Wednesday October 5 2016

Follow on us:

Contact Us

ಠಾಣೆ ಸೇರಿದ ಗಾಂಧಿಯನ್ನು ನೋಡಿ ನಕ್ಕ ಗೋಡ್ಸೆ 

ಎ.ಕೆ.ಕುಕ್ಕಿಲ

ಎ.ಕೆ.ಕುಕ್ಕಿಲ

ಗಾಂಧೀಜಿಯವರ ಭಾರತ ಸದ್ಯ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಕಳೆದ ಅಕ್ಟೋಬರ್ 2 ಸಾಕ್ಷಿಯಾಯಿತು. ಉತ್ತರ ಪ್ರದೇಶದ 98 ವರ್ಷದ ಹಿರಿಯ ಗಾಂಧಿವಾದಿ ಚಮನ್‍ ಲಾಲ್ ಜೈನ್ ಎಂಬವರು ಗಾಂಧಿ ಜಯಂತಿ ದಿನವಾದ  ಅಕ್ಟೋಬರ್ 2 ರಂದು ಯಮುನಾ ನದಿಗೆ ಹಾರಿ ಪ್ರಾಣ ಕಳಕೊಳ್ಳಲು ಮುಂದಾದರು. ಉತ್ತರ ಪ್ರದೇಶವನ್ನು ಮದ್ಯಮುಕ್ತಗೊಳಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಪ್ರೇರೇಪಣೆಯಾಗಿ ಅವರ ಜೊತೆ ಗಾಂಧೀಜಿ ಇದ್ದರು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ್ದೇ ಆದ ಮೀರತ್‍ ನಲ್ಲಿ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಹಿಂದೂ ಮಹಾಸಭಾ ಅನಾವರಣಗೊಳಿಸಿತು. ಗಾಂಧಿ ಜಯಂತಿಯನ್ನು ಅದು `ಧಿಕ್ಕಾರ ದಿನ’ವಾಗಿ ಆಚರಿಸಿತು. ಗಾಂಧೀಜಿಯವರ ಹತ್ಯೆ ನಡೆದ ಜನವರಿ 30ನ್ನು ಅದು ಸಂಭ್ರಮದ ದಿನವಾಗಿಯೂ ಆಚರಿಸುತ್ತಿದೆ. ಆ ದಿನ ಸಿಹಿ ಹಂಚಿ ಸಂತೋಷಪಡುತ್ತದೆ. ವಿಶೇಷ ಏನೆಂದರೆ, ಗಾಂಧೀಜಿಯವರ ತತ್ವವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪ್ರಾಣ ತೆರಲು ಸಿದ್ಧವಾದ ವಯೋವೃದ್ಧ ಗಾಂಧಿವಾದಿಯನ್ನು ಪೊಲೀಸರು ಇತ್ತ ಠಾಣೆಗೆ ಒಯ್ಯುವಾಗ ಅತ್ತ ಮೀರತ್‍ ನಲ್ಲಿ ಗೋಡ್ಸೆ ನಗುತ್ತಿದ್ದ. ಗೋಡ್ಸೆ ಪ್ರತಿಮೆ ಅನಾವರಣವನ್ನು ತಡೆಯಲು ಪೊಲೀಸರಿಂದ ಸಾಧ್ಯವಾಗಲಿಲ್ಲ. ಇದು ಹೇಗೆಂದರೆ, ಗಾಂಧಿವಾದಿಯನ್ನು ಠಾಣೆಯಲ್ಲಿ ಕೂರಿಸಿ ಗೋಡ್ಸೆಯನ್ನು ಸಾರ್ವಜನಿಕವಾಗಿ ಗೌರವಿಸಿದಂತೆ.

ನಿಜವಾಗಿ, ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವೆಂದರೆ ಗಾಂಧಿ ಮತ್ತು ಗೋಡ್ಸೆ ನಡುವಿನ ಇತಿಹಾಸ. ಗಾಂಧಿತತ್ವ ಮತ್ತು ಗೋಡ್ಸೆ ತತ್ವಗಳು ಈ ಏಳು ದಶಕಗಳ ಉದ್ದಕ್ಕೂ ಮುಖಮುಖಿಯಾಗುತ್ತಲೇ ಬಂದಿವೆ. ಸ್ವಾತಂತ್ರ್ಯ ಪೂರ್ವದಲ್ಲೇ ಗಾಂಧಿ ಅಂದರೆ ಒಂದು ಪ್ರಖರ ತತ್ವ-ಸಿದ್ಧಾಂತದ ಪರ್ಯಾಯ ಹೆಸರಾಗಿತ್ತು. ಅವರ ತತ್ವ ಚಿಂತನೆಯೊಳಗೆ ಎಲ್ಲ ಭಾರತೀಯರೂ ಸೇರಿದ್ದರು. ಧರ್ಮ-ಚರ್ಮ-ಜಾತಿ-ಭಾಷೆಗಳ ಹಂಗಿಲ್ಲದೇ ಎಲ್ಲರನ್ನೂ ಒಪ್ಪಿಕೊಳ್ಳುವ ವಿಶಾಲ ವಿಚಾರಧಾರೆಯನ್ನು ಅವರು ಪ್ರತಿನಿಧಿಸಿದ್ದರು. ಆದ್ದರಿಂದಲೇ ಅವರ ಜೊತೆ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದ ಯಾವ ನಾಯಕರೂ ಗಾಂಧಿಯವರ ಈ ವಿಚಾರಧಾರೆಯ ಔಚಿತ್ಯವನ್ನು ಪ್ರಶ್ನಿಸಿರಲಿಲ್ಲ. ಅವರ ನಡುವಿನ ವೈಚಾರಿಕ ಸಂಘರ್ಷಕ್ಕೂ ಈ ತತ್ವಕ್ಕೂ ಯಾವ ಪಾತ್ರವೂ ಇರಲಿಲ್ಲ. ಇವರಿಗೆ ಹೋಲಿಸಿದರೆ ನಾಥೂರಾಮ್ ಮತ್ತು ಆತ ಪ್ರತಿನಿಧಿಸುವ ವಿಚಾರಧಾರೆಯು ಸಂಪೂರ್ಣ ಭಿನ್ನವಾಗಿತ್ತು. ಆತನ ದೃಷ್ಟಿಯಲ್ಲಿ `ವೈವಿಧ್ಯತೆ’ಯಲ್ಲಿ ಏಕತೆ ಎಂಬುದೇ ಅತಿ ದೊಡ್ಡ ವೈರಿಯಾಗಿತ್ತು. ಏಕ ಧರ್ಮ, ಏಕ ಸಂಸ್ಕ್ರತಿ, ಏಕ ಭಾಷೆ, ಏಕ ವಿಚಾರಧಾರೆ… ಹೀಗೆ ಅನೇಕತೆಯನ್ನು ಪೂರ್ಣವಾಗಿ ತಿರಸ್ಕರಿಸುವ ತತ್ವ ಸಿದ್ಧಾಂತದ ಪ್ರಬಲ ಪ್ರತಿಪಾದನೆ ಆತನದ್ದಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಾಗಲಿ, ಸ್ವಾತಂತ್ರ್ಯಾ ನಂತರದ ಆರಂಭದ ಕಾಲದಲ್ಲಾಗಲಿ ಈ ತತ್ವ ಚಿಂತನೆಯ ಮೇಲೆ ಸಮಾಜ ಎಷ್ಟಂಶ ವಿರೋಧವನ್ನು ವ್ಯಕ್ತಪಡಿಸಿತ್ತೆಂದರೆ, ಆತನ ಪ್ರತಿಮೆ ಅನಾವರಣ ಬಿಡಿ, ನಾಥೂರಾಂ ಗೋಡ್ಸೆ ಎಂಬ ಹೆಸರನ್ನೇ ಅಸಹ್ಯಪಡುವಷ್ಟು. ಯಾವ ಹೆತ್ತವರೂ ತಮ್ಮ ಮಕ್ಕಳಿಗೆ ನಾಥೂರಾಂ ಎಂದು ನಾಮಕರಣ ಮಾಡಲಿಲ್ಲ. ನಾಥೂರಾಂ ಎಂಬ ಹೆಸರಲ್ಲಿ ಬರುವ `ಥೂ’ವನ್ನು ಈ ದೇಶದ ಬಹುಸಂಖ್ಯಾತ ಮಂದಿ ಆತನ ಮೇಲೆ ಪ್ರಯೋಗಿಸುವಷ್ಟರ ಮಟ್ಟಿಗೆ ಆತ ಛೀಮಾರಿಗೆ ಒಳಗಾದ. ಆದರೆ ಇವತ್ತು ಗೋಡ್ಸೆ ಮೀರತ್‍ ನ ಬೀದಿಯಲ್ಲಿ ನಗುತ್ತಿದ್ದಾನೆ. ಹಿಂದೂ ಮಹಾಸಭಾವು ಆತನನ್ನು ಬಹಿಂರಗವಾಗಿಯೇ ಕೊಂಡಾಡುತ್ತಿದೆ. ನಟಿ ರಮ್ಯರಲ್ಲಿ, ಕನ್ನಯ್ಯ, ಸಾಯಿಬಾಬ ಮತ್ತಿತರರಲ್ಲಿ ದೇಶದ್ರೋಹವನ್ನು ಕಂಡವರೆಲ್ಲ ಹಿಂದೂ ಮಹಾಸಭಾದ ಈ ಖುಷಿಯಲ್ಲಿ ಯಾವ ದೇಶದ್ರೋಹವನ್ನೂ ಕಾಣುತ್ತಿಲ್ಲ.

ನಿಜವಾಗಿ, ಪ್ರತಿಮೆಯಾದ ಗೋಡ್ಸೆ ಮತ್ತು ಠಾಣೆ ಪಾಲಾದ ಚಮನ್ ಲಾಲ್ ಜೈನ್- ಪ್ರಸಕ್ತ ಭಾರತವನ್ನು ವ್ಯಾಖ್ಯಾನಿಸುವ ಎರಡು ರೂಪಕಗಳಾಗಿದ್ದಾರೆ. ಗಾಂಧಿ ನಿಧಾನಕ್ಕೆ ನಾಲಾಯಕ್ಕುಗೊಳ್ಳುತ್ತಿದ್ದಾರೆ. ಗಾಂಧಿವಾದವನ್ನು ಗೇಲಿ ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಅಹಿಂಸೆಯನ್ನು ಪ್ರತಿಪಾದಿಸಿದ ಬೌದ್ಧಮತವನ್ನು ದೇಶದಿಂದಲೇ ಓಡಿಸುವ ಪ್ರಯತ್ನ ಈ ಹಿಂದೆ ನಡೆದಂತೆಯೇ, ಗಾಂಧೀಜಿಯ ಅಹಿಂಸೆಯ ತತ್ವ ಚಿಂತನೆಯನ್ನು ದೇಶದಿಂದಲೇ ಗಡಿಪಾರುಗೊಳಿಸುವ ಮಾತು-ಕೃತಿಗಳು ಮುಕ್ತವಾಗಿಯೇ ನಡೆಯುತ್ತಿವೆ. ಬುದ್ಧನನ್ನು ಅತಿಯಾಗಿ ಪ್ರೀತಿಸಿದ್ದು ಅಂಬೇಡ್ಕರ್. ಅದಕ್ಕೆ ಪ್ರಮುಖ ಕಾರಣ-ಬುದ್ದಿಸಂ ಎಂಬುದು ಸಮಾನತೆಯ ಮತ್ತು ಅಹಿಂಸೆಯ ಧರ್ಮ ಎಂದಾಗಿತ್ತು. ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ಹಿಂಸೆಯಿಂದ ಅವರು ಅಪಾರವಾಗಿ ನೊಂದಿದ್ದರು. ಹಾಗೆಯೇ ಗಾಂಧೀಜಿಯರೂ ಹಿಂಸೆಯ ಕಟು ವಿರೋಧಿಯಾಗಿದ್ದರು. ಅಂಬೇಡ್ಕರ್ ಮತ್ತು ಗಾಂಧಿಯವರ ನಡುವೆ ದಲಿತ್ ಸಬಲೀಕರಣದ ವಿಷಯದಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇದ್ದಿದ್ದರೂ ದಲಿತ ದೌರ್ಜನ್ಯ, ಹಿಂಸೆ, ಅವಮಾನಗಳನ್ನು ಖಂಡಿಸುವಲ್ಲಿ ಅವರಿಬ್ಬರ ನಿಲುವೂ ಒಂದೇ ಆಗಿತ್ತು. ಅವರಿಬ್ಬರೂ ಹಿಂಸಾತ್ಮಕ ಭಾರತದ ವೈರಿಯಾಗಿದ್ದರು. ಅಂಬೇಡ್ಕರ್ ಅಂತೂ ಹಿಂಸೆಯನ್ನು ಎಷ್ಟಂಶ ವಿರೋಧಿಸಿದರೆಂದರೆ, ಅಹಿಂಸೆಯನ್ನು ಅತಿಯಾಗಿ ಸಾರುವ ಬೌದ್ಧಮತವನ್ನೇ ತನ್ನ ನಂಬಿಕೆಯಾಗಿ ಪರಿವರ್ತಿಸಿಕೊಂಡರು. ಅದೇ ಭಾರತ ಇವತ್ತು ಅವರಿಬ್ಬರ ಚಿಂತನೆಯಿಂದ ಬಹುದೂರ ಸರಿಯುತ್ತಿದೆ. ಎಷ್ಟರವರೆಗೆಂದರೆ, ಹಿಂಸೆಯ ಪ್ರತೀಕವಾದ ಗೋಡ್ಸೆಯನ್ನೇ ಗೌರವಿಸುವಷ್ಟು.

ಅಕ್ಟೋಬರ್ 2 ರಂದು ಎರಡು ಪ್ರತ್ಯೇಕ ಕಾರಣಗಳಿಗಾಗಿ ಸುದ್ದಿಯಾದ ಚಮನ್ ಲಾನ್ ಜೈನ್ ಮತ್ತು ಗೋಡ್ಸೆಯು ಈ ಸುದ್ದಿಯ ಆಚೆಗೆ ನಮ್ಮಲ್ಲಿ ಚರ್ಚೆಗೆ ಒಳಗಾಗಲೇ ಬೇಕಾದವರಾಗಿದ್ದಾರೆ. ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೇ ಗಾಂಧಿ ಮತ್ತು ಗೋಡ್ಸೆ ವೈಚಾರಿಕ ಸಂಘರ್ಷವನ್ನು ಆರಂಭಿಸಿದ್ದಾರೆ. ಗೋಡ್ಸೆಯದ್ದು ಭಿನ್ನ ವಿಚಾರವನ್ನು ಬಲವಂತದಿಂದ ಹತ್ಯೆ ಮಾಡುವ ಆತಂಕಕಾರಿ ನಿಲುವಾದರೆ ಗಾಂಧಿಯದ್ದು ಎಲ್ಲ ವಿಚಾರಧಾರೆಯನ್ನೂ ಪ್ರೀತಿಸುವ ಮನುಷ್ಯ ಪ್ರೇಮಿ ನಿಲುವು. ಹಾಗಂತ, ಸ್ವಾತಂತ್ರ್ಯಾ ನಂತರದ ಈ 7 ದಶಕಗಳಲ್ಲಿ ಈ ಎರಡು ನಿಲುವುಗಳ ಪ್ರಭಾವವೇನು? ಗಾಂಧಿಯನ್ನು ನಿಧಾನಕ್ಕೆ ಗೋಡ್ಸೆ ಆಹುತಿ ಪಡೆಯುತ್ತಿದ್ದಾನೆಯೇ? ಭಾರತೀಯರನ್ನು ವಿವಿಧ ಧರ್ಮ, ಜಾತಿಗಳಾಗಿ ವಿಂಗಡಿಸುವ ಮತ್ತು ಬೆನ್ನಟ್ಟಿ ಹೊಡೆಯುವ ಘಟನೆಗಳು ಹೇಳುತ್ತಿರುವುದೇನನ್ನು? ಈಗಿನ ಭಾರತದಲ್ಲಿ ದೇಶಪ್ರೇಮದ ವ್ಯಾಖ್ಯಾನ ಬದಲಾಗಿದೆ. ಧರ್ಮ, ಆಹಾರ, ಆಚಾರ, ಆರಾಧನೆ, ಉಡುಪು, ಸಂಸ್ಕೃತಿ… ಎಲ್ಲದರ ಬಗ್ಗೆಯೂ ಗಾಂಧಿ ರಹಿತ ಮಾತುಗಳಿಗೆ ಮಾನ್ಯತೆ ದಕ್ಕುತ್ತಿವೆ. ದೇಶಪ್ರೇಮವನ್ನು ವಿವರಿಸುವುದಕ್ಕೂ, ಸಂಸ್ಕ್ರತಿಯನ್ನು ವಿಶ್ಲೇಷಿಸುವುದಕ್ಕೂ ಗೋಡ್ಸೆಯನ್ನೇ ಆಧಾರವಾಗಿ ಇಟ್ಟುಕೊಳ್ಳಲಾಗುತ್ತಿದೆ. ಒಪ್ಪದವರನ್ನು ಗೋಡ್ಸೆ ಶೈಲಿಯಲ್ಲೇ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಹಿಂಸೆಯನ್ನು ಪ್ರಬಲವಾಗಿ ವಿರೋಧಿಸಿದ ಗಾಂಧಿ ಭಾರತವು ಸದ್ಯ ಸಾಗುತ್ತಿರುವ ಹಾದಿ ಇದು. ಅಹಿಂಸೆ ಮತ್ತು ಹಿಂಸೆಯ 7 ದಶಕಗಳ ಈ ಮುಖಾಮುಖಿಯಲ್ಲಿ ಚಮನ್ ಲಾಲ್ ಜೈನ್ ನಿಧಾನಕ್ಕೆ ಸೋಲುತ್ತಿರುವಂತೆ ಅನಿಸುತ್ತಿದೆ. ಗೋಡ್ಸೆ ನಗುತ್ತಿರುವಂತೆ ತೋರುತ್ತಿದೆ. ಮೀರತ್‍ ನಲ್ಲಿ ತಲೆಎತ್ತಿ ನಿಂತ ಗೋಡ್ಸೆಯ ಪ್ರತಿಮೆಯ ಉದ್ದ ಮತ್ತು ಅಗಲ ಕೇವಲ ಎರಡು ಅಡಿಯಷ್ಟೇ ಆಗಿರಬಹುದು. ಆದರೆ ಗಾಂಧಿಯ ಭಾರತದಲ್ಲಿ ಗೋಡ್ಸೆಗೆ ಇಷ್ಟುದ್ದ ಬೆಳೆಯಲು ಸಾಧ್ಯವಾಯಿತೆಂಬುದೇ ಆತಂಕಕಾರಿ. ಭಾರತದ ಭವಿಷ್ಯದ ದೃಷ್ಟಿಯಿಂದ ಈ ಉದ್ದ ಮತ್ತು ಅಗಲ ಇನ್ನಷ್ಟು ಅಪಾಯಕಾರಿ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನವರಾತ್ರಿ ಹಬ್ಬಕ್ಕೆ ಹುಲಿವೇಷದ ಮೆರುಗು; ಕುಂದಾಪುರದ ಯುವಕ ಮಂಡಲದಿಂದ ಹದಿನಾರು ವರ್ಷಗಳಿಂದ ಹುಲಿವೇಷ

ಮುಂದಿನ ಸುದ್ದಿ »

ಈಶ್ವರಪ್ಪನವರ ‘ಹಿಂದ’ದ ಹಿಂದಿರುವ ಶಕ್ತಿಗಳು

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×