Sunday November 19 2017

Follow on us:

Contact Us

ಎರಡೇ ನಿಮಿಷದ ಮ್ಯಾಗಿ ಮತ್ತು ಧಾವಂತದ ಬದುಕು..!

‘ಸರಿಯಾಗಿ ಇಪ್ಪತ್ತೈದು ತುಂಬೋದಕ್ಕೇ ಇನ್ನೂ ಆರು ತಿಂಗಳಿವೆ ಈಗ್ಲೇ ತುಂಬಾ defeat ಆದ ಭಾವ’, ತೀರಾ ಮೂವತ್ತು ಆಗುವುದಕ್ಕಿಂತ ಮುನ್ನವೇ ಎಲ್ಲಾ ಮುಗಿದು ಹೋದ ಸ್ಥಿತಿ’, ‘ಕೆಲಸ ಗಿಟ್ಟಿಸಿ ಒಂದು ವರ್ಷ ಆಗುವಷ್ಟರಲ್ಲೇ ಬದುಕು ನೀರಸ ಅನ್ನಿಸೋಕೆ ಶುರುವಾಗಿದೆ’, ‘ಬಿಡಿ, ಏನೇ ಮಾಡಿದ್ರೂ ಜೀವನ ಇದ್ದಲ್ಲೇ ಇರುತ್ತದೆ’. ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಷ್ಟೇಕೆ? ನಾವೇ ಹಲವು ಬಾರಿ ಹೀಗೆ ಮಾತಾಡಿರುತ್ತೇವೆ. ದುರಂತ ಅಂದ್ರೆ ಹೀಗೆ ಮಾತನಾಡುವವರಲ್ಲಿ ಹೆಚ್ಚಿನವರು ಈಗಷ್ಟೇ ಬದುಕು ನೋಡಲು ಆರಂಭಿಸಿದ ಹುಡುಗ/ಗಿಯಾಗಿರುತ್ತಾರೆ.

ಯಾಕೆ ಹೀಗಾಗುತ್ತಿದೆ? ಬದುಕೇಕೆ ಅಷ್ಟು ಬೇಗ ನೀರಸ ಅನಿಸೋಕೆ ಶುರುವಾಗುತ್ತದೆ? ಧಾವಂತದ ಬದುಕು, ವಿಪರೀತದ ಓಡಾಟ, ಅನಾರೋಗ್ಯಕರ ಪೈಪೋಟಿ, ಸಲ್ಲದ ಸ್ಪರ್ಧೆ ನಮ್ಮನ್ನು ಹೈರಾಣಾಗಿಸಿವೆಯಾ? ಅಥವಾ ಬದುಕಿನ ಆಳದಲ್ಲೆಲ್ಲೋ ನಡೆಯುತ್ತಿರುವ ಪಲ್ಲಟಗಳು, ತಲ್ಲಣಗಳು, ಸಂಘರ್ಷಗಳು ನಮ್ಮ ಯೋಚನಾಕ್ರಮವನ್ನು ನೇರವಾಗಿ ಪ್ರಭಾವಿಸುತ್ತಿವೆಯಾ? ಸುತ್ತಲಿನ ಕೌತುಕುಗಳಿಗೆ, ಪ್ರಕೃತಿಯ ಸಣ್ಣ ಪುಟ್ಟ ಆಗುಹೋಗುಗಳಿಗೆ ತೆರೆದುಕೊಳ್ಳದ ಮನಸ್ಸು ನಿಧಾನವಾಗಿ ಕುತೂಹಲಗಳನ್ನೆಲ್ಲಾ ಕಳೆದುಕೊಂಡು ಮೂರು ಮತ್ತೊಂದು ಎಂಬಂತೆ ಯಂತ್ರವಾಗಿ ಮಾರ್ಪಾಡಾಗುತ್ತಿದೆಯಾ?

ಇತ್ತೀಚೆಗಷ್ಟೇ ನೌಕರಿ ಗಿಟ್ಟಿಸಿಕೊಂಡ ಹುಡುಗ, ಮೊನ್ನೆ ಮೊನ್ನೆಯೆಂಬಂತೆ ಸಂಭ್ರಮದಿಂದ 22ರ birthday ಆಚರಿಸಿಕೊಂಡ ಹುಡುಗಿ ಬದುಕು ಪ್ರಾರಂಭವಾಗುವ ಮುನ್ನವೇ ವೈರಾಗ್ಯದ ಮಾತುಗಳನ್ನಾಡುವಾಗ ಕಸಿವಿಸಿಯಾಗುತ್ತದೆ. ಎರಡೇ ನಿಮಿಷಗಳಲ್ಲಿ ತಯಾರಾಗಬಲ್ಲಂತಹ ಅಥವಾ ಹಾಗೆ ಬಿಂಬಿಸಲ್ಪಟ್ಟಂತಹ ಮ್ಯಾಗಿಯಷ್ಟೇ ಆತುರದ, ಯಾವುದಕ್ಕೂ ಸಮಯವಿಲ್ಲದ ಬದುಕು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದೆ?

ಅದೇ ಒಮ್ಮೆ ಆಸ್ಪತ್ರೆಗಳ ಅದರಲ್ಲೂ ಹೃದಯ, ಕಿಡ್ನಿ, ಕ್ಯಾನ್ಸರ್ ಚಿಕಿತ್ಸಲಾಯಗಳತ್ತ ಕಣ್ಣು ಹಾಯಿಸಿ ನೋಡಿ. ಅಲ್ಲಿ ಜೀವಂತಿಕೆ ತುಂಬಿ ತುಳುಕುತ್ತಿರುತ್ತದೆ. ಭರಿಸಲಾಗದ ನೋವು, ಕಿತ್ತು ತಿನ್ನುವ ಸಂಕಟ, ಸಣ್ಣದಾಗಿ ಹೊರಳಿಕೊಳ್ಳಲೂ ಸಾಧ್ಯವಾಗದಂಥ ಯಾತನೆ ಕಾಡುತ್ತಿದ್ದರೂ ಬದುಕಿನ ಬಗೆಗಿನ ನಿರೀಕ್ಷೆ, ಬದುಕಬೇಕೆನ್ನುವ ತುಡಿತ ಅವರಲ್ಲಿ ಸತ್ತಿರುವುದಿಲ್ಲ. ಮಾತಿಗೆ ಕೂತರೆ, ಮಾಡಿ ಮುಗಿಸಬೇಕಾದ ಕೆಲಸಗಳು, ಭೇಟಿ ನೀಡಬೇಕಾಗಿರುವ ಸ್ಥಳಗಳು, ಓದಬೇಕಿರುವ ಪುಸ್ತಕಗಳ ಪಟ್ಟಿಯನ್ನೇ ಮುಂದಿಡುತ್ತಾರೆ.

ಹೃದಯ ಶಸ್ತ್ರಚಿಕಿತ್ಸೆ ನಡೆದ ಸುಸ್ತಿನ್ನೂ ಆರುವ ಮುಂಚೆಯೇ ಮೊಮ್ಮಗುವನ್ನು ಮುದ್ದಾಡುವ ತಾತ, ಉಸಿರಾಡಲೇ ಕಷ್ಟವಾಗುತ್ತಿದ್ದರೂ ಮುಂದಿನ ಬದುಕಿನ ಬಗ್ಗೆ ಮಾತಾಡುವ ಕೃಶದೇಹಿ ಅಜ್ಜಿ, ಬದುಕಿಡೀ ಹೋರಾಡಿದರೂ ದಣಿದಿಲ್ಲವೇನೋ ಎಂದೇ ತೋರುವ ಕ್ಯಾನ್ಸರ್ ಪೇಷಂಟ್, ಅಕಾಲದಲ್ಲಿ ಕೈಯೋ ಕಾಲೋ ಕಳೆದುಕೊಂಡ ನೋವಲ್ಲೂ ನಿರಮ್ಮಳವಾಗಿ ನಗುವ ಮಧುಮೇಹ ರೋಗಿ ನಮ್ಮ ಮುಂದೆ ಬೇರೆಯದೇ ಲೋಕವನ್ನು ತೆರೆದಿಡುತ್ತಾರೆ.

ನಿಜಕ್ಕೂ ಅವರಲ್ಲಿ ಅಂತಹಾ ಜೀವನೋತ್ಸಾಹ ಹೇಗೆ ಉಕ್ಕುತ್ತದೆ? ಬದುಕಲೇಬೇಕೆಂಬ ಉತ್ಕಟತೆ ಎಲ್ಲಿಂದ ಮೊಳಕೆಯೊಡೆಯುತ್ತದೆ? ಗೋರಿಯ ನೆತ್ತಿಯ ಮೇಲಿಂದಲೂ ಬದುಕು ಕಟ್ಟಿಕೊಳ್ಳಬಲ್ಲೆ ಅನ್ನುವ ಅದಮ್ಯ ಜೀವನ ಪ್ರೀತಿಯ ಮೂಲ ಸೆಲೆ ಯಾವುದು? ಬದುಕು ಪ್ರತಿ ಕ್ಷಣದ ಅಚ್ಚರಿ ಎಂಬಂತೆ ಹೇಗೆ ಬದುಕುತ್ತಾರೆ? ತೀರಾ ಸಾವಿನ ಸನಿಹಕ್ಕೆ ಹೋಗಿ ಬದುಕಿಗೆ ಮರಳಿದ ಅನುಭವವೇ ಅವರನ್ನು ಜೀವನ್ಮುಖಿಯಾಗಿಸುತ್ತವೆಯಾ? ಅಥವಾ ಹುಟ್ಟು, ಹೋರಾಟ, ಬದುಕು, ಸಾವು ಅದರಾಚೆಗಿನ ನೋವು ನಲಿವು ಎಲ್ಲಾ ಮೀರಿದ ನಿಸ್ತಂತು ಭಾವವೊಂದು ಅವರನ್ನು ಮತ್ತೆ ಮತ್ತೆ ಬದುಕಿನ ಅಂಗಳಕ್ಕೆ ಎಳೆದು ತರುತ್ತದಾ?

ಅವರನ್ನೆಂದೂ ಈ ಸ್ಯಾಚುರೇಷನ್, ಬದುಕು ಸಾಕೆನ್ನುವ ಭಾವ, ಜೀವನ ತೀರಾ ಸಪ್ಪೆ ಅನ್ನುವುದೆಲ್ಲಾ ಕಾಡಿಯೇ ಇಲ್ವಾ? ಊಹೂಂ, ಹಾಗೇನಿಲ್ಲ. ಆದರೆ ಅವರಿಗೆ ಎಲ್ಲವನ್ನೂ ಮೀರಿ ಬದುಕು ಮುಂದೆ ಸಾಗುತ್ತದೆ ಅನ್ನುವ ನಂಬಿಕೆ ಇತ್ತು, ಎರಡು ದಿನದ ನಿರಾಶೆ ಒಂದಿಡೀ ಬದುಕನ್ನು ಆಪೋಶನ ತೆಗೆದುಕೊಳ್ಳಲು ಬಿಡಬಾರದು ಅನ್ನುವ ವಿವೇಚನೆ ಇತ್ತು. ‘ಸಾಕು ಬಿಡು, ಈ ಬದುಕು’ ಅನ್ನುವ ಹಳಹಳಿಕೆ ಮನಸ್ಸಲ್ಲಿ ಬೇರೂರುವ ಸೂಚನೆ ಸಿಕ್ಕ ಕೂಡಲೇ ಹೊಸ ಹುರುಪಿನಿಂದ ಮತ್ತೆ ತಮ್ಮ ಕೆಲಸಗಳಲ್ಲಿ ಮೈ ಮರೆಯುತ್ತಿದ್ದರು. ಪ್ರತಿ ದಿನವೂ, ಪ್ರತಿ ಕ್ಷಣವೂ ಒಂದು ಹೊಸ ಅನುಭವವನ್ನು, ವಿಸ್ತಾರವನ್ನು ಬದುಕಿಗೆ ಕಟ್ಟಿಕೊಡುತ್ತದೆ ಅನ್ನುವ ಸರಳ ಸತ್ಯವನ್ನು ಮನಗಂಡಿದ್ದರು.

ಒಂದು ಪ್ರೇಮ ವೈಫಲ್ಯಕ್ಕೆ, ಮತ್ತೊಂದು ವಿಶ್ವಾಸದ್ರೋಹಕ್ಕೆ, ಕಳೆದುಕೊಂಡ ನೌಕರಿಗಾಗಿ, ಮುರಿದುಬಿದ್ದ ಸಂಬಂಧಕ್ಕಾಗಿ ಬದುಕನ್ನೇ ಮುಗಿಸಹೊರಡುವವರು ಈಗ ಮನಗಾಣಬೇಕಿರುವುದು ಇದೇ ಸತ್ಯವನ್ನು. ಬದುಕು ಮ್ಯಾಗಿಯಂತೆ ಎರಡೇ ನಿಮಿಷಗಳಲ್ಲಿ ತಯಾರಾಗುವಂಥದ್ದಲ್ಲ, ಅದು ರೂಪುಗೊಳ್ಳಲು ಪ್ರತಿ ದಿನದ ಶ್ರದ್ಧೆಯನ್ನು, ಕಸುವನ್ನು ಬೇಡುತ್ತದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮಗು ಮನಸ್ಸಿನ ದೊಡ್ಡವರೇ… ಒಂದಿಷ್ಟು ಹೊತ್ತು ಮಕ್ಕಳಾಗೋಣ ಬನ್ನಿ….

ಮುಂದಿನ ಸುದ್ದಿ »

ಪುರುಷ ದೇಹ ಯಕೃತನ್ನು ಸ್ವೀಕರಿಸುತ್ತದೆಂದಾದರೆ ಮತ್ತೇಕೆ ಭೇದ?

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×