Tuesday May 30 2017

Follow on us:

Contact Us

ಗೋವಿಗಾದರೂ ಬಾಯಿ ಬರುತ್ತಿದ್ದರೆ…

ಸಂಶೋಧಕ ಡಾ| ಎಂ. ಚಿದಾನಂದ ಮೂರ್ತಿ ಮತ್ತು ಖ್ಯಾತ ಇತಿಹಾಸಕಾರ ದ್ವಿಜೇಂದ್ರ ನಾರಾಯಣ್‍ರ ಅಭಿಪ್ರಾಯಗಳಲ್ಲಿ ಒಂದು ಸಮಾನ ಅಂಶ ಇದೆ. ಅದೇನೆಂದರೆ, ಪುರಾತನ ಕಾಲದಲ್ಲಿ ಗೋವು ಆಹಾರವಾಗಿ ಬಳಕೆಗೀಡಾಗಿರುವುದಕ್ಕೂ ಮತ್ತು ಹತ್ಯಾ ನಿಷೇಧಕ್ಕೆ ಒಳಗಾಗಿರುವುದಕ್ಕೂ ಧರ್ಮ ಸಂಬಂಧಿ ಕಾರಣಗಳು ಇಲ್ಲವೇ ಇಲ್ಲ. ಗೋವು ಸಂದರ್ಭಾನುಸಾರ ಹತ್ಯೆಗೂ ಒಳಗಾಗಿತ್ತು. ಹತ್ಯಾ ನಿಷೇಧಕ್ಕೂ ಈಡಾಗಿತ್ತು. ಚಿದಾನಂದ  ಮೂರ್ತಿಯವರ, ‘ಗೋವು: ಗೋಮಾತೆ: ಗೋಹತ್ಯಾ ನಿಷೇಧ ಕಾನೂನು..’ ಎಂಬ ಕೃತಿಯಲ್ಲಿ, ‘ಗೋವು: ಹಿಂದಿನ ಧರ್ಮ ಗ್ರಂಥಗಳಲ್ಲಿ..’ ಎಂಬ ಅಧ್ಯಾಯವೊಂದಿದೆ. ಅದರಲ್ಲಿ ಅವರು,

“ಋಗ್ವೇದದಲ್ಲಿ ಗೋಮಾಂಸ ಭಕ್ಷಣೆ ಮತ್ತು ಗೋವನ್ನು ಬಲಿಯಾಗಿ ಅರ್ಪಿಸುವುದರ ಸೂಚನೆಗಳೇನೋ ಇವೆ” ಎಂದು ಹೇಳಿರುವರಲ್ಲದೇ, ಆ ಕಾಲದಲ್ಲಿ ಬಂಜೆ ಅಥವಾ ಗೊಡ್ಡು ಹಸುಗಳನ್ನು ಮಾತ್ರ ಕೊಲ್ಲಲಾಗುತ್ತಿತ್ತು’ ಎಂಬ ಡಾ. ಪಿ.ವಿ. ಕಾಣೆ ಯವರ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಕೃತಿಯಲ್ಲಿನ ಉಲ್ಲೇಖಗಳನ್ನು ಸಮರ್ಥಿಸಿದ್ದಾರೆ. ಅಲ್ಲದೇ, ತೀರಾ ಎಚ್ಚರಿಕೆ ವಹಿಸಿ ಕಾಣೆಯವರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂಬ ಅಭಿಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ In Myth of Holy Cow ಎಂಬ ತಮ್ಮ ಪ್ರಮುಖ ಸಂಶೋಧನಾತ್ಮಕ ಕೃತಿಯಲ್ಲಿ ದ್ವಿಜೇಂದ್ರ ನಾರಾಯಣ್ ಅವರು, ಕ್ರಿಸ್ತ ಪೂರ್ವದ ವೇದಕಾಲವನ್ನು ಮತ್ತು ಕ್ರಿಸ್ತಶಕದ ಈ ಉಪಭೂಖಂಡವನ್ನು ಪರಸ್ಪರ ಮುಖಾಮುಖಿಯಾಗಿಸಿ ಜರಡಿ ಹಿಡಿದಿದ್ದಾರೆ.

ಕ್ರಿಸ್ತಪೂರ್ವ (1000-5000 ವೇದಕಾಲ) ಕಾಲದಲ್ಲೇ ಗೋವು ಆಹಾರವಾಗಿ ಜನರ ನಡುವೆ ಚಲಾವಣೆಯಲ್ಲಿತ್ತು ಎಂಬುದಾಗಿ ಅವರು ಹೇಳಿದ್ದಾರೆ. ಈ ಉಪಭೂಖಂಡದಲ್ಲಿ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡದ್ದೇ  ಕ್ರಿಸ್ತಪೂರ್ವ 500ನೇ ಇಸವಿಯಲ್ಲಿ. ಇದು ಎರಡು ಪ್ರಮುಖ ವಿಷಯಗಳನ್ನು ಮುನ್ನೆಲೆಗೆ ತಂದಿತು. ಅದರಲ್ಲಿ, ‘ವೆಜಿಟೇರಿಯನ್’ ಒಂದಾದರೆ ಇನ್ನೊಂದು ಗೋವು, ದನ, ಎಮ್ಮೆ ಮುಂತಾದ ಪ್ರಾಣಿಗಳು. ಕೃಷಿ ಚಟುವಟಿಕೆಗಳು ವೆಜಿಟೇರಿಯನಿಸಂ ಅನ್ನು ಬಯಸಿದುವು. ಕೃಷಿ ಚಟುವಟಿಕೆಯ ಬೆಳವಣಿಗೆಗೆ ಸಸ್ಯಾಹಾರದ ಪರ ವಾತಾವರಣ ಅಗತ್ಯವಾಗಿತ್ತು. ಜೊತೆಗೇ ಹಸು, ಎತ್ತು, ಎಮ್ಮೆ, ಕೋಣಗಳನ್ನು ಕೃಷಿಯು ಅವಲಂಬಿಸಿರುವುದರಿಂದ ಅವುಗಳ ಯಥೇಚ್ಛ ಲಭ್ಯತೆ ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಅಂಶಗಳು ಪ್ರಚಾರಕ್ಕೆ ಬಂದುವು. ಮಾಂಸಾಹಾರ ತಪ್ಪು ಎಂಬುದು ಅದರಲ್ಲಿ ಒಂದಾದರೆ ಇನ್ನೊಂದು, ಸಸ್ಯಾಹಾರ ಉತ್ತಮ ಎಂಬುದು. ಇದರ ಹೊರತಾಗಿ ಸಸ್ಯಾಹಾರಕ್ಕೂ ಮಾಂಸಾಹಾರ ನಿಷೇಧಕ್ಕೂ ಇನ್ನಾವ ಧಾರ್ಮಿಕ ಕಾರಣಗಳೂ ಇಲ್ಲ ಎಂದು ದ್ವಿಜೇಂದ್ರ ನಾರಾಯಣ್‍ರು ವಾದಿಸುತ್ತಾರೆ.

ಅದರ ಶಾರೀರಿಕ ಸಾಮರ್ಥ್ಯವು ಗೋವನ್ನು ಅತ್ಯಮೂಲ್ಯ ಪ್ರಾಣಿಯಾಗಿ ಮಾರ್ಪಡಿಸಿತು. ಸೆಗಣಿಗೂ ಮಹತ್ವ ಲಭ್ಯವಾಯಿತು. ಹೀಗೆ ಕ್ರಿಸ್ತಪೂರ್ವದ ವೇದಕಾಲದಲ್ಲಿ ಹಾಲು ಮಾತ್ರ ಕೊಡುತ್ತಿದ್ದ ಗೋವು ಕ್ರಿಸ್ತಶಕದಲ್ಲಿ ಹಾಲಿನ ಜೊತೆಗೇ ಕೃಷಿ ಚಟುವಟಿಕೆಯ ಆಧಾರಸ್ತಂಭವೂ ಆಗಿ ಬದಲಾಯಿತು. ಒಂದು ರೀತಿಯಲ್ಲಿ, ಕ್ರಿಸ್ತಶಕ ನಂತರದ ಗೋವು ಕ್ರಿಸ್ತಪೂರ್ವದ ವೇದಕಾಲದ ಗೋವು ಆಗಿರಲಿಲ್ಲ. ಆದ್ದರಿಂದ, ವೇದಕಾಲದ ನಿಲುವನ್ನು ಈ ಕ್ರಿಸ್ತಶಕ ನಂತರದ ಕಾಲದಲ್ಲೂ ಮುಂದುವರಿಸಿಕೊಂಡು ಹೋಗುವುದಕ್ಕೆ ಅರ್ಥವೂ ಇರಲಿಲ್ಲ. ವೇದಕಾಲದಲ್ಲಿ ಗೋಹತ್ಯೆ ಅನುವದನೀಯವಾಗಿರುವುದಕ್ಕೂ ಕೃಷಿ ಚಟುವಟಿಕೆ ಪ್ರಾರಂಭವಾದ ಕ್ರಿಸ್ತಶಕ 500ರ ಇಸವಿಯಲ್ಲಿ ಗೋಹತ್ಯೆಯು ನಿಷೇಧಕ್ಕೆ ಒಳಗಾಗಿರುವುದಕ್ಕೂ ಈ ನೆಲಸಂಬಂಧೀ ಹಿನ್ನೆಲೆ ಇದೆ. ಸಂದರ್ಭಕ್ಕೆ ತಕ್ಕಂತೆ ಗೋಹತ್ಯೆ ಸರಿ ಮತ್ತು ತಪ್ಪಾಗುತ್ತಾ ಬಂದಿದೆ. ಚೀನಾದಲ್ಲಿ ಇವತ್ತು ನಾಯಿ ಆಹಾರದ ಪ್ರಾಣಿ. ನಾಯಿ ಮಾಂಸ ಚೀನಾದಲ್ಲಿ ಜನ ಪ್ರಿಯ. ಅದರ ಚರ್ಮವೂ ತುಂಬಾ ಬೆಲೆ ಬಾಳುತ್ತದೆ. ಅದೇ ವೇಳೆ ಅಮೇರಿಕದಲ್ಲಿ ನಾಯಿ ಸಾಕು ಪ್ರಾಣಿ. ಅದನ್ನು ಮನೆ ಯೊಳಗೇ ಸಾಕುತ್ತಾರೆ. ಅದನ್ನು ಹತ್ಯೆ ಮಾಡುವುದಿಲ್ಲ. ಅಮೇರಿಕ ಮತ್ತು ಚೀನಾದಲ್ಲಿರುವ ನಾಯಿ, ನಾಯಿಯೇ ಆಗಿದ್ದರೂ ಭಿನ್ನ ಸಂಸ್ಕ್ರತಿ, ವಾತಾವರಣ ಮತ್ತು ಅಭಿರುಚಿಗಳಿಗೆ ತಕ್ಕಂತೆ ಅದು ಗುರುತಿಗೀಡಾಗಿದೆ.ನಿಜವಾಗಿ, ಮೊಘಲರ ಕಾಲದಲ್ಲಿ ಬಾಬರ್ ಚಕ್ರವರ್ತಿಯು ಗೋಹತ್ಯೆಯನ್ನು ನಿಷೇಧಿಸಿದ್ದ ಎಂದು ಹೇಳಲಾಗುತ್ತದೆ. ಅದೇ ವೇಳೆ, ಬಾಬರ್‍ನ ಸಮಕಾಲೀನರಾಗಿದ್ದ ಹಿಂದೂ ದೊರೆಗಳು ಗೋಹತ್ಯೆಗೆ ನಿಷೇಧ ಹೇರಿರಲಿಲ್ಲ ಎಂಬುದೂ ದೃಢಪಟ್ಟಿದೆ. ಇವೆಲ್ಲ ಹೇಳುವುದೇನನ್ನು? ಧರ್ಮಕ್ಕಿಂತ ಹೊರತಾದ ಸ್ಥಳೀಯ ಕಾರಣಗಳೇ ಈ ನಿಷೇಧ ಮತ್ತು ನಿಷೇಧ ರಹಿತ ಸ್ಥಿತಿಯ ಹಿಂದಿವೆ ಎಂಬುದನ್ನೇ ಅಲ್ಲವೇ? ಗೋವು ವೇದ ಕಾಲ ಅಥವಾ ಅದಕ್ಕಿಂತ ಪೂರ್ವ ಕಾಲದಲ್ಲೇ ಈ ಉಪಭೂಖಂಡದ ಅತ್ಯಂತ ಪರಿಚಿತ ಪ್ರಾಣಿಯಾಗಿತ್ತು. ನಾಗರಿಕತೆ ಬೆಳೆದು ಕೃಷಿ ಚಟುವಟಿಕೆಗಳು ಬಿರುಸು ಪಡಕೊಳ್ಳತೊಡಗಿದಂತೆಯೇ ಗೋವು ಸಹಿತ ಜಾನುವಾರು ಸಂತತಿಗಳ ಉಪಯುಕ್ತತೆಯು ಹೆಚ್ಚಾಯಿತು. ಆವರೆಗೆ ಗೋವು ಕೊಡುತ್ತಿದ್ದುದು (ಅಥವಾ ಬಳಕೆಯಾಗುತ್ತಿದ್ದುದು) ಹಾಲು ಮಾತ್ರ. ಆದರೆ ಕೃಷಿಯು ಗೋವನ್ನು ಬಹೂಪಯೋಗಿಗೊಳಿಸಿತು.

ವೇದಕಾಲದಿಂದ ಈ ಕಾಲದ ವರೆಗೆ ಗೋವು ಪರಿಗಣಿಸಲ್ಪಡುತ್ತಾ ಬಂದಿರುವುದೂ ಇದೇ ರೀತಿಯಲ್ಲಿ. ಒಂದು ಪ್ರದೇಶದ ಜನರು ಗೋಮಾಂಸವನ್ನು ಸೇವಿಸುತ್ತಾ ಮತ್ತು ಇನ್ನೊಂದು ಪ್ರದೇಶದ ಜನರು ಈ ಆಹಾರ ಕ್ರಮವನ್ನು ವಿರೋಧಿಸುತ್ತಾ ಬಂದಿರುವುದರ ಹಿನ್ನೆಲೆಯೂ ಇದುವೇ. ಆಯಾ ಪ್ರದೇಶದ ಪರಿಸ್ಥಿತಿ ಮತ್ತು ಜೀವನ ಕ್ರಮವು ಈ ವಿರುದ್ಧ ನಿಲುವಿಗೆ ಕಾರಣವಾಗಿತ್ತೇ ಹೊರತು ವೇದಗ್ರಂಥಗಳೋ ಅಥವಾ ಹಿಂದೂ ಧಾರ್ಮಿಕ ಭಾವನೆಗಳೋ ಅಲ್ಲ. ಒಂದು ವೇಳೆ, ಹಿಂದೂ ಧರ್ಮಗ್ರಂಥಗಳೇ ಗೋಹತ್ಯಾ ವಿರೋಧಕ್ಕೆ ಕಾರಣ ಆಗಿರುತ್ತಿದ್ದರೆ ವೇದಕಾಲದಲ್ಲಿ ಸಹ್ಯವೂ ವೇದಾನಂತರದ ಕಾಲದಲ್ಲಿ ವರ್ಜ್ಯವೂ ಆಗಿರುವುದಕ್ಕೆ ಸಾಧ್ಯವಿತ್ತೇ? ಧರ್ಮವೊಂದರ ಆಶಯಗಳು ವೇದಕಾಲದಲ್ಲೂ ಆಧುನಿಕ ಕಾಲದಲ್ಲೂ ಬೇರೆ ಬೇರೆಯಾಗುತ್ತದೆಯೇ? ಈ ಉಪಭೂಖಂಡದ ನಾಗರೀಕತೆಯ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ಅಧ್ಯಯನಕ್ಕೆ ಒಳಪಡಿಸುವ ಯಾರಿಗೇ ಆಗಲಿ, ಗೋವು, ಗೋಮಾಂಸ, ಗೋಹತ್ಯೆ.. ಮುಂತಾದುವು ಧಾರ್ಮಿಕ ಇಶ್ಯೂ ಆಗಿ ಕಾಣಿಸುವುದಕ್ಕೆ ಸಾಧ್ಯವೇ ಇಲ್ಲ. ಇಲ್ಲಿನ ನಾಗರೀಕತೆಯ ಪಾಲಿಗೆ ಗೋವು ಒಂದು ಧರ್ಮಾತೀತ ಪ್ರಾಣಿ. ಅದರ ಸಾಧುತನ ಮತ್ತು ಬಹುಪಯೋಗದ ಕಾರಣಕ್ಕಾಗಿ ಅದನ್ನು ಜನರು ವಿವಿಧ ರೀತಿಯಲ್ಲಿ ಪರಿಗಣಿಸಿದರು.

ಅದಕ್ಕೆ ಧಾರ್ಮಿಕವಾಗಿ ಯಾವ ಮಹತ್ವವೂ ಇಲ್ಲದಿದ್ದುದರಿಂದಲೇ ಅದನ್ನು ಮಾಂಸವಾಗಿ ಬಳಸಿದವರೂ ಬಳಸದವರೂ ಜಗಳವಿಲ್ಲದೆಯೇ ಬದುಕಿದರು. ಅಷ್ಟಕ್ಕೂ, ಇವತ್ತು ಗೋಸಾಗಾಟದ ಹೆಸರಲ್ಲಿ ದಾಂಧಲೆ ನಡೆಸುವವರಿಗೆ ಇವೆಲ್ಲ ಗೊತ್ತಿದೆಯೋ ಇಲ್ಲವೋ. ಗೊತ್ತಿದ್ದರೂ ಇಲ್ಲ ದಿದ್ದರೂ ಈ ಯುವಕರಿಗೆ ಅದೊಂದು ಫ್ಯಾಶನ್. ಹಾಗಂತ, ಈ ದೇಶದ ಬಚ್ಚಲು ಮನೆಗಳು, ಕಪಾಟುಗಳು, ಅಡುಗೆ ಕೋಣೆ ಗಳೆಲ್ಲ ಎಷ್ಟಂಶ ಹಸು ಮತ್ತು ದನಗಳಿಂದ ತುಂಬಿಹೋಗಿವೆ ಎಂಬ ಬಗ್ಗೆ ಈ ಮಂದಿ ಜಿಜ್ಞಾಸೆಗೆ ಹೊರಟರೆ ಅವರು ಉಡುಪಿ ಜಿಲ್ಲೆಯ ಕೆಂಜೂರಿನ ಪ್ರವೀಣ್ ಪೂಜಾರಿ, ದಾದ್ರಿಯ ಅಖ್ಲಾಕ್, ಶಿವಮೊಗ್ಗ ಮತ್ತು ಉನಾದ ದಲಿತರ ಕಾಲು ಹಿಡಿದು ಕ್ಷಮೆ ಯಾಚಿಸಬಹುದು ಎಂದೆನ್ನಿಸುತ್ತದೆ. ಈ ದಾಂಧಲೆಕೋರರು ಹೆಚ್ಚು ತಲೆ ಕೆಡಿಸಿಕೊಳ್ಳದ ಫ್ಯಾಟ್ ಪ್ರೊಸೆಸಿಂಗ್ ಇಂಡಸ್ಟ್ರೀ ಎಂಬೊಂದು ಉದ್ಯಮ ನಮ್ಮ ದೇಶದಲ್ಲಿದೆ. ಇದರ ಕೆಲಸ ಏನೆಂದರೆ, ದೇಶಾದ್ಯಂತ ಇರುವ ಸ್ನಾನ ಮತ್ತು ಸೌಂದರ್ಯ ಕೇಂದ್ರಿತ ಉತ್ಪನ್ನಗಳ ಕಂಪೆನಿಗಳಿಗೆ ಬೇಕಾದ ಎಣ್ಣೆ ಮತ್ತಿತರ ಅಗತ್ಯ ಪದಾರ್ಥಗಳನ್ನು ಪೂರೈಸುವುದು. ಹಸು, ಎತ್ತು, ಎಮ್ಮೆ ಮುಂತಾದುವುಗಳ ವಿವಿಧ ಅಂಗಾಂಗಗಳನ್ನು ಬೃಹತ್ ಪಾತ್ರೆಯಲ್ಲಿಟ್ಟು ಬೇಯಿಸುವ ಮತ್ತು ಅದರಿಂದ ಹೊರಬರುವ ಜಿಡ್ಡನ್ನು ಬೃಹತ್ ಕಂಪೆನಿಗಳಿಗೆ ರವಾನಿಸುವ ಕೆಲಸ ದಿನಾ ಸದ್ದಿಲ್ಲದೇ ಮತ್ತು ತಡೆಯಿಲ್ಲದೇ ನಡೆಯುತ್ತಿದೆ.

ದನಗಳ ಕೊಂಬು, ಗೊರಸು, ಕೂದಲು, ಚರ್ಮ, ಮೂಳೆಗಳನ್ನು ಕುದಿಸಿ ಸಿಗುವ ಎಣ್ಣೆಯಿಂದ ತಯಾರಿಸಲಾದ ಉತ್ಪನ್ನಗಳನ್ನೇ ನಾವು ದಿನಾ ಸ್ನಾನಗೃಹದಲ್ಲಿ ಬಳಸುತ್ತಿದ್ದೇವೆ. ಕಾಸ್ಮೆಟಿಕ್ ವಸ್ತುಗಳು, ಟೂತ್‍ಪೇಸ್ಟ್, ಶಾಂಪುಗಳು, ಜೆಲ್‍ಗಳು, ಮೇಣದ ಬತ್ತಿ ಸಹಿತ ಒಂದು ಬೃಹತ್ ಗಾತ್ರದ ಉದ್ಯಮವು ಜಾನುವಾರುಗಳನ್ನು ಆಶ್ರಯಿಸಿಕೊಂಡಿದೆ. ಗೋವಿನ ಹೆಸರಲ್ಲಿ ದಾಂಧಲೆ ನಡೆಸುವವರೆಲ್ಲ ರಾತ್ರಿಯೋ ಹಗಲೋ ಗೋವಿನ ಎಣ್ಣೆಯನ್ನು ಬಳಸಿದ ಸಾಬೂನಿನಿಂದಲೇ ಸ್ನಾನ ಮಾಡಿರುತ್ತಾರೆ. ಹಲ್ಲುಜ್ಜಿರುತ್ತಾರೆ. ಗೋವಿನ ಚರ್ಮದ ಸೊಂಟಪಟ್ಟಿ ಕಟ್ಟಿಕೊಂಡಿರುತ್ತಾರೆ. ಶೂ ಧರಿಸಿರುತ್ತಾರೆ. ಬಾಡಿ ಲೋಶನ್‍ಗಳು, ಫೇಷಿಯಲ್ ಕ್ರೀಮ್‍ಗಳು, ತೈಲಗಳು.. ಎಲ್ಲದರಲ್ಲೂ ದನ ಅಥವಾ ಎತ್ತುಗಳಿವೆ. ಹೀಗೆ ಈ ದೇಶದ ಬಹುತೇಕ ಎಲ್ಲ ಮನೆಗಳಲ್ಲೂ ದನಕೇಂದ್ರಿತ ವಸ್ತುಗಳು ತುಂಬಿ ಹೋಗಿವೆ.

ಅಂದಹಾಗೆ, ಇದಕ್ಕೆ ಮೂರು ಗಂಡು ಕರುಗಳನ್ನು ಹೊತ್ತೊಯ್ಯುತ್ತಿದ್ದ ಪ್ರವೀಣ್ ಪೂಜಾರಿಯೋ, ಹಾಜಬ್ಬ-ಹಸನಬ್ಬರೋ, ಸತ್ತ ದನವೊಂದರ ಚರ್ಮ ಸುಲಿದ ಉನಾದ ದಲಿತರೋ ಖಂಡಿತ ಕಾರಣ ಅಲ್ಲ. ಅವರ ಜುಜುಬಿ ಎತ್ತು ಮತ್ತು ದನಗಳಿಗೆ ಈ ಫ್ಯಾಟ್ ಪ್ರೊಸೆಸಿಂಗ್ ಇಂಡಸ್ಟ್ರಿಯ ಬೃಹತ್ ಹೊಟ್ಟೆಯನ್ನು ತುಂಬಿಸಲು ಸಾಧ್ಯವೂ ಇಲ್ಲ. ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ ಕಾಸ್ಮೆಟಿಕ್ ಉದ್ಯಮಕ್ಕೆ ಸಾವಿರಾರು ಲೀಟರ್‍ಗಳಷ್ಟು ದನಕೇಂದ್ರಿತ ಆಯಿಲ್‍ಗಳು ಬೇಕು. ಅದನ್ನು ಒದಗಿಸುವ ಸಾಮರ್ಥ್ಯ ಬೃಹತ್ ಮಾಂಸೋದ್ಯಮ ಕಂಪೆನಿಗಳಿಗಿವೆಯೇ ಹೊರತು ಸ್ಥಳೀಯ ಜುಜುಬಿ ಕಸಾಯಿಖಾನೆಗಳಿಗಲ್ಲ. ಸದ್ಯ ಈ ದೇಶ ಮಾಂಸ ರಫ್ತಿನಲ್ಲಿ ಜಾಗತಿಕವಾಗಿಯೇ ಮೊದಲ ಸ್ಥಾನದಲ್ಲಿದೆ. 2015ರಲ್ಲಿ ಭಾರತ ಒಟ್ಟು 2 ಮಿಲಿಯನ್ ಟನ್ ಮಾಂಸವನ್ನು ರಫ್ತು ಮಾಡುವ ಮೂಲಕ ಬ್ರೆಝಿಲ್ ಅನ್ನು ಹಿಂದಿಕ್ಕಿದೆ. ವಿಶ್ವದ ಒಟ್ಟು ಮಾಂಸ ರಫ್ತಿನಲ್ಲಿ (2015ರಲ್ಲಿ) ಭಾರತದ ಪಾಲು 23.5%. 2014ಕ್ಕೆ ಹೋಲಿಸಿದರೆ ಈ ದೇಶದ ಗೋಮಾಂಸ ರಫ್ತಿನಲ್ಲಿ 20% ಏರಿಕೆಯಾಗಿದೆ. 2015ರಲ್ಲಿ ಈ ದೇಶದ ಮಾಂಸದ ರಫ್ತಿನಲ್ಲಿ ಯಾವ ಬಗೆಯ ಏರಿಕೆಯಾಗಿದೆಯೆಂದರೆ ಮೊತ್ತಮೊದಲ ಬಾರಿ ಬಾಸ್ಮತಿ ಅಕ್ಕಿಯು ರಫ್ತಿನಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ನಿಜವಾಗಿ, ರಫ್ತು ವಹಿವಾಟಿನಲ್ಲಿ ಮಾಂಸವು ಮೊದಲ ಸ್ಥಾನಕ್ಕೇರುವುದು, ಅಕ್ಕಿ ದ್ವಿತೀಯ ಸ್ಥಾನಕ್ಕೆ ಕುಸಿಯುವುದು ಅಥವಾ ಇನ್ನಾವುದೋ ಮೂರನೇ ಉತ್ಪನ್ನವೊಂದು ಇವೆಲ್ಲವನ್ನೂ ಹೊರ ಹಾಕಿ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿ ಕೂರುವುದೆಲ್ಲ ಸಹಜ ಬೆಳವಣಿಗೆಗಳೇ ಹೊರತು ಅದರಲ್ಲಿ ಹುಬ್ಬೇರಿಸುವಂಥದ್ದೇನೂ ಇಲ್ಲ. ಆದರೆ, 2014ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರು ಈ ಬೆಳವಣಿಗೆಯನ್ನು ಅತ್ಯಂತ ಅಪಾಯಕಾರಿಯೆಂಬಂತೆ ಬಿಂಬಿಸಿದ್ದರು. ಪಿಂಕ್ ರೆವೊಲ್ಯೂಶನ್ (ಗುಲಾಬಿ – ಗೋಮಾಂಸ – ಕ್ರಾಂತಿ) ಎಂದು ಕಾಂಗ್ರೆಸ್‍ನ ಮಾಂಸ ರಫ್ತು ನೀತಿಯನ್ನು ತಮಾಷೆ ಮಾಡಿದ್ದರು. ಈ ದೇಶದ ನಿರ್ದಿಷ್ಟ ವರ್ಗವನ್ನು (ಮುಸ್ಲಿಮ್) ಸಂಪ್ರೀತಗೊಳಿಸುವುದಕ್ಕಾಗಿ ಮಾಂಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದೂ ಹೇಳಿದ್ದರು. ‘ಗೋಮಾತೆ’ಯ ಹತ್ಯೆಗಾಗಿ ಬಿಹಾರದಲ್ಲಿ ದುಃಖಿಸಿದ್ದರು.

ಆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಸದ್ಯ 2 ವರ್ಷಗಳೇ ಕಳೆದಿವೆ. ಈ ಎರಡು ವರ್ಷಗಳಲ್ಲಿ ಅವರು ಪಿಂಕ್ ರೆವೊಲ್ಯೂಶನ್‍ಗೆ ಯಾವ ಮಟ್ಟದ ಉತ್ತೇಜನ ನೀಡುತ್ತಿದ್ದಾರೆಂದರೆ, ಮನಮೋಹನ್ ಸಿಂಗ್‍ರಿಂದಲೂ ಸಾಧಿಸಲಾಗದ್ದನ್ನು ಅವರು ಸಾಧಿಸುತ್ತಿದ್ದಾರೆ. ಬಾಸ್ಮತಿ ಅಕ್ಕಿಯ ರಫ್ತನ್ನೇ ದ್ವಿತೀಯ ಸ್ಥಾನಕ್ಕಿಳಿಸಿ ಪಿಂಕ್ ರೆವೊಲ್ಯೂಶನ್ ಅನ್ನು ಮೊದಲ ಸ್ಥಾನಕ್ಕೆ ತಂದಿರಿಸಿದ್ದಾರೆ.ಹೈನೋದ್ಯಮಕ್ಕಾಗಿ ಆಕಳು ಸಾಗಿಸುತ್ತಿದ್ದ ಪೆಹಲೂ ಖಾನ್  ರಂಥ  ಬಡಪಾಯಿಗಳನ್ನು ರಸ್ತೆಯಲ್ಲೇ ಥಳಿಸಿ ಹತ್ಯೆ ನಡೆಸುವಾಗ, ನರೇಂದ್ರ ಮೋದಿಯವರ ಅನುಮತಿಯೊಂದಿಗೇ ಅಸಂಖ್ಯ ದನಗಳು ದಿನಾ ಹತ್ಯೆಯಾಗುತ್ತಿವೆ. ಮಾಂಸವಾಗಿ ವಿದೇಶಗಳಿಗೆ ರಫ್ತಾಗುತ್ತಿವೆ. ಬಾಣಲೆಯಲ್ಲಿ ಕುದಿದು, ಎಣ್ಣೆಯಾಗಿ ಬೃಹತ್ ಕಂಪೆನಿಗಳಿಗೆ ಮಾರಾಟವಾಗುತ್ತಿವೆ. ಜೊತೆಗೇ ಮತ್ತೆ ನಮ್ಮ ನಮ್ಮ ಸ್ನಾನಗೃಹ, ಕನ್ನಡಿಯ ಡ್ರಾವರ್ ಮತ್ತಿತರೆಡೆ ನಿತ್ಯ ಬಳಕೆಯ ವಸ್ತುವಾಗಿ ಕಾಣಿಸಿಕೊಳ್ಳುತ್ತಿವೆ. ಆದರೆ ಪಿಂಕ್ ರೆವೊಲ್ಯೂಶನ್ ಎಂದು ತಮಾಷೆ ಮಾಡಿದ ಮೋದಿಯವರಾಗಲಿ, ಅವರ ಪಕ್ಷದವರಾಗಲಿ, ತಳಮಟ್ಟದ ಕಾರ್ಯಕರ್ತರಾಗಲಿ ಯಾರು ಯಾರು ಯಾರೂ ಮಾತಾಡುತ್ತಿಲ್ಲ.
      ಗೋವಿಗಾದರೂ ಬಾಯಿ ಬರುತ್ತಿದ್ದರೆ…

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಉಪವಾಸವೆಂಬ ಕುಲುಮೆಯಲ್ಲಿ ಒಂದು ತಿಂಗಳು…

ಮುಂದಿನ ಸುದ್ದಿ »

ಉಮರ್ ಗೆ ಕಲ್ಲೆಸೆದು ಬರ್ಖಾ ದತ್ ರನ್ನು ಮುಜಾಹಿದೀನ್ ಸ್ಕೂಟರ್ ನಲ್ಲಿ ಕೂರಿಸಿದವರ ಬಗ್ಗೆ 

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×