Sunday October 8 2017

Follow on us:

Contact Us

ಕತ್ತಲಿದ್ದರೇ ಬೆಳಕಿಗೆ ಅಸ್ತಿತ್ವ; ಬೆಳಕಿದ್ದರೆ ಮಾತ್ರ ಕತ್ತಲೆಗೆ ತೂಕ

ಕತ್ತಲಿನ ಗರ್ಭದಿಂದಲೇ ಬೆಳಕಿನ ಹುಟ್ಟು, ಬೆಳಕಿನ ಗರ್ಭಕುಸುಮದಿಂದಲೇ ಕತ್ತಲಿನ ಉಗಮ. ಅವೆರಡೂ ವಿರುದ್ಧ ಪದಗಳಲ್ಲ. ಒಂದೇ ಸ್ಥಿತಿಯ ಒಂದಕ್ಕೊಂದು ಪೂರಕವಾದ ಎರಡು ಧ್ರುವಗಳು. ಕತ್ತಲು ಅಜ್ಞಾನ, ಬೆಳಕು ಜ್ಞಾನ ಅನ್ನುವುದೆಲ್ಲಾ ಮನುಷ್ಯನ ಅಲ್ಪ ತಿಳುವಳಿಕೆಗಳಷ್ಟೇ. ಅವನ ಅರಿವು, ತಿಳುವಳಿಕೆ ಗಾಢವಾದಷ್ಟು, ಆಳವಾದಷ್ಟು ಅವನು ಕತ್ತಲಲ್ಲಿ ಬೆಳಕನ್ನೂ, ಬೆಳಕಲ್ಲಿ ಕತ್ತಲನ್ನೂ ಕಾಣಬಲ್ಲ. ಇಷ್ಟಕ್ಕೂ ‘ಕಾಣ್ಕೆ’ ಅನ್ನುವುದೇ ಅಂತರಂಗದ ಅರಿವಲ್ಲವೇ?

‘ತಮಸೋಮ ಜ್ಯೋತಿರ್ಗಮಯ’ ಅನ್ನುವುದನ್ನು ಶಿಶು ವಿಹಾರದಲ್ಲೇ ಕೇಳುತ್ತಾ ಬೆಳೆದವರು ನಾವು. ಅಷ್ಟೇಕೆ? ‘ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ…’ ಅನ್ನುವ ಹಾಡನ್ನು ಕೇಳದ, ಹಾಡದ ಕನ್ನಡದ ಮನಸ್ಸುಗಳೇ ಇಲ್ಲವೇನೋ? ಬೆಳಕೆಂದರೆ ನಮಗೆ ಅಷ್ಟು ಸಂಭ್ರಮ, ಅದು ಭವ್ಯತೆಯ ಸಂಕೇತ. ನಮ್ಮ ಪಾಲಿಗದು ಎಲ್ಲವನ್ನೂ ಒಳಗೊಳ್ಳುವ ಜಗದ ಮೂಲ ಸೆಲೆ.

ಬೆಳಕಿಲ್ಲದಿದ್ದರೆ ಪ್ರಕೃತಿಯ ರಮಣೀಯತೆ, ರೌದ್ರತೆ, ವಿಹಂಗಮತೆ, ಸೌಂದರ್ಯ, ಹಸಿರು ಯಾವುದೂ ಯಾರ ಅರಿವಿಗೂ ನಿಲುಕುತ್ತಿರಲಿಲ್ಲ. ಗುಡಿಸಲಿನ ಸೂರನು ಹೊದೆಯ ಬೆಳಕು, ಅರಮನೆಯ ಛಾವಣಿಯನ್ನೂ ಹೊದೆಸುತ್ತದೆ. ಮಗುವ ತೂಗುವ ತೊಟ್ಟಿಲು, ಅಜ್ಜನ ಕೋಲು, ಅಜ್ಜಿಯ ಸುಕ್ಕುಗಟ್ಟಿದ ಮುಖ, ಪೇಪರ್ ಮಾರುವ ಹುಡುಗನ ಹಣೆ, ಪಾತ್ರೆ ತಿಕ್ಕುವ ಹುಡುಗಿಯ ಕೈಬಳೆ, ತರಕಾರಿ ಗಾಡಿಯವನ ಸಂತೃಪ್ತ ಕಣ್ಣು… ಹೀಗೆ ಬೆಳಕು ಆವರಿಸಿಕೊಳ್ಳದ, ತನ್ನನು ಆವಾಹಿಸಿಕೊಳ್ಳದ ಪ್ರದೇಶವೇ ಇಲ್ಲವೇನೋ?

ಹಾಗಿದ್ದರೆ ಬೆಳಕೆಂದರೆ ಇಷ್ಟೇನಾ? ಊಹೂಂ, ಅಲ್ಲ. ಕತ್ತಲಿನ ಗರ್ಭಪಾತ್ರೆಯಿಂದ ಹೊರಳುವ ಬೆಳಕು ಒಂದು ಮಗ್ಗುಲಾಗುವಷ್ಟರಲ್ಲಿ ಜಗವಿಡೀ ವ್ಯಾಪಿಸಿ, ಎಲ್ಲವನ್ನೂ ಬೆತ್ತಲಾಗಿಸುವುದೇ ಒಂದು ಚೆಂದ. ಬಹುಶಃ ಆ ಸೌಂದರ್ಯವನ್ನು ಪ್ರಪಂಚದ ಯಾವ ಭಾಷೆಯೂ ವಿವರಿಸಲಾರದೇನೋ. ಅಥವಾ ಯಾವ ಭಾಷೆಗೂ ಆ ಸೌಂದರ್ಯವನ್ನು ದಕ್ಕಿಸಿ, ವಿವರಿಸುವಷ್ಟು ಸಾಮರ್ಥ್ಯ ಇಲ್ಲವೇನೋ?

ನೀವೇ ಹೇಳಿ, ಹಂಚಿನ ಸಂದಿಯಿಂದ ಇಳಿದು ನೆಲವ ತಬ್ಬುವ ಬಿಸಿಲ ಕೋಲಿನ ಸೌಂದರ್ಯವನ್ನಾಗಲೀ, ಪಾರಿಜಾತ ದಳದ ಮೇಲಿನ ಹನಿಯಲಿ ಪ್ರತಿಫಲಿಸುವ ಬೆಳಕಿನ ಅನನ್ಯತೆಯನ್ನಾಗಲೀ, ಚಂದಿರನ ಶೀತಲತೆಯನ್ನಾಗಲೀ , ಅದು ಇದ್ದಂತೆಯೇ ಇಡಿ ಇಡಿಯಾಗಿ ವಿವರಿಸುವ ಭಾಷೆಯೊಂದಾದರೂ ಈ ಜಗದಲ್ಲಿರಬಹುದೇ;  ಮೌನವನ್ನು ಹೊರತುಪಡಿಸಿ?

ಅದಕ್ಕೇ, ಬೆಳಕೆಂದರೆ ಅದು ಧ್ಯಾನಸ್ಥ ಮನದ ಮೂಲೆಯಲ್ಲಿ ಚಕ್ಕಳ-ಮಕ್ಕಳ ಹಾಕಿ ಕುಳಿತುಕೊಂಡಿರುವ ಮೌನವೇನೋ ಅಂತ ಆಗಾಗ ನನಗನ್ನಿಸುತ್ತಿರುತ್ತದೆ. ಹಾಗಿದ್ದರೆ ಕತ್ತಲು? ಅದು ಶಬ್ದವೇ? ನಿಶಬ್ದವೇ? ಅಜ್ಞಾನವೇ? ಸಾವೇ?

ಅಲ್ಲ, ಕತ್ತಲೆಂಬುವುದು ಹುಟ್ಟಿನ ಗರ್ಭಕೋಶ, ಹಲವು ನಿಜದ ಕಥೆಗಳ ಭ್ರೂಣ. ಕೆಲವೊಮ್ಮೆ ಕತ್ತಲೆಂದರೆ ಏಕಾಂತ. ಅದು ಬುದ್ಧನ ಧ್ಯಾನದಷ್ಟೇ ಗಾಢ… ಪ್ರಪಂಚದ ಪ್ರತಿಯೊಂದು ಚರಾಚರಗಳೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದೇ ಕತ್ತಲೆಂಬ ಅನನ್ಯತೆಯ ಮೂಲಕ.

ಇನ್ನೂ ಕೆಲವೊಮ್ಮೆ ಕತ್ತಲೆಂದರೆ ಕರುಣೆ ಕೂಡ. ಎಲ್ಲಾ ಸತ್ಯಗಳನ್ನೂ ಬಿಡುಬೀಸಾಗಿ ಬಿಚ್ಚಿಡುವ ಬೆಳಕಿನ ಕ್ರೌರ್ಯಕ್ಕಿಂತ, ಸುಳ್ಳೇ ಆದರೂ, ಭ್ರಮೆಯೇ ಆದರೂ ಕಟುಸತ್ಯಗಳನ್ನು ಕಣ್ಣಿಂದ ದೂರವಿರಿಸುವ ಕತ್ತಲಿನ ಭ್ರಾಮಕ ಸಹನೂಭೂತಿಯೇ ಆಪ್ತವಾಗುತ್ತದೆ. ಮತ್ತೂ ಕೆಲವೊಮ್ಮೆ ಕತ್ತಲೆಂದರೆ ಪ್ರೀತಿಯ ದರ್ಶಕ. ಪ್ರೀತಿಯ ಚರಮ ಸೀಮೆಗಳ ಸ್ಪರ್ಶ ಸಾಧ್ಯವಾಗೋದು ಕತ್ತಲಲ್ಲಿ ಮಾತ್ರ ಅಥವಾ ಸಾಧ್ಯವಾಗಿಸುವುದು ಕತ್ತಲು ಮಾತ್ರ. ಇನ್ನೊಂದಿಷ್ಟು ಸಮಯಗಳಲ್ಲಿ ಕತ್ತಲೆಂದರೆ ಒಂದು ಹನಿ ಮೋಹ. ಕತ್ತಿನ ಸೆರೆಯಲ್ಲೆಲ್ಲೋ ಸಾಂದ್ರವಾಗಿ ಇನ್ನೇನು ಹರಿಯಬೇಕು ಅನ್ನುವಷ್ಟರಲ್ಲಿ ಮತ್ತಿನ್ನೊಂದಿಷ್ಟು ಹೊತ್ತು ಇದ್ದುಬಿಡಬೇಕು ಅನ್ನುವ ಆಸೆ ಹುಟ್ಟಿಸುವ ಬಿಂಕ. ಮತ್ತೂ ಕೆಲವೊಮ್ಮೆ ಕತ್ತಲೆಂದರೆ ಯಾವ ಅಕ್ಷರಗಳಿಗೂ, ಪದಗಳಿಗೂ, ವ್ಯಾಖ್ಯೆಗಳಿಗೂ ನಿಲುಕದ ಅನಂತತೆ. ಇನ್ನೂ ಕೆಲವೊಮ್ಮೆ ಕತ್ತಲೆಂದರೆ ಅಪಧಮನಿ ಅಭಿದಮನಿಗಳ ಅಸ್ಪಷ್ಟ ತಿರುವುಗಳಲ್ಲಿ ಚಿಗೊರೊಡೆದ ಕನಸುಗಳು ಬಲಿತು ದೇಹವಿಡೀ ಹಬ್ಬುವ ವಿಹಂಗಮ ಸಮಯ.

ಕತ್ತಲನ್ನುವುದೇ ಪರಿಪೂರ್ಣತೆ. ಗಣಿತದ ‘ ಇನ್ಫಿನಿಟಿ’ ಅನ್ನುವ ಪರಿಕಲ್ಪನೆ ಇದೆಯಲ್ಲಾ ಅದರಷ್ಟೇ ಅಗಾಧ. ಎಷ್ಟು ಕಳೆದರೂ, ಎಷ್ಟು ಕೂಡಿದರೂ ವ್ಯತ್ಯಾಸವೇನೂ ಆಗದು. ಅಲ್ಲಿ ಕೂಡುವ, ಕಳೆಯುವ ಲೆಕ್ಕಾಚಾರಗಳೆಲ್ಲವೂ ವ್ಯರ್ಥ; ಕತ್ತಲಿದ್ದರೇ ಬೆಳಕಿಗೆ ಅಸ್ತಿತ್ವ, ಬೆಳಕಿದ್ದರೆ ಮಾತ್ರ ಕತ್ತಲೆಗೆ ತೂಕ ಅನ್ನುವ ಅರಿವನ್ನು ಹೊರತುಪಡಿಸಿ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸಾಧುಗಳು ಸಾರಿದ ಸಂದೇಶ

ಮುಂದಿನ ಸುದ್ದಿ »

ಕಮ್ಯುನಿಸ್ಟ್ ನಾಡಿನ ದಲಿತ ಅರ್ಚಕ ಮತ್ತು ಬಿಜೆಪಿ ನಾಡಿನ ಮೀಸೆ ಚಳುವಳಿ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×