Friday October 14 2016

Follow on us:

Contact Us

ಕೇರಳದ ಬೀರಬಲ್ ಕುಂಞಾಯಿನ್ ಮುಸ್ಲಿಯಾರ್

ಮುಆದ್ ಜಿ.ಎಂ.

ಮುಆದ್ ಜಿ.ಎಂ.

ಬಾಲ್ಯಜೀವನವು ಎಂದಿಗೂ ಮರೆಯಲಾಗದ ಅನಿರ್ವಚನೀಯ ಅನುಭವ. ಈ ಅನುಭವವನ್ನು ಅರ್ಥಪೂರ್ಣಗೊಳಿಸುವಲ್ಲಿ ಹಲವು ವ್ಯಕ್ತಿಗಳು ಅಥವಾ ಹಲವು ಘಟನೆಗಳು ಮಹತ್ವದ ಪಾತ್ರ ವಹಿಸುತ್ತದೆ. ಇಂದಿನ ಯುಗದ ಮಕ್ಕಳಂತೆ ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್ ಗಳಿಲ್ಲದೇ, ಮನೋರಂಜನೆಗಾಗಿ ತರಹೇವಾರಿ ಹೊರಾಂಗಣ ಆಟಗಳು, ಗೋಲಿ, ಜಿಬಿಲಿ, ಕಲ್ಲಿನಾಟ, ಕಣ್ಣಾಮುಚ್ಚಾಲೆ, ಕಳ್ಳಪೊಲೀಸ್ ಮುಂತಾದ ಆಟಗಳನ್ನು ಆಡುವ ಕಾಲವೊಂದಿತ್ತು. ಇದೂ ಸಾಕಾಗದಿದ್ದರೆ ಅಜ್ಜಿ, ಅಮ್ಮ ಹೇಳುವ ಕಥೆಗಳು ಕಣ್ಣಿಗೆ ಕಟ್ಟುವಂತಿತ್ತು. ಸಾಧಾರಣವಾಗಿ ಸಾಂಪ್ರದಾಯಿಕ ಮುಸ್ಲಿಮ್ ಕುಟುಂಬಗಳ ಅಜ್ಜಿಯಂದಿರು, ತಾಯಂದಿರು ಹೇಳುವ ಕಥೆಗಳಲ್ಲಿ ಹೆಚ್ಚಾಗಿ ಕುಂಞಾಯಿನ್ ಮುಸ್ಲಿಯಾರರ ಕಥೆಗಳು ಪ್ರಸ್ತಾಪವಾಗುತ್ತಿತ್ತು.

ಆ ಕಾಲದಲ್ಲೇ ನಾವೆಲ್ಲರೂ ಆ ವ್ಯಕ್ತಿಯ ಅಭಿಮಾನಿಗಳಾಗಿಬಿಟ್ಟಿದ್ದೆವು. ತೆನಾಲಿರಾಮ, ಬೀರಬಲ್ ಸಾಲಿಗೆ ನಮ್ಮ ಕುಂಞಾಯಿನ್ ಮುಸ್ಲಿಯಾರ್ ಯಾವತ್ತೋ ಸ್ಥಾನ ಪಡೆದಿದ್ದರು. ಕಾಲ ಕಳೆದಂತೇ ನಾವು ತಂತ್ರಜ್ಞಾನದ ಕಡೆಗೆ ಹೊರಳಿದಂತೆಯೇ ಅಜ್ಜಿ ಹೇಳಿದ ಕಥೆಗಳು ಮಾಸಿ ಹೋದವು. ಅದರೊಂದಿಗೆ ಕುಂಞಾಯಿನ್ ಮುಸ್ಲಿಯಾರ್ ಕೂಡಾ. ದೇಶದೆಲ್ಲಡೆ ಕೋಮುದ್ವೇಷಗಳು ವ್ಯಾಪಿಸಿರುವಂತಹ ಈ ಸಂದರ್ಭದಲ್ಲಿ ಏನೋ ಆಲೋಚಿಸುತ್ತಿರುವಾಗ ಒಮ್ಮೆಲೆ ಕಂಞಾಯಿನ್ ಮುಸ್ಲಿಯಾರ್ ಕಾಡತೊಡಗಿದರು. ಅವರ ಕುರಿತು ಅಧ್ಯಯನ ಮಾಡತೊಡಗಿದಾಗ ಹೆಚ್ಚಿನ ಮಾಹಿತಿಯೇನೂ ದೊರಕದಿದ್ದರೂ ಕೆಲವೊಂದು ಕುತೂಹಲಕರ ಮಾಹಿತಿಗಳು ದೊರಕಿತು. ಅವರ ಎಲ್ಲಾ ಕಥೆಗಳಲ್ಲೂ ಅವರ ಆತ್ಮೀಯ ಸ್ನೇಹಿತ ಮಾಂಗಟ್ಟಚ್ಚನ್ ಎಂಬ ವ್ಯಕ್ತಿಯ ಪಾತ್ರವೊಂದು ಬರುತ್ತಿತ್ತು. ಕೇರಳದಲ್ಲಿ ಅಸ್ಪೃಶ್ಯತೆಯು ಉತ್ತುಂಗದಲ್ಲಿದ್ದ ಸಮಯದಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಹೋಗಿ ಒಟ್ಟಿಗೆ ಕುಳಿತು ಊಟ ಮಾಡುವಂತಹ ಸನ್ನಿವೇಶವೂ ಅವರ ಕಥೆಗಳಲ್ಲಿ ಕಾಣಸಿಗುತ್ತದೆ. ಆ ಕಾಲದಲ್ಲೇ ಧರ್ಮ ಸಮನ್ವಯತೆಯನ್ನು ಪ್ರತಿಪಾದಿಸಿದ ವ್ಯಕ್ತಿಯಾಗಿದ್ದರು ಕಂಞಾಯಿನ್ ಮುಸ್ಲಿಯಾರ್.

ಕೇರಳದ ಪೊನ್ನಾನಿಯ ಇತಿಹಾಸ ಪ್ರಸಿದ್ಧ ಮಸೀದಿಯಲ್ಲಿ ಧಾರ್ಮಿಕ ವಿದ್ಯೆಯನ್ನು ಕಲಿತ ಇವರು ಕೇರಳದ ಅಗ್ರಗಣ್ಯ ಪಂಡಿತ ಫತ್ಹುಲ್ ಮುಈನ್ ಎಂಬ ಇಸ್ಲಾಮಿಕ್ ಪುಸ್ತಕ ಬರೆದಿದ್ದರು. ಝೈನುದ್ದೀನ್ ಮಕ್ದೂಂರವರ ಶಿಷ್ಯರಾಗಿದ್ದರು ಎನ್ನಲಾಗುತ್ತಿದೆ. ಕಂಞಾಯಿನ್ ಮುಸ್ಲಿಯಾರ್ ಎಲ್ಲದರಲ್ಲೂ ಮೇಲುಗೈ. ಯಾರಿಗೂ ಅವರನ್ನು ಮಾತಿನಲ್ಲಿ ಸೋಲಿಸಲು ಸಾಧ್ಯವಿರಲಿಲ್ಲ. ಅವರ ಗುರುಗಳು ಕೂಡಾ ಅವರನ್ನು ಸೋಲಿಸಲು ಪ್ರಯತ್ನಿಸಿ ವಿಫಲರಾಗಿದ್ದರು.

ಒಂದು ಬಾರಿ ಕುಂಞಾಯಿನ್ ಮುಸ್ಲಿಯಾರ್ ಗೈರು ಹಾಜರಾಗಿದ್ದ ಸಂದರ್ಭ ಅವರ ಸಹಪಾಠಿಗಳು ಮತ್ತು ಗುರುಗಳು ಸೇರಿ ಇವರನ್ನು ಸೋಲಿಸಬೇಕೆಂಬ ನಿರ್ಧಾರದಿಂದ, ಎಲ್ಲರೂ ನಾಳೆಯ ತರಗತಿಗೆ ಒಂದೊಂದು ಕೋಳಿ ಮೊಟ್ಟೆಯನ್ನು ತರಬೇಕು. ನಾನು ಕೇಳಿದಾಗ ಎಲ್ಲರೂ ಮೊಟ್ಟೆ ತಂದು ಮೇಜಿನ ಮೇಲಿಡಿ. ಈ ಸಂದರ್ಭ ಕಕ್ಕಾಬಿಕ್ಕಿಯಾದ ಕುಂಞಾಯಿನ್ ಸೋತು ಹೋಗುತ್ತಾನೆ ಎಂದು ಗುರುಗಳು ಹೇಳಿದರು. ಅದರಂತೆಯೇ ಮರುದಿನ ಎಲ್ಲಾ ವಿದ್ಯಾರ್ಥಿಗಳೂ ಮೊಟ್ಟೆಯೊಂದಿಗೆ ಹಾಜರಾದರು. ಅವರೊಂದಿಗೆ ಕುಂಞಾಯಿನ್ ಮುಸ್ಲಿಯಾರ್ ಕೂಡಾ. ಮೊದಲೇ ಹೇಳಿದಂತೆ ಎಲ್ಲರೂ ಒಂದೊಂದು ಮೊಟ್ಟೆಯನ್ನು ತಂದು ಉಸ್ತಾದರ ಮೇಜಿನ ಮೇಲೆ ಇಟ್ಟು ಹೋದರು. ಮುಸ್ಲಿಯಾರರಿಗೆ ಒಂದೂ ತಿಳಿಯುತ್ತಿಲ್ಲ. ಎಲ್ಲರೂ ಅವರನ್ನೇ ನೋಡಿ ನಗುತ್ತಿದ್ದಾರೆ. ಕೆಲವರ ಓರೆ ನಗುವಿನ ಮರ್ಮ ಅರಿತ ಕುಂಞಾಯಿನ್ ಮುಸ್ಲಿಯಾರ್ ನಿಂತಲ್ಲಿಂದಲೇ ಮೇಲಕ್ಕೆ ಹಾರಿ ತನ್ನ ಕೈಗಳೆರಡನ್ನು ಹುಂಜ ರೆಕ್ಕೆ ಬಡಿದಂತೆ ಬಡಿದು… ಉಸ್ತಾದರೇ.. ಇವರೆಲ್ಲ ಹೇಂಟೆಗಳು(ಹೆಣ್ಣು ಕೋಳಿ) ನಾನು ಮಾತ್ರ ಹುಂಜ. ಆದ್ದರಿಂದ ನನಗೆ ಮೊಟ್ಟೆ ಇಡಲು ಸಾಧ್ಯವಿಲ್ಲ ಎಂದಾಗ ಉಸ್ತಾದರೂ ಸೇರಿದಂತೆ ವಿದ್ಯಾರ್ಥಿಗಳೆಲ್ಲಾ ಅವಾಕ್ಕು.

ಮದ್ರಸದಲ್ಲಿ ವಿದ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ಊಟಕ್ಕೆಂದು ಒಂದು ಮನೆಯನ್ನು ಗೊತ್ತುಪಡಿಸಲಾಗುತ್ತದೆ. ಅಂತೆಯೇ ಕುಂಞಾಯಿನ್ ಮುಸ್ಲಿಯಾರರ ಊಟಕ್ಕೂ ಒಂದು ಮನೆಯನ್ನು ಗೊತ್ತುಪಡಿಸಲಾಗಿತ್ತು. ಒಂದು ದಿನ ಊಟದ ಮನೆಯವರು ಇವರನ್ನು ಸೋಲಿಸಬೇಕೆಂದುಕೊಂಡು ಮನೆಯಲ್ಲಿದ್ದ ಪತಿಪತ್ನಿಯರಿಬ್ಬರೂ ಮೊದಲೇ ಯೋಜನೆ ಹಾಕಿಕೊಂಡರು. ನಾನು ಹೊಡೆದಂತೆ ಮಾಡುತ್ತೇನೆ ನೀನು ಅತ್ತಂತೆ ಮಾಡು. ಇದನ್ನು ನೋಡಿದ ಮುಸ್ಲಿಯಾರ್ ಊಟ ಇಲ್ಲವೆಂದು ತಿಳಿದು ಹೋಗುತ್ತಾರೆ. ನಾಳೆ ನಾವು ಅವರನ್ನು ಗೋಳು ಹೊಯ್ದುಕೊಳ್ಳಬಹುದು ಎಂದು ಉಪಾಯ ಹೂಡುತ್ತಾರೆ. ಅಂತೆಯೇ ಇವರು ಊಟಕ್ಕೆ ಬಂದಾಗ ಮನೆಯೊಳಗಿಂದ ಹೊಡೆಯುವ ಶಬ್ಧವೂ ಅಳುವ ಶಬ್ದವೂ ಕೇಳತೊಡಗಿತು. ಯಾವತ್ತೂ ಇಲ್ಲದ್ದು ಇವತ್ತೇಕೆ ಎಂದು ಮನದಲ್ಲೇ ಅನುಮಾನದಿಂದ ಮುಸ್ಲಿಯಾರ್ ಆತನ ಮನೆಯ ಹಿಂಬದಿಯ ಮರವೇರಿ ಕುಳಿತರು. ಕುಂಞಾಯಿನ್ ಹೋದರೆಂದುಕೊಂಡು ಪತಿಯು ಜೋರಾಗಿ ನಗುತ್ತಾ ನಾನು ಹೊಡೆದದ್ದು ಹೇಗಿತ್ತು? ಅಂತ ಕೇಳಿದ, ಪತ್ನಿಯು ನಾನು ಅತ್ತದ್ದು ಹೇಗಿತ್ತು ಅಂತ ಕೇಳಿದಳು. ಇದನ್ನು ಕೇಳಿ ಕುಂಞಾಯಿನ್ ಮುಸ್ಲಿಯಾರ್ ಮರದಿಂದಿಳಿದು ಬಂದು, ನಾನು ಮರಕ್ಕೆ ಹತ್ತಿ ಕೇಳಿದ್ದು ಹೇಗಿತ್ತು? ಅಂತ ಕೇಳಿ ಅಡ್ಡಬಿದ್ದು ನಕ್ಕರು. ವಿಧಿಯಿಲ್ಲದೇ ಸೋತುಸುಣ್ಣವಾದ ಗಂಡಹೆಂಡತಿ ಇಬ್ಬರೂ ಪೆಚ್ಚುಮೋರೆ ಹಾಕಿಕೊಂಡು ಊಟ ಬಡಿಸಿದರು.

ಈ ಕಥೆಗಳು ಸ್ಯಾಂಪಲ್ ಮಾತ್ರ. ಹೇಳ ಹೊರಟರೆ ಒಂದು ಪುಸ್ತಕವೇ ಬರೆಯಬಹುದು. ತಮ್ಮ ಹಾಸ್ಯಪ್ರಜ್ಞೆಯೊಂದಿಗೆ ಧಾರ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದ ಇವರು ಪ್ರವಾದಿ ಮುಹಮ್ಮದ್ (ಸ.ಅ)ರ ಕುರಿತಾದಂತೆ ಹಲವು ಕೀರ್ತನೆಗಳನ್ನು ಬರೆದಿದ್ದಾರೆ. ಅಲ್ಲದೇ ಇವರು ಬರೆದ ಕಪ್ಪಲ್ ಕದ ಎಂಬ ಕವನ ಸಂಕಲನವು ಹಲವು ಯೂರೋಪಿಯನ್ ಭಾಷೆಗಳಿಗೂ ಭಾಷಾಂತರವಾಗಿದೆ. ಕರಾವಳಿಯ ಮೇರು ವ್ಯಕ್ತಿತ್ವ ರಾಮಪ್ಪ ಪೂಜಾರಿ (ರಾಂಪ)ಯವರಂತೆ ಇವರ ಮೇಲೂ ಹಲವು ಕಟ್ಟುಕಥೆಗಳನ್ನು ಬರೆದು ತೇಜೋವಧೆ ಮಾಡಿದ್ದು, ಕೊನೆಗೆ ಇವರ ಮರಣದ ಸಂದರ್ಭವನ್ನೂ ಜನರು ಹಾಸ್ಯಕ್ಕಾಗಿ ಬಳಸಿದ್ದು ವಿಷಾದನೀಯ. ಮನೆಯಲ್ಲಿ ಇನ್ನೂ ಅಜ್ಜಿಯಂದಿರು ಬಾಕಿ ಉಳಿದಿದ್ದರೆ ಇವರ ಕಥೆಗಳನ್ನು ಕೇಳಿ ತಿಳಿದುಕೊಂಡು ನಿಮ್ಮ ಮಕ್ಕಳಿಗೂ ಹೇಳಿಕೊಡಿ. ಅಶ್ಲೀಲತೆ ಮತ್ತು ಕ್ರೌರ್ಯತೆ ತುಂಬಿದ ವಿಡಿಯೋ ಗೇಮ್, ಕಥೆಗಳ ಮಧ್ಯೆ ಇವರ ಕಥೆಗಳು ನಿಜಕ್ಕೂ ಆಶಾದಾಯಕವೆನಿಸಬಹುದು.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದೊಡ್ಡವರ ಸಣ್ಣತನದ ಕೂಸು ಕಿರೋಬೋ ಮಿನಿ

ಮುಂದಿನ ಸುದ್ದಿ »

ಮುಸ್ಲಿಮರನ್ನೇ ಪ್ರಣಾಳಿಕೆಯಾಗಿ ಮಾಡಿಕೊಂಡಿರುವವರ ಬಗ್ಗೆ… 

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×