ ನಾಲ್ಕು ಗೋಡೆ ಬಿಟ್ಟು ಆಚೆ ಸಾಗಿರುವುದೇ ಇಲ್ಲ!  ತಲುಪಿದರೂ ಅದು ಎಲ್ಲೋ ಸಣ್ಣ ಸೋರಿಕೆಯಂತೆ!

ನಮ್ಮ ಬಹುತೇಕ ಮಾಧ್ಯಮಗಳು ರಾಜಧಾನಿ ಕೇಂದ್ರಿತವಾಗಿಯೇ ರೂಪುಗೊಂಡಿರುವಂಥವು. ಹಾಗಾಗಿಯೇ ರಾಜ್ಯ ಪತ್ರಿಕೆಗಳು ಸ್ಥಳೀಯ ಸುದ್ದಿಗಳಿಗೆಂದು ಮೀಸಲಿಟ್ಟಿರುವ ಸ್ಥಾನಿಕ ಆವೃತ್ತಿಯ ಪುಟಗಳಲ್ಲಿ ಮಾತ್ರವೇ ಸ್ಥಳೀಯ ಸುದ್ದಿಗಳು ವಿಜೃಂಭಿಸಿ ಮರೆಯಾಗಿ ಹೋಗುತ್ತವೆ. ಅದರಲ್ಲಿಯೂ, ಇದಾಗಲೇ ರಾಜಧಾನಿಯಲ್ಲಿ ಯಾವುದಾದರೂ ಒಂದು ಹೋರಾಟ, ಪ್ರತಿಭಟನೆಯ ಸುದ್ದಿ ಒಮ್ಮೆ ಪ್ರಕಟವಾಗಿತ್ತು ಎಂದರೆ ಆ ಹೋರಾಟ, ಪ್ರತಿಭಟನೆಗಳು ಜಿಲ್ಲಾ ಕೇಂದ್ರಗಳಲ್ಲಿ ಎಷ್ಟೇ ಕಾವು ಪಡೆದರೂ ಅದು ‘ಆಧುನಿಕ’ ಸುದ್ದಿಮನೆಯಲ್ಲಿ ಮತ್ತೆ ಮೊದಲಿನ ಪ್ರಾಶಸ್ತ್ಯ ಪಡೆಯುವ ಸಾಧ್ಯತೆ ಕಡಿಮೆಯೇ.  ಹಿಂದೆ ಸ್ಥಾನಿಕ ಆವೃತ್ತಿಗಳು ಈ ಮಟ್ಟದಲ್ಲಿ ಇಲ್ಲದ ಕಾರಣಕ್ಕೆ ಹಾಗೂ ಪತ್ರಿಕೆಯ ಮುಖಪುಟ ಇಡೀ ರಾಜ್ಯದ ಪ್ರಮುಖ ವಿಷಯಗಳನ್ನು ತಿಳಿಸುವಂತೆ ರೂಪುಗೊಳ್ಳಬೇಕು ಎನ್ನುವ ಆಶಯದಿಂದಾಗಿ ರಾಜ್ಯದ ವಿವಿಧ ಭಾಗಗಳ ಸಾಕಷ್ಟು ಜನಪರ ಸುದ್ದಿಗಳಿಗೆ ಮುಖಪುಟದಲ್ಲಿ ಪ್ರಾಶಸ್ತ್ಯ ಲಭ್ಯವಾಗುತ್ತಿತ್ತು. ಆದರೆ, ಇಂದು ರಾಜಧಾನಿ ಹಾಗೂ ರಾಷ್ಟ್ರೀಯ ಸುದ್ದಿಗಳ ಮುಖಾಮುಖಿಯಲ್ಲಿ ನಮ್ಮದೇ ಸುದ್ದಿಗಳಿಗೆ ನಾವು ವಿಮುಖವಾಗುತ್ತಿದ್ದೇವೆ. ಬಹಳಷ್ಟು ಬಾರಿ ರಾಜ್ಯದ ವಿವಿಧ ಭಾಗಗಳ ಮೌಲಿಕ ಸುದ್ದಿಗಳು ಮುಖಪುಟವನ್ನು ಪ್ರವೇಶಿಸುವುದೇ ಇಲ್ಲ!

ಪತ್ರಿಕೆಯೊಂದರ ಮುಖಪುಟದ ‘ಡೇಟ್ ಲೈನ್’’ಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ತರದವಾಗಿರಬೇಕು ಎಂದು ‘ಮೇಲರಿಮೆ’ಗಾಗಿ ಹಂಬಲಿಸುವ ಪ್ರವೃತ್ತಿ ನಮ್ಮ ರಾಷ್ಟ್ರೀಯ ಹಾಗೂ ರಾಜ್ಯ ಪತ್ರಿಕೆಗಳಲ್ಲಿ ಇಂದು ನುಸುಳಿದೆ. ಆ ಕಾರಣಕ್ಕೆ ಮುಖಪುಟದಲ್ಲಿ ಸ್ಥಳೀಯ ಸುದ್ದಿಗಳು ವರ್ಜ್ಯವೆನಿಸತೊಡಗುತ್ತವೆ. ಬೆಂಗಳೂರು, ನವದೆಹಲಿ, ಮುಂಬೈ, ವಾಷಿಂಗ್ ಟನ್, ಲಂಡನ್, ಪ್ಯಾರಿಸ್ ಗಳ ಡೇಟ್ ಲೈನ್ ತೂಕಕ್ಕೆ ಕೊಪ್ಪಳ, ಹಾವೇರಿ, ಗದಗ, ಶಿರಸಿ, ರಾಮನಗರ, ಚಾಮರಾಜನಗರ, ಚಳ್ಳಕೆರೆಗಳು ತೂಗದೆ ಹೋಗುತ್ತವೆ!  ಇದು ನಿಜಕ್ಕೂ ಕರ್ತವ್ಯ ಚ್ಯುತಿ. ಹೀಗೆ ಮಾಧ್ಯಮಗಳು ರಾಜಧಾನಿ ಸುದ್ದಿಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳ ಗುಂಗಿನಲ್ಲಿ ಕಳೆದುಹೋಗಿರುವುದು ಆಳುವ ಸರ್ಕಾರಗಳಿಗೆ ವರವಾಗಿ ಪರಿಣಮಿಸಿದೆ. ಇದರಿಂದಾಗಿ ನೂರಾರು ದಿನಗಳ ಹೋರಾಟಗಳು ಸುದ್ದಿಯಾಗದೆ, ಸದ್ದು ಮಾಡದೆ ನಿತ್ರಾಣಗೊಂಡು ಕುಸಿದು ಹೋಗುವ ಪರಿಯನ್ನು ಸರ್ಕಾರಗಳು ವಾರೆಗಣ್ಣಿನಿಂದ ನೋಡುತ್ತ ಒಳಗೊಳಗೇ ಖುಷಿ ಪಡುತ್ತವೆ.

ಈ ಬಾರಿಯ ಬೇಸಗೆ ರಾಜ್ಯ ಹಾಗೂ ರಾಷ್ಟ್ರದ ವಿವಿಧ ಭಾಗಗಳಲ್ಲಿ ಸೃಷ್ಟಿಸಿರುವ ಹಾಹಾಕಾರ ನಮ್ಮ ಊಹೆಗೂ ನಿಲುಕದಷ್ಟು ಗಂಭೀರವಾಗಿದೆ.  ದೇಶದ ಅನೇಕ ಭಾಗಗಳಲ್ಲಿ ಗಂಭೀರ ಸ್ವರೂಪದ ಬರ ಎದುರಾಗಿದೆ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಆದರೆ, ಮಾಧ್ಯಮಗಳು ಇಡೀ ಸುದ್ದಿಯನ್ನು ಇನ್ನಿಲ್ಲದಂತೆ ಮರೆಮಾಚಿವೆ. ಅಸಲಿಗೆ ಬಹುತೇಕ ಮಾಧ್ಯಮದ ಮಂದಿಗೆ ರಾಜ್ಯ ಹಾಗೂ ದೇಶದ ವಿವಿಧೆಡೆ ಬರದ ಸನ್ನಿವೇಶವಿರುವುದು ಅರಿವಿದೆಯೇ ಇಲ್ಲವೋ!  ಗ್ರಾಮೀಣ ಭಾಗಗಳಲ್ಲಿ ಜನ, ಜಾನುವಾರುಗಳು ಪಡುತ್ತಿರುವ ಬವಣೆ, ಜಾನುವಾರುಗಳನ್ನು ಸಾಕಲೂ ಆಗದೆ, ವಿಲೇವಾರಿ ಮಾಡಲೂ ಆಗದೆ ರೈತಾಪಿಗಳು ಹೆಣಗುತ್ತಿರುವ ರೀತಿ ಇದಾವುದೂ ಹೇಳಲು, ಕೇಳಲು ಅರ್ಹವಾದ ಸುದ್ದಿಯಾಗಿ ತಲುಪುವ ಸಾಧ್ಯತೆಯೇ ಇಲ್ಲವಾಗಿದೆ!

ಮಾಧ್ಯಮಗಳು ಇಂದು ಪವರ್ ಕಾರಿಡಾರ್ ನಿಂದ, ಥಳಕು ಬಳುಕಿನ ಸುದ್ದಿಗಳಿಂದ ಬಿಡಿಸಿಕೊಂಡು ಹೊರಬರುವ ಪ್ರಯತ್ನಗಳನ್ನೇ ಮಾಡುತ್ತಿಲ್ಲ. ಸುದ್ದಿಯನ್ನು ಮಾಡುವ ಜಾಗದಲ್ಲಿ ಜಿಜ್ಞಾಸೆಗಳನ್ನೂ, ಜಿಜ್ಞಾಸೆಗಳನ್ನು ಮಾಡಬೇಕಾದ ಜಾಗದಲ್ಲಿ ರೋಚಕತೆಯನ್ನೂ ತುಂಬುತ್ತಿವೆ. ಜನಸಾಮಾನ್ಯರ ಬವಣೆಗಳಿಗೆ ಕಿವುಡಾಗುತ್ತ ಕೇವಲ ರಾಜಕೀಯ ವಿದ್ಯಮಾನ, ತಾತ್ವಿಕ ಜಿಜ್ಞಾಸೆಗಳಲ್ಲಿ ವ್ಯಸ್ತವಾಗುತ್ತಿವೆ. ಸೆಲೆಬ್ರಿಟಿಗಳ ಮೋಹದಲ್ಲಿ, ರಂಗಿನ ಸುದ್ದಿಗಳಲ್ಲಿ ಹೂತುಹೋಗುತ್ತಿವೆ. ಶ್ರೀಸಾಮಾನ್ಯರ ಬವಣೆಗಳು, ಗ್ರಾಮೀಣ ಮಂದಿಯ ತಾಪತ್ರಾಯಗಳಿಗೆ ಸುದ್ದಿಮನೆಯಲ್ಲಿ ಜಾಗವೇ ಇಲ್ಲದಂತಾಗಿದೆ. ಜಾಗತಿಕವಾಗುವ ಭರದಲ್ಲಿ ಮಾಧ್ಯಮಗಳು ಸ್ಥಳೀಯ  ಬವಣೆಗಳಿಗೆ ಇನ್ನಿಲ್ಲದಂತೆ ಬೆನ್ನು ಹಾಕಿರುವುದು ಆಳುವ ಪಕ್ಷಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಪ್ರಾದೇಶಿಕ ಮಾಧ್ಯಮಗಳಂತೂ ಈ ದಿಕ್ಕಿನಲ್ಲಿ ಗಂಭೀರವಾಗಿ ಸೋಲುತ್ತಿವೆ. ಕೇವಲ ಅಧಿಕಾರ ರಾಜಕಾರಣದ ತಂತ್ರಗಳನ್ನು ಬಿತ್ತರಿಸಲು, ರಾಜಕೀಯ ಪಕ್ಷಗಳ ಕಚ್ಚಾಟಗಳನ್ನು ಹೇಳಲು, ಅವರು ಹೇಳಿದ್ದಕ್ಕೆ ಇವರಿಂದ ಪ್ರತಿಕ್ರಿಯೆ, ಇವರು ಹೇಳಿದ್ದಕ್ಕೆ ಅವರಿಂದ ಪ್ರತಿಕ್ರಿಯೆಯನ್ನು ಪಡೆಯಲು ಮಾತ್ರವೇ ಸೀಮಿತವಾಗಿವೆ. ಇದರಾಚೆಗೆ ಪ್ರಾದೇಶಿಕ ಪತ್ರಿಕೋದ್ಯಮ ವಿಸ್ತರಿಸುತ್ತಲೇ ಇಲ್ಲ! ಇನ್ನು ರಾಷ್ಟ್ರೀಯ ಸುದ್ದಿವಾಹಿನಿಗಳಂತೂ ಪ್ರೈಮ್ ಟೈಮ್ ಎನ್ನುವುದನ್ನು ಹೈಸ್ಕೂಲು ಹುಡುಗರ ಡಿಬೇಟ್ ಸ್ಪರ್ಧೆಯಂತೆ ಬಳಸಿಕೊಳ್ಳುತ್ತಿವೆ. ಯಾರು ಎಷ್ಟು ಜೋರಾಗಿ ಅರಚಬಲ್ಲರು ಎನ್ನುವ ಸ್ಪರ್ಧೆಯನ್ನು ಇವು ಡಿಬೇಟ್ ಗಳ ಹೆಸರಿನಲ್ಲಿ ಏರ್ಪಡಿಸುತ್ತಿವೆ. ಗ್ರಾಮೀಣ ಪ್ರದೇಶಗಳ ಸುದ್ದಿಗಳಿಗೆ ಈ ರಾಷ್ಟ್ರೀಯ ವಾಹಿನಿಗಳು ಸಂಪೂರ್ಣ ವಿದಾಯವನ್ನೇ ಹೇಳಿವೆ. ಇವರ ಭಾರತ ಎಸಿ ರೂಮುಗಳು, ಲಾಂಜ್ ಗಳು, ಮೇಲ್ಮಧ್ಯಮ ಹಾಗೂ ಸುಶಿಕ್ಷಿತ ವರ್ಗದ ಡೈನಿಂಗ್ ಹಾಲ್ ಗಳನ್ನು ದಾಟುವುದೇ ಇಲ್ಲ. ಅದರಾಚೆಗೆ ಆರಂಭವಾಗುವ ನೈಜ ಭಾರತದ ಬದುಕು – ಬವಣೆ ಇವರಿಗೆ ಬೇಕಾಗೂ ಇಲ್ಲ.

ಇದೆಲ್ಲದರ ಹಿಂದೆ ಬಹುಮುಖ್ಯವಾದ ವಿಷಯವಿದೆ. ಅದು ಸುದ್ದಿವಾಹಿನಿಗಳು, ಪತ್ರಿಕೆಗಳ ಆರ್ಥಿಕತೆಗೆ ಸಂಬಂಧಿಸಿದ್ದು. ರಾಷ್ಟ್ರೀಯ ವಾಹಿನಿಯ ಪ್ರೈಮ್ ಟೈಮ್ ಸಮಯದಲ್ಲಿ ಯಾವ ಜಾಹೀರಾತುಗಳು ಮೂಡುತ್ತವೆ ಎನ್ನುವುದನ್ನು ನೀವು ಗಮನಿಸಿದರೆ ಅಲ್ಲಿ ಬರುವ ಸುದ್ದಿಗಳು ಎಷ್ಟು ಮಾತ್ರ ವೈವಿಧ್ಯವೂ, ವಿಸ್ತಾರವೂ ಆಗಿರಬಲ್ಲದು ಎನ್ನುವುದನ್ನು ನೀವು ಅಳೆಯಬಹುದು. ಬಹುತೇಕ ಎಲ್ಲ ಲಕ್ಷುರಿ ಕಾರ್ ಗಳು, ಲೈಫ್ ಸ್ಟೈಲ್ ಉತ್ಪನ್ನಗಳು, ಸ್ಲಿಮ್ ಅಂಡ್ ಫಿಟ್ ಆಗಿ ಇರಲು ಸಹಾಯ ಮಾಡುವ ತಿಂಡಿ, ತಿನಿಸು, ಪೇಯಗಳ ಜಾಹೀರಾತುಗಳು ಈ ವೇಳೆ ಈ ವಾಹಿನಿಗಳಲ್ಲಿ ಅಧಿಕವಾಗಿ ಪ್ರಸಾರವಾಗುತ್ತವೆ. ಅಂದರೆ ಅಂಥದ್ದನ್ನು ಬಯಸುವ ವರ್ಗ ಆ ಹೊತ್ತಿನಲ್ಲಿ ಆ ವಾಹಿನಿಗಳ ಮುಂದೆ ಹೆಚ್ಚು ಕೂತಿದೆ ಎನ್ನುವುದು ಜಾಹೀರಾತುಗಳನ್ನು ನೀಡುವ ವಿವಿಧ ಉತ್ಪನ್ನಗಳ ತಯಾರಿಕಾ ಸಂಸ್ಥೆಗಳು ಕಂಡುಕೊಂಡಿರುವ ಸತ್ಯ. ಯಾವ ಅವಧಿಯಲ್ಲಿ, ಯಾವ ಸ್ಥಳ/ವಾಹಿನಿಗಳಲ್ಲಿ, ತಮ್ಮ ಜಾಹೀರಾತುಗಳನ್ನು ಪ್ರದರ್ಶಿಸುವುದು ಲಾಭದಾಯಕ ಎನ್ನುವುದನ್ನು ಅರಿಯಲೆಂದೇ ಈ ಸಂಸ್ಥೆಗಳು ಕೋಟ್ಯಾಂತರ ಹಣ ಸುರಿದು ಸಮೀಕ್ಷಾ ಸಂಸ್ಥೆಗಳಿಂದ ವರದಿ ಪಡೆಯುತ್ತಿರುತ್ತವೆ. ಇವುಗಳ ಪ್ರಕಾರ ನಮ್ಮ ಆಂಗ್ಲ ಸುದ್ದಿವಾಹಿನಿಗಳನ್ನು ಒಂಬತ್ತರಿಂದ ಹತ್ತುಗಂಟೆಯ ಪ್ರೈಮ್ ಟೈಮ್ ಅವಧಿಯಲ್ಲಿ ನೋಡುವ ಮಂದಿ ಉತ್ತಮವಾದ ಕೊಳ್ಳುವ ಶಕ್ತಿಯನ್ನು (ಪರ್ಚೇಸಿಂಗ್ ಪವರ್)  ಹೊಂದಿರುವಂಥವರು. ಹಾಗಾಗಿಯೇ, ಈ ಅವಧಿಯಲ್ಲಿ, ಈ ವಾಹಿನಿಗಳಲ್ಲಿ ಜಾಹೀರಾತು ನೀಡಲು ಅವು ಮುಂದಾಗುತ್ತವೆ. ಇದನ್ನೇ ಈಗ ಮತ್ತೊಂದು ತುದಿಯಿಂದ ನೋಡುವುದಾದರೆ, ಇಂಥ ವರ್ಗವನ್ನು ಹಿಡಿದಿಟ್ಟುಕೊಂಡಿರುವುದರಿಂದಲೇ ತಮಗೆ ಆದಾಯವಿರುವುದು ಎನ್ನುವುದನ್ನು ವಾಹಿನಿಗಳು ಸ್ಪಷ್ಟವಾಗಿ ಅರ್ಥಮಾಡಿಕೊಂಡಿವೆ. ಈ ವರ್ಗವನ್ನು ಸಂಪ್ರೀತಗೊಳಿಸುವಂಥ ಚರ್ಚೆಗಳು, ಸುದ್ದಿಗಳು ಯಾವುವು ಎನ್ನುವುದನ್ನು ಅರಿತು ಅಂಥ ಕಸರತ್ತನ್ನೇ ದಿನಂಪ್ರತಿ ಮಾಡುತ್ತಾ ಅದನ್ನೇ ಡಿಬೇಟ್ ಎಂದು ಕರೆಯುತ್ತವೆ.

ರಾಜಕೀಯ ಪಕ್ಷಗಳನ್ನು ಹಿಗ್ಗಾಮುಗ್ಗ ಟೀಕಿಸುವುದು, ಪಾಕಿಸ್ತಾನವನ್ನು, ಚೀನಾವನ್ನು ನಿಂದಿಸುವುದು, ರಾಷ್ಟ್ರೀಯತೆಯ ಬಗ್ಗೆ ಕೆಲವು ಚಾನಲ್ ಗಳು ಪದೇಪದೇ ಬೊಬ್ಬಿಡುವುದು, ಅದೇ ರೀತಿ ಜಾತ್ಯತೀತತೆಯ ಬಗ್ಗೆ ಮತ್ತೆ ಕೆಲವು ವಾಹಿನಿಗಳು ಮತ್ತೆಮತ್ತೆ ಕೂಗುಹಾಕುವುದು ಇವೆಲ್ಲದರ ಹಿಂದೆ ತಮ್ಮ ವೀಕ್ಷಕರಾರು, ಅವರ ಜೇಬಿನ ಆಳ, ಅಗಲ, ವಿಸ್ತಾರಗಳೇನು ಎನ್ನುವುದನ್ನು ವಾಹಿನಿಯ ಉನ್ನತ ಸ್ಥಾನದಲ್ಲಿ ಕುಳಿತಿರುವವರು ಅರಿತಿರುತ್ತಾರೆ. ಇವರು ತಮ್ಮ ವಾಹಿನಿಗಳ, ಪತ್ರಿಕೆಗಳ ಈ ಆರ್ಥಿಕ ಲೆಕ್ಕಾಚಾರಕ್ಕೆ ತಕ್ಕಂತೆ ಸಂಪಾದಕೀಯ ಬಳಗವನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ. ರಾಷ್ಟ್ರೀಯತೆಯ ಬಗ್ಗೆ ಬೊಬ್ಬೆ ಹಾಕುವವನು ಎದುರಾಳಿಯ ಪಾಳೆಯದಲ್ಲಿದ್ದಾನೆ ಎಂದರೆ, ಜಾತ್ಯತೀತತೆಯ ಬಗ್ಗೆ ಹೂಂಕರಿಸುವವರನ್ನು ತಮ್ಮ ಪಾಳಯಕ್ಕೆ ಕರೆತರುತ್ತಾರೆ. ಈ ಕಾರಣಕ್ಕೆ ಈ ವಾಹಿನಿಗಳಲ್ಲಿ ತಮ್ಮ ವೀಕ್ಷಕ ವರ್ಗವನ್ನು ಸಂಪ್ರೀತಗೊಳಿಸುವಂಥ ವಿಷಯಗಳನ್ನೇ ಚರ್ಚೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಹೀಗೆ ಜಾಹೀರಾತುದಾರರನ್ನು, ಆದಾಯವನ್ನು ಉಳಿಸಿಕೊಳ್ಳಲು ಮಾಡುವ ಕಸರತ್ತು ಒಂದು ಯಶಸ್ವಿ ವ್ಯಾಪಾರಿ ಚಿತ್ರವನ್ನು ನಿರ್ಮಿಸುವುದಕ್ಕಿಂತಲೂ ಹೆಚ್ಚಿನ ವ್ಯಾವಹಾರಿಕ ಜಾಣ್ಮೆಯನ್ನು ಬೇಡುತ್ತದೆ. ಇಂಥ ವ್ಯಾವಹಾರಿಕ ಜಾಣ್ಮೆ ಸುದ್ದಿಮನೆಗೆ ಅಗತ್ಯವಾಗಿ ಬೇಕಾದ ಸಂವೇದನೆಗಳನ್ನು ನಿಧಾನವಾಗಿ ಕೊಂದು ಹಾಕುತ್ತದೆ. ಹೀಗೆ ಸಂವೇದನೆಗಳು ಸತ್ತ ಸುದ್ದಿಮನೆಗಳನ್ನೇ ಇಂದು ನಾವು ನೋಡುತ್ತಿರುವುದು. ಇದುವೇ ವಾಸ್ತವದ ಸುದ್ದಿಗಳಿಂದ ಸುದ್ದಿಮನೆಗಳು ದೂರವಾಗುತ್ತ ಹೋಗಲು ಕಾರಣ. ರೈತಾಪಿಗಳ ಸಂಕಷ್ಟ, ಗ್ರಾಮೀಣರ ಬವಣೆಗಳಂಥ ನೈಜ ವಿಷಯಗಳನ್ನು ಪ್ರೈಮ್ ಟೈಮ್ ಅವಧಿಯಿಂದ ಸಾಧ್ಯವಾದರೆ ತಮ್ಮ ವಾಹಿನಿಯಿಂದಲೇ ನಿರ್ಬಂಧಿಸಲು ಅದನ್ನು ಕಟ್ಟಿರುವ ಆಡಳಿತ ಮಂಡಳಿಗಳು ಸುಪ್ತವಾಗಿ, ಮುಕ್ತವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ವಿಪರ್ಯಾಸವೆಂದರೆ, ತಮ್ಮ ಆಡಳಿತ ಮಂಡಳಿಗಳ ಈ ವರ್ತನೆಯ ಬಗ್ಗೆ ನಮ್ಮ ರಾಷ್ಟ್ರೀಯ ಆಂಗ್ಲ ವಾಹಿನಿಗಳಿಗೆ ಯಾವುದೇ ಬೇಸರವಿದ್ದಂತಿಲ್ಲ. ಅವುಗಳಿಗೆ ಕಾರ್ಪೊರೇಟ್ ಸುದ್ದಿಸಂಸ್ಥೆಗಳಾಗಿರುವುದರ ಬಗ್ಗೆ ಹೆಮ್ಮೆ ಇದೆ; ಅದರಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಅದು ಒದಗಿಸಿರುವ ಜೀವನಶೈಲಿ, ಸಮಾಜದಲ್ಲಿ ಕಲ್ಪಿಸಿರುವ ಸ್ಥಾನಮಾನಗಳ ಬಗ್ಗೆ ಖುಷಿ ಇದೆ. ಇದೇ ಗಾಳಿ ಪ್ರಾದೇಶಿಕ ಸುದ್ದಿಸಂಸ್ಥೆಗಳಿಗೂ ಬೀಸುತ್ತಿದೆ.

ಇದೆಲ್ಲದರ ತಾತ್ಪರ್ಯವಿಷ್ಟೆ, ನಮ್ಮ ರೈತಾಪಿಗಳ, ಬಡಬಗ್ಗರ, ದೀನದಲಿತರ, ಶೋಷಿತರ. ಶ್ರೀಸಾಮಾನ್ಯರ ಬವಣೆಗಳು ಯಾರ ಕಿವಿಗೂ ಬೀಳುವುದಿಲ್ಲ! ಯಾವ ಸಮಸ್ಯೆ ನಮ್ಮ ಕಿವಿಗೆ ಬೀಳುವುದಿಲ್ಲವೋ, ಆ ಸಮಸ್ಯೆ ದೇಶದಲ್ಲಿಯೇ ಇಲ್ಲ! ಹೀಗೆಂದು ಭ್ರಮಿಸಿಕೊಂಡೇ ಈ ದೇಶದ ಮೇಲ್ಮಧ್ಯಮವರ್ಗ ಸಂತೃಪ್ತವಾಗಿದೆ. ಇಂಥ ಭ್ರಮೆಯನ್ನು ಸಾರ್ವಜನಿಕವಾಗಿ ಕಟ್ಟಿಕೊಡುತ್ತಿರುವ ಸುದ್ದಿಸಂಸ್ಥೆಗಳ ಬಗ್ಗೆ ಎಲ್ಲ ಸರ್ಕಾರಗಳೂ ಗುಪ್ತ ಪ್ರೀತಿಯನ್ನಿರಿಸಿಕೊಂಡಿವೆ…

nkgkp

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸುಡುತಿದೆ ಧರೆ ಬಿಸಿಲಿನ ಬೇಗೆ…

ಮುಂದಿನ ಸುದ್ದಿ »

ಯುಗಾದಿ ಮತ್ತು ಬೇವು-ಬೆಲ್ಲ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×