Sunday October 29 2017

Follow on us:

Contact Us

ಚೇತನ್ ಭಗತ್ ಎಂಬ ಲೇಖಕನೂ, ಅಡುಗೆ ಮನೆಯ ಗಂಡಸರೂ

 

“ಭಾರತೀಯ ಪೋಷಕರು ಅದೇಕೆ ತಮ್ಮ ಗಂಡು ಮಕ್ಕಳನ್ನು ಅಷ್ಟೊಂದು ದ್ವೇಷಿಸುತ್ತಾರೆ ಅನ್ನುವ ಸಂಗತಿ ನನ್ನನ್ನು ಸದಾ ಚಕಿತಗೊಳಿಸುತ್ತದೆ. ಒಂದು ಹೊತ್ತಿನ ಅನ್ನ ಬೇಯಿಸುವುದು ಬಿಡಿ, ತಮಗಾಗಿ ಒಂದು ಕಪ್ ಚಹಾವನ್ನು ಅವರು ತಯಾರಿಸಲಾರರು. ಮನೆ ಸ್ವಚ್ಛ ಮಾಡುವ, ಬಟ್ಟೆ ಒಗೆಯುವ ಮಾತು ಹಾಗಿರಲಿ ತಮ್ಮನ್ನು ತಾವೇ ಒಪ್ಪವಾಗಿ ಇಟ್ಟುಕೊಳ್ಳಲಾರರು ನಮ್ಮ ಗಂಡಸರು. ಇನ್ನೊಬ್ಬರ ಕರುಣೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಅವರದು. ಸಣ್ಣದೊಂದು ಟ್ರಿಪ್ ಹೊರಡಬೇಕಿದ್ದರೂ ಪತ್ನಿ  ಬ್ಯಾಗ್ ಪ್ಯಾಕ್ ಮಾಡಿಕೊಡಬೇಕಾದ ಸ್ಥಿತಿ ಇದೆ ನಮ್ಮಲ್ಲಿ. ಒಂದಿಡೀ ಪೀಳಿಗೆಯ ಭಾರತೀಯ ಗಂಡಸರನ್ನು  ಅವರಷ್ಟಕ್ಕೇ ಬಿಟ್ಟುಬಿಟ್ಟರೆ ಬದುಕುವುದೇ ಅಕ್ಷರಶಃ ಕಷ್ಟ ಅನ್ನುವ ಪರಿಸ್ಥಿತಿ ಇದೆ.

ಪೋಷಕರು ತಮ್ಮೆಲ್ಲಾ ಮಕ್ಕಳನ್ನು ಸಮಾನವಾಗಿ ಪ್ರೀತಿಸುತ್ತಾರೆ ಅನ್ನುವುದು ನನ್ನ ಯೋಚನೆಯಾಗಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಅವರು ತಮ್ಮ ಹೆಣ್ಣುಮಕ್ಕಳಿಗೆ ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಬದುಕುವುದನ್ನು ಹೇಳಿಕೊಡುತ್ತಾರೆ. ಆದರೆ ಗಂಡುಮಕ್ಕಳನ್ನು ಪರಾವಲಂಬಿಗಳಾಗಿಯೇ ಬೆಳೆಸುತ್ತಾರೆ.”

ಹಾಗಂತ ಚೇತನ್ ಭಗತ್ ತಮ್ಮ ಫೇಸ್ಬುಕ್ ಗೋಡೆಯಲ್ಲಿ ಬರೆದುಕೊಂಡ ಕೂಡಲೇ ಪರವಿರೋಧದ ಚರ್ಚೆಗಳು ಶುರುವಾದವು. ಸತ್ಯಾಸತ್ಯತೆ ಚರ್ಚೆ ಆಗಬೇಕಾದಲ್ಲಿ, ಎಂದಿನಂತೆ ಚೇತನ್ ಅವರನ್ನು ಇಷ್ಟಪಡುವವರ ಮತ್ತು ಇಷ್ಟಪಡದವರ ಮಧ್ಯ ಅಕಾರಣ ವಾಗ್ಯುದ್ಧ ಆರಂಭವಾಯಿತು. (ಬಿಡಿ, ಬಹುತೇಕ ಎಫ್.ಬಿ ಪೋಸ್ಟ್ ಗಳ ಹಣೆಬರಹವೇ ಇದು. ಕಾಳನ್ನೂ ಸಾರಾಸಗಟಾಗಿ ತಿರಸ್ಕರಿಸುವ ಮತ್ತು ಜೊಳ್ಳನ್ನೂ ವಿವೇಚನಾರಹಿತವಾಗಿ ಪುರಸ್ಕರಿಸುವ ಮನಸ್ಥಿತಿಯ ಎರಡು ವರ್ಗ ಇರುವವರೆಗೂ ಇದು ಹೀಗೆಯೇ ಮುಂದುವರಿಯುತ್ತದೆ.)

ಎಲ್ಲಾ ಚರ್ಚೆಗಳಾಚೆ ನಿಜಕ್ಕೂ ನಾವಿಲ್ಲಿ ಯೋಚಿಸಬೇಕಾಗಿರುವುದು ಅವರ ಮಾತಿನಲ್ಲಿ, ಕಾಳಜಿಯಲ್ಲಿ ಎಷ್ಟು ಹುರುಳಿದೆ ಅನ್ನುವುದರ ಬಗ್ಗೆ. ನಮ್ಮ ಗಂಡು ಮಕ್ಕಳನ್ನು ಅಡುಗೆ ಮನೆಯೊಳಗೆ ಬಿಟ್ಟರೆ ಯಾವುದೂ ಅರ್ಥವಾಗದ ಅಯೋಮಯ ಸ್ಥಿತಿಗೆ ಒಳಗಾಗುತ್ತಾರಾ? ಸ್ಟವ್ ಹೇಗೆ ಹೊತ್ತಿಸಬೇಕು, ಟೀ/ಕಾಫಿ ಹೇಗೆ ತಯಾರಿಸಬೇಕು ಅನ್ನುವಷ್ಟರ ಕನಿಷ್ಠಜ್ಞಾನವೂ ಅವರಿಗಿಲ್ವಾ? ನಮ್ಮ ಪೋಷಕರು ಅಡುಗೆ ಮನೆಯ ಎ,ಬಿ,ಸಿ,ಡಿಯೂ ಅರ್ಥವಾಗದಂತೆ ಗಂಡು ಮಕ್ಕಳನ್ನು ಬೆಳೆಸಿದ್ದಾರಾ?

ಹೀಗೆಂದು ಪ್ರಶ್ನಿಸಿದರೆ, ಬಹುಶಃ ಉತ್ತರ ‘ಹಾಗೇನಿಲ್ಲ’ ಅನ್ನುವುದೇ ಆಗಿರುತ್ತದೆ. ಸುಮಾರು 10-15 ವರ್ಷಗಳಷ್ಟು ಹಿಂದಕ್ಕೆ ಹೋದರೆ ಟೀ/ಕಾಫಿ, ಅಡುಗೆ ಮಾಡಿಕೊಳ್ಳುವುದು ಬಿಡಿ, ಅಡುಗೆಮನೆಯೊಳಗೆ ಗಂಡಸರು ಪ್ರವೇಶಿಸುವುದೇ ಅವಮಾನ ಅಂದುಕೊಂಡಿದ್ದರು. ‘ಉದ್ಯೋಗಂ ಪುರುಷ ಲಕ್ಷಣಂ’ ಅನ್ನುವುದು ಶತಾಯಗತಾಯ ಜಾರಿಯಲ್ಲಿರಲೇಬೇಕು ಅಂತ ಬಯಸುತ್ತಿದ್ದ ಕಾಲಘಟ್ಟವದು. ಹೋಟೆಲ್, ಮದುವೆ ಮನೆ, ಛತ್ರ ಅಂತೆಲ್ಲಾ ರುಚಿರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಗಂಡಸರೂ ಮನೆಯಲ್ಲಿ ಒಂದು ಲೋಟ ಎತ್ತಿ ಆಚೀಚೆ ಇಡುತ್ತಿರಲಿಲ್ಲ. ಅಡುಗೆಮನೆಯ ಆಗುಹೋಗು, ಕಾರುಬಾರು, ಅನ್ನದ ಜೊತೆ ಜೊತೆಗೇ ಬೇಯುತ್ತಿದ್ದ ಅಡುಗೆ ಮನೆ ರಾಜಕಾರಣ, ಹೊಗೆಯಾಡುವ ಮತ್ಸರಗಳೆಲ್ಲಾ ಮಹಿಳೆಯರಿಗಷ್ಟೇ ಸೀಮಿತವಾಗಿತ್ತು. ಚೇತನ್ ಭಗತ್ ರ ಪೋಸ್ಟ್ ಆ ಕಾಲಕ್ಕೆ ಪ್ರತಿಶತ ನೂರರಷ್ಟು ಒಪ್ಪುತ್ತದೆ.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಹೆಣ್ಣು ದುಡಿಯಲೆಂದು ಹೊರಗೆ ಕಾಲಿಟ್ಟಕೂಡಲೇ ಮನೆಯ ಸಮೀಕರಣಗಳೆಲ್ಲಾ ಬದಲಾದವು. ಅಡುಗೆ ಮನೆಗೆ ಹೊಂದಿಕೊಳ್ಳುವ ನಿರ್ಬಂಧಕ್ಕೆ ಗಂಡಸರೂ ಒಳಗಾದರು. ಕಾಲದ ಬೇಡಿಕೆಯೋ ಅಥವಾ ಬದುಕಿನ ಅನಿವಾರ್ಯತೆಯೋ, ಒಟ್ಟಿನಲ್ಲಿ ಈ ಬದಲಾವಣೆಯನ್ನು ಸಮಾಜವೂ ಒಪ್ಪಿಕೊಂಡಿತು.

ವರ್ಷವಿಡೀ ನಡೆಯುತ್ತಿದ್ದ ಕೃಷಿ ಚಟುವಟಿಕೆಗಳು, ಅವಿಭಕ್ತ ಕುಟುಂಬದ ಒಗ್ಗಟ್ಟು, ಮನೆ ಪೂರ್ತಿ ತುಂಬಿಕೊಂಡಿರುತ್ತಿದ್ದ ಹೆಂಗಸರ ಕಲರವ, ತೋಟ-ಗದ್ದೆ ಅಂತ ಮಾತ್ರ ಸೀಮಿತವಾಗಿದ್ದ ಬದುಕು, ಊರ ತಂಟೆ-ತಕರಾರುಗಳು, ನ್ಯಾಯ ಪಂಚಾಯತಿಕೆಗಳು ಅಡುಗೆ ಮನೆಯ ಕಡೆ ತಲೆಹಾಕಲೂ ಅವಕಾಶ ಮಾಡಿಕೊಡುತ್ತಿರಲಿಲ್ಲ ಅನ್ನುವುದೂ ಸತ್ಯ. ಯಾವಾಗ ಮನೆ ಮಂದಿ ಬದುಕು ಅರಸಿಕೊಂಡು ಪಟ್ಟಣ ಸೇರಲಾರಂಭಿಸಿದರೋ, ಕೃಷಿ ಜೀವನೋಪಾಯ ಅಲ್ಲ ಅನಿಸಲಾರಂಭಿಸಿತೋ, ಅವಿಭಕ್ತ ಕುಟುಂಬಗಳು ಅಪರೂಪವಾಗತೊಡಗಿತೋ ಗಂಡಸರೂ ಸಣ್ಣ ಪುಟ್ಟದಾಗಿ ಅಡುಗೆ ಮಾಡುವುದನ್ನು ಕಲಿತುಕೊಂಡರು. ಅಥವಾ ಹೊರ ದೇಶದಲ್ಲಿ, ಹೊರ ಊರಿನಲ್ಲಿ ದುಡಿಯಬೇಕಾದ ಅನಿವಾರ್ಯತೆಯಿಂದಾಗಿ ಬದುಕು ಎಲ್ಲವನ್ನೂ ಕಲಿಸಿತು.

ಇನ್ನು ಗಂಡಸರು ಮನೆ ಒಪ್ಪವಾಗಿ ಇಡಲಾರರು ಅನ್ನುವವರು ಬ್ಯಾಚುಲರ್ ಗಳ ರೂಮನ್ನೊಮ್ಮೆ ನೋಡಬೇಕು. ಅಲ್ಲಲ್ಲಿ ರಾಶಿ ಬಿದ್ದಿರುವ ಒಗೆಯದ ಬಟ್ಟೆಗಳು, ಮೂಲೆಯಲ್ಲಿನ ರಾಶಿ ಕಸಗಳು, ಪ್ರಿಯಕರನನ್ನು ಭೇಟಿಯಾಗ ಬಂದವಳು ಅವನು ಸ್ನಾನ ಮುಗಿಸಿ ಬರುವಷ್ಟರಲ್ಲಿ ರೂಮ್ ಕ್ಲೀನ್ ಮಾಡಿರೋದು (ಆತ ಸ್ನಾನಕ್ಕೆ ಹೋದಾಗ ರೂಂ ಬಾಗಿಲು ತೆರೆಯುವುದ್ಯಾರೆಂದು ನಿರ್ದೇಶಕರಿಗಷ್ಟೇ ಗೊತ್ತು.) ನೋಡಿ ಅವನಿಗೆ ತಾಯಿಯ ನೆನಪಾಗಿ ಭಾವುಕನಾಗಿ ಅವಳನ್ನು ತಬ್ಬಿಕೊಳ್ಳೋದೆಲ್ಲಾ ಈಗ ಹಳೆ ಸಿನಿಮಾಗಳಲ್ಲಿ ಮಾತ್ರ ಕಾಣಸಿಗುವ ಸೀನ್.

ಈಗಿನ ಬ್ಯಾಚುಲರ್ ಗಳ ರೂಮಿನ ಗೋಡೆಯನ್ನು ಅಲಂಕರಿಸಿರುವ ತೈಲ ಚಿತ್ರ, ತನ್ನ ಮೆಚ್ವಿನ ನಟನದೋ, ನಟಿಯದೋ, ಆಟಗಾರನದೋ ಪಟ, ಒಂದು ಟೇಬಲ್, ಅದರ ಮೇಲೊಂದು ಚಂದನೆಯ ಲ್ಯಾಂಪ್, ಎಲ್ಲಕ್ಕೂ ಕಲಶವಿಟ್ಟಂತಿರುವ ಪೆನ್ ಸ್ಟಾಂಡ್, ಒಪ್ಪವಾಗಿ ಜೋಡಿಸಿರುವ ಅಡುಗೆ ಮನೆಯ ಸಾಮಾಗ್ರಿಗಳು ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ಅಲ್ಲಿಗೆ, ಗಂಡಸರಿಗೆ ಮನೆ ಚೆನ್ನಾಗಿಟ್ಟುಕೊಳ್ಳಲು ಬರುವುದಿಲ್ಲ ಅನ್ನುವ ವಾದವೂ ಬಿದ್ದುಹೋಗುತ್ತದೆ.

ಎಲ್ಲಾ ನಿಜ. ಆದರೆ ಈ ಎಲ್ಲಾ ಬದಲಾವಣೆಗಳು, ಪರಿವರ್ತನೆಗಳು ಮನಃಪೂರ್ವಕವಾಗಿ ಆಗಿರುವುದಾ? ಅಡುಗೆ ಮನೆ ಪ್ರವೇಶಿಸಿದ/ಸುವ ಗಂಡಸರು, ಮನೆಯ ಹೆಣ್ಣುಮಕ್ಕಳ ಕೆಲಸಗಳನ್ನು ತೀರಾ ಹಗುರವಾಗಿ ಪರಿಗಣಿಸುವುದು ನಿಂತು ಹೋಗಿದಾ? ‘ಅವಳಾ ಬಿಡು ಮನೆಯಲ್ಲಿದ್ದಾಳೆ’ ಅನ್ನುವ ತಾತ್ಸಾರ ಕೊನೆಯಾಗಿದಾ? ಗಳಿಕೆಯೊಂದೇ ಮಾಡುವ ಕೆಲಸದ ಮಾನದಂಡವಲ್ಲ ಅನ್ನುವ ಭಾವನೆ ಹುಟ್ಟಿದೆಯಾ? ಮನೆಯ ಗಂಡಸರು ಅಡುಗೆ ಮಾಡುವುದು ಅವಮಾನವಲ್ಲ, ಒಂದೊಳ್ಳೆಯ ಶಿಷ್ಟಾಚಾರ ಎಂಬ ಅರಿವು ಮೂಡಿದೆಯಾ? ಮನೆ ವಾರ್ತೆ ನೋಡಿಕೊಳ್ಳುವುದೂ ಒಂದು ಕ್ರಿಯೇಟಿವಿಟಿ ಅನ್ನುವುದನ್ನು ನಾವು ಒಪ್ಪಿಕೊಂಡಿದ್ದೇವಾ?

ಒಮ್ಮೆ ನಮ್ಮನ್ನೇ ಕೇಳಿಕೊಳ್ಳಬೇಕು…

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಟಿಪ್ಪು ಯಾರ ವಿರೋಧಿ?

ಮುಂದಿನ ಸುದ್ದಿ »

ಈ 10 ಸಾವಿರ ಮಂದಿ ಒಂದು ಕಾಲಂ ಸುದ್ದಿಗೂ ಅರ್ಹವಾಗುವುದಿಲ್ಲವಲ್ಲ, ಯಾಕೆ?

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×