Sunday November 12 2017

Follow on us:

Contact Us

ಮಗು ಮನಸ್ಸಿನ ದೊಡ್ಡವರೇ… ಒಂದಿಷ್ಟು ಹೊತ್ತು ಮಕ್ಕಳಾಗೋಣ ಬನ್ನಿ….

‘ಮಕ್ಕಳಾಟವು ಚಂದ

ಮತ್ತೆ ಯೌವನ ಚಂದ

ಮುಪ್ಪಿನಲಿ ಚಂದ ನರೆಗಡ್ಡ

ಜಗದೊಳಗೆ ಎತ್ತ ನೋಡಿದರೂ ನಗು ಚಂದ’

ಅನ್ನುವ ಜನಪದ ಹಾಡು ತೀರಾ ಸರಳವಾಗಿ ಮತ್ತು ಸುಲಭಗ್ರಾಹ್ಯವಾಗಿ ಯಾವ ಯಾವ ಕಾಲದಲ್ಲಿ ಯಾವುದು ಚಂದ ಎನ್ನುವುದನ್ನು ಹೇಳುತ್ತದೆ. ಎಲ್ಲಾ ಚಂದಗಳ ಮಧ್ಯೆ ಮತ್ತೆ ಮತ್ತೆ ಕಾಡುವುದು ಬಾಲ್ಯ. ಸರಿರಾತ್ರಿ ಎಬ್ಬಿಸಿ ಸಮೀಕ್ಷೆ ನಡೆಸಿದರೂ ಬಹುಶಃ ಬಾಲ್ಯ ಮತ್ತೆ ಬೇಕು ಅನ್ನದವರು ಸಿಗಲಾರರೇನೋ? ಅಷ್ಟರ ಮಟ್ಟಿಗೆ ನಾವು ಬಾಲ್ಯವನ್ನು ಪ್ರೀತಿಸುತ್ತೇವೆ.

ಜಗತ್ತಿನ ಆಗು ಹೋಗುಗಳು, ಮೋಸ, ಅನ್ಯಾಯ, ವಂಚನೆ, ಬೂಟಾಟಿಕೆ…ಇವ್ಯಾವುವೂ ಅರಿಯದ ವಯಸ್ಸದು. ಆಟ, ತಿರುಗಾಟ, ಚೇಷ್ಟೆ, ಜೊತೆಗೊಂದಿಷ್ಟು ಬದುಕಿನ ಪಾಠ… ಎಷ್ಟು ಚೆನ್ನಾಗಿತ್ತು ಆ ಬದುಕು.

ನಮ್ಮ ಬಾಲ್ಯದಲ್ಲಿ ಮನೆಯಷ್ಟೇ ಆಪ್ತ ವಾತಾವರಣ ಸಿಗುತ್ತಿದ್ದುದು ಶಾಲೆಯಲ್ಲಿ. ಈಗಿನಂತೆ ಮಣ ಭಾರದ ಬ್ಯಾಗ್, ಮಾಡಿದಷ್ಟೂ ಮುಗಿಯದ ಹೋಂವರ್ಕ್, ವರ್ಷಪೂರ್ತಿ ಮಾಡಬೇಕಾಗಿರುವ ಪ್ರೊಜೆಕ್ಟ್ ಇವ್ಯಾವುದರ ಕಾಟವೂ ಇರಲಿಲ್ಲ. ಇದ್ದ ಒಂದೇ ಯುನಿಫಾರ್ಮ್ ಅನ್ನು ಅಂದಂದೇ ಒಗೆದು ವಾರ ಪೂರ್ತಿ ಬಳಸುವ ಜಾಣ್ಮೆ, ಮಾವಿನ ಮರದಡಿ ಕೂತು ಉಣ್ಣುತ್ತಿದ್ದ ಮಧ್ಯಾಹ್ನದ ಬುತ್ತಿಯೂಟ, ಹಳೆಯ ನೋಟ್ ಪುಸ್ತಕಗಳಲ್ಲಿ ಉಳಿದ ಹಾಳೆಗಳನ್ನು ಹರಿದು ಮಾಡುತ್ತಿದ್ದ ರಫ್ ಪುಸ್ತಕ, ಊರಿನ ಎಲ್ಲಾ ಮಕ್ಕಳು ಗುಂಪಾಗಿ ಮೈಲಿಗಟ್ಟಲೆ ನಡೆದು ಶಾಲೆ ಸೇರುತ್ತಿದ್ದುದು, ಶಾಲೆಯ ಆಶೋಕ ಮರ, ಆಳ ಬಾವಿ, ವಿಶಾಲವಾದ ಆಟದ ಮೈದಾನ ಮುಂತಾದವುಗಳನ್ನು, ಅವು ನಮ್ಮ ಇಡೀ ಬದುಕನ್ನು ಹೇಗೆ ಪ್ರೇರಿಪಿಸಿದೆ ಎಂಬುವುದನ್ನು ವಿವರಿಸುತ್ತಾ ಕೂತರೆ ಈವತ್ತಿನ ಕಾನ್ವೆಂಟ್ ಕಂದಮ್ಮಗಳಿಗೆ ಏನೂ ಅರ್ಥವಾಗದು.

ಇನ್ನು ಶಾಲೆಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಕಥೆಗಳು ವರ್ಣಿಸಲಸದಳ. ಒಂದರ್ಥದಲ್ಲಿ ನಮ್ಮ ಇಡೀ ಶಾಲಾ ಜೀವನಕ್ಕೆ ಸಂಭ್ರಮದ ಬಣ್ಣ ತುಂಬಿದ್ದೇ ಆ ಹಬ್ಬಗಳು. ಅದರಲ್ಲೂ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತಿದ್ದ ‘ಮಕ್ಕಳ ದಿನಾಚರಣೆ’ಯಂತೂ ನಮ್ಮ ಪಾಲಿಗೆ ರಾಜ ಹಬ್ಬ.

ಅದು, ‘ಕಾಂಗ್ರೆಸ್’ನ ನೆಹರೂ, ‘ನಾಸ್ತಿಕ’ ಭಗತ್ ಸಿಂಗ್, ‘ಹಿಂದೂ’ ತಿಲಕ್, ‘ಮುಸ್ಲಿಂ’ ಮೌಲಾನಾ ಆಜಾದ್, ‘ಕ್ರಿಶ್ಚಿಯನ್’ ಅನಿಬೆಸೆಂಟ್, ‘ಉತ್ತರ’ದ ರಾಣಿ ಲಕ್ಷ್ಮೀಬಾಯಿ, ‘ದಕ್ಷಿಣ’ದ ರಾಣಿ ಚೆನ್ನಮ್ಮ… ಇವೆಲ್ಲಾ ಅರಿವಿದ್ದ ವಯಸ್ಸಲ್ಲ, ಅಥವಾ ಆ ಹೊತ್ತಿನ ಪಠ್ಯ ಪುಸ್ತಕಗಳು ಎಳೆ ಮನಸ್ಸುಗಳ ತುಂಬಾ ಇಂತಹ ವಿಷ ತುಂಬುತ್ತಿರಲಿಲ್ಲವೇನೋ? ಆವತ್ತು ನಮ್ಮ ಪಾಲಿಗೆ ಅವರೆಲ್ಲಾ ಈ ದೇಶಕ್ಕಾಗಿ ದುಡಿದ ಮಹಾಪುರುಷರಷ್ಟೇ.

ಭಾಷಣ, ಹಾಡುಗಾರಿಕೆ, ಆಟೋಟಗಳು, ಪ್ರಬಂಧ ರಚನೆ, ಚಿತ್ರ ರಚನೆ ಮುಂತಾದ ಅನೇಕ ಸ್ಪರ್ಧೆಗಳಿದ್ದರೂ ನಮಗೆ ಹೆಚ್ಚು ಆಕರ್ಷಣೀಯ ಅನಿಸುತ್ತಿದ್ದುದು ಛದ್ಮವೇಷ ಸ್ಪರ್ಧೆ. ಮೇಷ್ಟ್ರ ನೆಹರೂ ವರ್ಣನೆಯಲ್ಲಿ, ಪಾಠ ಪುಸ್ತಕದಲ್ಲಿ, ಅಥವಾ ಬಾಲಮಂಗಳದಲ್ಲಿ ಪ್ರಕಟವಾಗುತ್ತಿದ್ದ ಕಥೆಗಳಲ್ಲಿ ನೆಹರೂ ಬಗ್ಗೆ ಓದಿ, ಕೇಳಿ ತಿಳಿದಿದ್ದ ನಮಗೆ ಅವರ ಬಗೆಗೊಂದು ಸ್ಪಷ್ಟ ಇಮೇಜ್ ಮನಸ್ಸಿನಲ್ಲಿ ರೂಪುಗೊಂಡಿತ್ತು. ಅದೇ ಇಮೇಜ್ ಛದ್ಮವೇಷವಾಗಿ ವೇದಿಕೆ ಮೇಲೂ ಬರುತ್ತಿತ್ತು.

ಅವರು ಧರಿಸುತ್ತಿದ್ದಂತಹುದೇ ನಿಲುವಂಗಿ, ಕಿಸೆಯಲ್ಲೊಂದು ಗುಲಾಬಿ ಹೂವು (ಗುಲಾಬಿ ಸಿಗದಿದ್ದರೆ ಕೆಂಪು ದಾಸವಾಳವೂ ನಡೆಯುತ್ತಿತ್ತು.) , ಗಣಿತದ ನೋಟ್ ಪುಸ್ತಕದ ಮಧ್ಯದ ಹಾಳೆ ಹರಿದು ಮಾಡುತ್ತಿದ್ದ ಟೋಪಿ ಧರಿಸಿಬಿಟ್ಟರೆ ನಮ್ಮ ನೆಹರೂ ಗೆಟಪ್ ಸುಸಂಪನ್ನ. ನಮ್ಮ ಬುದ್ಧಿವಂತಿಕೆಯ, ಅರಿವಿನ ಮಟ್ಟಕ್ಕಂತೂ ಆವತ್ತು ನಾವೇ ನೆಹರೂ, ನಾವೇ ಚಾಚಾ. ಆಮೇಲೆ ನಿಧಾನವಾಗಿ ನಡೆದುಕೊಂಡು ಸ್ಟೇಜ್ ಮೇಲೆ ಬಂದು ಸಭೆಯತ್ತ ಒಮ್ಮೆ ಕೈ ಬೀಸಿದರೆ ಯಾವುದೋ ಅರಿಯದ ಹೆಮ್ಮೆಯ ಭಾವವೊಂದು ಮೈಮನಸ್ಸಿನ ಪೂರ್ತಿ ತುಂಬಿಕೊಂಡು ಬಿಡುತ್ತಿತ್ತು. ಅಪ್ಪಿ ತಪ್ಪಿ ಛದ್ಮವೇಷಕ್ಕೆ ಬಹುಮಾನ ಬಂದರೆ ಅದರ ಗತ್ತೇ ಬೇರೆ.

ಆದರೆ ಈ ಎಲ್ಲಾ ನಾಸ್ಟಾಲ್ಜಿಕ್ ಹಳಹಳಿಕೆ ಮಧ್ಯೆಯೂ ನಾವು ನಮ್ಮಷ್ಟೇ ಚೆಂದದ ಅಥವಾ ಅದಕ್ಕಿಂತಲೂ ಉತ್ತಮವಾದ ಬಾಲ್ಯವನ್ನು ನಮ್ಮ ಮಕ್ಕಳಿಗೆ ಒದಗಿಸಿದ್ದೇವೆಯೇ? ಮಕ್ಕಳ ಆಟವನ್ನು ಕಣ್ತುಂಬಿಕೊಳ್ಳುತ್ತಾ ಅವರೊಂದಿಗೆ ನಾವೂ ಮಕ್ಕಳಾಗುತ್ತೇವಾ? ಅಸಲಿಗೆ ಓದು, ಟ್ಯೂಷನ್, ಮತ್ಯಾವುದೋ ಕ್ಲಾಸ್ ಗಳ ಮೂಲಕ ಮಕ್ಕಳನ್ನು ‘ಸೂಪರ್‌ ಕಿಡ್’ ಮಾಡಿಬಿಡುವ ಭರದಲ್ಲಿ, ಭ್ರಮೆಯಲ್ಲಿ ವರಿಗೆ ಆಟ ಆಡಲು ಸಮಯವನ್ನಾದರೂ ಕೊಟ್ಟಿದ್ದೇವಾ? ಮಕ್ಕಳಿಗೆ ಅಂತ ದಿನದ ಒಂದಿಷ್ಟು ನಿಮಿಷಗಳನ್ನು ಎತ್ತಿಟ್ಟಿದ್ದೇವಾ? ಟಿ.ವಿ, ನ್ಯೂಸ್, ಕ್ರಿಕಟ್, ಧಾರವಾಹಿ, ಕೆಲಸ ಇವೆಲ್ಲದರ ಮಧ್ಯೆ ಮಕ್ಕಳ ಇರುವು ನಮ್ಮ ಗಮನಕ್ಕೂ ಬಾರದಂತೆ ಕಳೆದುಹೋಗುತ್ತಿದೆಯಾ?ಒಮ್ಮೆ ತಣ್ಣಗೆ ಕೂತು ಯೋಚಿಸಿ. ನಾಳೆ ಆತ್ಮಸಾಕ್ಷಿಯ ಮುಂದೆ ಮಂಡಿಯೂರುವಂತಾಗಬಾರದು ಅಂದರೆ ನಾವಿವತ್ತು ಎಚ್ಚೆತ್ತುಕೊಳ್ಳಬೇಕು, ನಮ್ಮನ್ನೇ ತಿದ್ದಿಕೊಳ್ಳಬೇಕು.

ಇರಲಿ, ಇನ್ನು ಎರಡೇ ದಿನಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಿಕೊಳ್ಳುವ ಎಲ್ಲಾ ಮುದ್ದು ಮಕ್ಕಳಿಗೂ, ಮಗು ಮನಸ್ಸಿನ ದೊಡ್ಡವರಿಗೂ ಮಕ್ಕಳ ದಿನಾಚರಣೆಯ ಶುಭಾಶಯ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಶತಚಂಡಿ ಯಾಗ ಮಾಡಿಸಿದ ಟಿಪ್ಪು ಸುಲ್ತಾನ್ ಮತಾಂಧನೇ?

ಮುಂದಿನ ಸುದ್ದಿ »

ಎರಡೇ ನಿಮಿಷದ ಮ್ಯಾಗಿ ಮತ್ತು ಧಾವಂತದ ಬದುಕು..!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×