Thursday January 5 2017

Follow on us:

Contact Us

67 ಸಾವಿರ ಕೋಟಿ ರೂಪಾಯಿ ವ್ಯವಹಾರದ ಬಳಿಕವೂ ನಾವೇಕೆ ಒಂಟಿ?

ಎ.ಕೆ.ಕುಕ್ಕಿಲ

ಎ.ಕೆ.ಕುಕ್ಕಿಲ

ಬಡವರನ್ನು ಅಣಕಿಸುವ ದಿನವನ್ನಾಗಿ ಡಿ.31ನ್ನು ಪ್ರಧಾನಿ ನರೇಂದ್ರ ಮೋದಿಯವರು ಪರಿವರ್ತಿಸಿದುದಕ್ಕಿಂತ ಎರಡ್ಮೂರು ದಿನಗಳ ಮೊದಲು ಮೋದಿಯವರ ಸಾಮರ್ಥ್ಯವನ್ನು ಪ್ರಶ್ನಿಸುವ ಬೆಳವಣಿಗೆಗಳು ರಶ್ಯಾದಲ್ಲಿ ನಡೆದುವು. ಭಾರತಕ್ಕೆ ಮತ್ತು ಭಾರತೀಯರ ಪಾಲಿಗೆ ಈ ಎರಡೂ ಬಹಳ ಮುಖ್ಯವಾದುವು. ಡಿ.31, ಈವರೆಗೆ ಜಗತ್ತಿನ ಎಲ್ಲೂ ಅಣಕದ ದಿನವಾಗಿ ಆಚರಣೆಗೆ ಒಳಗಾಗಿಲ್ಲ. ಹೊಸ ವರ್ಷಕ್ಕೆ ಸ್ವಾಗತ ಕೋರುವ ದಿನವನ್ನಾಗಿ ಡಿ.31ನ್ನು ಆಚರಿಸುವವರಲ್ಲೂ ನಿರೀಕ್ಷೆ, ಶುಭಾಕಾಂಕ್ಷೆ ಮತ್ತು ಸಂತಸವಿರುತ್ತದೆಯೇ ಹೊರತು ಅಣಕವಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ಈ ಪರಂಪರೆಯನ್ನು ಮುರಿದಿದ್ದಾರೆ. ಡಿ.31ನ್ನು ಅಣಕದ ದಿನವನ್ನಾಗಿ ಅವರು ಘೋಷಿಸಿದ್ದಾರೆ.

‘ನನಗೆ 50 ದಿನಗಳನ್ನು ಕೊಡಿ’ ಎಂದು ನೋಟು ಅಮಾನ್ಯದ ಬಳಿಕ ನರೇಂದ್ರ ಮೋದಿಯವರು ಭಾರತೀಯರಲ್ಲಿ ವಿನಂತಿಸಿದ್ದರು. ಯಾವುದೇ ನೇತಾರ ಮಾಡಬಹುದಾದ ಅಪರೂಪದ ವಿನಂತಿ ಇದು. 85% ಜನರು ಅವಲಂಬಿಸಿರುವ ನಗದು ವ್ಯವಹಾರವನ್ನು ದಿಢೀರನೇ ರದ್ದುಗೊಳಿಸುವುದು, ಬ್ಯಾಂಕ್‍ ನೆದುರು ದಿನಗಟ್ಟಲೆ ಸರತಿ ಸಾಲಲ್ಲಿ ನಿಲ್ಲಿಸುವುದು ಹಾಗೂ ಈ ಸ್ಥಿತಿ 50 ದಿನಗಳವರೆಗೆ ಇರುತ್ತದೆ ಎಂದು ಹೇಳುವುದೇ ಒಂದು ರೀತಿಯಲ್ಲಿ ಅಸೌಜನ್ಯ ಮತ್ತು ಜನವಿರೋಧಿ. ಆದರೆ, ಜನರು ಅದನ್ನು ಅತ್ಯಂತ ಸಕಾರಾತ್ಮಕವಾಗಿ ಸ್ವೀಕರಿಸಿದರು. ಬಳಿಕ ಇದೇ ನೋಟು ರದ್ಧತಿ ನೀತಿಯನ್ನು ವೆನಿಝುವೇಲಾದಲ್ಲಿ ಮಡುರೋ ಅವರ ಕಮ್ಯುನಿಸ್ಟ್ ಸರಕಾರ ಜಾರಿಗೆ ತಂದಾಗ ಜನರು ದಂಗೆ ಎದ್ದು ಬ್ಯಾಂಕ್ ಲೂಟಿ ಮಾಡಿದುದನ್ನು ಮತ್ತು ನೋಟು ರದ್ಧತಿಯನ್ನೇ ಸರಕಾರ ರದ್ದು ಮಾಡಬೇಕಾಗಿ ಬಂದುದನ್ನು ಪರಿಗಣಿಸುವಾಗ ಭಾರತೀಯರು ತೋರಿದ ಸಹಕಾರ ನೀತಿಯ ಬೆಲೆ ಏನು ಎಂಬುದು ಸ್ಪಷ್ಟವಾಗುತ್ತದೆ.

ನೋಟು ಅಮಾನ್ಯದಿಂದ ತೊಂದರೆಗೊಳಗಾಗಿ 100ಕ್ಕಿಂತ ಅಧಿಕ ಮಂದಿ ಸಾವಿಗೀಡಾದರೂ ಭಾರತೀಯರು ದಂಗೆ ಏಳಲಿಲ್ಲ. ಬ್ಯಾಂಕ್ ಲೂಟಿಗೂ ಇಳಿಯಲಿಲ್ಲ. ‘ದೇಶದ ಹಿತಕ್ಕಾಗಿ ಅಳಿಲು ಸೇವೆ’ ಎಂಬ ಭಾವದಲ್ಲಿ ಅವರೆಲ್ಲ ಸಹಿಸಿಕೊಂಡರು. ಆದ್ದರಿಂದಲೇ ಡಿ.31ನ್ನು ಭಾರತೀಯರು ಅಪಾರ ನಿರೀಕ್ಷೆಯಿಂದ ಕಾದರು. ತಾವು ತಮ್ಮದೇ ಹಣವನ್ನು ಪಡೆಕೊಳ್ಳುವುದಕ್ಕಾಗಿ ಬಿಸಿಲಲ್ಲಿ ದಿನಗಟ್ಟಲೆ ಕಳೆದ ಸಮಯದ ಫಲಿತಾಂಶವನ್ನು ಡಿ. 31ರಂದು ಪ್ರಧಾನಿಯವರು ಪ್ರಕಟಿಸುತ್ತಾರೆ ಎಂಬ ತೀರಾ ತೀರಾ ಜುಜುಬಿ ಆಸೆಯಷ್ಟೇ ಅವರದಾಗಿತ್ತು. ಹಣ ಅವರದ್ದು, ಸಮಯ ಅವರದ್ದು, ಆರೋಗ್ಯವೂ ಅವರದ್ದೇ. ಜನಸಾಮಾನ್ಯರಿಂದ ಈ ಎಲ್ಲವನ್ನೂ 50 ದಿನಗಳ ವರೆಗೆ ಕಿತ್ತುಕೊಂಡ ಪ್ರಧಾನಿಯವರಿಗೆ, ಅದರಿಂದ ದೇಶಕ್ಕೆ ಮತ್ತು ಆ ಮೂಲಕ ಜನಸಾಮಾನ್ಯರಿಗೆ ಆಗಿರುವ ಲಾಭ ಏನು ಎಂಬುದನ್ನು ಹೇಳಬೇಕಾದ ಜವಾಬ್ದಾರಿ ಖಂಡಿತ ಇದೆ. ನರೇಂದ್ರ ಮೋದಿಯವರು ಡಿ. 31ರಂದು ಭಾಷಣವನ್ನೇನೋ ಮಾಡಿದರು. ಆದರೆ ಆ ಭಾಷಣವು 50 ದಿನಗಳನ್ನು ಕೊಟ್ಟ ಜನಸಾಮಾನ್ಯರನ್ನು ಅಣಕಿಸುವ ರೀತಿಯಲ್ಲಿತ್ತು. ಅವರು ತಮ್ಮ ಭಾಷಣದಲ್ಲಿ ನೋಟು ಅಮಾನ್ಯತೆಗೆ ಸಂಬಂಧಿಸಿದಂತೆ ಬಹುಮುಖ್ಯ ಭಾಗವನ್ನು ಸ್ಪರ್ಶಿಸಲೇ ಇಲ್ಲ. ಬ್ಯಾಂಕ್‍ ಗಳಲ್ಲಿ ಜಮೆ ಆಗಿರುವ ಹಣ ಎಷ್ಟು, ಕಪ್ಪು ಹಣ ಎಷ್ಟು, ಹೊಸದಾಗಿ ಎಷ್ಟು ನೋಟುಗಳನ್ನು ಮುದ್ರಿಸಲಾಗಿದೆ, ಜನಸಾಮಾನ್ಯರಿಗೆ ಲಭ್ಯವಾದ ದೀರ್ಘಾವಧಿ ಲಾಭ ಏನು ಮತ್ತು ಆ ಕುರಿತಾದ ಅಂಕಿ-ಅಂಶಗಳೇನು.. ಮುಂತಾದ ಜನಸಾಮಾನ್ಯರ ಕುತೂಹಲಗಳಿಗೆ ಮೋದಿಯವರು ಸ್ಪಂದಿಸಲೇ ಇಲ್ಲ. ಅದರ ಬದಲು ಅವರು ಕೆಲವು ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದರು. 50 ದಿನಗಳ ವರೆಗೆ ದೇಶಕ್ಕಾಗಿ ಸಾಕಷ್ಟನ್ನು ಕಳಕೊಂಡ ಜನಸಾಮಾನ್ಯರನ್ನು ನಡೆಸಿಕೊಳ್ಳುವ ವಿಧಾನವೇ ಇದು? ಜನತಂತ್ರ ವ್ಯವಸ್ಥೆಯಲ್ಲಿ ಪ್ರಭುವಿನ ಸ್ಥಾನದಲ್ಲಿರುವ ಜನಸಾಮಾನ್ಯರನ್ನು ನೇತಾರನೊಬ್ಬ ಗುಲಾಮರಂತೆ ನಡೆಸಿಕೊಂಡುದುದಕ್ಕೆ ಉದಾಹರಣೆಯಲ್ಲವೇ ಇದು?

ನಿಜವಾಗಿ, ನೋಟು ಅಮಾನ್ಯತೆಯ ಘೋರ ವೈಫಲ್ಯವನ್ನು ಸೂಚಿಸುವ ಬೆಳವಣಿಗೆ ಇದು. ಪ್ರಧಾನಿಯವರಿಗೆ ನೋಟು ಅಮಾನ್ಯತೆಯಿಂದಾಗುವ ದೀರ್ಘಾವಧಿ ಲಾಭದ ಬಗ್ಗೆ ಖಚಿತತೆ ಇಲ್ಲ ಅಥವಾ ಅದರ ವೈಫಲ್ಯದ ಮುನ್ಸೂಚನೆ ಅವರಿಗೆ ಸಿಕ್ಕಿದೆ. ಆದ್ದರಿಂದಲೇ ಅವರು ಮಾತು ಹೊರಳಿಸಿದ್ದಾರೆ. ನೋಟು ಅಮಾನ್ಯತೆ ಚರ್ಚೆಗೊಳಗಾಗದಂತೆ ನೋಡಿಕೊಳ್ಳಲು ಯತ್ನಿಸಿದ್ದಾರೆ. ಈ ಗೊಂದಲದಲ್ಲಿ ಅವರಿಗಾಗಿ ಜೀವತೆತ್ತ 100ಕ್ಕಿಂತಲೂ ಅಧಿಕ ಜನಸಾಮಾನ್ಯರಿಗೆ ಕನಿಷ್ಠ ಶ್ರದ್ಧಾಂಜಲಿ ಸಲ್ಲಿಸುವುದಕ್ಕೂ ಅವರು ಮರೆತು ಬಿಟ್ಟಿದ್ದಾರೆ. ಅಂದಹಾಗೆ, ಈ ವೈಫಲ್ಯಕ್ಕಿಂತ ಎರಡ್ಮೂರು ದಿನಗಳ ಮೊದಲೇ ರಷ್ಯಾದ ಮಾಸ್ಕೋದಲ್ಲಿ ನಡೆದ ಸಭೆಯೊಂದು ಮೋದಿಯವರನ್ನು ಅಸಮರ್ಥ ಎಂದು ಪರೋಕ್ಷವಾಗಿ ಸಾರಿತ್ತು.

ಚೀನಾ, ಪಾಕಿಸ್ತಾನ ಮತ್ತು ರಷ್ಯಾಗಳು ಜೊತೆ ಸೇರಿಕೊಂಡು ಮಾಸ್ಕೋದಲ್ಲಿ ಕಳೆದ ವಾರ ಸಭೆ ನಡೆಸಿದುವು. ತಾಲಿಬಾನನ್ನು ಮುಖ್ಯವಾಹಿನಿಗೆ ತರುವುದು, ಅಫಘಾನ್ ಆಡಳಿತದಲ್ಲಿ ತಾಲಿಬಾನ್‍ ಗೆ ಸ್ಥಾನ ಕಲ್ಪಿಸುವುದು ಮತ್ತು ಅದಕ್ಕೆ ಶಸ್ತ್ರಾಸ್ತ್ರ ಕೊಟ್ಟು ಐಸಿಸ್‍ ನ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸುವುದು.. ಇವು ಸಭೆಯ ಒಟ್ಟು ಉದ್ದೇಶವಾಗಿತ್ತು. ಇರಾನ್ ಕೂಡ ಅದನ್ನು ಬೆಂಬಲಿಸಿತು. ಒಂದು ರೀತಿಯಲ್ಲಿ, ಈ ಸಭೆಯು ಭಾರತದ ಹಿತಾಸಕ್ತಿಗೆ ವಿರುದ್ಧ. ಪಾಕ್ ಮತ್ತು ಚೀನಾಗಳು ಅಫಘಾನ್‍ ನಲ್ಲಿ ಪ್ರಾಬಲ್ಯ ಪಡೆಯುವುದೆಂದರೆ ಮತ್ತು ತಾಲಿಬಾನ್‍ ಗೆ ಮರುಜೀವ ಕೊಡುವುದೆಂದರೆ ಅಫಘಾನ್‍ ನಿಂದ ಭಾರತವನ್ನು ಹೊರದಬ್ಬುವುದು ಎಂದೇ ಅರ್ಥ. ಅಫಘಾನ್‍ ನ ನಿರ್ಮಾಣ ಕಾಮಗಾರಿಯಲ್ಲಿ ಭಾರತ ತೊಡಗಿಸಿಕೊಂಡಿದೆ. ಸಾಕಷ್ಟು ಹೂಡಿಕೆಯನ್ನೂ ಮಾಡಿದೆ. ಅಲ್ಲದೇ ತಾಲಿಬಾನ್ ಅನ್ನು ಮೋದಿ ಸರಕಾರವು ಭಾರತದ ವೈರಿಯೆಂದೇ ಪರಿಗಣಿಸಿದೆ. ರಷ್ಯಾದೊಂದಿಗೆ 67 ಸಾವಿರ ಕೋಟಿ ರೂಪಾಯಿಯ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಭಾರತವು ಇತ್ತೀಚೆಗಷ್ಟೇ ಸಹಿ ಹಾಕಿದ ಬಳಿಕವೂ ಭಾರತ ವಿರೋಧಿ ಸಭೆಗೆ ರಷ್ಯಾ ನೇತೃತ್ವ ನೀಡುವುದೆಂದರೆ ಏನರ್ಥ? ನರೇಂದ್ರ ಮೋದಿಯವರು ತನ್ನ ಅಧಿಕಾರದ ಈ ಎರಡೂವರೆ ವರ್ಷಗಳಲ್ಲಿ ಸುತ್ತದ ದೇಶಗಳಿಲ್ಲ. ತನ್ನ ಈ ವಿದೇಶಿ ಭೇಟಿಯನ್ನೆಲ್ಲ ಅವರು ಸಹಕಾರ ವೃದ್ಧಿಯ ಹೆಸರಲ್ಲಿ ಸಮರ್ಥಿಸಿಕೊಂಡಿದ್ದರು. ಅವರ ಬೆಂಬಲಿಗರು ಜಗತ್ತೇ ಭಾರತದ ಜೊತೆಗಿದೆ ಎಂಬುದಾಗಿ ಈ ಭೇಟಿಯನ್ನು ಉಲ್ಲೇಖಿಸಿ ವಾದಿಸಿದ್ದರು. ಪಾಕಿಸ್ತಾನ ಒಂಟಿಯಾಯಿತೆಂದು ಸಂಭ್ರಮಿಸಿದ್ದರು. ಆದರೆ, ಮೋದಿಯವರ ರಾಜತಾಂತ್ರಿಕ ನೀತಿ ಅಸಮರ್ಥವಾಗಿದೆ ಎಂಬುದನ್ನು ಮಾಸ್ಕೋ ಸಭೆ ಇದೀಗ ಸ್ಪಷ್ಟಪಡಿಸಿದೆ. 67 ಸಾವಿರ ಕೋಟಿ ರೂಪಾಯಿಯ ಶಸ್ತ್ರಾಸ್ತ್ರ ಖರೀದಿಸುವ ಒಪ್ಪಂದ ಮಾಡಿಕೊಂಡ ಬಳಿಕವೂ ಭಾರತದ ಹಿತಾಸಕ್ತಿಗೆ ರಷ್ಯಾ ವಿರುದ್ಧವಾಗಿ ನಿಂತಿದೆ. ರಷ್ಯಾದ ಅಧ್ಯಕ್ಷ ಪುತಿನ್‍ ರೊಂದಿಗೆ ಅಮೇರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್‍ ಗೆ ಆತ್ಮೀಯ ಬಾಂಧವ್ಯ ಇರುವುದರಿಂದಾಗಿ ಇನ್ನಷ್ಟು ಭಾರತ ಹಿತಾಸಕ್ತಿ ವಿರೋಧಿ ನೀತಿಗಳು ಭವಿಷ್ಯದಲ್ಲಿ ಜಾರಿಯಾಗುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಒಂದು ಕಡೆ, ಭಾರತವು ಕಪ್ಪು ಪಟ್ಟಿಯಲ್ಲಿ ಸೇರಿಸಿರುವ ಪಾಕಿಸ್ತಾನದ ಮಸ್ಹೂದ್ ಅಝರ್‍ ನ ಮೇಲೆ ವಿಶ್ವಸಂಸ್ಥೆಯಲ್ಲಿ ನಿಷೇಧ ವಿಧಿಸಲು ಮೋದಿಯವರಿಗೆ ಸಾಧ್ಯವಾಗಿಲ್ಲ. ಇನ್ನೊಂದು ಕಡೆ, ಎನ್‍ ಎಸ್‍ ಜಿಯಲ್ಲಿ ಸ್ಥಾನ ಪಡೆಯುವಲ್ಲೂ ಭಾರತ ವಿಫಲವಾಗುತ್ತಿದೆ. ಮತ್ತೊಂದೆಡೆ, ಭಾರತದ ಹಿತಾಸಕ್ತಿಗೆ ಧಕ್ಕೆಯಾಗಬಹುದೆಂದು ಹೇಳಲಾಗುವ ಬೆಳವಣಿಗೆಗಳು ನಡೆಯುತ್ತಿವೆ. ಇದು ಸೂಚಿಸುವುದೇನನ್ನು? ನರೇಂದ್ರ ಮೋದಿಯವರ ವಿದೇಶಿ ಭೇಟಿಗಳು ಯಶಸ್ವಿ ಆಗಿರುತ್ತಿದ್ದರೆ ಈ ಎಲ್ಲ ಬೆಳವಣಿಗೆಗಳು ನಡೆಯಲು ಸಾಧ್ಯವಿತ್ತೇ? ಸದ್ಯ, ಪಾಕಿಸ್ತಾನವು ರಷ್ಯಾ ಮತ್ತು ಅಮೇರಿಕ ಎರಡಕ್ಕೂ ಹತ್ತಿರವಾಗುತ್ತಿದೆ. ಆದರೆ, ಹೊಸ ರಾಜತಾಂತ್ರಿಕ ನೀತಿಯನ್ನು ಪರಿಚಯಿಸಿದ ಭಾರತವು ಎರಡರಿಂದಲೂ ದೂರವಾಗುತ್ತಿದೆ. ಪಾಕಿಸ್ತಾನವನ್ನು ಒಂಟಿ ಮಾಡುವುದಕ್ಕೆ ಹೊರಟ ನರೇಂದ್ರ ಮೋದಿಯವರು ಅಂತಿಮವಾಗಿ ಭಾರತವನ್ನೇ ಒಂಟಿ ಮಾಡುತ್ತಿದ್ದಾರೆಯೇ?

ಡಿ. 31ರಂದು ನರೇಂದ್ರ ಮೋದಿಯವರು ಮಾಡಿದ ಭಾಷಣ ಮತ್ತು ಅದಕ್ಕಿಂತ ಮೊದಲು ಮಾಸ್ಕೋದಲ್ಲಿ ನಡೆದ ಸಭೆ – ಎರಡರ ಸಂದೇಶವೂ ಒಂದೇ. ಭಾರತ ದುರ್ಬಲವಾಗುತ್ತಿದೆ. ಮೋದಿಯವರು ಅಸಮರ್ಥರಾಗುತ್ತಿದ್ದಾರೆ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವಿದ್ಯುತ್ ಹರಿಸುವ ಶಿಕ್ಷಕ ಯಾರನ್ನು ಪ್ರತಿನಿಧಿಸುತ್ತಾನೆ?

ಮುಂದಿನ ಸುದ್ದಿ »

ಚಿತ್ರಗಳು ಪತ್ರಗಳು…

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×