Friday July 14 2017

Follow on us:

Contact Us

ಕರಾವಳಿಯ ದೈವಾರಾಧನೆ ಮತ್ತು ಪ್ರಾಣಿ ಜನಪದದ ಕುರಿತು ನಿಮಗೆಷ್ಟು ಗೊತ್ತು?

ಪೀಠಿಕೆ: ಭಾರತದ ವಿಶಿಷ್ಟ ಆರಾಧನಾ ಪ್ರಸ್ಥಾನಗಳಲ್ಲಿ ಉತ್ತರ ಕೇರಳ ಮತ್ತು ದಕ್ಷಿಣ ತುಳುನಾಡಿನಲ್ಲಿ ಕಾಣಸಿಗುವ ಭಗವತಿ ಆರಾಧನೆಯೂ ಒಂದಾಗಿದೆ. ಇದೊಂದು ಪ್ರಾಚೀನ ಜನಪದ ಶಕ್ತಿಯಾರಾಧನಾ ವಿಧಾನ. ನೂರಾರು ವರ್ಷಗಳಿಂದ ಕರಾವಳಿಯ ಜನರ ಬದುಕನ್ನು ನಿರ್ದೇಶಿಸುತ್ತ ಬಂದಿರುವ ಭಗವತಿ ಆರಾಧನೆಯ ಸಂಪ್ರದಾಯವು ಹಲವಾರು ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿರುವ ವಿಲಕ್ಷಣ ಬೆಸುಗೆಯಾಗಿದೆ. “ಇದೊಂದು ಧಾರ್ಮಿಕ ರಂಗಭೂಮಿಯೂ ಆಗಿದ್ದು, ಇದರಲ್ಲಿ ಆರಾಧನಾಂಶ, ಕಲಾತ್ಮಕಾಂಶ, ಮನೋರಂಜಕಾಂಶ, ನ್ಯಾಯ ವಿತರಣಾಂಶ ಇತ್ಯಾದಿಗಳು ಸೇರ್ಪಡೆಗೊಂಡು ಇದೊಂದು ಸಂಕೀರ್ಣ ವ್ಯವಸ್ಥೆಯೇ ಆಗಿದೆ.” ಇದರಲ್ಲಿ ಪ್ರಾಕೃತಿಕ ಸನ್ನಿವೇಶಗಳು, ಪ್ರಾಣಿ, ಪಕ್ಷಿ, ಸಸ್ಯಸಂಕುಲ, ವನ, ಸಾಮಾಜಿಕ ವಸ್ತುಗಳು ಇವೆಲ್ಲವೂ ನೇರವಾಗಿಯೋ, ಪ್ರತೀಕಗಳಾಗಿಯೋ ಬಳಕೆಗೊಳ್ಳುತ್ತವೆ.

ಭಗವತಿ ಆರಾಧನೆಯ ಸಾಂಸ್ಕೃತಿಕ ಪ್ರಕ್ರಿಯೆಯಲ್ಲಿ ಅಹಾರ, ಬೇಟೆ, ವಿನೋದ, ಬಲಿ, ಸಾಂಕೇತಿಕತೆ ಮುಂತಾದ ಉದ್ದೇಶಗಳಿಗಾಗಿ ಪ್ರಾಣಿಗಳನ್ನು ಉಪಯೋಗಿಸುವುದಿದೆ. “ನಿಸರ್ಗದ ಭಾಗವಾಗಿ ಬೆಳೆದ ಮಾನವನು ನಿಸರ್ಗದ ಇತರ ಪ್ರಾಣಿಗಳೊಂದಿಗೆ ಸಹಜವಾಗಿಯೇ ಭಿನ್ನನೆಲೆಗಳಲ್ಲಿ ಸಂಬಂಧವನ್ನು ಬೆಳೆಸಿಕೊಂಡಿದ್ದಾನೆ. ಸ್ನೇಹ ಮತ್ತು ವಿರೋಧದ ದ್ವಂದ್ವಾತ್ಮಕ ಸಂಬಂಧವನ್ನು ಪ್ರಾಣಿಗಳ ಜೊತೆಗೆ ಬೆಳೆಸಿಕೊಂಡ ಮನುಷ್ಯನು ಅದಕ್ಕೆ ಅನುಗುಣವಾಗಿಯೇ ತನ್ನ ಜಾನಪದದಲ್ಲಿ ಅವುಗಳನ್ನು ಕಲ್ಪಿಸಿಕೊಂಡಿದ್ದಾನೆ. ಪ್ರಾಣಿಗಳನ್ನು ಕುರಿತ ಅವನ ನಂಬಿಕೆಗಳು ವಿಭಿನ್ನ ಆಚರಣೆ ಮತ್ತು ಆರಾಧನೆಗಳ ರೂಪಗಳಲ್ಲಿ ಅಭಿವ್ಯಕ್ತಗೊಂಡಿರುವುದನ್ನು ಗಮನಿಸಬಹುದು. ಒಂದು ಅರ್ಥದಲ್ಲಿ ಮಾನವ ಜಾನಪದ ಎಂದರೆ ಪ್ರಾಣಿಗಳ ಬದುಕನ್ನು ತನ್ನೊಳಗೆ ಸೇರಿಸಿಕೊಂಡಿದ್ದೇ ಆಗಿದೆ. ಹೀಗೆ ಮಾನವನ ಸಾಂಸ್ಕೃತಿಕ ಬದುಕಿನ ಜೊತೆ ಸಂಸ್ಕಾರಗೊಂಡ ಪ್ರಾಣಿ ಬದುಕನ್ನು ನಾವು ‘ಪ್ರಾಣಿ ಜಾನಪದ’ ಎನ್ನುತ್ತೇವೆ.”

ಭಗವತಿ ಆರಾಧನೆಯಲ್ಲಿ ಪ್ರಾಣಿಮೂಲೀಯ ದೈವಗಳು:
ಭಗವತಿ ಆರಾಧನೆಯು ಮಾತೃದೇವತೆಯ ಉಪಾಸನಾ ಪ್ರಕಾರವಾದರೂ ಮೃಗ ಸ್ವರೂಪದ ದೈವಗಳೂ ಇಲ್ಲಿ ಆರಾಧನೆಗೊಳ್ಳುತ್ತದೆ. “ಶತಮಾನಗಳ ಹಿಂದೆ ವಿಫುಲವಾಗಿ ಕಾಡುಗಳಿದ್ದ ಕಾಲದಲ್ಲಿ, ಕಾಡುಪ್ರಾಣಿಗಳ ಹಾವಳಿಯ ಹಿನ್ನೆಲೆಯಲ್ಲಿ ಕಾಡುಹಂದಿ, ಕಾಡುಕೋಣ, ಹುಲಿಗಳ ಅಂತರ್ಯಾಮೀ ಶಕ್ತಿಗಳನ್ನು ಒಲಿಸಿ, ಒಲೈಸುವ ಅಂಗವಾಗಿ ಅವುಗಳ ದೈವೀಕರಣವಾಗಿರುವುದು ಸಹಜ.” “ಇಂತಹ ಮೃಗಗಳನ್ನು ಸಹಕರಿಸಿದ ವೀರರು ತಮ್ಮ ಪ್ರತಾಪದ ನೆನಪಿಗಾಗಿ ಆಯಾ ಪ್ರಾಣಿಗಳ ವಿಗ್ರಹಗಳನ್ನು ಮಾಡಿಟ್ಟರೆಂದೂ, ಅವು ಕ್ರಮೇಣ ಕಾರಣೀಕದ್ದೆಂದು ತಿಳಿಯಲ್ಪಟ್ಟು ಪೂಜಿಸಲ್ಪಟ್ಟುವೆಂದೂ ನಂಬಲಾಗಿದೆ.” ಇವುಗಳನ್ನು ಮೃಗದೇವತೆಗಳೆಂಬ ಸಂಕಲ್ಪದಲ್ಲಿ ಪೂಜಿಸಲಾಗುತ್ತದೆ. ಐವರು ‘ಪುಲಿ’ದೈವಗಳಾದ ಭಗವತಿಯರು ಇಲ್ಲಿ ಮುಖ್ಯರಾಗುತ್ತಾರೆ.

ಹಿಂದೆ ಶಿವ-ಪಾರ್ವತಿಯರು ‘ಬ್ರಾಂದವನಂ’ ಎಂಬ ಕಾಡಿನಲ್ಲಿ ವಿಹರಿಸುವಾಗ ಸಿಂಹರಾಜವೊಂದು ಹೆಣ್ಣು ಹುಲಿಯೊಂದಿಗೆ ಮಿಥುನಗೊಳ್ಳುವುದನ್ನು ಅವರು ಕಂಡು, ಅವರಲ್ಲಿ ಮೋಹವುಂಟಾಗಿ ಮಾಯಾರೂಪದಲ್ಲಿ ಶಿವನು ಸಿಂಹವಾಗಿಯೂ, ಪಾರ್ವತಿಯು ಹೆಣ್ಣುಹುಲಿಯಾಗಿಯೂ ರೂಪತಳೆದು ಜೊತೆಗೂಡುತ್ತಾರೆ. ಪರಿಣಾಮವಾಗಿ ಹೆಣ್ಣು ಹುಲಿಯಲ್ಲಿ ಗರ್ಭನಿಂತು ಅದು ಬ್ರಾಂದಾವನದ ‘ತಾತ್ತನಾರ್ ಕಲ್ಲ್’ ಎಂಬ ಕೊರೆದ ಬಂಡೆಯ ‘ತಾಯ್‍ಮಾಡ’ ಎಂಬ ಗುಹೆಯಲ್ಲಿ ಐದು ಗಂಡು ಹುಲಿಮರಿಗಳಿಗೆ ಜನ್ಮನೀಡಿತು. ಈ ಐದು ಹುಲಿಮರಿಗಳನ್ನು ‘ಪುಲಿಪೆತ್ತ ಮಕ್ಕಳೈವರ್’ ಅಂದರೆ, ‘ಹುಲಿ ಮಕ್ಕಳೈವರು’ ಎಂದು ಕರೆಯಲಾಯಿತು.
ಸಿಂಹರೂಪಿ ಶಿವನು ಪುಲಿಕಂಡನ್ ಮತ್ತು ವ್ಯಾಘ್ರರೂಪಿಣಿ ಪಾರ್ವತಿಯು ಪುಳ್ಳಿಕರಿಂಕಾಳಿ ಭಗವತಿ ಎಂಬುದಾಗಿ ಆರಾಧನೆ ಪಡೆಯುತ್ತಾರೆ. ಐದು ಹುಲಿ ಮಕ್ಕಳಲ್ಲಿ ಹಿರಿಯವನು ಪುಲಿಯೂರ ಕಣ್ಣನ್ ಅಥವಾ ಪುಲ್ಲೂರ್ಣನ್, ಆನಂತರದವರಿಗೆ ಕಾಳಪುಲಿಯನ್, ಪುಲಿಮಾರುತನ್, ಮಾರಪುಲಿಯನ್, ಕಂಡಪುಲಿಯನ್ ಎಂಬ ಹೆಸರುಗಳಿವೆ. ಐದು ಹುಲಿಮರಿಗಳನ್ನು ಏಕಕಾಲದಲ್ಲಿ ಪ್ರಸವಿಸಿದಾಗ ಪುಳ್ಳಿಕರಿಂಕಾಳಿ ಭಗವತಿಯ ಬಾಣಂತಿತನವನ್ನು ನಿರ್ವಹಿಸಲು ಮಹಾವಿಷ್ಣುವಿನ ಪತ್ನಿ ಲಕ್ಷ್ಮೀದೇವಿಯು ಮಾಯಾರೂಪದಲ್ಲಿ ಹೆಣ್ಣುಹುಲಿಯಾಗಿ ಹುಟ್ಟಿ ಬರುತ್ತಾಳೆ. ಅವಳ ಆರೈಕೆಯಿಂದ ಸಂತೃಪ್ತಳಾದ ಭಗವತಿಯು, ಅವಳನ್ನು ತನ್ನ ಎಳೆಯ ಮಗಳಾಗಿ ಸ್ವೀಕರಿಸಿ, ‘ಪುಲಿಯೂರ್ ಕಾಳಿ’ ಅಥವಾ ‘ಪುಲ್ಲುರಾಳಿ’ ಎಂಬ ಹೆಸರಿನಿಂದ ಕರೆದಳು.

ಐವರ್ ಭಗವತಿಯರ ಹುಟ್ಟಿನ ಬಗೆಗೆ ‘ತೋಟ್ಟಂ’ ಎಂದು ಕರೆಯಲಾಗುವ ಜಾನಪದ ಕಥನ ಕಾವ್ಯಗಳು ಹೇಳುವ ಈ ಹಿನ್ನೆಲೆಯನ್ನು ಪ್ರಾಣಿ ಜಾನಪದದ ಆಧಾರದಿಂದಲೇ ಕಟ್ಟಲಾಗಿದೆ ಎನ್ನಬಹುದು. ಉಭಯ ಜಾತಿಯ ವನ್ಯಮೃಗಗಳ ಅಸ್ವಾಭಾವಿಕ ಮಿಲನ, ಕ್ರೂರ ಜಂತುಗಳಾದರೂ ಹುಲಿಗಳ ಮಧ್ಯೆ ತಾಯಿ-ಮಕ್ಕಳ ಬಾಂಧವ್ಯ ಕಲ್ಪನೆ, ಮರಿಗಳ ಪಾಲನೆಗೆ ಅದೇ ಜಾತಿಯ ಇನ್ನೊಂದು ಮೃಗದ ನೆರವು ಮತ್ತು ಆ ಹುಲಿಯನ್ನು ಎಳೆಯ ಮಗಳಂತೆ ಪರಿಗಣಿಸಿದ ಭಾವನಾತ್ಮಕತೆ ಇವೆಲ್ಲವೂ ಮನುಷ್ಯ ಮನೋಧರ್ಮವನ್ನು ಪ್ರಾಣಿ ಜಗತ್ತಿನಲ್ಲಿ ಕಂಡುಕೊಂಡ ರೀತಿಯಾಗಿದೆ.

ಈ ಐತಿಹ್ಯದ ಮುಂದಿನ ಭಾಗದಲ್ಲಿ ಈ ಹುಲಿಮಕ್ಕಳು ರಾಮಪುರಂನ ‘ಕುರುಬ್ರಾದಿ’ ಅರಸನೊಂದಿಗೆ ಹೋರಾಟ ನಡೆಸುವ, ಅವನ ಬಣವನ್ನು ಮಣಿಸಿ ಶರಣಾಗಿಸುವ ಮತ್ತು ತಮಗೆ ಬೇಕಾದ ಸ್ಥಾನ-ಮಾನಗಳನ್ನು ಗಳಿಸುವ ಕಥೆಯೂ ಬರುತ್ತದೆ. ಜಾನಪದದ ನಾಯಕ ಪಾತ್ರಗಳು ಅರಸೊತ್ತಿಗೆಯೊಂದಿಗೆ ಅಥವಾ ಪುರೋಹಿತಶಾಹಿ ವರ್ಗದೊಂದಿಗೆ ಮುಖಾಮುಖಿಯಾಗುವುದು ಜಾನಪದ ಕಥೆಗಳ ಸಾಮಾನ್ಯ ಅಂಶವಾದರೂ, ಬಹಳ ಮುಖ್ಯವಾದ ಭಾಗವೆನ್ನಬೇಕು. ಇದು ವನಸಂಸ್ಕೃತಿ ಮತ್ತು ನಾಗರಿಕ ಸಂಸ್ಕೃತಿಗಳೆರಡರ ಸಾಂಸ್ಕೃತಿಕ ಮುಖಾಮುಖಿ, ಸಂಘರ್ಷದ ನೆಲೆಯನ್ನು ಗುರುತಿಸುವಲ್ಲೂ ಇದೊಂದು ಪ್ರಮುಖ ಅಂಶವೆನ್ನಬಹುದು.

ತುಳುನಾಡಿನ ಮಂಗಳೂರಿನ ಜೆಪ್ಪು ಕುಡುಪ್ಪಾಡಿ ಎಂಬಲ್ಲಿಂದ ಬಂದ ‘ಪಿಲಿಭೂತ’ ಎಂಬ ವೈಷ್ಣವಾಂಶ ದೈವವು ಕೋಲತ್ತುನಾಡಿನ ನೀಲೇಶ್ವರ ಕೋಟೆಪುರ ಎಂಬಲ್ಲಿ ನೆಲೆಸಿ ‘ನರಸಿಂಹಮೂರ್ತಿ’ ಎಂಬ ಹೆಸರಿನಿಂದ ಆರಾಧನೆ ಪಡೆಯುತ್ತದೆ. ಭಗವತಿಯರೊಂದಿಗೆ ಪುಲಿಚ್ಚೇಕವನ್ ಎಂಬ ಹುಲಿಯ ರೂಪದ ವೀರಭದ್ರನ ಆರಾಧನೆಯೂ, ಪಂಜುರ್ಲಿ ಎಂಬ ಕಾಡುಹಂದಿಯ ರೂಪದ ತುಳು ಮೂಲದ ದೈವದ ಆರಾಧನೆಯೂ ನಡೆಯುತ್ತದೆ.

ಪ್ರಾಣಿಮೂಲೀಯ ದೈವಗಳನ್ನು “ಅಲೌಕಿಕ ನೆಲೆಯಲ್ಲಿ ಆರಾಧಿಸುವುದು ಮನುಷ್ಯ ಈ ಪ್ರಾಣಿಗಳ ಮೇಲೆ ಸ್ಥಾಪಿಸಲು ಬಯಸಿದ ಯಾಜಮಾನ್ಯದ ಒಂದು ರೂಪ ಎಂದು ಹೇಳಬಹುದು. ಆರಾಧನೆಯ ಮೂಲಕ ಪ್ರಾಣಿಗಳನ್ನು ಸಂಪ್ರೀತಗೊಳಿಸುವುದು ಎಂದರೆ ಇದನ್ನು ನಡೆಸುವವನು ಮನುಷ್ಯನಾದ ಕಾರಣ ಆತ ಪ್ರಾಣಿಗಳಿಂದ ಶ್ರೇಷ್ಠನಾಗಿ ಕಂಡು ಬರುತ್ತಾನೆ. ಆದುದರಿಂದಲೇ, ಪ್ರಾಣಿಗಳ ಆರಾಧನೆ ಎನ್ನುವುದು ಕೃಷಿಸಂಸ್ಕೃತಿಯ ತಾತ್ವಿಕತೆಯ ಒಂದು ಭಾಗವಾಗಿ ಕಂಡುಬರುತ್ತದೆ. ಆರಾಧನೆಯ ಮೂಲಕ ತನ್ನ ಕೃಷಿಗೆ ಮಾರಕವಾಗುವ ಈ ರೀತಿಯ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಆ ಮೂಲಕವಾಗಿ ಕೃಷಿಯಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚು ಮಾಡುವುದಕ್ಕಾಗಿ ಮಾಡಿದ ತಂತ್ರ ಇದು ಎನ್ನಬಹುದು”.

ಭಗವತಿ ಆರಾಧನೆಯಲ್ಲಿ ಪ್ರಾಣಿ ಬೇಟೆ:
ತುಳುನಾಡಿನಲ್ಲಿ ಆರಾಧನೆಯ ಭಾಗವಾಗಿ ಪ್ರಾಣಿ, ಮೀನುಗಳನ್ನು ಬೇಟೆಯಾಡುವ ಸಂಪ್ರದಾಯವಿದೆ. ಭೂಮಿಯಲ್ಲಿ ಬೆಳೆಯಬಹುದಾದ ಬೆಳೆಗಳಿಗೆ ಕಾಡುಪ್ರಾಣಿಗಳಿಂದ ಒದಗಬಹುದಾದ ತೊಂದರೆಯನ್ನು ಮುಂಚಿತವಾಗಿಯೇ ನಿಗ್ರಹಿಸಿಕೊಳ್ಳುವುದಕ್ಕಾಗಿ ಕೆಡ್ಡಸದಂದು ಬೇಟೆ ಮಾಡಬೇಕೆಂಬ ನಿಯಮ ರೂಪಿತವಾಗಿರುವುದನ್ನೂ ನೋಡಬಹುದು. ಭೂತಾರಾಧನೆಯಲ್ಲಿ ‘ಬೋಂಟೆ ದೇರುನೆ’ (ಬೇಟೆಗೆ ಹೋಗುವುದು) ಎಂಬುದೂ ಒಂದು ಆರಾಧನಾ ಕ್ರಮವಾಗಿದೆ.
ಭಗವತಿ ಆರಾಧನೆಯಲ್ಲೂ ಬೇಟೆ ಸಂಸ್ಕೃತಿಯು ಬೇರೆ ಬೇರೆ ನೆಲೆಗಳಲ್ಲಿ ಪ್ರಕಟಗೊಳ್ಳುವುದನ್ನು ಗಮನಿಸಬಹುದು. “ಒಂದು ಕಾಲಘಟ್ಟದಲ್ಲಿ ವೃತ್ತಿಯಾಗಿದ್ದ, ಬದುಕಾಗಿದ್ದ ವಿಧಾನವೊಂದು ಆರಾಧನೆಯಾಗಿ ಅಥವಾ ಅದರ ಭಾಗವಾಗಿ ಉಳಿದು ಬಂದಿರುವ ಉದ್ದೇಶ ಸ್ಪಷ್ಟ. ಬೇಟೆಯನ್ನು ಅಭಿನಯಿಸಿ, ಆರಾಧಿಸಿ, ಅನುಸರಿಸಿ ತೋರಿಸುವುದರಿಂದ, ಅದೊಂದು ಪಳೆಯುಳಿಕೆಯಾಗಿ ಕಳೆದು ಹೋದ ಕಾಲದ ಚಾರಿತ್ರಿಕ ಕಾಲಘಟ್ಟದ ಜೀವನ ವಿಧಾನವನ್ನು ತೋರಿಸುತ್ತದೆ.
ಐವರ್ ಪುಲಿ ಭಗವತಿಯರ ಆರಾಧನೆಯಲ್ಲಿ ಬಳಕೆಯಾಗುವ ಬಿಲ್ಲು, ಬಾಣ, ಶೂಲ, ಬೆತ್ತ, ಗುರಾಣಿ ಮೊದಲಾದ ಆಯುಧ ಪರಿಕರಗಳು ಬೇಟೆಗಾರಿಕೆಯ ಸಂಕೇತಗಳೆನ್ನಬಹುದು.

ಕೇರಳದ ವಯನಾಡ್ ಕುಲವನ್, ಕಂಡಕೇಳನ್ ಮುಂತಾದ ದೈವಗಳು ಉತ್ಸವದ ಭಾಗವಾಗಿ ಬೇಟೆಗೆ ಹೋಗಿ, ಮೃಗಗಳನ್ನು ಹಿಡಿದು ತರುವ ಕ್ರಮವಿದೆ. ಭಗವತಿಯರು ಬಳಸುವ ಗುರಾಣಿ ಮತ್ತು ತಿರುವಾಯುಧಗಳ ರಚನೆಯೂ ಬೇಟೆಯ ಉದ್ದೇಶವಾಗಿಯೇ ಸೃಷ್ಟಿಯಾಗಿದೆ ಎಂಬ ಅಭಿಪ್ರಾಯವೂ ಇವೆ. ಭಗವತಿಯರ ಜೊತೆಯಿರುವ ಪುರುಷ ದೈವಗಳು ಬಿಲ್ಲು-ಬಾಣಗಳನ್ನು ಹಿಡಿದುಕೊಂಡು, ಕ್ಷೇತ್ರಕ್ಕೆ ಪ್ರದಕ್ಷಿಣೆ ಬರುತ್ತಾ, ಮಧ್ಯೆ ‘ಕಾಲಾಟ’ ಎಂಬ ವಿಧಿಯನ್ನು ನಡೆಸಿಕೊಡುತ್ತದೆ. ಈ ಕಾಲಾಟದ ನರ್ತನ ಸ್ವರೂಪ ಬೇಟೆಯ ಮೃಗಕ್ಕೆ ಹೊಂಚು ಹೂಡಿ ಆಕ್ರಮಣ ಮಾಡುವ ರೀತಿ ಮತ್ತು ಅವು ತಪ್ಪಿಸಿಕೊಂಡಾಗ ದಿಕ್ಕುಗಳನ್ನು ಬದಲಿಸುವ ರೀತಿಯಲ್ಲೇ ಮೂಡಿಬರುತ್ತದೆ. ಭಗವತಿಯರನ್ನು ‘ತೆಯ್ಯಂ’ ರೂಪದಲ್ಲಿ ‘ಕಟ್ಟಿಯಾಡುವ’ ಹಂತದಲ್ಲೂ ಬಿಲ್ಲಿಗೆ ಬಾಣವನ್ನು ಹೂಡಿ ಪ್ರಯೋಗಿಸುವಂತೆ, ಅಭಿನಯಿಸುವುದಿದೆ. ಬಾಣವನ್ನು ಬೀಸುತ್ತಾ ಬೇಟೆ ಹುಡುಕಾಡುವಂತೆ ನಟಿಸಲಾಗುತ್ತದೆ. ತೀವ್ರಗತಿಯ ಕುಣಿತದಲ್ಲೂ ಆಕ್ರಮಣದ ಬಿರುಸಿರುತ್ತದೆ.

ಭಗವತಿಯರು ಸ್ಥಾನದ ಎದುರಿಗೆ ಬಂದೊಡನೆ ‘ಇರಿಪ್ಪು’ ಎನ್ನುವ ಪೀಠದ ಮೇಲೆ ಇರಿಸಿದ ಜೋಡು ತೆಂಗಿನಕಾಯಿಗಳ ಸುತ್ತಲೂ ಆವೇಶದ ಕುಣಿತವನ್ನು ತೋರಿಸುವುದಿದೆ. ಆ ತೆಂಗಿನ ಕಾಯಿಗಳು ಬೇಟೆಯ ಪ್ರಾಣಿಗಳ ಪ್ರತೀಕ. ಸುತ್ತಲೂ ಕುಣಿಯುವ ವೇಳೆಗೆ ಅದರ ಕಡೆಗೆ ದೃಷ್ಟಿನೆಟ್ಟು ಅಬ್ಬರಿಸುವುದು, ಆಂಗಿಕವಾಗಿ ಆಕ್ರಮಿಸುವಂತೆ ಅಭಿನಯಿಸುವುದು, ವಿಧವಿಧದ ಬಿರುಸಿನ ಹೆಜ್ಜೆಗಳನಿಡುತ್ತಾ ಕುಣಿದಾಡುವುದು ಇವೆಲ್ಲವೂ ಬೇಟೆಯೊಂದರ ಮೇಲೆ ದಾಳಿ ಮಾಡುವ ಸಂದರ್ಭವನ್ನೇ ಪುನರಾಭಿನಯಿಸುವುದಾಗಿದೆ. ಕುಣಿತದ ಕೊನೆಗೆ ಹಾರಿ ಬಂದು ತೆಂಗಿನಕಾಯಿಗಳನ್ನು ಒಡೆದು ಚೂರಾಗಿಸುವುದು ಬೇಟೆಯನ್ನು ಆಡಿಸಿ, ಮರುಳುಗೊಳಿಸಿ, ದಿಕ್ಕೆಡಿಸಿ, ಕೊನೆಗೆ ಹೊಡೆದುರುಳಿಸುವ ಕೌಶಲ್ಯವನ್ನೇ ಅಭಿನಯಿಸಿ, ತೋರಿಸುತ್ತದೆ.

ಪಾಡಾರಕುಳಂಗರ ಭಗವತಿಯಲ್ಲಿ ವೀರಪುತ್ರನೆಂಬ ಸಹದೈವವು ಆಯುಧ ಪರಿಕರ, ಅಲಂಕರಣದ ಹಿನ್ನೆಲೆಯಿಂದ ಬೇಟೆಗಾರನ ಸಾಂಪ್ರದಾಯಿಕ ಸ್ವರೂಪದಲ್ಲಿರುವುದನ್ನು ಕಾಣಬಹುದು. ಅಲ್ಲದೆ, ‘ವೇಟಕ್ಕೊರುಮಗನ್’ ಅಥವಾ ‘ವೇಟಕ್ಕಾರೇಶ್ವರನ್’ ಎಂಬ ದೈವವೂ ಶಿವನ ಕಿರಾತರೂಪದ ದೈವವಾಗಿದ್ದು, ಈ ದೈವವನ್ನು ‘ಕಟ್ಟಿಯಾಡುವ’ ವೇಳೆಗೆ ಬೇಟೆಯ ಸಂದರ್ಭವನ್ನು ಅಭಿನಯಿಸುವುದಿದೆ. ಐವರ್ ಭಗವತಿಯರಲ್ಲಿ ಒಂದಾಗಿರುವ ‘ಕಾಳಪುಲಿಯನ್’ ಎಂಬ ದೈವವು ‘ತೀಯಂಬು’(ಅಗ್ನಿಬಾಣ)ವನ್ನು ಪ್ರಯೋಗಿಸುವ ಸಂಪ್ರದಾಯವಿದ್ದು, ಇದೂ ಬೆಂಕಿಯ ಬಾಣಗಳನ್ನು ಬಳಸಿಕೊಂಡು, ಬೇಟೆಯನ್ನಾಡುವ ಪ್ರಾಚೀನ ಪದ್ಧತಿಯನ್ನು ತೋರಿಸುತ್ತದೆ.

ಭಗವತಿ ಆರಾಧನೆಯಲ್ಲಿ ಪ್ರಾಣಿ ಬಲಿ :
“ಬಲಿ ಎಂಬುದಕ್ಕೆ ಒಂದು ಪ್ರಾಣಿಯನ್ನು ಅಥವಾ ಒಂದು ವಸ್ತುವನ್ನು ಅಲೌಕಿಕ ಶಕ್ತಿಯೊಂದಕ್ಕೆ ಅರ್ಪಿಸುವುದು ಎಂಬ ಕಲ್ಪನೆಯಿದೆ. ಸಮುದಾಯದ ಭಾಗವೇ ಆದ ಮನುಷ್ಯ ಅಥವಾ ಪ್ರಾಣಿಯನ್ನು ಉದಾತ್ತೀಕರಣದ ನೆಲೆಯಲ್ಲಿ ಕೊಲ್ಲುವಿಕೆಯ ಮೂಲಕ ಅಲೌಕಿಕ ಶಕ್ತಿಗೆ ಅರ್ಪಿಸಿ ಅಲೌಕಿಕ ಶಕ್ತಿ ಮತ್ತು ಮನುಷ್ಯರ ನಡುವೆ ಸಂಬಂಧವನ್ನು ಸ್ಥಾಪಿಸುವುದೇ ಈ ಕ್ರಿಯೆಯ ಮುಖ್ಯ ನೆಲೆಯಾಗಿದೆ. ಇದು ಕೇವಲ ಪ್ರಾಣಿಗೆ ಮಾತ್ರ ಅನ್ವಯಿಸದೆ ಪ್ರಾಣರಹಿತ ವಸ್ತುವಿಗೂ ಅನ್ವಯಿಸುತ್ತದೆ.”
ಭಗವತಿ ಆರಾಧನೆಯಲ್ಲಿ ಸಾಂಕ್ರಮಿಕ ರೋಗಗಳಾದ ಪ್ಲೇಗು, ಸಿಡುಬು, ಕಾಲರಾ, ಬರ, ನೈಸರ್ಗಿಕ ದುರಂತಗಳು, ಅನಾವೃಷ್ಟಿ, ಅತಿವೃಷ್ಟಿ ಮುಂತಾದ ಕಾರಣಗಳಿಗಾಗಿ ಪ್ರಾಣಿಬಲಿ ನಡೆಯುತ್ತದೆ. ರಕ್ತರಹಿತ, ರಕ್ತಸಹಿತ ಹೀಗೆ ಎರಡೂ ರೀತಿಗಳಲ್ಲಿ ಬಲಿ ಅರ್ಪಿಸುವುದಿದೆ. ಕೋಣ, ಆಡು, ಕುರಿ, ಕೋಳಿ, ಹಂದಿ ಮುಂತಾದವುಗಳನ್ನು ಈ ‘ಬಲಿಕ್ರಿಯೆ’ಗಾಗಿ ಬಳಸುತ್ತಾರೆ.

ಭಗವತಿ ಆರಾಧನೆಯಲ್ಲಿ ಉತ್ಸವದ ಕೊನೆಯಲ್ಲಿ ನಡೆಯುವ ‘ಬಡಕಂಬಾದಲ್’ ಎಂಬ ವಿಧಿಯು ಪ್ರಧಾನವಾಗಿ ಈ ಬಲಿಕ್ರಿಯೆಗೆಂದೇ ಮೀಸಲು. ಅಲ್ಲಿ ಭಗವತಿಯರ ವೀರಗಾಥೆಗಳನ್ನು ರಾಗಬದ್ಧವಾಗಿ ಹಾಡುತ್ತಾರೆ. ಆಗ ಭಗವತಿಯರು ಆವೇಶಗೊಂಡು ತಮ್ಮ ಪ್ರತಾಪಗಳನ್ನು ತೋರಿಸುತ್ತಾರೆ. ನಂತರ ಹತ್ತಾರು ಕೋಳಿಗಳನ್ನು ಕಡಿದು ನಿರ್ಮಿಸಿದ ಬಲಿಯ ರಚನೆಗೆ ರಕ್ತ ತರ್ಪಣ ನೀಡುತ್ತಾರೆ.

ಚೀರುಂಭ ಭಗವತಿಯ ಉತ್ಸವದಲ್ಲಿ ಇದು ದಂಡರಾಜಾವು ಎಂಬ ಸಹದೈವದ ಮುಂದೆ ನಡೆಯುತ್ತದೆ. ಮಂಜೇಶ್ವರದ ‘ಕನಿಲ’ ಎಂಬಲ್ಲಿ ಚೀರುಂಭ ಭಗವತಿಯರಿಗೆ ನವರಾತ್ರಿಯ ಕೊನೆಯ ದಿನದಂದು ಹತ್ತಾರು ಕುರಿಗಳನ್ನು ಬಲಿ ನೀಡಲಾಗುತ್ತದೆ. ಆಗ ಭಗವತಿಯು ಭದ್ರಕಾಳಿಯ ಸ್ವರೂಪದಲ್ಲಿರುತ್ತಾಳೆ ಎಂಬುದಾಗಿಯೂ, ಕುರಿಬಲಿಯ ಬಳಿಕ ಆ ಸ್ಥಳದತ್ತ ಯಾರೂ ತೆರಳಬಾರದೆಂಬುವುದಾಗಿಯೂ ಜನಪದರಲ್ಲಿ ನಂಬಿಕೆಯಿದೆ.

ಪುಲಿಕರಿಂಕಾಳಿ ಭಗವತಿಗೆ ಬಾಳೆಹಣ್ಣು, ತಾಂಬೂಲ, ತೆಂಗಿನಕಾಯಿಗಳ ರೂಪದಲ್ಲಿ ದೇವಕ್ರಿಯೆಯೆ ಆಹಾರ ಅರ್ಪಿಸುವ ಸಂಪ್ರದಾಯವಿದ್ದರೂ, ಆಹಾರ ಸ್ವೀಕರಿಸುವ ವೇಳೆಗೆ ಮುಚ್ಚಿದ ಬಾಳೆಯೆಲೆಯನ್ನು ಹರಿದಾಡುವುದು, ಬಾಳೆಹಣ್ಣುಗಳ ಸಿಪ್ಪೆಗಳನ್ನು ಸುಲಿಯುವ ಸಂದರ್ಭದಲ್ಲಿ ಕಲಾವಿದನು ಮಾಡುವ ಮುಖಾಭಿನಯಗಳು ಮೂಲತಃ ಬೇಟೆಯ ಫಲವನ್ನು ಉಣ್ಣುವ ಹಂತವಾಗಿದ್ದು, ನಂತರ ವೈದಿಕತೆಯ ಪ್ರಭಾವದಿಂದ ಬದಲಾಗಿರಬಹುದು ಎಂಬ ಅಭಿಪ್ರಾಯಕ್ಕೆ ಬರಬಹುದು.ಹಿಂದೆ ಭಗವತಿಯರಿಗೆ ಕೋಣಬಲಿ, ಹಂದಿಬಲಿಗಳಿದ್ದವು. ಈಗ ಕಾನೂನು ಕಟ್ಟಳೆಗಳಿಂದಾಗಿ ಇವು ರೂಪಾಂತರಗೊಂಡಿವೆ. ಚೀರುಂಭ ಭಗವತಿಗೆ ‘ಕಳಿಯಾಟ’ ಎಂಬ ಉತ್ಸವವನ್ನು ನೀಡಬೇಕಾದರೆ, ‘ನರಬಲಿ’ಯನ್ನು ಅರ್ಪಿಸಬೇಕೆಂಬ ನಂಬಿಕೆಯೂ ಇದೆ. ಈ ಕಾರಣದಿಂದಲೇ ಈ ಉತ್ಸವ ಕಾಣಲು ಅಸಾಧ್ಯ ಎನ್ನಲಾಗಿದೆ.

ಭಗವತಿ ಆರಾಧನೆಯಲ್ಲಿ ಪ್ರಾಣಿ ಸಂಕೇತಗಳು:
ಕುಲಲಾಂಛನ ಪೂಜೆ ಎಂಬುದು ಭಾರತದ ಅತ್ಯಂತ ಪ್ರಾಚೀನವಾದ ಪದ್ಧತಿ. ತಮಗೆ ಉಪಟಳ ಕೊಡುವ, ಎದುರಿಸಲಾಗದ “ಕ್ರೂರ ಪ್ರಾಣಿಗಳ ಅಂತರ್ಯಾಮೀ ಶಕ್ತಿಗಳನ್ನು ಪೂಜಿಸುವುದೂ, ನಿರ್ದಿಷ್ಟ ಪ್ರಾಣಿಗಳ ಕೆಲವೊಂದು ಸ್ವರೂಪ, ಸ್ವಭಾವಗಳನ್ನು ತಮ್ಮ ವ್ಯಕ್ತಿತ್ವಕ್ಕೆ ಆರೋಪಿಸಿಕೊಂಡು ಅಭಿನಯಿಸುವುದೂ ವಿವಿಧ ಸಮಾಜಗಳಲ್ಲಿ ರೂಢವಾಗಿದ್ದ ವಿಚಾರ”.

ಭಗವತಿ ಆರಾಧನೆಯಲ್ಲೂ ಪ್ರಾಣಿ ಸಂಕೇತವುಳ್ಳ ದೈವಗಳೂ, ದೈವ ಪರಿಕರಗಳೂ ಇವೆ. ಹುಲಿಯಂಥ ಘೋರಮೃಗದ ಪ್ರತೀಕವು ವೀರಾರಾಧನೆಗೆ ಪೂರಕವೆನ್ನಬಹುದು. ಈ ಹುಲಿ ಭಗವತಿಯರ ವಿಗ್ರಹವು ವ್ಯಾಘ್ರರೂಢವಾಗಿದ್ದು, ಕೋರೆಹಲ್ಲುಗಳೆರಡನ್ನು ಇಳಿಬಿಟ್ಟ ಮುಖಭಾಗವು ಭಯಾನಕವಾಗಿದ್ದು ಹುಲಿ ಸ್ವರೂಪದಲ್ಲೇ ಇರುತ್ತದೆ. ಚೀರುಂಭ, ಪಾಡಾರಕುಳಂಗರ ಮತ್ತು ಪುದಿಯ ಭಗವತಿಯರು ಸಿಂಹವನ್ನು ತಮ್ಮ ವಾಹನವನ್ನಾಗಿ ಇರಿಸಿಕೊಂಡಿರುತ್ತಾರೆ. ಚೀರುಂಭ ಭಗವತಿಯು ಸಪ್ತಸಾಗರವನ್ನು ದಾಟಿ ಭೂಲೋಕಕ್ಕೆ ಬರುವ ವೇಳೆಗೆ ಸಮುದ್ರ ಮಧ್ಯೆ ಎದುರಾದ ‘ಶಂಖಪಾಲ’ ಎಂಬ ಸರ್ಪದೊಂದಿಗೆ ಕಾದಾಡಿ, ಮಣಿಸಿದ ಹಿನ್ನೆಲೆಯಿಂದ ಆಕೆಯ ವಿಗ್ರಹದ ಕಾಲಡಿಯಲ್ಲಿ ಸರ್ಪದ ಹೆಡೆಯ ರಚನೆಯಿರುತ್ತದೆ. ಇದೇ ಕಾರಣಕ್ಕೆ ಸರ್ಪದ ಚಿತ್ರವುಳ್ಳ ಮಂಡಲವನ್ನು ರಚಿಸಿ, ಭಗವತಿ ಪಾತ್ರಿಗಳು ಅದನ್ನು ತುಳಿದು ಅಳಿಸುವ ಸಂಪ್ರದಾಯವೂ ನಡೆಯುತ್ತದೆ. ಆಯುಧಗಳಲ್ಲೂ ನಾಗಚಿಹ್ನೆಗಳಿರುತ್ತವೆ.

ಆರ್ಯಕರ, ಯಕ್ಷಿ, ಪುಲ್ಲುರಾಳಿ ಭಗವತಿಯರ ಕ್ಷೇತ್ರಗಳು ಹೆಚ್ಚಾಗಿ ಕಾಡಿನಂತಹ ಪರಿಸರದ ಮಧ್ಯೆಯಿದ್ದು, ಇಲ್ಲಿ ವಿಶೇಷ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಹುಲಿಗಳು ಓಡಾಡಿಕೊಂಡಿರುತ್ತವೆ. ಸ್ಥಾನದ ಅಂಗಣದೊಳಗೆ ಹುಲಿಯ ಹೆಜ್ಜೆಗುರುತುಗಳಿರುತ್ತವೆ ಎಂಬ ನಂಬಿಕೆ ಇದೆ. ಕೆಲವು ಸ್ಥಾನಗಳಲ್ಲಿ ಒಂದು ಅಥವಾ ಎರಡು ಹುಲಿಗಳ ಮರದ ಬಂಡಿಗಳಿದ್ದು, ಅವುಗಳಿಗೂ ಪೂಜೆ ಸಲ್ಲುತ್ತದೆ. ಆ ಬಂಡಿಗಳನ್ನು ಏರಿ ಭಗವತಿಯರು ಸ್ಥಾನಕ್ಕೆ ಪ್ರದಕ್ಷಿಣೆ ಬರುವ ಕ್ರಮವೂ ಉತ್ಸವದಲ್ಲಿರುತ್ತದೆ. ಭಗವತಿಯರ ಅಲಂಕರಣ, ವೇಷಭೂಷಣಗಳೂ ಅಷ್ಟೆ. ಮೈಯೆಲ್ಲ ಹತ್ತಿಯ ರೋಮ, ಕೈಯುಗುರು, ಬಣ್ಣದ ಪಟ್ಟೆಗಳು, ಚುಕ್ಕಿಗಳು, ಹಳದಿಯ ವರ್ಣ, ಮೀಸೆ-ದಾಡಿಗಳೆಲ್ಲವೂ ಹೆಬ್ಬುಲಿಯ ಸ್ವರೂಪವನ್ನೇ ತೋರಿಸುತ್ತದೆ.

ಭಗವತಿಯರ ಸಹದೈವಗಳಲ್ಲಿ ಹಂದಿ ಮುಖ, ಸಿಂಹ ಮುಖಗಳಿರುವ ದೈವಗಳೂ ಇವೆ. ಪ್ರಾಣಿ ಸಂಕೇತಗಳು ವಿಜಯದ ಚಿಹ್ನೆಯಾಗಿಯೂ ಕ್ರೌರ್ಯದ ಪ್ರತೀಕಗಳಾಗಿಯೂ ಅಮಾನುಷತೆಯ ರೂಪವಾಗಿಯೂ ಪ್ರಕಟಗೊಳ್ಳುತ್ತವೆ.

ಸಮಾರೋಪ:
“ಧರ್ಮಸ್ಥಿರಗೊಳ್ಳುವ ವೇಳೆ ಅನಿವಾರ್ಯವಾದ ಹಲವು ಕಾರಣಗಳಿಂದ ಒಂದು ಜಾನಪದವನ್ನು ನಿರಾಕರಿಸುವಾಗ ಅದು ನೆರವೇರಿಸುವ ಧರ್ಮವನ್ನು ಕೈಗೂಡಿಸಲು ಹೊಸ ಜಾನಪದ ರೂಪ ಪ್ರತ್ಯಕ್ಷವಾಗುತ್ತದೆ.” ಎಂಬ ಜಾನಪದ ತಜ್ಞರ ಮಾತಿನಂತೆ ವೈದಿಕತೆ ಮತ್ತು ಆಧುನಿಕತೆ ಮತ್ತು ಪ್ರಾಣಿ ಜಾನಪದದ ಸಂಬಂಧ ಹಾಗೂ ಸಂಘರ್ಷಗಳಲ್ಲಿ ಬದಲಾವಣೆಗಗಳು ನಡೆದಿವೆ. ಮೃಗಬಲಿ, ನರಬಲಿ ಬದಲಾಗಿ ಕುರಿನೀರು(ಕೆನ್ನೀರು) ಕಲಸಿಡುವುದು, ಎಳೆಗುಂಬಳ ಕಡಿದು ಸುಣ್ಣ, ಅರಶಿನ ಪುಡಿ ಸವರುವುದು ಮುಂತಾದ ಪರ್ಯಾಯ ವ್ಯವಸ್ಥೆಗಳು ಬಂದಿವೆ. ‘ಅಸುರಕ್ರಿಯೆ’ಯ ಸಂಪ್ರದಾಯಗಳು ‘ದೇವಕ್ರಿಯೆ’ಯ ವಿಧಿಗಳಾಗಿವೆ. ಬೇಟೆಗಾಗಿ ಕಾಡಿಗೆ ಹೊರಡುವ ಉತ್ಸವ ಭಾಗಗಳು ಬೇಟೆಯನ್ನು ಆಂಗಿಕವಾಗಿ ಅಭಿನಯಿಸಿ ತೋರಿಸುವುದಕಷ್ಟೇ ಸೀಮಿತವಾಗಿದೆ.
ಕಾಡಿನಿಂದ ಮನುಷ್ಯ ನಾಡಿಗೆ ಬದಲಾದ ದಾರಿಯಲ್ಲೇ ಭಾಗಶಃ ಅವನು ಹಿಂಸೆಯಿಂದ ಅಹಿಂಸೆಯ ಕಡೆಗೂ ಬದಲಾದುದನ್ನು ಗುರುತಿಸಬಹುದು. ‘ಪಾಣಿಬಲಿ’ಯ ಬದಲಾಗಿ ಸಾತ್ವಿಕ ಪರ್ಯಾಯ ವ್ಯವಸ್ಥೆಗಳು ಒಡಮೂಡುತ್ತಿರುವುದು ಸ್ವಾಗತಾರ್ಹವಾದರೂ ಸಾಂಸ್ಕೃತಿಕ ಮನೋಧರ್ಮದ ದಿಕ್ಕನ್ನು ಇದು ನಿಧಾನವಾಗಿ ಬದಲಾಯಿಸುವ ಅವಕಾಶಗಳನ್ನೂ ಸೃಷ್ಟಿಸುತ್ತದೆ. ಪ್ರಾಣಿಬಲಿಗೆ ಬದಲಾಗಿ ಅರ್ಪಿಸುವಾಗ ಶ್ರೇಣೀಕೃತ ಸಮಾಜ ವ್ಯವಸ್ಥೆಯ ಆಲೋಚನೆಗಳು ಕೆಲಸಮಾಡಿರುವುದನ್ನು ನೋಡಬಹುದು. ಒಟ್ಟಿನಲ್ಲಿ ಪ್ರಾಣಿ ಜಾನಪದ ಪರಿಕಲ್ಪನೆಯು ಜನಪದರು ಮತ್ತು ಪ್ರಾಣಿಗಳ ಸಂಬಂಧವನ್ನು ಮೇಲ್ಪದರದಲ್ಲಿ ನೋಡದೆ ಜನಪದ ಆರಾಧನಾ ಸಂಸ್ಕೃತಿಯ ಆಳಕ್ಕಿಳಿದು ನೋಡಲು ಸಹಾಯವಾಗುವ ಒಂದು ಪರಿಕಲ್ಪನೆ ಎನ್ನಬಹುದು.

ಪರಾಮರ್ಶನ ಸಾಹಿತ್ಯ:
ಚಿನ್ನಪ್ಪ ಗೌಡ ಕೆ.(ಡಾ.), 1990
ಭೂತಾರಾಧನೆ: ಜಾನಪದೀಯ ಅಧ್ಯಯನ, ಮದಿಪು ಪ್ರಕಾಶನ, ಮಂಗಳಗಂಗೋತ್ರಿ
ಕೇಳುಮಾಸ್ತರ್, ಅಗಲ್ಪಾಡಿ, 2013
ಕೇರಳದ ತೆಯ್ಯಂ, ಕೈರಳಿ ಪ್ರಕಾಶನ, ಕುಡಾಲು, ಮೇರ್ಕಳ
ರಾಘವನ್ ಪಯ್ಯನಾಡ್ (ಡಾ.)(ಸಂ.), 2014
ಕೇರಳ ಜಾನಪದ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ.

ಅಮೃತ ಸೋಮೇಶ್ವರ, 2007,
ತುಳುವ ಜಾನಪದ: ಕೆಲವು ನೋಟಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ನರೇಂದ್ರ ರೈ ದೇರ್ಲ, 2007,
ಬೇಟೆ, ಕನಸು ಪ್ರಕಾಶನ, ಮಾಡಾವು ಅಂಚೆ, ಪುತ್ತೂರು.
ಅಶೋಕ ಆಳ್ವ ಕೆ. (ಡಾ.)(ಲೇ.) 1995,
‘ಸಿರಿ’-ಅಮೃತ ಸೋಮೇಶ್ವರ ಅಭಿನಂದನ ಸಂಪುಟ, ಕಲಾಗಂಗೋತ್ರಿ ಸೋಮೇಶ್ವರ.

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಭಾರತಮಾತೆಯ ಮಡಿಲು ಮತ್ತು ಪರಶುರಾಮ ಮೆಟ್ಟಿದ ನಾಡಿಗೆ ಬೆಂಕಿ ಹಚ್ಚಲು ತಯಾರಾದ ಬಿಜೆಪಿ ನಾಯಕರು!

ಮುಂದಿನ ಸುದ್ದಿ »

ಗೋರಕ್ಷಕ ಕಣ್ಣಿನ ಸರಕಾರಗಳು ಮತ್ತು ಥಿಯೋಡರ್ ಶಾಲಿನ್ 

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×