Thursday March 31 2016

Follow on us:

Contact Us

ದಲಿತ ರಾಜಕಾರಣ, ಜೆಪಿ ಮತ್ತು ಅಂಬೇಡ್ಕರ್

12919067_2160657074072592_386951356_n

-ನಟರಾಜು ವಿ

ದಲಿತ ರಾಜಕಾರಣ ಹಾಗೂ ಸಮಾಜವಾದಿ, ಎಡಪಂಥೀಯ ರಾಜಕಾರಣವನ್ನು ಪ್ರತ್ಯೇಕಿಸಿ ನೋಡುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಎಡಪಂಥೀಯ ಪಕ್ಷಗಳೇ ಆಗಲಿ, ಬಲಪಂಥೀಯ ಪಕ್ಷಗಳೇ ಆಗಲಿ ದಲಿತರಿಗೆ ನೈಜ ಅರ್ಥದಲ್ಲಿ ರಾಜಕೀಯ ಅಧಿಕಾರವನ್ನು ದಾಟಿಸುವಲ್ಲಿ ವಿಫಲವಾಗಿವೆ.

ಅದರಲ್ಲಿಯೂ ದಲಿತರನ್ನು ಕೇವಲ ಮತದ ಆಳುಗಳನ್ನಾಗಿ ಮಾತ್ರವೇ ದುಡಿಸಿಕೊಂಡು ಯಜಮಾನ್ಯತೆಯನ್ನು ತಮ್ಮಲ್ಲೇ ಇರಿಸಿಕೊಂಡಿರುವ ಎಡಪಂಥೀಯ ಹಾಗೂ ಸಮಾಜವಾದಿ ಪಕ್ಷಗಳದು ಹುಸಿ ರಾಜಕೀಯ ಆದರ್ಶ ಎನ್ನುವ ಆರೋಪ ಬೂದಿ ಮುಚ್ಚಿದ ಕೆಂಡದಂತೆ ಸದಾಕಾಲ ಇದ್ದೇ ಇದೆ. ಇದೇನೂ ಸತ್ಯಕ್ಕೆ ದೂರವಾದ ಆರೋಪವಲ್ಲ. ಹಾಗಾಗಿಯೇ ಕೆಲವೊಮ್ಮೆ ಈ ಬೂದಿ ಮುಚ್ಚಿದ ಕೆಂಡದಿಂದ ಧಿಗ್ಗನೆ ಜ್ವಾಲೆಗಳು ಮೂಡುವುದೂ ಉಂಟು.

ಹಾಗೆ ನೋಡಿದರೆ, ದಲಿತ ರಾಜಕಾರಣ ಕಳೆದ ಎರಡೂವರೆ ದಶಕಗಳಲ್ಲಿ ಮುನ್ನೆಲೆಗೆ ಬಂದು ಅಧಿಕಾರ ರಾಜಕಾರಣ ಮಾಡಲು ಸಾಧ್ಯವಾಗಿದ್ದೇ ಮೇಲಿನ ಅಭಿಪ್ರಾಯವನ್ನು ತನ್ನ ರಾಜಕೀಯ ನಡೆಯ ಕೇಂದ್ರದಲ್ಲಿ ಇರಿಸಿಕೊಂಡಿದ್ದರಿಂದ. ವಿಪರ್ಯಾಸವೆಂದರೆ ಧಾರ್ಮಿಕ ಮೂಲಭೂತವಾದವೆನ್ನುವುದು ರಾಜಕೀಯವಾಗಿ, ಸಾಮಾಜಿಕವಾಗಿ ಸಾವಕಾಶವಾಗಿ ಬಲಗೊಳ್ಳುತ್ತಿರುವ ಈ ದಿನಗಳಲ್ಲಿ ಮೇಲಿನ ಚರ್ಚೆಗಳು ರಚನಾತ್ಮಕವಾದ ಹಾದಿಯನ್ನು ತುಳಿಯದೆ ಸೈದ್ಧಾಂತಿಕ ವಿಭಜನೆಗೆ ಮಾತ್ರವೇ ಕಾರಣವಾಗುತ್ತಿವೆ. ಈ ವಿಷಯವನ್ನು ಮತ್ತಷ್ಟು ವಿಸ್ತರಿಸುವುದಕ್ಕೂ ಮುನ್ನ ಇತಿಹಾಸದತ್ತ ಒಮ್ಮೆ ಹೊರಳುವುದು ಉತ್ತಮ.

“ಪ್ರತಿಯೊಂದು ಧಾರ್ಮಿಕ ಸಮುದಾಯವೂ ಸಹ ತನ್ನದೇ ಆದ ಮತೀಯ ಟಿಸಿಲುಗಳನ್ನು ಹೊಂದಿರುತ್ತದೆ. ಆದರೆ ಇವುಗಳಲ್ಲಿ ಹಿಂದೂ ಮತೀಯವಾದವು (ಭಾರತದ ಮಟ್ಟಿಗೆ) ಹೆಚ್ಚು ಅಪಾಯಕಾರಿಯಾದುದು. ಏಕೆಂದರೆ, ಹಿಂದೂ ಮತೀಯವಾದವು ತನ್ನನ್ನು ತಾನು ಭಾರತೀಯ ರಾಷ್ಟ್ರೀಯವಾದವೆಂದು ಸುಲಭವಾಗಿ ಬಿಂಬಿಸಿಕೊಳ್ಳಬಹುದು. ಅಷ್ಟು ಮಾತ್ರವೇ ಅಲ್ಲ, ತನ್ನ ವಿರುದ್ಧದ ಎಲ್ಲ ಪ್ರತಿರೋಧಗಳಿಗೂ ‘ರಾಷ್ಟ್ರವಿರೋಧಿ’ ಎನ್ನುವ ಹಣೆಪಟ್ಟಿ ಕಟ್ಟಬಹುದು,” ಹೀಗೆಂದು ಹೇಳಿದ್ದವರು ‘ಸಂಪೂರ್ಣ ಕ್ರಾಂತಿ’ಗೆ ಕರೆ ಕೊಟ್ಟಿದ್ದ ಜಯಪ್ರಕಾಶ ನಾರಾಯಣರು.

1968ರಲ್ಲಿ ನಡೆದ ಕೋಮುವಾದದ ಕುರಿತಾದ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದರು. ಅದೇ ವೇದಿಕೆಯಲ್ಲಿ ಅವರು ಮುಂದುವರೆದು, “ಆರ್ ಎಸ್ ಎಸ್ ನಂಥ ಕೆಲವು ಸಂಘಟನೆಗಳು ಬಹಿರಂಗವಾಗಿಯೇ ಭಾರತ ದೇಶವನ್ನು ಹಿಂದೂ ರಾಷ್ಟ್ರದ ಕಲ್ಪನೆಯೊಟ್ಟಿಗೆ ಸಮೀಕರಿಸುತ್ತವೆ, ಮತ್ತು ಕೆಲವು ಸಂಘಟನೆಗಳು ಇದೇ ಕೆಲಸವನ್ನು ಹೆಚ್ಚು ಸೂಕ್ಷ್ಮವಾಗಿ ಮಾಡುತ್ತಿರಬಹುದು. ಅದೇನೇ ಆದರೂ, ಹೀಗೆ ಸಮೀಕರಿಸುವುದು ಅಂತಿಮವಾಗಿ ರಾಷ್ಟ್ರದ ವಿಘಟನೆಗೆ ಕಾರಣವಾಗುವಂಥದ್ದು, ಏಕೆಂದರೆ ದೇಶದ ವಿವಿಧ ಧರ್ಮದ ಜನತೆ ತಮ್ಮನ್ನು ಎರಡನೇ ದರ್ಜೆ ನಾಗರಿಕರಾಗಿ ಗುರುತಿಸಿಕೊಳ್ಳಲು ಎಂದಿಗೂ ಇಷ್ಟಪಡುವುದಿಲ್ಲ.
ಹಾಗಾಗಿಯೇ ಅಂಥ ಸನ್ನಿವೇಶ ನಿರ್ಮಾಣಕ್ಕೆ ತೊಡಗುವುದು ನಿರಂತರವಾದ ಸಾಮಾಜಿಕ ಸಂಘರ್ಷಕ್ಕೆ, ಆತ್ಯಂತಿಕ ಸಾಮಾಜಿಕ ಅಸ್ತವ್ಯಸ್ತತೆಗೆ ಕಾರಣವಾಗುತ್ತದೆ,” ಎಂದಿದ್ದರು.

ಈ ಮಾತುಗಳನ್ನು ನಾನು ಇಲ್ಲಿ ನೀಡಲು ಕಾರಣವಿದೆ. ಜೆಪಿಯವರು 1968ರಲ್ಲಿಯೇ ಆರ್ ಎಸ್ ಎಸ್ ಪ್ರಣೀತ ರಾಜಕೀಯ ಪಕ್ಷ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎನ್ನುವ ಬಗ್ಗೆ ಖಚಿತತೆ ಹೊಂದಿದ್ದರು. ಹಾಗಾಗಿಯೇ ಅವರು ಜನಸಂಘವು ಆರ್ ಎಸ್ ಎಸ್ ನೊಂದಿಗಿನ ನಂಟನ್ನು ಕತ್ತರಿಸಿಕೊಳ್ಳದೆ ಹೋದರೆ ಅದರ ಜಾತ್ಯತೀತ ನಿಲುವಿನ ಬಗ್ಗೆ ಗಂಭೀರವಾಗಲು ಸಾಧ್ಯವಿಲ್ಲ ಎಂದಿದ್ದರು. ಅಷ್ಟು ಮಾತ್ರವೇ ಅಲ್ಲ, ಜನಸಂಘದ ನಾಯಕರು ಆರ್ ಎಸ್ ಎಸ್ ನೊಂದಿಗಿನ ತಮ್ಮ ನಂಟನ್ನು ಕಡಿದುಕೊಂಡೇ ರಾಜಕಾರಣ ಮಾಡಬೇಕು ಎನ್ನುವ ವಿಚಾರದಲ್ಲಿ ಸ್ಪಷ್ಟತೆ ಹೊಂದಿದ್ದರು.

rss

ಮುಂದೆ ಜೆಪಿಯವರ ನೇತೃತ್ವದಲ್ಲಿ ಸಂಪೂರ್ಣ ಕ್ರಾಂತಿ ಚಳವಳಿ ಆರಂಭವಾದಾಗ ಜನಸಂಘದ ನಾಯಕರಿಂದ ಈ ಕುರಿತಾಗಿ ಜೆಪಿಯವರಿಗೆ ಭರವಸೆಯೂ ದೊರೆತಿತ್ತು. ಆದರೆ ಒಮ್ಮೆ ತುರ್ತುಪರಿಸ್ಥಿತಿಯ ನಂತರ ಜನತಾ ಪಕ್ಷ ಅಧಿಕಾರಕ್ಕೇರಿದ ಮೇಲೆ ಜನಸಂಘದ ನಾಯಕರು ತಾವು ನೀಡಿದ್ದ ಭರವಸೆಯಿಂದ ಹಿಂದೆಗೆಯಲು ಆರಂಭಿಸಿದರು. ಆಗ ಸಮಾಜವಾದಿ ನೇತಾರ ಮಧು ಲಿಮಯೆ ಈ ವಿಚಾರದಲ್ಲಿ ಗಟ್ಟಿಯಾಗಿ ದನಿ ಎತ್ತತೊಡಗಿದರು. ಇದರೊಟ್ಟಿಗೆ ಚರಣ್ ಸಿಂಗ್ ರನ್ನು ಪ್ರಧಾನಿಯಾಗಿಸಲು ‘ಶ್ರಮಿಸುತ್ತಿದ್ದ’ ರಾಮ್ ನಾರಾಯಣ್ ರ ಮಹತ್ವಾಕಾಂಕ್ಷೆಯೂ ಸೇರಿಕೊಂಡಿತು.

ಜನತಾ ಪಕ್ಷದಲ್ಲಿನ ಮಾಜಿ ಕಾಂಗ್ರೆಸ್ಸಿಗರು, ಸಮಾಜವಾದಿಗಳು ಸಹ ಜನಸಂಘದ ರಾಜಕಾರಣಿಗಳಿಗೆ ಆರ್ ಎಸ್ ಎಸ್ ನಿಂದ ಹೊರಬರುವಂತೆ ಒತ್ತಡ ಹೇರಿದರು. ಜನತಾ ಪಕ್ಷ ಅಥವಾ ಆರ್ ಎಸ್ ಎಸ್ ನ ರಾಜಕೀಯ ಅಂಗವಾದ ಜನಸಂಘ ಈ ಎರಡರಲ್ಲಿ ಯಾವುದಾದರೂ ಒಂದರ ಸದಸ್ಯತ್ವಕ್ಕೆ ಮಾತ್ರವೇ ಸೀಮಿತಗೊಳ್ಳುವಂತೆ ಒತ್ತಡ ಹೆಚ್ಚಿತು. ‘ದ್ವಿ ಸದಸ್ಯತ್ವ ವಿವಾದ’ ಎಂದೇ ಈ ವಿಚಾರ ರಾಜಕೀಯ ಇತಿಹಾಸದಲ್ಲಿ ದಾಖಲಾಗಿದೆ.

ಅಸಲಿಗೆ, ಸಮಾಜವಾದಿ ಹಿನ್ನೆಲೆಯ ಬಹುತೇಕ ನಾಯಕರಿಗೆ ಜನಸಂಘದ ನಾಯಕರು ಆರ್ ಎಸ್ ಎಸ್ ನಿಂದ ನಿಯಂತ್ರಿತರಾಗಿದ್ದಾರೆ ಎನ್ನುವ ಬಗ್ಗೆ ಯಾವುದೇ ಶಂಕೆ ಉಳಿದಿರಲಿಲ್ಲ. ಅದೇ ವೇಳೆ, ತಳಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನೇ ಹೊಂದಿರುವ ಜನಸಂಘ ಮುಂದಿನ ದಿನಗಳಲ್ಲಿ ತಮ್ಮನ್ನು ಸುಲಭವಾಗಿ ರಾಜಕೀಯ ಆಹುತಿ ತೆಗೆದುಕೊಳ್ಳಬಹುದು ಎನ್ನುವ ಭಯವೂ ಅವರಲ್ಲಿತ್ತು. ಇದರೊಟ್ಟಿಗೆ ಜನತಾ ಪಕ್ಷವು ಆರ್ ಎಸ್ ಎಸ್ ನಿಂದ ನಿಯಂತ್ರಿತವಾಗ ತೊಡಗಿದರೆ ತಮ್ಮ ಸಮಾಜವಾದಿ ತತ್ವಗಳಾಗಲಿ, ಅದರ ಅನುಸಾರ ರೂಪಿಸಿಕೊಂಡಿರುವ ಸೆಕ್ಯುಲರ್ ಮತಗಣಿತವಾಗಲಿ ಭಂಗವಾಗುವುದರ ಬಗ್ಗೆ ಅವರಿಗೆ ಸಂದೇಹ ಉಳಿಯಲಿಲ್ಲ.

ಕಡೆಗೆ ಈ ಹಗ್ಗಜಗ್ಗಾಟ ಅಡ್ವಾಣಿ, ವಾಜಪೇಯಿ ಸಹಿತ ಜನಸಂಘದ ಮಂದಿ ಆರ್ ಎಸ್ ಎಸ್ ಅನ್ನು ತೊರೆಯುವ ಮಾತೇ ಇಲ್ಲ ಎಂದು ಸರ್ಕಾರದಿಂದ ಹೊರನಡೆಯುವಲ್ಲಿಗೆ ಮುಟ್ಟಿತು. ಇದೇ ಬೆಳವಣಿಗೆ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಪ್ರಧಾನಿಯಾಗಲು ಕಾರಣವಾಯಿತು.ಜೆಪಿಯವರು ತಮ್ಮೆಲ್ಲ ರಾಜಕೀಯ ಸೂಕ್ಷ್ಮತೆ, ದೂರದರ್ಶಿತ್ವದ ನಡುವೆಯೂ ಎಡವಿದ್ದು ಸ್ಪಷ್ಟವಾಗಿತ್ತು. ಅವರಿಗೆ ನೀಡಲಾಗಿದ್ದ ಭರವಸೆಯನ್ನು ಜನಸಂಘದ ರಾಜಕೀಯ ನೇತಾರರು ಸುಲಭವಾಗಿ ಉಲ್ಲಂಘಿಸಿದ್ದರು.

ಜೆಪಿಯವರೇನೋ ಅಧಿಕಾರ ರಾಜಕಾರಣದಿಂದ ದೂರವೇ ಉಳಿದರು ಆದರೆ ಜನಸಂಘ ಪರೋಕ್ಷವಾಗಿ ರಾಜಕೀಯ ಅಧಿಕಾರವನ್ನು ಅನುಭವಿಸಲು ಕಾರಣರಾದರು. ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ರೂಪು ಕೊಡುವ ಭರದಲ್ಲಿ ಜನಸಂಘದೆಡೆಗೆ ಇದ್ದ ತಮ್ಮ ಗಟ್ಟಿ ಅನುಮಾನಗಳನ್ನು ತಾವೇ ಲಘುವಾಗಿ ಪರಿಗಣಿಸಿ ಬದಿಗೆ ಸರಿಸಿದ್ದು ಗಂಭೀರ ಲೋಪವಾಯಿತು. ಭಾರತದ ಪ್ರಜಾತಂತ್ರವನ್ನು ರಕ್ಷಿಸುವ ಭರದಲ್ಲಿ ತಮ್ಮ ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧವಿದ್ಧ ಜನಸಂಘಕ್ಕೆ ರಾಜಕೀಯ ಕಸುವನ್ನು ತುಂಬಿ ಈ ದೇಶದಲ್ಲಿ ಗಟ್ಟಿಯಾಗಿ ನೆಲೆನಿಲ್ಲಲು ಜೆಪಿಯವರು ಕಾರಣಕರ್ತರಾದಂತಾಯಿತು.

ಬಹುಶಃ ಇಂದು ಜೆಪಿಯವರು ತಮ್ಮ ರಾಜಕೀಯ ನಡೆಗಳನ್ನು ಪರಾಮರ್ಶಿಸಲು ಜೀವಂತವಾಗಿರುತ್ತಿದ್ದರೆ ಅವರು ಜನಸಂಘವನ್ನು ಬಗಲಿನಲ್ಲಿರಿಸಿಕೊಂಡು ಬೆಳೆಸಿದ ತಮ್ಮ ರಾಜಕೀಯ ನಿರ್ಧಾರದ ಬಗ್ಗೆ ಸ್ವತಃ ಕಟುವಾಗಿ ವಿಮರ್ಶಿಸಿಕೊಳ್ಳುತ್ತಿದ್ದರೇನೋ… ಮುಂದೆ ಎಂಬತ್ತರ ದಶಕದಲ್ಲಿ ಮತೀಯ ವಿಚಾರಧಾರೆಗಳನ್ನು ಹಬ್ಬಿಸುತ್ತ, ಕೋಮುವಾದಿ ಗಲಭೆಗಳಿಗೆ ಪ್ರಚೋದನೆ ನೀಡುತ್ತ ಹಿಂದೂ ಬಲಪಂಥೀಯ ಸಂಘಟನೆಗಳು ರಾಜಕೀಯ ಶಕ್ತಿ ಪಡೆಯಲು ಇದುವೇ ಕಾರಣವಾಯಿತು.

ಇಲ್ಲಿ ಇದನ್ನೆಲ್ಲ ವಿಸ್ತಾರವಾಗಿ ನೆನೆದಿರುವುದಕ್ಕೆ ಕಾರಣವಿದೆ. ಕಳೆದ ಎರಡೂವರೆ ದಶಕದ ಅವಧಿಯಲ್ಲಿ ದಲಿತ ರಾಜಕಾರಣ ಈ ದೇಶದಲ್ಲಿ ವ್ಯಾಪಕವೆನಿಸುವಷ್ಟು ಪ್ರಯೋಗಗಳನ್ನು ಮಾಡಿದೆ. ಬಿ ಎಸ್ ಪಿ ಈ ಪ್ರಯೋಗದ ಮುಂಚೂಣಿಯಲ್ಲಿದೆ. ದಲಿತರು ಹಾಗೂ ಮೇಲ್ವರ್ಗದ ಮತಗಳನ್ನು ಒಟ್ಟಿಗೆ ತರುವಂಥ ಪ್ರಯತ್ನಗಳಲ್ಲಿ ಅದು ಸಾಕಷ್ಟು ಯಶಸ್ವಿಯೂ ಆಗಿತ್ತು. ಬಿಜೆಪಿ ಜತೆ ಯಾವುದೇ ಮುಜುಗರವಿಲ್ಲದೆ ಹೆಜ್ಜೆ ಹಾಕಿತು. ಚುನಾವಣೆಗಳಲ್ಲಿ ಸತತವಾಗಿ ಮೇಲ್ವರ್ಗದ ಅದರಲ್ಲಿಯೂ ಬ್ರಾಹ್ಮಣ ಅಭ್ಯರ್ಥಿಗಳಿಗೆ ಬೇರಾವುದೇ ಪಕ್ಷಗಳೂ ನಾಚುವಷ್ಟು ಟಿಕೆಟ್ ಗಳನ್ನು ನೀಡುತ್ತ ಬಂದಿತು.

ದಲಿತರನ್ನು ಬಳಸಿಕೊಂಡು ಇತರೆ ಪಕ್ಷಗಳು ಅಧಿಕಾರ ರಾಜಕಾರಣ ಮಾಡಬಹುದಾದರೆ ಬ್ರಾಹ್ಮಣರೂ ಸೇರಿದಂತೆ ಮೇಲ್ವರ್ಗಗಳನ್ನು ಬಳಸಿಕೊಂಡು ದಲಿತರು ಏಕೆ ಅಧಿಕಾರ ರಾಜಕಾರಣ ಮಾಡಬಾರದು ಎನ್ನುವ ‘ತಂತ್ರಗಾರಿಕೆ’ಯ ರಾಜಕಾರಣದಲ್ಲಿ ಇನ್ನಿಲ್ಲದಂತೆ ವ್ಯಸ್ತವಾಯಿತು. ಸೈದ್ಧಾಂತಿಕವಾಗಿ ಮೇಲ್ವರ್ಗಗಳನ್ನು ಸೆಳೆಯುವುದಕ್ಕಿಂತ ಹೆಚ್ಚಾಗಿ ಅಧಿಕಾರದ ಆಮಿಷವನ್ನೊಡ್ಡಿ ಅವರನ್ನು ತಮ್ಮ ಪರವಾಗಿ ಸೆಳೆಯುವ ಪ್ರಯತ್ನವೇ ಇಲ್ಲಿ ವಿಜೃಂಭಿಸಿತು.

ಇಂಥ ಪ್ರಯತ್ನಗಳು ತಕ್ಷಣದಲ್ಲಿ ಒಂದಷ್ಟು ಕಾಲ ಅಧಿಕಾರ ರಾಜಕಾರಣ ನಡೆಸಲು ಒದಗಿಬರಬಹುದಾದರೂ ಅದನ್ನು ನೆಚ್ಚಿಕೊಳ್ಳುವಂತಿಲ್ಲ. ಹೂವಿಗೆ ಬರುವ ದುಂಬಿಗಳಂಥ ಮತಗಳಿವು! ಬಲು ಚಂಚಲ, ಇಂದು ಬಿ ಎಸ್ ಪಿ ತೋಟದಲ್ಲಿ ಈ ಮತಗಳು ಮಕರಂದ ಹೀರಿದರೆ ನಾಳೆ ಬಿಜೆಪಿ ಹೂದೋಟದಲ್ಲಿ ಗುಂಯ್ ಗುಡುತ್ತಿರುತ್ತವೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿ ಎಸ್ ಪಿ ಉತ್ತರ ಪ್ರದೇಶದಲ್ಲಿ ಶೂನ್ಯ ಸಾಧನೆ ಮಾಡಲು ಅದು ಇಂಥ ಚಂಚಲ ಮತಗಳನ್ನು ನಂಬಿಕೊಂಡು ಅಧಿಕಾರ ಕೇಂದ್ರಿತ ರಾಜಕಾರಣಕ್ಕೆ ಮಹತ್ವ ನೀಡಿ ಹೆಜ್ಜೆ ಇರಿಸುತ್ತ ಬಂದಿರುವುದೇ ಸಾಕ್ಷಿ. ಬಿಜೆಪಿ ಶೇ.42 ಮತಗಳಿಕೆಯೊಂದಿಗೆ 71 ಸ್ಥಾನಗಳನ್ನು ಗೆದ್ದರೆ, ಬಿ ಎಸ್ ಪಿ ಶೇ.19 ಮತಗಳೊಂದಿಗೆ ಒಂದೂ ಸ್ಥಾನವನ್ನು ಗೆಲ್ಲದೆ ಕುಸಿದು ಕೂತಿತು. ಆದರೆ, ಪಕ್ಷದ ಅಧಿನಾಯಕಿ ಮಾಯಾವತಿಯವರು ಮಾತ್ರ ತಮ್ಮ ಚುನಾವಣಾ ಸೋಲಿಗೆ ಕಾಂಗ್ರೆಸ್ ಪಕ್ಷದ ದುರ್ಬಲ ಆಡಳಿತವೇ ಕಾರಣವೆಂದು ಆರೋಪಿಸಿದರು! ಆನಂತರವಷ್ಟೇ ಬಿಜೆಪಿ ನಡೆಸಿದ ಮತೀಯ ರಾಜಕಾರಣದ ಕೊಡುಗೆಯೂ ಇದೆ ಎಂದು ಹೇಳಿದ್ದು.

ಹೊರಗೆ ಏನಾದರೂ ಹೇಳಿಕೊಳ್ಳಲಿ, ಬಿ ಎಸ್ ಪಿ ಗೆ ತಾನು ಈವರೆಗೆ ಅಧಿಕಾರ ರಾಜಕಾರಣ ನಡೆಸಲು ಎಂಥ ಮತಗಳ ಆಶ್ರಯ ಪಡೆದಿದ್ದೇನೆ ಎಂದು ಸ್ಪಷ್ಟವಾಗಿ ಗೊತ್ತಾಗಿದೆ. ಕೇವಲ ‘ತಂತ್ರಗಾರಿಕೆಯ’ ರಾಜಕಾರಣ ಹೆಚ್ಚು ದಿನ ನಿಲ್ಲದು ಎನ್ನುವುದು ಅರಿವಿಗೆ ಬಂದಿದೆ. ಆದರೆ ಅದನ್ನು ಬಹಿರಂಗವಾಗಿ ಒಪ್ಪಲು ಅದು ಸಿದ್ಧವಿಲ್ಲ.

ದಲಿತ ರಾಜಕಾರಣಕ್ಕೆ ಇಂದು ಬೇಕಿರುವುದು ಸೈದ್ಧಾಂತಿಕ ಸ್ಪಷ್ಟತೆ ಹಾಗೂ ಅಧಿಕಾರ ರಾಜಕಾರಣದ ಸಂದರ್ಭದಲ್ಲಿ ತಾನು ಯಾರೊಂದಿಗೆ ಹೆಜ್ಜೆ ಹಾಕಬಹುದು, ಹಾಕಬಾರದು ಎನ್ನುವ ಆತ್ಮಸಂಯಮ. ‘ತನ್ನನ್ನು ಎಲ್ಲರೂ ಅಧಿಕಾರಕ್ಕಾಗಿ ಇಲ್ಲಿಯವರೆಗೆ ಬಳಸಿಕೊಂಡರು, ತಾನೂ ಅಧಿಕಾರಕ್ಕಾಗಿ ಎಲ್ಲರನ್ನೂ ಬಳಸಿಕೊಳ್ಳೋಣ,’ ಎಂದಷ್ಟೇ ಅದು ರಾಜಕಾರಣ ಮಾಡುತ್ತಾ ಹೋದರೆ ಎಂದಿಗೂ ದಮನಿತರ ಪರವಾದ ರಾಜಕಾರಣಕ್ಕೆ ಈ ದೇಶದ ಮುಖ್ಯವಾಹಿನಿಯಲ್ಲಿ ಆಳವಾದ ನೆಲೆ ಕಲ್ಪಿಸಲು ಸಾಧ್ಯವಿಲ್ಲ.

ರಾಜಕಾರಣದಲ್ಲಿ ‘ತಂತ್ರಗಾರಿಕೆ’ಯನ್ನು ಎಷ್ಟು ಬೇಕೋ ಅಷ್ಟಕ್ಕೆ ಸೀಮಿತಗೊಳಿಸಿಕೊಳ್ಳಬೇಕೇ ವಿನಃ ಅದುವೇ ಪೂರ್ಣಾವಧಿ ರಾಜಕಾರಣವಾಗಬಾರದು. ವಿಪರ್ಯಾಸವೆಂದರೆ ನಮ್ಮ ಯಾವುದೇ ರಾಜಕೀಯ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ದಲಿತ ರಾಜಕಾರಣ ಇಂದು ಸೈದ್ಧಾಂತಿಕ ರಾಜಕಾರಣದತ್ತ, ಜನಪರವಾದ ಚಳವಳಿಗಳನ್ನು ರೂಪಿಸುವತ್ತ, ಆ ಮೂಲಕ ಜನರಿಂದ ಶಕ್ತಿಯನ್ನು ಪಡೆಯುವತ್ತ ಗಮನಹರಿಸಬೇಕು. ಅಧಿಕಾರದೆಡೆಗಿನ ಆತುರವನ್ನು ಕರಗಿಸಿಕೊಂಡು ದೀರ್ಘಾವಧಿ ಮೌಲಿಕ ರಾಜಕಾರಣಕ್ಕೆ ಮುಂದಾಗಬೇಕು.

ವಾಸ್ತವದಲ್ಲಿ ಈ ದೇಶದ ದಲಿತರು, ಶೋಷಿತರಿಗೆ ಬಿ ಎಸ್ ಪಿ ಈವರೆಗೆ ಒಂದು ಬಗೆಯ ಕಲ್ಪಿತ ಶಕ್ತಿಯನ್ನಷ್ಟೇ ತುಂಬುವಲ್ಲಿ ಶಕ್ಯವಾಗಿದೆಯೇ ಹೊರತು ನೈತಿಕ ಶಕ್ತಿಯಾಗಿ, ಊರುಗೋಲಾಗಿ ಒದಗಿಬಂದಿಲ್ಲ. ಇಂದಿಗೂ ಈ ದೇಶದ ಎಲ್ಲ ಶೋಷಿತರು, ದಮನಿತರಿಗೆ ನೈತಿಕಶಕ್ತಿಯಾಗಿ ಒದಗಿ ಬರುತ್ತಿರುವುದು ಬಾಬಾಸಾಹೇಬ್ ಅಂಬೇಡ್ಕರ್ ಮಾತ್ರ. ಅಧಿಕಾರ ರಾಜಕಾರಣದಲ್ಲಿ ಯಶಸ್ಸು ಕಾಣದ ಅಂಬೇಡ್ಕರ್ ಅವರಿಗೂ ಅಧಿಕಾರ ರಾಜಕಾರಣದಲ್ಲಿ ಯಶಸ್ಸು ಕಂಡ ಬಿ ಎಸ್ ಪಿ ಗೂ ಇರುವ ವ್ಯತ್ಯಾಸವಿದು. ದಲಿತ ರಾಜಕಾರಣ ಪಾಠ ಕಲಿಯಲು ಇದಕ್ಕಿಂತ ಪ್ರತಿಮಾತ್ಮಕವಾದ ಒಡಪು ಇನ್ನಾವುದಿದೆ?

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನನ್ನ ಅಪ್ಪ ನನ್ನ ಹೀರೋ…

ಮುಂದಿನ ಸುದ್ದಿ »

ಸುಡುತಿದೆ ಧರೆ ಬಿಸಿಲಿನ ಬೇಗೆ…

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×