Friday February 12 2016

Follow on us:

Contact Us

ಬೇಕು ನಮಗೆ ಸಾಮಾಜಿಕ ನ್ಯಾಯದ ಆರ್ಥಿಕ ವಲಯಗಳು

ನಟರಾಜ್

ನಟರಾಜು ವಿ

ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಹಾಗೂ ಸಮಾನ ಮನಸ್ಸಿನ ಸಂಘಟನೆಗಳಿಗೆ ಸೇರಿದ ಯುವ ವಿದ್ಯಾರ್ಥಿ ಸಮುದಾಯ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದವು. ಆದರೆ ಅಹಿಂದ ಸಮುದಾಯದ ಈ ವಿದ್ಯಾರ್ಥಿಗಳ ಕೂಗು ಅಹಿಂದದ ಹೆಸರೇಳಿ ಅಧಿಕಾರ ಹಿಡಿದಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಥ್ಯವಾಗಲಿಲ್ಲ. ಪ್ರತಿಭಟನೆಯ ಕಾರಣಕ್ಕೆ ಪೊಲೀಸರಿಂದ ಹೊಡೆತ ತಿಂದು, ಕಾನೂನು ಉಲ್ಲಂಘನೆಯ ಆರೋಪದಡಿ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಬಂಧಿತರಾದರು.

ಇದಾದ ಕೆಲ ದಿನಗಳಲ್ಲಿಯೇ ರಾಷ್ಟ್ರಮಟ್ಟದಲ್ಲಿಯೂ ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧದ ಚರ್ಚೆ ಆರಂಭವಾಯಿತು. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಕೇಂದ್ರ ಸರ್ಕಾರಕ್ಕೆ ಮಾಡಿದ ಶಿಫಾರಸಿನಲ್ಲಿ ಸಹಕಾರಿ ಸಂಸ್ಥೆಗಳೂ, ಟ್ರಸ್ಟ್ ಗಳೂ ಸೇರಿದಂತೆ ಕಾರ್ಪೊರೇಟ್ ರಂಗವನ್ನೊಳಗೊಂಡ ಖಾಸಗಿ ವಲಯದಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಹೇಳಿತು. ಅತ್ತ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಆತ್ಮಹತ್ಯೆ ಪ್ರಕರಣದ ನಂತರ ಉದ್ಭವಿಸಿದ್ದ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಮತ್ತು ಸಮಾಜದ ತಳವರ್ಗಗಳಲ್ಲಿ ತನ್ನ ಬಗ್ಗೆ ಭುಗಿಲೆದ್ದಿರುವ ಅಸಮಾಧಾನ ಹಾಗೂ ವಿಶ್ವಾಸದ ಕೊರತೆಯನ್ನು ತುಂಬಿಕೊಳ್ಳುವ ರೀತಿಯಲ್ಲಿ ಕೇಂದ್ರ ಸರ್ಕಾರವೂ ಸಹ ಈ ಬಗ್ಗೆ ತಾನು ಗಂಭೀರ ಚಿಂತನೆ ನಡೆಸುವುದಾಗಿ ಹಾಗೂ ಈ ಸಂಬಂಧ ಕಾರ್ಪೊರೇಟ್ ವಲಯದ ಮುಖಂಡರ ಜೊತೆ ಸಮಾಲೋಚನೆ ನಡೆಸುವುದಾಗಿ ಹೇಳಿತು. ಅಲ್ಲಿಗೆ ಮತ್ತೊಮ್ಮೆ ಜೇನುಗೂಡಿಗೆ ಕೈ ಹಾಕಿದಂತಾಗಿದೆ. ಸರ್ಕಾರದ ನಡೆಯಲ್ಲಿರುವ ರಾಜಕಾರಣವನ್ನು ವಿಪಕ್ಷಗಳು ಗುರುತಿಸಿವೆಯಾದರೂ ವಿಷಯಾಧಾರಿತವಾಗಿ ಈ ಕುರಿತ ಬೆಂಬಲವನ್ನು ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ತೋರಿಸಿವೆ. ಆಯೋಗದ ಶಿಫಾರಸ್ಸನ್ನು ಸ್ವಾಗತಿಸಿ, ಸರ್ಕಾರದ ಸ್ಪಂದನದ ಬಗ್ಗೆಯೂ ಸಮ್ಮತಿ ವ್ಯಕ್ತಪಡಿಸಿವೆ.

ಈ ಮಧ್ಯೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳೂ ನಡೆಯುತ್ತಿವೆ. ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮತ ಓಲೈಕೆಯ ಕಾರಣಕ್ಕೆ ಈ ವಿಚಾರವನ್ನು ಪ್ರಸ್ತಾಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿಯು ಕಾಂಗ್ರೆಸ್ ತಾನು ಆಡಳಿತಾವಧಿಯಲ್ಲಿದ್ದ ಹಿಂದಿನ ಹತ್ತು ವರ್ಷಗಳಲ್ಲಿ ಈ ವಿಚಾರವಾಗಿ ಯಾವುದೇ ಪ್ರಯತ್ನಗಳನ್ನೂ ಮಾಡಿಲ್ಲ. ಅಧಿಕಾರದಲ್ಲಿರುವಾಗ ಈ ಸಂಬಂಧ ತಟಸ್ಥ ಧೋರಣೆ ತಳೆದ ಕಾಂಗ್ರೆಸ್ ಢೋಂಗಿ ಜಾತ್ಯತೀತವಾದಿ ಎಂದು ಅಣಕಿಸಿದೆ.

ಇದೆಲ್ಲ ರಾಜಕಾರಣದ ಚರ್ಚೆಯಾಯಿತು. ಆದರೆ ಸಮಾಜದ ಮುಖ್ಯವಾಹಿನಿಯಲ್ಲಿ ಈ ಸಂಬಂಧ ನಡೆಯುತ್ತಿರುವ ಚರ್ಚೆಗಳು ಹೇಗಿವೆ ಎಂದು ಕೇಳಿಕೊಳ್ಳುವುದು ಅತ್ಯಗತ್ಯ. ಅದು ನಮ್ಮ ಸಮಾಜಕ್ಕೆ ಹಿಡಿಯುವ ಕನ್ನಡಿ. ಇಂದಿಗೂ ಭಾರತದ ಮೇಲ್ವರ್ಗಗಳು ಹಾಗೂ ಸಾಮಾನ್ಯ ವರ್ಗದಡಿ ಬರುವ ಬಹುತೇಕ ಮಂದಿ ಸರ್ಕಾರಿ ವಲಯದಲ್ಲಿ ಕಲ್ಪಿಸಿರುವ ಮೀಸಲಾತಿಯನ್ನೇ ತಮ್ಮಿಂದ ಏನನ್ನೋ ಕಸಿದು ಕೊಟ್ಟಿರುವಂಥದ್ದು ಎನ್ನುವ ಭಾವನೆಯಿಂದ ನೋಡುತ್ತಾರೆ. ಮೀಸಲಾತಿಯ ಆಶಯವನ್ನು ಈವರೆವಿಗೂ ಜನರಿಗೆ ತಲುಪಿಸುವಲ್ಲಿ ನಮ್ಮನ್ನಾಳಿರುವ ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ನಮ್ಮ ಆಧುನಿಕ ಮಧ್ಯಮವರ್ಗಗಳಲ್ಲಿಯಂತೂ ಮೀಸಲಾತಿ ಎನ್ನುವುದು ‘ಅಸಮಾನತೆ’ ಸೃಷ್ಟಿಗೆ, ‘ಪ್ರತಿಭೆಯ ಹನನ’ಕ್ಕೆ ಕಾರಣವಾಗಿದೆ ಎನ್ನುವ ಭಾವನೆಯಿದೆ. ಈ ವರ್ಗದ ಬಹುಪಾಲು ಮಂದಿಗೆ ಈ ದೇಶದ ಗತದ ಚರಿತ್ರೆಯಾಗಲಿ, ವರ್ತಮಾನದ ಸಾಮಾಜಿಕ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಿರುವ ಅಂಶಗಳ ಬಗ್ಗೆಯಾಗಲಿ ಅರಿವಿಲ್ಲ. ಅದನ್ನು ತಿಳಿದುಕೊಳ್ಳುವ, ಚರ್ಚಿಸುವ, ಆ ಹಿನ್ನೆಲೆಯಲ್ಲಿ ಇಡೀ ವಿಷಯವನ್ನು ಅರ್ಥೈಸಿಕೊಳ್ಳುವ ಮನಸ್ಸೂ ಇಲ್ಲ. ಕುತ್ಸಿತ ಬುದ್ಧಿಯಿಂದ ಹೊರಬಂದು ವಿಶಾಲ ದೃಷ್ಟಿಕೋನದಿಂದ ಚಿಕಿತ್ಸಕವಾಗಿ ಜಗತ್ತನ್ನು ಕಾಣುವುದು ಇವರಲ್ಲಿ ಬಹುಪಾಲು ಮಂದಿಗೆ ಬೇಕಿಲ್ಲ. ಇಂಥ ವರ್ಗ ಸಹಜವಾಗಿಯೇ ಖಾಸಗಿ ವಲಯದಲ್ಲಿ ಮೀಸಲಾತಿ ವಿಚಾರ ಎಂದೊಡನೆಯೇ ಉರಿದು ಬೀಳುತ್ತದೆ. ಈ ದೇಶದ ಪ್ರಗತಿಗೆ, ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಕಾರಣವಲ್ಲ ಬದಲಿಗೆ ‘ಖಾಸಗಿ ಸಂಸ್ಥೆಗಳಲ್ಲಿ, ಅದರಲ್ಲಿಯೂ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳಲ್ಲಿ ದುಡಿಯುವ ನಾವು ಕಾರಣ’ ಎನ್ನುವ ಭಾವನೆ ಇವರಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಇನ್ನು ಉದ್ಯಮ ರಂಗದವರ ಮಾತನ್ನಂತೂ ಹೇಳುವುದೇ ಬೇಡ.

‘ಮೀಸಲಾತಿ ಎಂದರೆ ಗುಣಾತ್ಮಕತೆಯೊಂದಿಗೆ ರಾಜಿ’, ಮೀಸಲಾತಿ ಕಲ್ಪಿಸುವುದು ಎಂದರೆ ‘ಸ್ವಾತಂತ್ರ್ಯದ ಹರಣ’; ಮೀಸಲಾತಿ ಎಂದರೆ ಸರ್ಕಾರ ಖಾಸಗಿ ವಲಯದ ಆಡಳಿತದಲ್ಲಿ ಮಾಡುವ ನೇರ ‘ಹಸ್ತಕ್ಷೇಪ’, ‘ಬ್ಲ್ಯಾಕ್ ಮೇಲ್’ ತಂತ್ರ ಎಂದು ಬಹುತೇಕ ಕಾರ್ಪೊರೇಟ್ ಉದ್ಯಮಿಗಳು ಯಾವುದೇ ನಾಚಿಕೆ ಇಲ್ಲದೆ ಹೇಳುತ್ತಾರೆ. ಇಂಥ ಹೇಸಿಗೆಯ ಮನಸ್ಥಿತಿಯ ಮಂದಿ ಒಂದು ವೇಳೆ ಮುಂದೊಂದು ದಿನ ತಮ್ಮ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಕಲ್ಪಿಸಬೇಕಾಗಿ ಬಂದರೂ ಹಾಗೆ ಆಯ್ಕೆಯಾದ ಸಿಬ್ಬಂದಿಯೊಂದಿಗೆ ಯಾವ ರೀತಿ ವರ್ತಿಸಬಹುದು, ಅವರನ್ನು ಯಾವ ರೀತಿ ಕಾಣಬಹುದು, ನಡೆಸಿಕೊಳ್ಳಬಹುದು ಎಂದು ಊಹಿಸಿದರೇ ಭಯವಾಗುತ್ತದೆ.

ಅದು ಹೋಗಲಿ, ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸುವ ವಿಚಾರದ ಬಗ್ಗೆ ಯಾವ ಧೋರಣೆ ತಾಳಿವೆ ಎಂದೆನಾದರೂ ಗಮನಿಸಿದರೆ ಎಲ್ಲ ಪ್ರಜ್ಞಾವಂತರೂ ಬೆಚ್ಚಿ ಬೀಳುವಂತಾಗುತ್ತದೆ. ಮುಖ್ಯವಾಹಿನಿಯ ಅದರಲ್ಲಿಯೂ ರಾಷ್ಟ್ರೀಯ ಆಂಗ್ಲವಾಹಿನಿ ಮಾಧ್ಯಮಗಳು ಈ ವಿಚಾರವಾಗಿ ವ್ಯಗ್ರವಾಗಿವೆ. ಈ ವಾಹಿನಿಗಳಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಕುಳಿತಿರುವ ಕೆಲ ಆ್ಯಂಕರ್ ಕಂ ಮುಖ್ಯಸ್ಥರಂತೂ ಮೀಸಲಾತಿಯನ್ನು ಕಲ್ಪಿಸಿದರೆ ಎಲ್ಲಿ ತಮ್ಮ ‘ಪ್ರೈಮ್ ಟೈಮ್’ ವಾಗ್ಝರಿಗೆ ಕತ್ತರಿ ಬಿದ್ದು, ತಾವೂ ಸಹ ರೊಟೇಷನ್ ಪದ್ಧತಿಯ ಮೇಲೆ ಆ್ಯಂಕರಿಂಗ್ ನೆಡೆಸ ಬೇಕಾಗುತ್ತದೋ ಎನ್ನುವಂತೆ ವಿಲಗುಟ್ಟುತ್ತಿದ್ದಾರೆ. ದೇಶವ್ಯಾಪಿ ನಡೆಯುತ್ತಿರುವ ಈ ಚರ್ಚೆ ಬಹುಶಃ ಏನನ್ನಾದರೂ ಹೇಳುತ್ತಿದೆ ಎಂದರೆ ಅದು ನಮ್ಮ ಸಮಾಜದ ಸುಶಿಕ್ಷಿತವರ್ಗ, ಮೇಲ್ಮಧ್ಯಮ ವರ್ಗ, ಸಾಮಾನ್ಯ ಜಾತಿಗಳಡಿ ಬರುವ ಮಧ್ಯಮ ವರ್ಗದ ಸಮುದಾಯಗಳು ಮೀಸಲಾತಿಯ ವಿಚಾರದ ಬಗ್ಗೆ ಅದೆಷ್ಟು ಅಸಹನೆ ಇಟ್ಟುಕೊಂಡಿವೆ ಎನ್ನುವುದನ್ನು ಮಾತ್ರ.

ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕುವುದಕ್ಕೆ ಆಡಳಿತಶಾಹಿಯ ಅಸಹಕಾರ ಮತ್ತು ಮಂದಗತಿ ಕಾರಣ, ನೂರೆಂಟು ಕಾಯಿದೆಕಟ್ಟಳೆಗಳಿಂದ ಕೂಡಿದ ‘ರೆಡ್ ಟೇಪಿಸಂ’ ಕಾರಣ ಎಂದು ಹೇಳುವ ಮಂದಿ ಒಂದು ವೇಳೆ ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ಸನ್ನಿವೇಶ ಬಂದರೆ ಭಾರತದಲ್ಲಿ ಬಂಡವಾಳ ಹೂಡಲು ನಮಗಿರುವ ದೊಡ್ಡ ತೊಡಕು ‘ಮೀಸಲಾತಿ’ ಎಂದು ದೊಡ್ಡ ಗಂಟಲಿನಲ್ಲಿ ಹೇಳಿಯೇ ತೀರುತ್ತವೆ.

ಖಾಸಗಿ ರಂಗದಲ್ಲಿ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸರ್ಕಾರಗಳಿಗೆ ನಿಜಕ್ಕೂ ಬದ್ಧತೆ ಇದ್ದರೆ ಅವು ಕೆಲವು ಅಂಶಗಳ ಬಗ್ಗೆ ಮೊದಲು ಖಚಿತವಾಗಬೇಕು. ತಾನು ಖಾಸಗಿ ಉದ್ಯಮಿಗಳಿಗೆ ನೀಡುವ ಪುಕ್ಕಟೆ ಸವಲತ್ತುಗಳಿಗೂ ಈ ಖಾಸಗಿ ಉದ್ಯಮಗಳು ತೋರುವ ಸಾಮಾಜಿಕ ಬದ್ಧತೆಗೂ ನೇರ ಅನುಬಂಧ ಏರ್ಪಡಿಸಬೇಕು. ಯಾರು ತನ್ನೊಂದಿಗೆ ಸಾಮಾಜಿಕ, ಆರ್ಥಿಕ ನ್ಯಾಯದಡಿ ಹೆಚ್ಚು ಸಹಕರಿಸಲು, ಹೆಚ್ಚು ದೂರ ಹೆಜ್ಜೆ ಹಾಕಲು ಸಿದ್ಧರಿರುತ್ತಾರೋ ಅವರಿಗೆ ಹೆಚ್ಚು ಅರ್ಥಿಕ, ಭೌತಿಕ ಸಹಕಾರವನ್ನು ಕಲ್ಪಿಸುವ ಬಗ್ಗೆ ಖಚಿತವಾದ ನಿಯಮಾವಳಿಗಳನ್ನು ರೂಪಿಸಬೇಕು. ಯಾವೆಲ್ಲ ಸಂಸ್ಥೆಗಳು ಸ್ವಯಂ ಉತ್ಸುಕತೆಯಿಂದ ಮೀಸಲಾತಿಯನ್ನು ಕಲ್ಪಿಸಲು ಮುಂದಾಗುತ್ತವೆಯೋ ಅಂಥ ಸಂಸ್ಥೆಗಳಿಗೆ ವಿಶೇಷ ಮನ್ನಣೆಯನ್ನು, ಪ್ರೋತ್ಸಾಹವನ್ನು ನೀಡಲು ಮುಂದಾಗಬೇಕು.

ಸಮಾಜದ ತಳಸಮುದಾಯಗಳಿಂದ ಬಂದು ಖಾಸಗಿ ವಲಯದಲ್ಲಿ ಉದ್ಯಮಗಳನ್ನು ಕಟ್ಟಿ ಬೆಳೆಸುವವರಿಗೆ ಇದಾಗಲೇ ನೀಡಲಾಗುತ್ತಿರುವ ಸಹಕಾರವನ್ನು ಮತ್ತಷ್ಟು ಹೆಚ್ಚು ಪರಿಣಾಮಕಾರಿಯಾಗಿಸಿ, ತ್ವರಿತವಾಗಿಸಬೇಕು. ಹಂತಹಂತವಾಗಿ ಮೀಸಲಾತಿಯನ್ನು ಕಲ್ಪಿಸುವ ಭರವಸೆ ನೀಡಿ ಹೊಸದಾಗಿ ಉದ್ಯಮ ಆರಂಭಿಸಲು ಮುಂದಾಗುವಂಥವರಿಗೆ ವಿಶೇಷ ಸಹಾಯಧನ ನೀಡುವಂಥ ಕ್ರಮಗಳಿಗೆ ಮುಂದಾಗಬೇಕು ಮತ್ತು ಈ ಬಗ್ಗೆ ನಿಗಾವಹಿಸಬೇಕು. ‘ಹೂಡಿಕೆದಾರರಿಗೆ ನಮ್ಮ ಬೆಂಬಲ’, ಎನ್ನುವ ಧೋರಣೆಯನ್ನು ವಿಸ್ತರಿಸಿ, ‘ಹೂಡಿಕೆದಾರರಿಗೆ ನಮ್ಮ ಬೆಂಬಲ, ಸಾಮಾಜಿಕ ನ್ಯಾಯದ ಬದ್ಧತೆಯಡಿ ಹೂಡಿಕೆ ಮಾಡುವವರಿಗೆ ಹೆಚ್ಚು ಬೆಂಬಲ’ ಎಂದು ಮರುರೂಪಿಸಬೇಕು. ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂಭ್ರಮಿಸುವ ಕಾರ್ಪೊರೆಟ್ ಸಂಸ್ಥೆಗಳು ಸಾಮಾಜಿಕ ನ್ಯಾಯವನ್ನೂ ಸಂಭ್ರಮಿಸುವಂತೆ ಜಾಗೃತಗೊಳಿಸಬೇಕು. ಸಾಮಾಜಿಕ ನ್ಯಾಯ ಕಲ್ಪಿಸಲು ಮುಂದಾಗುವ ಕಾರ್ಪೊರೆಟ್ ಸಂಸ್ಥೆಗಳಿಗೆಂದೇ ವಿಶೇಷ ಆರ್ಥಿಕ ವಲಯಗಳ ನಿರ್ಮಾಣಕ್ಕೆ ಮುಂದಾಗಬೇಕು. ಇಂಥ ಆರ್ಥಿಕ ವಲಯಗಳಲ್ಲಿ ಬೇರೆ ಆರ್ಥಿಕ ವಲಯಗಳಲ್ಲಿ ದೊರೆಯದಷ್ಟು ಸಹಕಾರ, ಬೆಂಬಲವನ್ನು ನೀಡಬೇಕು. ಇವಕ್ಕೆ ಜಾಗತಿಕವಾಗಿ ವಿಶೇಷ ಮನ್ನಣೆಯನ್ನು ದೊರಕಿಸಿಕೊಡಬೇಕು. ಇಂಥ ಕಡೆ ತಯಾರಿಸಲಾಗುವ ಉತ್ಪನ್ನಗಳಿಗೆ, ನೀಡುವ ಸೇವೆಗಳಿಗೆ, ಮಾಡುವ ರಫ್ತಿಗೆ ವಿವಿಧ ಸುಂಕಗಳ ವಿನಾಯತಿ ನೀಡಬೇಕು, ವಿಶೇಷ ಸಹಾಯಧನ, ಪ್ರೋತ್ಸಾಹ ಧನ ಘೋಷಿಸಬೇಕು. ಯಾವ ಖಾಸಗಿ ವಲಯ ಮೀಸಲಾತಿ ಪರಿಕಲ್ಪನೆಯನ್ನು ತುಚ್ಚವಾಗಿ ಕಾಣುತ್ತಿದೆಯೋ ಅದೇ ವಲಯ ಪೈಪೋಟಿಯ ಮೇಲೆ ಮೀಸಲಾತಿ ಕಲ್ಪಿಸುವಂಥ ವಾತಾವರಣ ಈ ದೇಶದಲ್ಲಿ ನಿರ್ಮಾಣವಾಗಬೇಕು. ಒಮ್ಮೆ ಈ ಪ್ರಕ್ರಿಯೆ ಆರಂಭವಾದರೆ ಒಂದೆರಡು ದಶಕಗಳ ಅವಧಿಯಲ್ಲಿ ಸಾಮಾನ್ಯ ವರ್ಗಗಳ ಮನಸ್ಥಿತಿಯೂ ಬದಲಾಗುತ್ತದೆ. ಖಾಸಗಿ ವಲಯ ನಮ್ಮಿಂದಲೇ ನಡೆಯುತ್ತಿದೆ ಎನ್ನುವ ಇವರ ಮನೋಭಾವದಲ್ಲಿಯೂ ಬದಲಾವಣೆಗಳು ಕಂಡುಬಂದು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹೆಚ್ಚು ಸಕಾರಾತ್ಮಕವಾಗಿ, ಸ್ಪರ್ಧಾತ್ಮಕವಾಗಿ ಸ್ವೀಕರಿಸುವ ಮನಸ್ಥಿತಿ ಮೂಡತೊಡಗುತ್ತದೆ.

ಕೇವಲ ರಾಜಕಾರಣಕ್ಕೆ ಮಾತ್ರವೇ ಮೀಸಲಾತಿ ವಿಚಾರವನ್ನು ಸೀಮಿತಗೊಳಿಸುವುದನ್ನು ನಮ್ಮ ರಾಜಕೀಯ ಪಕ್ಷಗಳು ಬಿಟ್ಟು ಆ ಬಗ್ಗೆ ತಮಗಿರುವ ಬದ್ಧತೆಯನ್ನು ಕೃತಿಯ ಮೂಲಕ, ಚಾಣಾಕ್ಷತೆ, ತಂತ್ರಗಾರಿಕೆಗಳ ಮೂಲಕ ತೋರಬೇಕಿದೆ.

nkdkm

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ…

ಮುಂದಿನ ಸುದ್ದಿ »

ಪ್ರೇಮಿಗಳು ಮತ್ತು ಪ್ರೇಮಿಗಳ ದಿನ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×