Wednesday January 4 2017

Follow on us:

Contact Us

ವಿದ್ಯುತ್ ಹರಿಸುವ ಶಿಕ್ಷಕ ಯಾರನ್ನು ಪ್ರತಿನಿಧಿಸುತ್ತಾನೆ?

ಎ.ಕೆ.ಕುಕ್ಕಿಲ

ಎ.ಕೆ.ಕುಕ್ಕಿಲ

ಹಿಟ್ಲರನ ಆಡಳಿತದ ಸಮಯದಲ್ಲಿ 6 ಮಿಲಿಯನ್ ಯಹೂದಿಯರ ಹತ್ಯಾಕಾಂಡಕ್ಕೆ ನೇತೃತ್ವ ನೀಡಿದವನೆಂದು ಹೇಳಲಾದ ಸೇನಾ ಮುಖ್ಯಸ್ಥ ಅಡಾಲ್ಫ್ ಇಕ್‍ಮ್ಯಾನ್‍ ನನ್ನು ಇಸ್ರೇಲ್‍ನ ರಮ್ಲ ಜೈಲಿನಲ್ಲಿ 1962 ಮೇ 30ರಂದು ಗಲ್ಲಿಗೇರಿಸಿದುದು ವಿವಿಧ ಕಾರಣಗಳಿಗಾಗಿ ಜಾಗತಿಕ ಸುದ್ದಿಗೀಡಾಯಿತು. ಇಕ್‍ ಮ್ಯಾನ್ ನನ್ನು ಎದುರಿಟ್ಟುಕೊಂಡು ಚರ್ಚೆ, ವಿಶ್ಲೇಷಣೆ, ಸಂಶೋಧನೆಗಳು ನಡೆದುವು. ದ್ವಿತೀಯ ವಿಶ್ವಯುದ್ಧ ಕೊನೆಗೊಂಡಂತೆಯೇ ಇಕ್‍ ಮ್ಯಾನ್ ಅಮೇರಿಕನ್ ಸೇನೆಯ ವಶವಾದನು. ಆದರೆ ಅಮೇರಿಕನ್ ಸೇನೆಗೆ ಇಕ್‍ ಮ್ಯಾನ್‍ ನ ಪರಿಚಯ ಇರಲಿಲ್ಲ. ಅವರಿಗೆ ಗೊತ್ತಾಗುವ ಮೊದಲೇ ಬಂಧನದಿಂದ ತಪ್ಪಿಸಿಕೊಂಡನು. ಓಟ್ಟೋ ಹೆನಿಂಗರ್ ಎಂಬ ನಕಲಿ ವಿಳಾಸದೊಂದಿಗೆ ಆಸ್ಟ್ರಿಯಾದಲ್ಲಿ ಬದುಕಿದನು. ಬಳಿಕ ಇಟಲಿಗೆ ತೆರಳಿದನು. ಬಳಿಕ ಅರ್ಜೆಂಟೀನಾಕ್ಕೆ ವಲಸೆ ಹೋದನು. ನಕಲಿ ಪಾಸ್‍ ಪೋರ್ಟ್, ನಕಲಿ ದಾಖಲೆಗಳ ಮೂಲಕ ಅರ್ಜೆಂಟೀನಾದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಿದನು. ಕುಟುಂಬವನ್ನೂ ಕರೆಸಿಕೊಂಡನು. ಅರ್ಜೆಂಟೀನಾ ಕಮ್ಯುನಿಸ್ಟ್ ರಾಷ್ಟ್ರವಾಗಿರುವುದು ಆತ ಅಲ್ಲಿಗೆ ವಲಸೆ ಹೋಗುವುದಕ್ಕೆ ಒಂದು ಕಾರಣವೂ ಆಗಿತ್ತು. ಆದರೆ ಎಲ್ಲೂ ಆತ ತನ್ನ ನಿಜನಾಮವನ್ನು ಬಹಿರಂಗಪಡಿಸಿರಲಿಲ್ಲ. ಹೀಗೆ 1950ರಿಂದ 60ರ ವರೆಗೆ ಸುಮಾರು 10 ವರ್ಷಗಳ ಕಾಲ ಬದುಕಿದ ಆತನನ್ನು 1960 ಮೇಯಲ್ಲಿ ಇಸ್ರೇಲ್‍ ನ ಗುಪ್ತಚರ ಸಂಸ್ಥೆ ಮೊಸಾದ್ ಅರ್ಜೆಂಟೀನಾದಲ್ಲೇ ಬಂಧಿಸಿತು. ಅದೂ ರಹಸ್ಯವಾಗಿ. ಇಸ್ರೇಲಿ ನಿಯೋಗವನ್ನು ಅರ್ಜೆಂಟೀನಾಕ್ಕೆ ತಲುಪಿಸಲು ಆಗಮಿಸಿದ ವಿಮಾನದಲ್ಲಿ ಇಕ್‍ ಮ್ಯಾನ್‍ ನನ್ನು ರವಾನಿಸಲಾಯಿತು. ಅದೂ ರಹಸ್ಯವಾಗಿಯೇ. 1960 ಮೇ 22ರಂದು ಇಸ್ರೇಲ್‍ ನ ಅಧ್ಯಕ್ಷ  ಬೆನ್ ಗುರಿಯನ್‍ ರು ಈ ವಿಷಯವನ್ನು ಇಸ್ರೇಲಿ ಪಾರ್ಲಿಮೆಂಟ್‍ ನಲ್ಲಿ ಘೋಷಿಸಿದರು. ಅಲ್ಲಿಯವರೆಗೆ ಅರ್ಜೆಂಟೀನಕ್ಕಾಗಲಿ ವಿಶ್ವಕ್ಕಾಗಲಿ ಈ ಇಡೀ ಬಂಧನ ಪ್ರಕ್ರಿಯೆಯ ಯಾವ ಅಂಶವೂ ಗೊತ್ತಿರಲಿಲ್ಲ. ಆದ್ದರಿಂದಲೇ ಅರ್ಜೆಂಟೀನಾ ಈ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿತು. ತನ್ನ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪವೆಂದು ವಿಶ್ವಸಂಸ್ಥೆಗೆ ದೂರು ನೀಡಿತು. ವಿಶ್ವಸಂಸ್ಥೆಯೂ ಅದನ್ನು ಅನುಮೋದಿಸಿತು. ಕೊನೆಗೆ ಇಸ್ರೇಲ್ ಮತ್ತು ಅರ್ಜೆಂಟೀನಾಗಳು ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಿಕೊಂಡದ್ದು ಒಂದು ಮಗ್ಗುಲಾದರೆ ಇನ್ನೊಂದು, 1960 ಮೇಯಿಂದ 1962 ಮೇ ವರೆಗೆ ನಡೆದ ವಿಚಾರಣೆ. ಜಾಗತಿಕವಾಗಿಯೇ ಅತ್ಯಂತ ಕುತೂಹಲಭರಿತ ವಿಚಾರಣಾ ಪ್ರಕ್ರಿಯೆಯಾಗಿತ್ತು ಅದು. ಪ್ರತಿದಿನ ವಿಚಾರಣೆ ನಡೆಯಿತು. ಮಾತ್ರವಲ್ಲ, ವಿಚಾರಣೆಯನ್ನು ಮುಕ್ತವಾಗಿಯೇ ನಡೆಸಲಾಯಿತು.

ಆ ಇಡೀ ವಿಚಾರಣಾ ಪ್ರಕ್ರಿಯೆಯಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸಿದ್ದ ಹನ್ನಾ ಅರೆಂಟ್ ಎಂಬವರು ಅಂತಿಮವಾಗಿ ಹೇಳಿದ್ದು, ‘ಆತನದ್ದು ಸಾಮಾನ್ಯ ಕೆಡುಕು’ (The banality of Evil) ಎಂದಾಗಿತ್ತು. ಅಸಂಖ್ಯಾತ ಮಂದಿಯನ್ನು ತೀವ್ರವಾಗಿ ಕಾಡಿದ ಪದಪ್ರಯೋಗ ಇದು. ಮಿಲಿಯನ್ ಮಂದಿಯನ್ನು ಕೊಂದ ಕೃತ್ಯವು ಸಾಮಾನ್ಯ ಕೆಡುಕು ಹೇಗಾಗುತ್ತದೆ ಮತ್ತು ಯಾಕಾಗುತ್ತದೆ? ಅಲ್ಲದೇ, 3500ರಷ್ಟು ಪುಟಗಳಲ್ಲಿ ಸಂಗ್ರಹಿಸಿಡಲಾದ ವಿಚಾರಣಾ ಪ್ರಕ್ರಿಯೆಯ ವಿವರಗಳಲ್ಲಿ ಎಲ್ಲೂ ಇಕ್‍ ಮ್ಯಾನ್ ಅಮಾಯಕ ಎಂದು ಹೇಳಿಲ್ಲ. ಸ್ವತಃ ಆತನೇ ತಾನು ಈ ಕ್ರೌರ್ಯದ ನೇತೃತ್ವವನ್ನು ವಹಿಸಿಕೊಂಡಿದ್ದೆ ಎಂದೇ ಹೇಳಿದ್ದಾನೆ. 15 ವರ್ಷಗಳ ಕಾಲ ತನ್ನ ನಿಜ ನಾಮವನ್ನು ಅಡಗಿಸಿಯೂ ಬದುಕಿದ್ದಾನೆ. ಹೀಗಿದ್ದೂ, ಅದನ್ನು ಸಾಮಾನ್ಯ ಕೆಡುಕು ಎಂದು ಹನ್ನಾ ಹೆಸರಿಸಲು ಕಾರಣವೇನು? ಹೀಗಿರುತ್ತಲೇ, 1974ರಲ್ಲಿObedience of Authority (ಪ್ರಭುತ್ವಕ್ಕೆ ವಿಧೇಯತೆ) ಎಂಬ ಕೃತಿ ಬಿಡುಗಡೆಯಾಗುತ್ತದೆ. ಬಹುಶಃ ಇದು ಇಕ್‍ ಮ್ಯಾನ್ ಮತ್ತು ಹನ್ನಾ ಅವರಿಬ್ಬರನ್ನು ಎದುರಿಟ್ಟುಕೊಂಡು ಬರೆಯಲಾದ ಪುಸ್ತಕವೇ ಎಂದು ಅನುಮಾನಿಸುವಷ್ಟರ ಮಟ್ಟಿಗೆ ಈ ಕೃತಿ ಚರ್ಚಿತವಾಗುತ್ತದೆ. ಆ ಕಾಲದಲ್ಲಿ ಬೆಸ್ಟ್ ಸೆಲ್ಲರ್ (ಹೆಚ್ಚು ಮಾರಾಟವಾದ) ಆದ ಕೃತಿ ಇದು.

eichmann 1

ಅಮೇರಿಕದ ಯೇಲೆ ವಿಶ್ವವಿದ್ಯಾನಿಲಯದ ಮನಶಾಸ್ತ್ರಜ್ಞ ಸ್ಟಾನ್ಲಿ ಮಿಲ್‍ ಗ್ರಾಮ್ ಎಂಬವರು ಅಂದಿನ ದಿನಪತ್ರಿಕೆಗಳಲ್ಲಿ ಒಂದು ಜಾಹೀರಾತನ್ನು ಪ್ರಕಟಿಸುತ್ತಾರೆ. 1962-63ರಲ್ಲಿ ನಡೆದ ಘಟನೆ ಇದು. ‘ತನ್ನ ಅಧ್ಯಯನದ ಮೇಲೆ ಪ್ರಯೋಗ ನಡೆಸುವುದಕ್ಕಾಗಿ ಸ್ವಯಂ ಸೇವಕರು ಬೇಕಾಗಿದ್ದಾರೆ..’ ಎಂಬುದೇ ಆ ಜಾಹೀರಾತು. ಆ ಜಾಹೀರಾತಿಗೆ ಸ್ಪಂದಿಸಿ ಹಲವು ಮಂದಿ ಹೆಸರು ನಮೂದಿಸುತ್ತಾರೆ. ಹೀಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಿಂದ ಅವರು ಇಬ್ಬರನ್ನು ತನ್ನ ಮೊದಲ ಪ್ರಯೋಗಕ್ಕಾಗಿ ಆಯ್ಕೆ ಮಾಡುತ್ತಾರೆ. ಇಬ್ಬರಿಗೆ ಎರಡು ಪ್ರತ್ಯೇಕ ಕೊಠಡಿಗಳು. ಇಬ್ಬರಲ್ಲಿ ಒಬ್ಬನಿಗೆ ಶಿಕ್ಷಕ ಮತ್ತು ಇನ್ನೊಬ್ಬನಿಗೆ ವಿದ್ಯಾರ್ಥಿ ಎಂದು ನಾಮಕರಣ ಮಾಡುತ್ತಾರೆ. ಶಿಕ್ಷಕ ಆ ಇಡೀ ಪ್ರಯೋಗದ ಕಾರ್ಯನಿರ್ವಾಹಕನೆಂದೂ ಹೇಳಲಾಗುತ್ತದೆ. ವಿದ್ಯಾರ್ಥಿಯನ್ನು ಕೊಠಡಿಯಲ್ಲಿ ಕೂರಿಸಿ ಆತನ ಕೈಗೆ ವಿದ್ಯುತ್ ವಯರುಗಳನ್ನು ಜೋಡಿಸುತ್ತಾರೆ. ಆತನಿಗೆ ಬರಹದ ಪ್ರತಿಯೊಂದನ್ನೂ ನೀಡುತ್ತಾರೆ. ಆತ ಅದನ್ನು ಕಲಿಯಬೇಕು. ಇನ್ನೊಂದು ಕೊಠಡಿಯಲ್ಲಿ ಶಿಕ್ಷಕನನ್ನು ಕೂರಿಸುತ್ತಾರೆ. 15ರಿಂದ 450 ವೋಲ್ಟ್ ವರೆಗೆ ವಿದ್ಯುತ್ ಶಾಕ್ ಕೊಡಬಲ್ಲ 30 ಸ್ವಿಚ್‍ ಗಳುಳ್ಳ ಕೊಠಡಿ ಅದು. ಈ ಇಡೀ ಪ್ರಯೋಗದ ಕಾರ್ಯ ನಿರ್ವಾಹಕ ನೀನು ಎಂಬುದನ್ನು ಮತ್ತೊಮ್ಮೆ ಆತನಿಗೆ ಮಿಲ್‍ ಗ್ರಾಮ್ ನೆನಪಿಸುತ್ತಾರೆ. ಈ ವ್ಯಕ್ತಿಯ ಹೊಣೆಗಾರಿಕೆ ಏನೆಂದರೆ, ವಿದ್ಯುತ್ ಇನ್ನೊಂದು ಕೋಣೆಯಲ್ಲಿರುವ ವಿದ್ಯಾರ್ಥಿಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ತಪ್ಪು ಉತ್ತರಕ್ಕೆ ಶಾಕ್ ಕೊಡುವುದು. 15 ವೋಲ್ಟ್ ನಿಂದ ಆರಂಭವಾಗುವ ವಿದ್ಯುತ್‍ ನ ಪ್ರಮಾಣ ಅಧಿಕವಾಗುತ್ತಾ ಕೊನೆಗೆ 450 ವೋಲ್ಟ್ ಗೆ ತಲುಪುತ್ತದೆ. ಇನ್ನೊಂದು ಕೊಠಡಿಯಲ್ಲಿರುವ ವಿದ್ಯಾರ್ಥಿಯ ಕೈಗೆ ವಿದ್ಯುತ್ ವಯರುಗಳನ್ನು ಚುಚ್ಚಲಾಗಿದ್ದು, ನೀವು ಸ್ವಿಚ್ ಹಾಕುತ್ತಾ ಹೋದಂತೆ ಆತನ ಉತ್ತರದಲ್ಲಿ ಆಗುವ ವ್ಯತ್ಯಾಸವನ್ನು ನೀವು ಗಮನಿಸಿ ದಾಖಲಿಸಬೇಕು ಎಂದು ಶಿಕ್ಷಕನಿಗೆ ಹೇಳಲಾಗುತ್ತದೆ. ಆ ವಿದ್ಯಾರ್ಥಿ ತಪ್ಪು ಉತ್ತರ ಕೊಟ್ಟಾಗಲೆಲ್ಲ ಶಾಕ್‍ ನ ತೀವ್ರತೆಯನ್ನು ಅಧಿಕಗೊಳಿಸುತ್ತಾ ಹೋಗುವ ಕ್ರಿಯೆ ಇದು. ಶಿಕ್ಷಕ ಆ ಕ್ರಿಯೆಯಲ್ಲಿ ತಲ್ಲೀನನಾಗುತ್ತಾನೆ. ವಿದ್ಯಾರ್ಥಿ ತಪ್ಪು ಉತ್ತರ ಕೊಡುವಾಗ ಶಾಕ್‍ ನ ಪ್ರಮಾಣವನ್ನು ಈತ ಹೆಚ್ಚಿಸುತ್ತಾನೆ. ಕುತೂಹಲದ ಸಂಗತಿ ಏನೆಂದರೆ, ವಿದ್ಯಾರ್ಥಿಯ ಕೈಗೆ ಜೋಡಿಸಲಾದ ವಯರುಗಳಲ್ಲಿ ವಿದ್ಯುತ್ ಹರಿಯುತ್ತಲೇ ಇರಲಿಲ್ಲ. ಅದು ವಿದ್ಯಾರ್ಥಿಗೂ ಗೊತ್ತು. ಆತನಿಗೆ ಮೊದಲೇ ಆ ಬಗ್ಗೆ ಹೇಳಲಾಗಿತ್ತು. ಶಿಕ್ಷಕ ವಿದ್ಯುತ್ ಶಾಕ್ ಕೊಡುವಾಗಲೆಲ್ಲ ತಪ್ಪು ಉತ್ತರ ನೀಡಬೇಕೆಂದೂ ಹೇಳಲಾಗಿತ್ತು. ಶಿಕ್ಷಕನಿಗೆ ಮಾತ್ರ ಇದು ಗೊತ್ತಿರಲಿಲ್ಲ. ಇಂಥ ಪ್ರಯೋಗಕ್ಕೆ ಅನೇಕರನ್ನು ಒಡ್ಡಿದ ಬಳಿಕ ಮಿಲ್ ಗ್ರಾಮ್ ‘ಒಬಿಡಿಯನ್ಸ್ ಟು ಅಥೋರಿಟಿ’ ಎಂಬ ವಿಶ್ಲೇಷಣಾತ್ಮಕ ಕೃತಿ ಬರೆಯುತ್ತಾರೆ. ಅವರ ಪ್ರಕಾರ, ಒಂದು ಆದೇಶ ಎಂಬ ನೆಲೆಯಲ್ಲಿ ಶಿಕ್ಷಕನು ತನ್ನ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ಕೊಟ್ಟುದುದನ್ನು ಮೇಲ್ನೋಟಕ್ಕೆ ಸಮರ್ಥಿಸಿಕೊಳ್ಳಬಹುದು. ಆದರೆ ಸಾಮಾನ್ಯ ಪ್ರಜ್ಞೆ ಇರುವವರು ಶಾಕ್ ಕೊಡಲು ಒಪ್ಪಲಾರರು. ಇದೊಂದು ಪ್ರಯೋಗ ಎಂದು ಹೇಳಿದರೂ ತನ್ನೆದುರಿನ ಇನ್ನೋರ್ವ ಮನುಷ್ಯನಿಗೆ ವಿದ್ಯುತ್ ಹರಿಸುವುದಕ್ಕೆ ಒಪ್ಪಿಕೊಳ್ಳುವುದು ಅಸಾಧ್ಯ. ಇದು ಕಾಮನ್‍ ಸೆನ್ಸ್. ವಿದ್ಯುತ್ ಶಾಕ್ ತಗುಲಿದ ವ್ಯಕ್ತಿ ಚೀರುತ್ತಿದ್ದರೂ ಮತ್ತೆ ಮತ್ತೆ ಶಾಕ್ ಕೊಡಲು ಓರ್ವ ಸೈಕೋ ಪಾತ್‍ ಗೆ ಮಾತ್ರ ಸಾಧ್ಯ. ಹಾಗಂತ, ಮಿಲ್‍ ಗ್ರಾಮ್‍ ರ ಪ್ರಯೋಗದಲ್ಲಿ ಭಾಗವಹಿಸಿದವರಲ್ಲಿ ಪ್ರತಿ ಮೂರರಲ್ಲಿ ಇಬ್ಬರು ವ್ಯಕ್ತಿಗಳೂ (65%) 450 ವೋಲ್ಟ್ ನಷ್ಟು ಅಪಾಯಕಾರಿ ಪ್ರಮಾಣದಲ್ಲಿ ತನ್ನ ವಿದ್ಯಾರ್ಥಿಗೆ ಶಾಕ್ ಕೊಟ್ಟಿದ್ದರು ಎಂಬುದೇ ಇಲ್ಲಿನ ಅಚ್ಚರಿ. 300 ವೋಲ್ಟ್ ಗಿಂತ ಕಡಿಮೆ ಶಾಕ್ ಕೊಟ್ಟವರು ಯಾರೂ ಇರಲಿಲ್ಲ. ನಿಜವಾಗಿ, ನಮ್ಮ ಮನೆಯಲ್ಲಿ ನಾವು ಉಪಯೋಗಿಸುವ ವಿದ್ಯುತ್‍ ನ ಪ್ರಮಾಣ 220 ವೋಲ್ಟ್ ಎಂಬುದನ್ನು ಪರಿಗಣಿಸುವಾಗ, ಈ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮೇಲೆ ಯಾವ ಮಟ್ಟದಲ್ಲಿ ವಿದ್ಯುತ್ ಪ್ರವಹಿಸಿದರು ಎಂಬುದು ಸ್ಪಷ್ಟವಾಗುತ್ತದೆ.

ಹೀಗಾಗಲು ಕಾರಣವೇನು? ಮಿಲ್‍ ಗ್ರಾಮ್ ಈ ಎಲ್ಲ ಪ್ರಯೋಗಗಳಿಂದ ಕಂಡುಕೊಂಡದ್ದೇನೆಂದರೆ, ಅಧಿಕಾರಸ್ಥರ ಆದೇಶಗಳನ್ನು ವಿಧೇಯವಾಗಿ ಪಾಲಿಸುವುದೇ ಇದಕ್ಕೆ ಕಾರಣ. ವಿದ್ಯುತ್ ಶಾಕ್ ಹೆಚ್ಚಿಸುವುದರಿಂದ ವಿದ್ಯಾರ್ಥಿಗೆ ಆಗುವ ಅಪಾಯದ ಬಗ್ಗೆ ಶಿಕ್ಷಕರಿಗೆ ಗೊತ್ತಿಲ್ಲ ಎಂದಲ್ಲ. ಆದರೆ ಅದೊಂದು ಆದೇಶ. ಮರುಮಾತಿಲ್ಲದೇ ಅದಕ್ಕೆ ವಿಧೇಯವಾಗಿರುವುದು ತನ್ನ ಕರ್ತವ್ಯ ಎಂದು ಆತ ಭಾವಿಸುತ್ತಾನೆ. ಇದೇ ಪ್ರಯೋಗವನ್ನು ಮಿಲ್‍ಗ್ರಾಮ್‍ರು ಜರ್ಮನಿಯಲ್ಲೂ ನಡೆಸಿದರು. ಅಲ್ಲಿಯ ಫಲಿತಾಂಶ ಇದಕ್ಕಿಂತಲೂ ಆಘಾತಕಾರಿಯಾಗಿತ್ತು. ವಿದ್ಯಾರ್ಥಿಗಳ ಮೇಲೆ 450 ವೋಲ್ಟ್ ವಿದ್ಯುತ್ ಹರಿಸಿದ ಶಿಕ್ಷಕರ ಪ್ರಮಾಣ 85% ಇತ್ತು.

obedience to authority

ಮಾನವರಲ್ಲಿ ಎರಡು ಬಗೆಯ ವರ್ತನಾ ಸ್ವಭಾವವಿದೆ ಎಂಬುದು Obedience of Authority ಕೃತಿಯ ಬಹು ಮುಖ್ಯ ಅಂಶ. ಅದರಲ್ಲಿ ಒಂದು ಸ್ವಾಯತ್ತ ಗುಣವಾದರೆ ಇನ್ನೊಂದು ಪ್ರತಿನಿಧಿ ಗುಣ. ಓರ್ವ ವ್ಯಕ್ತಿ ಸ್ವಾಯತ್ತ ಗುಣವನ್ನು ಹೊಂದಿದರೆ ಕೊನೆಗೆ ಆತ ಸರ್ವಾಧಿಕಾರಿಯಾಗಿ ಬದಲಾಗಬಹುದು. ಸಕಲ ಅಧಿಕಾರವೂ ತನ್ನ ನಿಯಂತ್ರಣದಲ್ಲಿದೆ ಅಥವಾ ತಾನು ಯಾರಿಗೂ ಭಯಪಡಬೇಕಾಗಿಲ್ಲ ಎಂಬ ಹಂತಕ್ಕೆ ಆತ ತಲುಪಿದರೆ ಆತ ನಿರಂಕುಶನಾಗಿ ಬದಲಾಗಬಹುದು. ಇನ್ನೊಂದು, ಪ್ರತಿನಿಧಿ ಗುಣ. ಇದರ ವ್ಯಾಪ್ತಿಯೊಳಗೆ ಕಂಪೆನಿ ಮ್ಯಾನೇಜರ್, ಸೇನಾ ಮುಖ್ಯಸ್ಥ ಮತ್ತು ಇದು ಮುಂದುವರಿದೂ ವರಿದೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನವರೆಗೂ ಬರಬಹುದು. ಆತ ಮೇಲಿನವರಿಗೆ ವಿಧೇಯನಾಗಿರುವುದಷ್ಟೇ ತನ್ನ ಕರ್ತವ್ಯ ಎಂದು ಅಂದುಕೊಳ್ಳುತ್ತಾನೆ. ಕಾಮನ್‍ ಸೆನ್ಸ್ ಅನ್ನು ಉಪಯೋಗಿಸದೇ ಮೇಲಿನವರ ಆದೇಶ ಬಂದರೆ ಯಾವುದೇ ಕ್ರೌರ್ಯಕ್ಕೂ ಆತ/ಕೆ ಮುಂದಾಗಬಲ್ಲ. ಹಿಟ್ಲರ್ ಮತ್ತು ಇಕ್‍ಮ್ಯಾನ್‍ರನ್ನು ಈ ಎರಡೂ ಗುಣಸ್ವಭಾವಕ್ಕೆ ಉದಾಹರಣೆಗಳಾಗಿ ಕೊಡಬಹುದು. ಹಾಗಂತ, ಇವರಿಬ್ಬರೇ ಈ ಉದಾಹರಣೆಗಳ ಆದಿ ಮತ್ತು ಅಂತ್ಯ ಅಲ್ಲ. ನಮ್ಮ ನಡುವೆ ನಡೆದ ಹತ್ತಾರು ಹತ್ಯಾಕಾಂಡ, ಹಿಂಸೆ, ಕ್ರೌರ್ಯಗಳ ಜೊತೆಗೆಲ್ಲ ಇಂಥವರು ಇದ್ದೇ  ಇದ್ದಾರೆ. ಅಖ್ಲಾಕ್ ಎಂಬ ಓರ್ವ ವ್ಯಕ್ತಿಯನ್ನು ನೂರಾರು ಮಂದಿಯ ಗುಂಪೊಂದು ಕಲ್ಲಿನಿಂದ ಜಜ್ಜಿ ಜಜ್ಜಿ ಹತ್ಯೆ ಮಾಡುವ ಸನ್ನಿವೇಶವನ್ನೊಮ್ಮೆ ಗಮನಿಸಿ. ಗುಜರಾತ್‍ನಲ್ಲಿ, ನೆಲ್ಲಿಯಲ್ಲಿ, ಮುಝಫ್ಫರ್ ನಗರ್, ಅಸ್ಸಾಂ, ಬಿಹಾರ್, ಕರ್ನಾಟಕದ ಕಂಬಾಲಪಲ್ಲಿಯ ಹತ್ಯಾಕಾಂಡ ಗಳನ್ನು ಅಧ್ಯಯನಕ್ಕೆ ಒಳಪಡಿಸಿಕೊಳ್ಳಿ. ಮನುಷ್ಯರನ್ನು ಮನುಷ್ಯರೇ ಈ ಮಟ್ಟದಲ್ಲಿ ಹತ್ಯೆ ಮಾಡಿರುವುದರ ಹಿಂದೆ ಯಾವುದರ ಪ್ರಚೋದನೆಯಿದೆ? ಇಲ್ಲಿ ಮಿಲ್‍ ಗ್ರಾಮ್‍ ರ ಪಾತ್ರವನ್ನು (ಆದೇಶಗಾರನ ಪಾತ್ರ) ವಹಿಸಿದವರು ಇದ್ದಿರಲಾರರೇ? ಅವರ ಆದೇಶಕ್ಕೆ ವಿಧೇಯವಾಗಿರುವುದು ತಮ್ಮ ಕರ್ತವ್ಯ ಎಂದು ಈ ಕೊಲೆಗಾರರ ಗುಂಪು ಭಾವಿಸಿರಬಹುದೇ? ಶಿಕ್ಷಕ ಹೇಗೆ ವಿದ್ಯುತ್ ಶಾಕ್ ಕೊಡುವ ಆದೇಶವನ್ನು ವಿಧೇಯವಾಗಿ ಪಾಲಿಸಿದನೋ ಅದೇ ರೀತಿಯಲ್ಲಿ ಈ ಹತ್ಯಾಕಾಂಡಗಳಲ್ಲಿ ಭಾಗಿಯಾದವರು ತಮ್ಮ ಮೇಲಿನವರ ಆದೇಶಕ್ಕೆ ವಿಧೇಯರಾದ ಪ್ರತಿನಿಧಿಗಳೇ? ಅವರಲ್ಲಿ ಪಾಪಪ್ರಜ್ಞೆ ಮತ್ತು ‘ಕೊಲೆ ನಡೆಸುವುದು ತಪ್ಪು’ ಎಂಬ ಕಾಮನ್‍ಸೆನ್ಸ್ ಹುಟ್ಟದೇ ಇರಲು ಈ ವಿಧೇಯತೆಯೇ ಕಾರಣವಾಗಿರಬಹುದೇ? ಇಕ್‍ಮ್ಯಾನ್ ತನ್ನ ವಿಚಾರಣೆಯ ಉದ್ದಕ್ಕೂ ಹೇಳಿದ್ದು ಇದೇ ಮಾತನ್ನು. ತಾನು ಮೇಲಿನವರ ಆದೇಶಕ್ಕೆ ವಿಧೇಯನಾಗಿರಬೇಕಾದ ನೌಕರನಾಗಿದ್ದೆ ಎಂದು ಆತ ಸಮರ್ಥಿಸಿಕೊಂಡಿದ್ದ. ನನ್ನಿಂದ ಏನೆಲ್ಲ ನಡೆಯಿತೋ ಅವೆಲ್ಲಕ್ಕೂ ಮೇಲಿನವರು ಹೊಣೆಗಾರರೇ ಹೊರತು ತಾನಲ್ಲ ಎಂದೂ ವಾದಿಸಿದ್ದ. ಜರ್ಮನಿಯಲ್ಲಿ ಮತ್ತು ಅದರ ಅಧೀನದಲ್ಲಿದ್ದ ಆಸ್ಟ್ರಿಯಾ, ಪೊಲಾಂಡ್ ಮುಂತಾದ ರಾಷ್ಟ್ರಗಳಲ್ಲಿ ಇಮಿಗ್ರೇಶನ್ ಕಚೇರಿಯನ್ನು ತೆರೆದು, ಆ ಮೂಲಕ ಯಹೂದಿಯರನ್ನು ಗಡೀಪಾರುಗೊಳಿಸಿ ಒಂದೇ ಕಡೆ ಸೇರಿಸಿದ್ದು ಮತ್ತು ಆಹಾರ, ನೀರು ಕೊಡದೇ ಗ್ಯಾಸ್ ಹಾಯಿಸಿ ಸಾಯಿಸಿದ ವ್ಯಕ್ತಿಯ ವಿಚಾರಣೆಯನ್ನು ವೀಕ್ಷಿಸಿದ ಹನ್ನಾ ಆರೆಂಟ್ ಕೊನೆಗೆ ಆತನದ್ದು ‘ಸಾಮಾನ್ಯ ಕೆಡುಕು’ ಎಂದು ಹೇಳಿದುದಕ್ಕೆ ಆತನ ಈ ವಿಧೇಯತಾ ಭಾವವೇ ಕಾರಣ. ಬಹುಶಃ,

ನಮ್ಮಲ್ಲಿ ಆಗಾಗ ನಡೆಯುತ್ತಿರುವ ಕೋಮುಗಲಭೆ, ಹತ್ಯಾಕಾಂಡ, ಹಿಂಸಾಚಾರ, ಸೇನೆ-ಪೊಲೀಸ್ ದೌರ್ಜನ್ಯ ಗಳು.. ಇಂಥ ವಿಧೇಯತೆಗಳ ಫಲಿತಾಂಶವಾಗಿರಬಹುದೆಂದೇ ಅನಿಸುತ್ತದೆ. ಆದ್ದರಿಂದಲೇ ಪ್ರವಾದಿಯವರು(ಸ) ವಿಧೇಯತೆಯು ಶರ್ತಬದ್ಧವಾಗಿರಬೇಕೆಂದು ಹೇಳಿರುವುದು. ವಿಧೇಯತೆಯು ಸತ್ಯ ಮತ್ತು ನ್ಯಾಯಕ್ಕೆ ಬದ್ಧವಾಗಿರಬೇಕೆಂದು ಹೇಳಿರುವುದು. ಉರಿಯುತ್ತಿರುವ ಬೆಂಕಿಗೆ ಹಾರಬೇಕೆಂದು ನಾಯಕ (ಖಲೀಫ, ಪ್ರಧಾನಿ, ಸಂಘಟನೆಯ ನೇತಾರ ಇತ್ಯಾದಿ) ಆದೇಶಿಸಿದರೆ ಅದಕ್ಕೆ ವಿಧೇಯವಾಗಬಾರದೆಂದು ಅವರು ತನ್ನ ಅನುಯಾಯಿಗಳಿಗೆ ಕರೆ ಕೊಟ್ಟಿರುವುದರಲ್ಲಿ ಈ ಎಲ್ಲ ಅಪಾಯಗಳ ಮುನ್ಸೂಚನೆಯನ್ನು ಕಾಣಬಹುದಾಗಿದೆ.

nkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿಯಿಡುತ್ತೇವೆಂದವರು ಮತ್ತು ಕೈಕಟ್ಟಿ ಕುಳಿತವರು

ಮುಂದಿನ ಸುದ್ದಿ »

67 ಸಾವಿರ ಕೋಟಿ ರೂಪಾಯಿ ವ್ಯವಹಾರದ ಬಳಿಕವೂ ನಾವೇಕೆ ಒಂಟಿ?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×