Wednesday December 28 2016

Follow on us:

Contact Us
modi1

50 ದಿನಗಳು ಮತ್ತು ಎರಡು ಪ್ರಶ್ನೆಗಳು 

ಎ.ಕೆ.ಕುಕ್ಕಿಲ

ಎ.ಕೆ.ಕುಕ್ಕಿಲ

ನೋಟು ಅಮಾನ್ಯದ ನಂತರದ ಬೆಳವಣಿಗೆಗಳು ಎರಡು ಬಹುಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಒಂದು- ನಿಜಕ್ಕೂ ಇದರ ಹಿಂದಿನ ಮುಖ್ಯ ಉದ್ದೇಶ ಕಪ್ಪು ಹಣ, ಭ್ರಷ್ಟಾಚಾರ, ನಕಲಿ ನೋಟುಗಳನ್ನು ನಿರ್ಬಂಧಿಸುವುದೇ ಆಗಿದೆಯೇ? ಎರಡು- ದೇಶ ಬಿಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರ ಇಂಥದ್ದೊಂದು ಪ್ರಕ್ರಿಯೆಗೆ ಸಿದ್ಧವಾಗಿತ್ತೇ?

ಪ್ರಧಾನಿ ಮೋದಿಯವರು ನವೆಂಬರ್ 8ರಂದು ನೋಟು ಅಮಾನ್ಯದ ಘೋಷಣೆಯನ್ನು ಹೊರಡಿಸಿದ ಬಳಿಕ, ತೆರಿಗೆ ಇಲಾಖೆಯಿಂದ ದೇಶದಾದ್ಯಂತ ಅನೇಕಾರು ದಾಳಿಗಳಾಗಿವೆ. ಕರ್ನಾಟಕ ಮತ್ತು ತಮಿಳುನಾಡುಗಳಲ್ಲೇ ಯಾಕೆ ಹೆಚ್ಚಿನ ದಾಳಿಗಳಾಗಿವೆ ಎಂಬ ಪ್ರಶ್ನೆ ಸಹಜವಾಗಿದ್ದರೂ ಮತ್ತು ಈ ಕಾರಣಕ್ಕಾಗಿಯೇ ಈ ದಾಳಿಗಳ ಹಿಂದೆ ರಾಜಕೀಯ ದುರುದ್ದೇಶವನ್ನು ಶಂಕಿಸಬಹುದಾದರೂ ಇದರ ಹೊರತಾಗಿಯೂ ಈ ದಾಳಿಗಳು ವಿಶ್ಲೇಷಣೆಗೆ ಅರ್ಹವಾಗಿವೆ. ಕಳೆದವಾರ, ತಮಿಳ್ನಾಡಿನ ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್‍ ರ ಮನೆಯ ಮೇಲೆ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಲೋಡುಗಟ್ಟಲೆ ನಗದು, ಬಂಗಾರ, ಆಭರಣಗಳು ದೊರಕಿವೆ. ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ.. ಮುಂತಾದ ಕಡೆಯೂ ಇಂಥದ್ದೇ ದಾಳಿಗಳು ನಡೆದಿವೆ. ಅಧಿಕಾರಿಗಳು, ಉದ್ಯಮಿಗಳು ಕಪ್ಪು ಹಣದ ಮೂಲಕ ಸಿಕ್ಕಿಬಿದ್ದಿದ್ದಾರೆ. ಇಲ್ಲೂ ಕೆಲವು ಪ್ರಶ್ನೆಗಳಿವೆ. ನೋಟು ಅಮಾನ್ಯದ ಬಳಿಕವೇ ಈ ದಾಳಿಗಳು ನಡೆಯಲು ಕಾರಣವೇನು? ಅದೂ ನಿರ್ದಿಷ್ಟ ರಾಜ್ಯಗಳೇ ಈ ದಾಳಿಗಳ ಮುಖ್ಯ ಗುರಿ ಆಗಿರುವುದೇಕೆ? ತೆರಿಗೆ ಇಲಾಖೆಯ ದಾಳಿಗೆ ನಿರ್ದಿಷ್ಟ ದಿನ, ತಿಂಗಳು, ವರ್ಷಗಳು ಎಂಬುದಿಲ್ಲವಲ್ಲ. ಅದು ಸಹಜ ಪ್ರಕ್ರಿಯೆ. ಯಾವ ಸಂದರ್ಭದಲ್ಲೂ ಅದು ದಾಳಿ ನಡೆಸಬಹುದು. ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮೊದಲೇ ತೆರಿಗೆ ಇಲಾಖೆ ಇದೆ ಮತ್ತು ದಾಳಿಯನ್ನೂ ನಡೆಸಿದೆ. ಆದ್ದರಿಂದ ನೋಟು ಅಮಾನ್ಯತೆಯು ತೆರಿಗೆ ಇಲಾಖೆಗೆ ದಾಳಿ ನಡೆಸಲು ಲಭಿಸಿದ ಸ್ವಾತಂತ್ರ್ಯ ಎಂದು ಭಾವಿಸುವುದು ಅಸಂಬದ್ಧವಾಗುತ್ತದೆ.

ನೋಟು ಅಮಾನ್ಯತೆಯನ್ನು ಬೆಂಬಲಿಸುವ ಮಂದಿ ಅದಕ್ಕೆ ಸಮರ್ಥನೆಯಾಗಿ ತೆರಿಗೆ ಇಲಾಖೆಯ ದಾಳಿಯಲ್ಲಿ ಸಿಕ್ಕಿ ಬಿದ್ದವರನ್ನು ಉಲ್ಲೇಖಿಸುತ್ತಿರುವುದು ಹಾಸ್ಯಾಸ್ಪದವೆಂದು ಹೇಳಬೇಕಾದುದು ಈ ಕಾರಣದಿಂದಾಗಿ. ಒಂದು ರೀತಿಯಲ್ಲಿ, ಈ ದಾಳಿಯೇ ಪ್ರಧಾನಿಯವರ ಘೋಷಿತ ಉದ್ದೇಶ ಶುದ್ಧಿಯನ್ನು ಪ್ರಶ್ನಾರ್ಹಗೊಳಿಸುವುದಕ್ಕೆ ಸಾಕಾಗಬಹುದು. ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿ ನರೇಂದ್ರ ಮೋದಿಯಾಗುವುದಕ್ಕಿಂತ ಮೊದಲೇ ಕಪ್ಪು ಹಣದ ನಿರ್ಮೂಲನೆಯ ಬಗ್ಗೆ ಭರವಸೆ ನೀಡಿದವರು. ಸ್ವಿಸ್ ಬ್ಯಾಂಕ್‍ನಲ್ಲಿರುವ ಸುಮಾರು 648 ಭಾರತೀಯ ಖಾತೆಗಳಲ್ಲಿರುವ ಕಪ್ಪು ಹಣವನ್ನೆಲ್ಲ ವಶಪಡಿಸಿಕೊಂಡು ಪ್ರತಿ ಭಾರತೀಯರ ಜೇಬಿಗೆ ತಲಾ 15 ಲಕ್ಷ ಪಾವತಿಸುವುದಾಗಿ ಮಾತು ಕೊಟ್ಟವರು. ಅದಕ್ಕಾಗಿ 100 ದಿನಗಳ ವಾಯಿದೆಯನ್ನೂ ಕೇಳಿದವರು. ಹಾಗಂತ, ಸ್ವಿಝರ್‍ ಲ್ಯಾಂಡ್ ಎಂಬುದು ಭಾರತದ ಒಂದು ರಾಜ್ಯ ಅಲ್ಲವಾದುದರಿಂದ ಈ ಭರವಸೆಯನ್ನು ಈಡೇರಿಸುವಲ್ಲಿ ಅವರಿಗಿರುವ ಅಡೆ-ತಡೆಗಳನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳೋಣ. ಆದರೆ, ಭಾರತದ ಒಳಗಿನ ಕಪ್ಪು ಹಣವನ್ನು ವಶಪಡಿಸಿಕೊಳ್ಳುವುದಕ್ಕೆ ಈ ಯಾವ ಅಡೆತಡೆಗಳೂ ಇರಲಿಲ್ಲವಲ್ಲ? ಪ್ರಧಾನಿಯಾದ ತಕ್ಷಣ ಕಪ್ಪು ಕುಳಗಳ ಮೇಲೆ ತೆರಿಗೆ ಇಲಾಖೆಯಿಂದ ಅವರಿಗೆ ದಾಳಿ ನಡೆಸಬಹುದಿತ್ತಲ್ಲವೇ? 15 ಲಕ್ಷವಲ್ಲದಿದ್ದರೂ ಸಾವಿರ ರೂಪಾಯಿಯನ್ನಾದರೂ ಭಾರತೀಯರ ಖಾತೆಗೆ ಜಮೆ ಮಾಡಬಹುದಿತ್ತಲ್ಲವೇ? ಅದು ಬಿಟ್ಟು ಪೈಂಟರ್‍ ಗಳು, ಪ್ಲಂಬರ್‍ ಗಳು, ಕೂಲಿ ಕಾರ್ಮಿಕರು, ವೃದ್ಧರು ಸಹಿತ ಬಡ ಭಾರತೀಯರನ್ನು ಎಟಿಎಮ್‍ ಗಳ ಎದುರು ನಿಲ್ಲಿಸಿದ್ದೇಕೆ? ಕಪ್ಪು ಹಣ ಯಾರ ಬಳಿ ಇದೆ ಎಂಬುದು ತೆರಿಗೆ ಇಲಾಖೆಗೆ ಗೊತ್ತು ಅಥವಾ ಆ ಕುರಿತಾದ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯ ತೆರಿಗೆ ಇಲಾಖೆಗಿದೆ. ಉಳ್ಳವರ ಕೈಯಲ್ಲಿರುವ ಕಪ್ಪು ಹಣವನ್ನು ವಶಪಡಿಸುವುದಕ್ಕೆ ಇಲ್ಲದವರನ್ನು ಎಟಿಎಂನ ಮುಂದೆ ಬಿಸಿಲಲ್ಲಿ ತಿಂಗಳುಗಟ್ಟಲೆ ನಿಲ್ಲಿಸಬೇಕೇ? ಒಂದು ಸರಕಾರಕ್ಕೆ ಇಷ್ಟೂ ಗೊತ್ತಾಗಲ್ಲ ಎಂಬುದನ್ನು ಹೇಗೆ ನಂಬುವುದು? ಅಥವಾ ಬೃಹತ್ ಉದ್ಯಮಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ ಪರಿಣಾಮದಿಂದಾಗಿ ಇಂಥದ್ದೊಂದು ನಿರ್ಧಾರಕ್ಕೆ ಸರಕಾರ ಬಂತೇ? ಸಾಲ ಮನ್ನಾದಿಂದಾಗಿ ಖಾಲಿ ಕೊಡದಂತಾಗುವ ಬ್ಯಾಂಕ್‍ ಗಳಿಗೆ ಹಣ ತುಂಬಿಸುವುದಕ್ಕಾಗಿ ನೋಟು ಅಮಾನ್ಯದ ದಿಢೀರ್ ನಿರ್ಧಾರಕ್ಕೆ ನರೇಂದ್ರ ಮೋದಿ ಮುಂದಾದರೇ? ಯಾಕೆಂದರೆ, ನವೆಂಬರ್ 8ರ ಬಳಿಕದ ಈ ಸುಮಾರು 50 ದಿನಗಳಲ್ಲಿ ಸರಕಾರ ಮತ್ತು ಆರ್.ಬಿ.ಐ. ಒಟ್ಟು ಸೇರಿ 60ರಷ್ಟು ಸುತ್ತೋಲೆಗಳನ್ನು ಹೊರಡಿಸಿವೆ.

ನಿಖರ ಯೋಜನೆ, ಸ್ಪಷ್ಟ ಕಾರ್ಯಸೂಚಿ ಹೊಂದಿರುವ ಯಾವುದೇ ನಿರ್ಧಾರಕ್ಕೆ ಇಷ್ಟೊಂದು ಸುತ್ತೋಲೆಗಳ ಅಗತ್ಯ ಇರುವುದೇ ಇಲ್ಲ. ಇನ್ನೊಂದು ಕಡೆ, ತೆರಿಗೆ ಇಲಾಖೆಯ ದಾಳಿಯಲ್ಲಿ ಕೋಟ್ಯಂತರ ರೂಪಾಯಿಯ ಹೊಸ ನೋಟುಗಳು ಪತ್ತೆಯಾಗಿವೆ. ಇದರರ್ಥ, ಭ್ರಷ್ಟರು ಧಾರಾಳ ಸಂಖ್ಯೆಯಲ್ಲಿ ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ ಎಂದೇ. ತೆರಿಗೆ ಇಲಾಖೆ ದಾಳಿ ಮಾಡಿದ ಕೆಲವು ಎಣಿಕೆಯ ಮಂದಿಯ ಹೊರತಾಗಿ ದಾಳಿಗೊಳಗಾಗದ ಇಂಥವರ ಸಂಖ್ಯೆ ಎಷ್ಟಿರಬಹುದು? ಇಂಥ ಸಾಧ್ಯತೆಯನ್ನು ಸರಕಾರ ಮುಂಚಿತವಾಗಿ ಯಾಕೆ ಕಂಡುಕೊಳ್ಲಲಿಲ್ಲ? ಇದು ಎಡವಟ್ಟೋ ಅಲ್ಲ ಉದ್ದೇಶಪೂರ್ವಕವೋ? ಒಂದು ಕಡೆ, ರಾಜಕೀಯ ಪಕ್ಷಗಳ ವರಮಾನದ ಮೇಲೆ ಪ್ರಧಾನಿಯವರು ಯಾವ ಪ್ರಶ್ನೆಯನ್ನೂ ಎತ್ತುತ್ತಿಲ್ಲ. ಉದ್ಯಮಿಗಳ ಕಪ್ಪುಹಣದ ದೊಡ್ಡದೊಂದು ಮೂಟೆ ಬಿಜೆಪಿ, ಕಾಂಗ್ರೆಸ್ ಸಹಿತ ಪ್ರಮುಖ ರಾಜಕೀಯ ಪಕ್ಷಗಳಿಗೆ ಸಂದಾಯವಾಗುತ್ತಲೇ ಇವೆ. ಕನಿಷ್ಠ ಕಳೆದ 5 ವರ್ಷಗಳಿಂದ ರಾಜಕೀಯ ಪಕ್ಷಗಳಿಗೆ ಸಂದಾಯವಾದ ಮೊತ್ತದ ವಿವರವನ್ನಾದರೂ ನರೇಂದ್ರ ಮೋದಿಯವರು ‘ಬಿಳಿ’ಗೊಳಿಸಬಹುದಿತ್ತಲ್ಲವೇ? ಅದಕ್ಕಾಗಿ ಸರ್ಜಿಕಲ್ ದಾಳಿ ನಡೆಸಬಹುದಿತ್ತಲ್ಲವೇ? ಅದನ್ನು ಬಿಟ್ಟು ಬಡ ಭಾರತೀಯರ ಮೇಲೆ ದಾಳಿ ನಡೆಸಿದ್ದೇಕೆ?

ನಿಜವಾಗಿ, ರಾಜಕೀಯ ದೇಣಿಗೆಯಲ್ಲಿ ಒಂದು ಬಗೆಯ ಋಣ ಸಂದಾಯವಿರುತ್ತದೆ. ದೇಣಿಗೆ ಪಡೆದ ಪಕ್ಷ ಅಧಿಕಾರಕ್ಕೆ ಬಂದಾಗ ದೇಣಿಗೆ ನೀಡಿದವರ ಬೇಡಿಕೆಗಳನ್ನು ಪೂರೈಸಬೇಕಾದ ಒತ್ತಡಕ್ಕೆ ಒಳಗಾಗುತ್ತದೆ. ನೋಟು ಅಮಾನ್ಯ ಇಂಥದ್ದೊಂದು ಒತ್ತಡದ ಕೂಸೇ? ನರೇಂದ್ರ ಮೋದಿಯವರನ್ನು ದೇಣಿಗೆ ಮತ್ತಿತರ ಒತ್ತಡಗಳು ಕೈಕಟ್ಟಿ ಹಾಕಿದ್ದುವೇ? ಅವರ ಬ್ಯಾಂಕ್ ಸಾಲವನ್ನು ಮನ್ನಾ ಮಾಡುವುದಕ್ಕಾಗಿ ನೋಟು ಅಮಾನ್ಯ ದಿಢೀರ್ ಜಾರಿಗೊಂಡಿತೇ? ಪ್ರಧಾನಿಯವರ 50 ದಿನಗಳ ವಾಯಿದೆಯು ಬಹುತೇಕ ಕೊನೆಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂಥ ಪ್ರಶ್ನೆಗಳು ಹೆಚ್ಚೆಚ್ಚು ಪ್ರಸ್ತುತಗೊಳ್ಳುತ್ತವೆ. ಇಷ್ಟು ದಿನಗಳಾದರೂ ಬ್ಯಾಂಕುಗಳು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ನಿರ್ಬಂಧಗಳಲ್ಲಿ ಸಡಿಲಿಕೆಯಾಗಿಲ್ಲ. ಬಹುತೇಕ ಎಟಿಎಂಗಳು ಕಾರ್ಯನಿರ್ವಹಿಸುತ್ತಲೂ ಇಲ್ಲ. ಕಳೆದವಾರ ಪಶ್ಚಿಮ ಬಂಗಾಳದ ನಾರು ಉದ್ಯಮ ಸಂಸ್ಥೆಯೊಂದು ಕೆಲಸ ಸ್ಥಗಿತಗೊಳಿಸಿದೆ. ಆ ಮೂಲಕ ನಾಲ್ಕು ಸಾವಿರದಷ್ಟು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಹಾಗಂತ, ಇದು ಮೊದಲ ಪ್ರಕರಣ ಅಲ್ಲ. ಸಾಮಾನ್ಯ ಜನರ ಅನ್ನದ ಬಟ್ಟಲಾಗಿರುವ ಅನೇಕಾರು ಉದ್ಯಮಗಳು, ಚಿಕ್ಕ-ಪುಟ್ಟ ಸಂಸ್ಥೆಗಳು, ವ್ಯಾಪಾರಗಳು ಕೆಲಸ ನಿಲ್ಲಿಸಿವೆ. ತನ್ನದೇ ಹಣವನ್ನು ಪಡಕೊಳ್ಳುವುದಕ್ಕೆ ಕೆಲಸಕ್ಕೆ ರಜೆ ಹಾಕಿ ಸರತಿಯಲ್ಲಿ ನಿಲ್ಲಬೇಕಾದ ಒತ್ತಡವನ್ನು ಬಡವರ ಮೇಲೆ ಹೇರಲಾಗಿದೆ. ಇದು ಸುಧಾರಣಾ ವಿಧಾನವೇ? ಭ್ರಷ್ಟರ ಕೈಯಲ್ಲಿ ಹೊಸ ನೋಟುಗಳು ಕೋಟ್ಯಂತರ ಲೆಕ್ಕದಲ್ಲಿ ಇವೆ. ಬಡವರು ಕನಿಷ್ಠ 500 ರೂಪಾಯಿಗೂ ದಿನವೊಂದನ್ನು ಬ್ಯಾಂಕುಗಳ ಮುಂದೆ ಕೊಲ್ಲಬೇಕಾಗುತ್ತದೆ. ನೋಟು ಅಮಾನ್ಯದ ಉದ್ದೇಶ ಶುದ್ಧಿಯು ಶಂಕೆಗೊಳಗಾಗುವುದು ಈ ಕಾರಣಕ್ಕಾಗಿ. ಲಾಭ ಯಾರಿಗೆ ಪ್ರಧಾನಿಯವರೇ ಎಂದು ಪ್ರಶ್ನಿಸಬೇಕಾಗಿರುವುದೂ ಇದೇ ಕಾರಣದಿಂದ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮನಸ್ಸೇ ರಿಲ್ಯಾಕ್ಸ್ ಪ್ಲೀಸ್‌…

ಮುಂದಿನ ಸುದ್ದಿ »

ಕಣಿವೆ ರಾಜ್ಯ ಉತ್ತರಕಾಂಡ್ ವಿಧಾನಸಭಾ ಚುನಾವಣೆಗಳು- ಒಂದು ಟಿಪ್ಪಣಿ!

ಸಿನೆಮಾ

  • 1404997240_kamal-hasan-2

    ತಮಿಳಿನ ಬಿಗ್‌ಬಾಸ್‌ಗೆ ಕಮಲ್‌ ಹಾಸನ್‌ ಸಾರಥ್ಯ

    April 24, 2017

    ನ್ಯೂಸ್ ಕನ್ನಡ-(24.4.17): ಬಿಗ್‌ಬಾಸ್‌ ರಿಯಾಲಿಟಿ ಷೋನ ತಮಿಳು ಆವೃತ್ತಿಯನ್ನು ನಡೆಸಿಕೊಡಲು ನಟ ಕಮಲ್‌ ಹಾಸನ್‌ ಒಪ್ಪಿಕೊಂಡಿದ್ದಾರೆ. ‘ದಿ ಕ್ವಿಂಟ್‌’ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಕಮಲ್‌ ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಈವರೆಗೆ ನಾನು ಕಲಾವಿದನಾಗಿ ಜನರನ್ನು ರಂಜಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×